ಮೊಬೈಲ್‌ಗಳಿಲ್ಲದ ಆ ಕಾಲದಲ್ಲಿ...

ಅಣ್ಣನ ಗೆಳೆಯನ ಪತ್ರವನ್ನು ಓದಲು ನಾನೆಷ್ಟು ಆತುರ-ಕಾತುರ ತುಂಬಿಕೊಂಡು ಚಾತಕ...
ಮೊಬೈಲ್‌ಗಳಿಲ್ಲದ ಆ ಕಾಲದಲ್ಲಿ...
Updated on: 

ಜೀವದ ಗೆಳೆಯ ರಾಜೀವನಿಗೆ,
ನಿನ್ನೊಲುಮೆಯ ಗೆಳೆಯ ಮನೋಜನ ನೆನಪುಗಳು. ಹೇಗಿದ್ದೀಯಾ ದೋಸ್ತ್. ನೀನಂತೂ ಒಂದ್ ಪತ್ರ ಬರೆಯೋಲ್ಲ. ಮನೆಯೊಳಗಿನ ಸುಖದ ನಡುವೆ... ಈ ಬಡಪಾಯಿ ಗೆಳೆಯನ ನೆನಪಾದ್ರೂ ಹೇಗೆ ಬರುತ್ತೆ ಹೇಳು? ಊರು ಬಿಟ್ಟು ಹೊರಗಡೆ ಓದ್ತಾ ಇರೋದ್ರಿಂದಲೇ... ನನಗೀಗ ಊರು, ಮನೆ, ಸಂಬಂಧಗಳ ಬೆಲೆ... ಮಹತ್ವ ಸರಿಯಾಗಿ ತಿಳಿತೀದೆ. ಅದ್ಕೇ ನೀನ್ ಪತ್ರ ಬರೀದಿದ್ರೂ ವಾರಕ್ಕೊಂದು ಪತ್ರ ಬರೆದು ನಿಮ್ಮೆಲ್ಲರ ಜೊತೆ ಮಾತನಾಡಿದಾಗಲೇ ನನಗೆ ಸಮಾಧಾನ.
ಹೇಗಿದ್ದಾರೆ ಅಂಕಲ್? ಆಂಟಿ? ಅವರಿಗೆ ನನ್ನ ನಮಸ್ಕಾರ. ಮನು ಹೇಗಿದ್ದಾಳೆ? ಅವಳೂ ನಿನ್ನ ಹಾಗೆ distinction ನಲ್ಲೇ ಇರಲಿ. ಅದಕ್ಕಾಗಿ ಅವಳಿಗೆ ಮನಸ್ಸು ಕೊಟ್ಟು ಚೆನ್ನಾಗಿ ಓದಿಕೊಳ್ಳಲು ಹೇಳು. ನಿಮ್ಮೆಲ್ಲರ ನೆನಪು ತುಂಬಾ ತುಂಬಾ ತುಂಬಾ... ಬರುತ್ತೆ. ಆದರೆ ಂಇಇಖ ಮಾಡಬೇಕಂತ ಹೊರಗೆ ಬಂದಿದೀನಿ. ಗುರಿ ತಲಪಲೇ ಬೇಕಲ್ಲ. ಓಕೆ. ಈ ಬರುವ ಶನಿವಾರ ಎರಡು ದಿನದ ಮಟ್ಟಿಗೆ ಊರಿಗೆ ಬರ್ತಾ ಇದೀನಿ. ಆಗ ನಿಮ್ಮನ್ನೆಲ್ಲಾ ಭೇಟಿಯಾಗುವೆ.
ನಿನ್ನ ಪ್ರೀತಿಯ ಗೆಳೆಯ
ಮನೋಜ.


 ಹೀಗೆ ಪ್ರತಿ ಶುಕ್ರವಾರ ತಪ್ಪದೆ ಅಣ್ಣನ ಗೆಳೆಯನ ಪತ್ರವನ್ನು ಓದಲು ನಾನೆಷ್ಟು ಆತುರ-ಕಾತುರ ತುಂಬಿಕೊಂಡು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ! ಗುರುವಾರವೇ ಶುರುವಾಗಿರುತ್ತಿತ್ತು ಎದೆಯೊಳಗೆಲ್ಲ ಶುಕ್ರವಾರದ ರಿಂಗಣ! ಅಂತೂ - ಇಂತೂ ಅಣ್ಣನ ಕೈಯಿಂದ ದಾಟಿ ಆತ ಒಡೆದು... ಓದಿ... ಟೇಬಲ್ ಮೇಲೆ ಇಟ್ಟೋ, ಗಡಿಬಿಡಿಯಿಂದ ಬಿಸಾಕಿಯೋ ಹೋದ ಪತ್ರವನ್ನು ಓದಲು ಸಾಯಂಕಾಲದವರೆಗೆ ಕಾಯಬೇಕಿತ್ತು! ಕಾಲೇಜ್ ಬಿಟ್ಟೊಡನೆ ಏನೇನೋ ಸಬೂಬು ಹೇಳಿ ಗೆಳತಿಯರನ್ನೆಲ್ಲಾ ದಾಟಿ, ಬಿಟ್ಟ ಬಾಣದಂತೆ ಅಣ್ಣನ ರೂಮಿಗೆ ನುಗ್ಗಿ ಒಂದೇ ಉಸಿರಲ್ಲಿ ಆ  ಪತ್ರ ಓದಿದಾಗಲೇ ಸಮಾಧಾನ! ನನಗೆ ಗೊತ್ತಿತ್ತು: ಅಣ್ಣನ ಹೆಸರಿನಲ್ಲಿ ನನಗೆ ಬರೆಯುವ ಕಳ್ಳಕೃಷ್ಣನೀತ ಎಂದು! ಒಂದು ವಾರದವರೆಗೆಲ್ಲ ಕೂತು - ನಿಂತು, ಮಲಗಿ-ಮುತ್ತಿಟ್ಟು ಪತ್ರ ಓದಿದ್ದೇ ಓದಿದ್ದು! ಒಂದೊಂದು ಅಕ್ಷರವೂ ಕಂಠಪಾಠವಾಗಿ ತನು-ಮನದಲ್ಲಿ ಗುಂಯ್‌ಗುಟ್ಟಿ ಹಳೆತು ಸರಿದು ಹೊಸತು ಸೇರುತ್ತಿದ್ದಿದ್ದು ಮತ್ತೆ ಮುಂದಿನ ಶುಕ್ರವಾರವೇ. ಇದರೊಳಗಡೆ ನಕ್ಕಿದ್ದು - ಅತ್ತಿದ್ದು ನನ್ನಷ್ಟೇ ಅವನಿಗೂ ಗೊತ್ತು!
ನನನ
'ಅಮ್ಮಾ ಸಾಕಿನ್ನು ನಿನ್ನ ಲೆಕ್ಚರ್ ಕೆಲಸ. ಇನ್ನೂ... ಸ್ಟೂಡೆಂಟ್ಸ್ ಜೊತೆ ತಲೆ ಹೊಡ್ಕೊಬೇಡ. ನಾನು ಅಮೇರಿಕದಲ್ಲಿದ್ದು ಗಳಿಸ್ತಾ ಇದ್ದೀನಿ. ಪಪ್ಪಾ ಸರ್ಜನ್ ಆಗಿ ಗಳಿಸ್ತಾ ಇದ್ದಾರೆ. ಇನ್ನೂ ದುಡ್ಡಿನ ಅವಶ್ಯಕತೆ ಇದೆಯಾ... ಯೋಚನೆ ಮಾಡಿ ತೀರ್ಮಾನಕ್ಕೆ ಬಾ. ಪಪ್ಪಾಗೆ ನೀನು ಮನೆಯಲ್ಲಿದ್ದರೇನೆ ಸಂತೋಷ. ಜೀವನವನ್ನು ನೀನು ಆರಾಮವಾಗಿ ಆಸ್ವಾದಿಸು. ಅದೇ ನನಗೂ ಸಂತೋಷ' ಮಗನ ಒತ್ತಡಕ್ಕೆ ಮಣಿದು ಕೆಲಸಕ್ಕೆ ರಾಜೀನಾಮೆ ನೀಡಿದ ಮೇಲೆ, ಹಾಗೇ ಆ ಶುಕ್ರವಾರಗಳ ನೆನಪಾಗಿ ಸೂಟ್ಕೇಸಿನಲ್ಲಿ ಕೈ ಹಾಕಿದಾಗ ಸಿಕ್ಕ ಮೊದಲ ಪತ್ರವಿದು! ನಂಗೊತ್ತು ಮನೋಜ. ನೀನು ಕೆಲಸದಲ್ಲಿ ನನ್ನನ್ನು ಮಿಸ್ ಮಾಡಿಕೊಳ್ತಿಯಾ ಅಂತಾ! ಆದರೆ ನೋವುಗಳನ್ನು ಹೊತ್ತು ನಿನ್ನನ್ನೇ ದೈನ್ಯತೆಯಿಂದ ದೇವರಂತೆ ಕಾಣುವ... ಕಾಯುವ ಅವರಿಗಾಗಿ ನಿನ್ನ ಶಕ್ತಿ, ಸಮಯ... ಸದ್ವಿನಿಯೋಗವಾಗಲೆಂದು ನಾನೇ ನಿನ್ನನ್ನು ಬಿಟ್ಟು ಕೊಟ್ಟಿದ್ದೇನೆ!
ನೀನು ದಿನವಿಡೀ ನನ್ನೆದರು ಇಲ್ಲದಿದ್ದರೇನಂತೆ... ಈ ಜನ್ಮಕ್ಕಾಗುವಷ್ಟು ಆ ಕಾಲದ ಪತ್ರಗಳನ್ನು ಜೋಪಾನವಾಗಿಯೇ ಪೇರಿಸಿದ್ದೀನಿ. ಅದರಲ್ಲಿ ತಪ್ಪದೆ ಬರೆದ ಪತ್ರಗಳಿಂದ ಹಿಡಿದು. ಪ್ರೀತಿಯುಕ್ಕಿ ತುಳುಕಿದ ಭಾವದ ಪತ್ರಗಳು. ಸಮಸ್ಯೆ - ಸಮಾಧಾನಕ್ಕೆಂತಾ ಆಗೊಂದು ಈಗೊಂದು ಕದ್ದು-ಮುಚ್ಚಿ ಗೆಳತಿಗೆ ಬರೆದ ಮಾಣಿಕ್ಯದಂತಹ ಪತ್ರಗಳೂ ಸೇರಿವೆ. ಮತ್ತೆ... ನಾನೀಗ ಆ ಹಿಂದಿನ ಮನೋರಮೆಯಾಗಿ ನನ್ನ ಮುದ್ದಣ್ಣ ಬರೆದ  ಪತ್ರಗಳನ್ನು ಹಿಂದಿನಂತೆಯೇ ಆಸ್ವಾದಿಸುತ್ತೇನೆ! ಅದರ ಸ್ವಾದ ಇಂದಿನ ಮೊಬೈಲ್‌ಗೆ ಅರ್ಥವಾಗುವುದಿಲ್ಲ!!

- ಎಂ. ಮನೋರಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com