

ಬನ್ನಿ ನನ್ನ ಗೆಳೆಯರೆ, ಬನ್ನಿ ನನ್ನ ಗೆಳತಿಯರೆ...... ಅಂತ ಖುಷಿ-ಖುಷಿಯಿಂದ ಕಾಲೇಜ್‌ಗೆ ಹೋಗುತ್ತಿದ್ದ ನಾವು ಅದೆಷ್ಟು ಬೇಗ ಎರಡು ವರ್ಷ ಸ್ನಾತಕೋತ್ತರ ಪದವಿಯನ್ನು ಮುಗಿಸಿದೆವು ಎಂದು ಆಶ್ಚರ್ಯ ಆಗ್ತಾ ಇದೆ. ಹೌದು ರೀ, ನಮ್ಮ ಕಾಲೇಜಿನ ಹಾಗೂ ನಮ್ಮ ಜೀವನದ ಓದಿನ ಕೊನೆಯ ಘಟ್ಟ ಇದು. ಎಲ್ಲರ ಮನದಲ್ಲೂ ಬೇಸರ ಕಾಡುತ್ತಿದೆ. ಮುಗಿದು ಹೋಯಿತೆ ನಮ್ಮ ಕಾಲೇಜು ಜೀವನ ಎಂದು ಒಂದು ಕ್ಷಣ ಯೋಚ್ನೆ ಮಾಡುವಂತಾಗಿದೆ.
ಓದಲೆಂದು ನೂರಾರು ಕಿಲೋಮೀಟರ್ ದೂರದಿಂದ ಬಂದು ಗೊತ್ತಿಲ್ಲದ ಪ್ರದೇಶದಲ್ಲಿ ಎಲ್ಲರನ್ನೂ ಗೊತ್ತು ಮಾಡಿಕೊಂಡು, ಅದೆಷ್ಟು ಸಂತೋಷವಾಗಿದ್ದೆವು ಎಂದರೆ ಅದನ್ನು ಬಾಯಿ ಮಾತಿನಲ್ಲಿ ಹೇಳಲಾಗದು.
ಕಾಲೇಜು ಸೇರಿದ ಮೊದ ಮೊದಲ ದಿನಗಳಲ್ಲಿ ಕ್ಲಾಸ್ ಬಿಟ್ಟರೆ ಹಾಸ್ಟೆಲ್ ನನ್ನ ಪ್ರಪಂಚವಾಗಿತ್ತು. ಒಬ್ಬರಿಗೊಬ್ಬರು ಪರಿಚಯ ಇಲ್ಲ. ಪರಿಚಯವಾದರೂ ಅಷ್ಟು ಬೇಗ ಹತ್ತಿರವಾಗಲಿಲ್ಲ. ಒಬ್ಬರ ಮುಖ ಒಬ್ಬರು ನೋಡಿ ಎದ್ದು ಹೋಗುವಂಥ ಪರಿಸ್ಥಿತಿ ಒದಗಿತ್ತು. ಆದರೆ ಆಮೇಲೆ ಅದೆಷ್ಟು ಆತ್ಮೀಯರಾದೆವು ಎಂದರೆ ಒಬ್ಬರನ್ನು ಒಬ್ಬರು ಬಿಟ್ಟಿರಲಾರದಷ್ಟು..., ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು, ಒಂದೇ ಬ್ರಷ್ ಬಳಸುವಷ್ಟು, ಒಂದೇ ಬೆಡ್ ಶೇರ್ ಮಾಡಿಕೊಳ್ಳುವಷ್ಟು ಬದಲಾದೆವು.
ಕಾಲೇಜು ಕ್ಯಾಂಪಸ್‌ನಲ್ಲಿ ಕೂತು ಹೋಗಿ ಬರುವ ಹುಡುಗರನ್ನು ರೇಗಿಸುವುದು ಎಂದರೆ ನಮಗೆ ತುಂಬಾ ಇಷ್ಟ. ಎಲ್ಲರಿಗೂ ಒಂದೊಂದು ಅಡ್ಡ ಹೆಸರು ಇಟ್ಟು ಅವರನ್ನು ರೇಗಿಸಿ ಅವರು ಸಪ್ಪೆ ಮುಖ ಮಾಡಿಕೊಂಡಾಗ ಅದನ್ನು ನೋಡಿ ಕೇಕೆ ಹಾಕಿ ಕುಣಿಯುವ ಅಭ್ಯಾಸ ನಮ್ಮದು. ಹಾಗೆಂದು ಕೇವಲ ಪೋಲಿ ಹುಡುಗಿಯರು ಎಂದು ತಿಳಿಯಬೇಡಿ. ಓದಿನಲ್ಲೂ ಸಹ ಅಷ್ಟೇ ಆಸಕ್ತಿ. ನಮ್ಮನ್ನು ಮೀರಿ ಯಾರೂ ಹೆಚ್ಚು ಅಂಕ ಗಳಿಸಬಾರದು ಎಂಬ ಹಠ ನಮ್ಮದು.
ಪ್ರತಿಕ್ಷಣವನ್ನು ಎಷ್ಟು ಎಂಜಾಯ್ ಮಾಡಿದ್ವಿ ಅಂದರೆ ಸ್ವರ್ಗಕ್ಕೆ ಮೂರೇ ಗೇಣು ಇದೆ ಎನ್ನುವಷ್ಟು... ನನ್ನ ಕತೆ ಕೇಳಿ; ನಾನು ಸ್ವಲ್ಪ ಜೋರು ಹುಡ್ಗಿ, ಪಟ-ಪಟ ಮಾತನಾಡೋದು ನನ್ನ ಸ್ವಭಾವ. ಯಾರು ಏನೇ ಅಂದುಕೊಂಡರೂ ಪರವಾಗಿಲ್ಲ, ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿಬಿಡುತ್ತೇನೆ. ಕ್ಲಾಸಲ್ಲಿ ಸಹ ಏನಾದರೂ ತರಲೆ ಮಾಡಿ ಸರ್‌ಗಳಿಂದ ಬೈಸಿಕೊಳ್ಳುವುದು ನನ್ನ ದಿನಚರಿ.
ಎಲ್ಲಾ ಫ್ರೆಂಡ್ಸ್ ಜೊತೆ ಅಂದರೆ ಹುಡುಗರ ಜೊತೆ ಇದ್ದಾಗ ಕೆಲವರಿಗೆ ಅಣ್ಣ, ತಮ್ಮ, ಮಾವ ಎಂದು ಸಂಬಂಧ ಹುಡುಕಿಕೊಂಡ ಹುಡುಗಿಯರು ನಾವು.
ಆದರೆ ಇತ್ತೀಚೆಗೆ ಎಲ್ಲರ ಮುಖದಲ್ಲಿ ಏನೋ ಒಂಥರ ಬೇಸರ. ನಗು ಮಾಯವಾಗುತ್ತಿದೆ. ನಮ್ಮ ತರಲೆಗಳು ಕಡಿಮೆಯಾಗಿವೆ. ಏಕೆಂದರೆ ನಮ್ಮ ಕಾಲೇಜು ಲೈಫು ಕೊನೆಯಾಗಲು ಕೆಲವೇ ತಿಂಗಳುಗಳು ಮಾತ್ರ ಉಳಿದಿವೆ.
ಎನಿವೇ, ಈ ಎರಡು ವರ್ಷ ಸಂತೋಷವಾಗಿರುವಂತೆ ಮಾಡಿದ ನನ್ನ ಎಲ್ಲಾ ಗೆಳೆಯ ಗೆಳತಿಯರಿಗೂ ಒಂದು ಸಲಾಂ.
-ಸವಿತಾ ಗಂಗನರಸಿ