ಬೈಟುಕಾಫಿ

ಗುರು ನಾಟಕ

ಇವರೂ ನಾಟಕ ಮಾಡುತ್ತಾರೆ, ಆದರೆ ತಮಗಾಗಿಯಲ್ಲ. ಕಷ್ಟದಲ್ಲಿರುವವರಿಗಾಗಿ.

ಗುರು ನಾಟಕ
Published On :

ವೃತ್ತಿಪರ ಐತಿಹಾಸಿಕ ಹಾಗೂ ಪೌರಾಣಿಕ ನಾಟಕ ಕಲಾವಿದರ ಪ್ರದರ್ಶನಗಳನ್ನು ನೋಡಿ ನಾವು ಬೆರಗಾಗುವುದುಂಟು. ಆದರೆ ಅವರ ಇಷ್ಟಾರ್ಥಗಳ ಬಗ್ಗೆ ನಾವೆಷ್ಟು ತಲೆಕೆಡಿಸಿಕೊಂಡಿದ್ದೇವೆ? ಈ ನಾಟಕಗಳಲ್ಲಿ ದುಡಿದು ಹಣ್ಣಾಗಿ, ಇಂದಿಗೂ ನೋವಿನ ಬದುಕು ಅನುಭವಿಸುತ್ತಿರುವವರ ಸಹಾಯಕ್ಕಾಗಿ ನಾಟಕ ಮಾಡುತ್ತಿರುವವರ ಕತೆಯಿದು. ಇವರೂ ನಾಟಕ ಮಾಡುತ್ತಾರೆ, ಆದರೆ ತಮಗಾಗಿಯಲ್ಲ. ತಾವಾಡುವ ನಾಟಕದ ಖರ್ಚನ್ನು ತಾವೇ ಭರಿಸಿ, ಅದರಿಂದ ಬರುವ ಆದಾಯವನ್ನು ಕಷ್ಟದಲ್ಲಿರುವವರಿಗೆ ನೀಡುತ್ತಾರೆ.
ಯಾರು ಈ ಶಿಕ್ಷಕರು?
ಅಳಿದು ಹೋಗುತ್ತಿರುವ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳನ್ನು ಉಳಿಸಬೇಕು ಮತ್ತು ಅವುಗಳ ಮೂಲಕ ಸಮಾಜದ ಓರೆಕೋರೆ ತಿದ್ದಬೇಕು ಎನ್ನುವ ಪಣ ಇವರದು. ಕಷ್ಟದ ಬದುಕು ಸಾಗಿಸುತ್ತಿರುವ ಕಲಾವಿದರಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಪ್ರಾಣೇಶ ಪೂಜಾರ ಹುಟ್ಟುಹಾಕಿದ ಶಿಕ್ಷಕರ ಕಲಾ ತಂಡ ಇದು. ಇದಕ್ಕೆ ಸಹಪಾಠಿಗಳಾದ ರಾಮಣ್ಣ ಶ್ಯಾವಿ, ದಯಾನಂದ ಸಾಗರ, ಮಲ್ಲೇಶಯ್ಯ, ಸಿದ್ದು ಕೆರೆ, ಗವಿಸಿದ್ಧಪ್ಪ ಕೊನಸಾಗರ, ಮಹಾಂತೇಶ ಎನ್.ಸಿ., ಗುರು ಎಸ್ಪಿ, ಹರೀಶ ದಿದಿ, ಸುನೀಲ, ಶಿವನಗೌಡ ಹಾಗೂ ರಮೇಶ ಪೂಜಾರ ಅವರನ್ನೊಳಗೊಂಡ ತಂಡ.
ನಾಟಕ ಮಾಡ್ತಾರೆ
ಪ್ರತಿ ನಾಟಕಕ್ಕೂ ತಲಾ ರು. 5 ಸಾವಿರದಂತೆ ತಾವೇ ವೆಚ್ಚ ಭರಿಸಿಕೊಳ್ಳುತ್ತಾರೆ. ಬರುವ ಎಲ್ಲ ಆದಾಯವನ್ನು ಸಂಕಷ್ಟದಲ್ಲಿರುವವರಿಗೆ ನೀಡುತ್ತಾರೆ. ಈಗಾಗಲೇ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧಮಕ್ಕಳಿಗೆ, ಹಿರಿಯ ಕಲಾವಿದರಾದ ವಂದನಾ, ಮಲ್ಲೇಶ ಅಮಿನಗಡದ, ಪಿಬಿ ಧುತ್ತರಗಿ ಅವರ ಪುತ್ರ ಬಸವರಾಜ, ಹುಸೇನಸಾಬ ಹಿರೇಮನ್ನಾಪುರ ಅವರ ಸಹಾಯಾರ್ಥ ನಾಟಕ ಪ್ರದರ್ಶನಗಳನ್ನು ಮಾಡಿ ಸಾವಿರಾರು ರುಪಾಯಿಗಳನ್ನು ನೆರವಾಗಿ ನೀಡಿದ್ದಾರೆ.

ಶ್ರೇಷ್ಠ ನಾಟಕ
ಅಭಿನಯದಲ್ಲಿ ಯಾವುದೇ ರಾಜಿ ಇಲ್ಲ. ಅತ್ಯುತ್ತಮವಾಗಿ ಪ್ರಾಕ್ಟೀಸ್ ಮಾಡಿ, ರೋಮಾಂಚನವಾಗುವಂತೆ ಪ್ರದರ್ಶನ ನೀಡುತ್ತಾರೆ. ಅವರು ಆಯ್ಕೆ ಮಾಡಿಕೊಳ್ಳುವ ನಾಟಕಗಳು ಸಂಗೊಳ್ಳಿ ರಾಯಣ್ಣ, ಗಂಡುಗಲಿ ಕುಮಾರರಾಮ, ರಕ್ತರಾತ್ರಿ ಇಥವು. ಇದರ ಜೊತೆಗೆ ಎಲ್ಲಿಯಾದರೂ ಸ್ಪರ್ಧೆ ಇದ್ದರೆ ಅಲ್ಲಿಗೂ ಹೋಗುತ್ತಾರೆ. ಕುಷ್ಟಗಿಯಲ್ಲಿ ನಡೆದ ರಂಗಸಂಭ್ರಮ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಬೆಂಗಳೂರಿನಲ್ಲಿ ಜೈನ್ ವಿವಿ ನಡೆಸಿದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ಸಾಲುಮರದ ತಿಮ್ಮಕ್ಕನಿಗಾಗಿ
ತಂಡಕ್ಕೆ ಈಗ ಮತ್ತೊಂದು ಅದಮ್ಯ ಬಯಕೆ ಇದೆ. ಸಾಲುಮರದ ತಿಮ್ಮಕ್ಕನಿಗೆ ಸುಭದ್ರ ಮನೆ ಕಟ್ಟಿಕೊಡುವುದಕ್ಕಾಗಿ ಶಿಕ್ಷಕರ ದಿನಾಚರಣೆಯಂದು ನಾಟಕ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಲ್ಲ ಶಿಕ್ಷಕರು ಸೇರಿದಂತೆ ಆಸಕ್ತರ ನೆರವಿನಿಂದ ಈ ಪ್ರಯತ್ನಕ್ಕೆ ಕೈಹಾಕುತ್ತಿದ್ದೇವೆ ಎಂದು ಶಿಕ್ಷಕರ ಕಲಾ ತಂಡದ ಪ್ರಾಣೇಶ ಪೂಜಾರ ಹೇಳುತ್ತಾರೆ.                 

- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.