ಟಾಟಾ ರೈಯ...
ಟಾಟಾ ಸಂಸ್ಥೆ ತನ್ನ ಎಸ್‌ಯುವಿಗಳನ್ನು ಖರೀದಿಸಿದ ಗ್ರಾಹಕರಿಗಾಗಿಯೇ ಫುಲ್ ಥ್ರೋಟಲ್ ಎಂಬ ಕಾರ್ಯಕ್ರಮ ರೂಪಿಸಿದೆ.

4ದಿನ. 1350 ಕಿ.ಮೀ. 14 ಕಾರು. ಹೆದ್ದಾರಿ, ಅರಣ್ಯ ಪ್ರದೇಶ, ಗುಡ್ಡಬೆಟ್ಟದ ದಾರಿ.
ಕೊಂಚ ರಿಸ್ಕ್. ಸಕತ್ ಥ್ರಿಲ್. ಒಂದಷ್ಟು ಸಾಹಸ. ಮೊಗೆದಷ್ಟು ಖುಷಿಯಿದೆ. ಮರೆಯಲಾಗದ ಅನುಭವ. ಜೀವನಪರ್ಯಂತ ನಿಮ್ಮ ಜತೆಗಿರುವ ಸುಂದರ ನೆನಪುಗಳು. ನಿಮಗೂ ನಿಮ್ಮ ವಾಹನಕ್ಕೂ ಸವಾಲು. ಹೊಸ ಊರು. ಹೊಸ ದಾರಿ. ಹೊಸ ಜನ. ಹೊಸ ಅನುಭವ.
ಇದು ಆಧುನಿಕ ಚಕ್ರವರ್ತಿಗಳಿಗಾಗಿಯೇ ರೂಪಿಸಿದ ಕಾರ್ಯಕ್ರಮ. ನೀವು ಟಾಟಾ ಎಸ್‌ಯುವಿಗಳಾದ ಸಫಾರಿ, ಸಫಾರಿ ಸ್ಟಾರ್ಮ್, ಕ್ಸೆನಾನ್, ಟಾಟಾ ಸುಮೋ, ಸುಮೋ ಗ್ರ್ಯಾಂಡ್ ಮುಂತಾದ ವಾಹನಗಳ ಮಾಲಿಕರಾಗಿದ್ದರೆ, ತುಸು ಕಾಸು ಖರ್ಚು ಮಾಡುವ ಮನಸ್ಸಿದ್ದರೆ ಇದರಲ್ಲಿ ನೀವೂ ಭಾಗವಹಿಸಬಹುದು.
ಟಾಟಾ ಸಂಸ್ಥೆ ತನ್ನ ಎಸ್‌ಯುವಿಗಳನ್ನು ಖರೀದಿಸಿದ ಗ್ರಾಹಕರಿಗಾಗಿಯೇ ಫುಲ್ ಥ್ರೋಟಲ್ ಎಂಬ ಕಾರ್ಯಕ್ರಮ ರೂಪಿಸಿದೆ. ಇದು ಉಚಿತವಲ್ಲ. ಆದರೆ ದುಬಾರಿಯೂ ಅಲ್ಲ. ತನ್ನ ಗ್ರಾಹಕರಿಗಾಗಿ ಟಾಟಾ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ರಿಯಾಯಿತಿ ದರದಲ್ಲಿ ಆಯೋಜಿಸುತ್ತಿದೆ.
ಸಾಕಷ್ಟು ಜನರಿಗೆ ಡ್ರೈವ್ ಮಾಡುವ, ಹೊಸ ಜಾಗಗಳನ್ನು ಸುತ್ತುವ ಆಸೆಯಿರುತ್ತದೆ. ಆದರೆ ಅದಕ್ಕೆ ತಕ್ಕ ಸೌಲಭ್ಯ, ಮಾಹಿತಿಗಳಿರುವುದಿಲ್ಲ. ಜತೆಗೆ ಜನರನ್ನು ಕೂಡಿಸೋದು ಇನ್ನೊಂದು ಸಮಸ್ಯೆ. ಒಂದೆರಡೇ ಜನ ದೂರ ದೂರ ಪ್ರವಾಸ ಕೈಗೊಳ್ಳುವುದು ಬೋರು. ಅಲ್ಲದೇ ಹೊಸ ಸ್ಥಳ, ಹೊಸ ಜನ, ಹೇಗೋ ಏನೋ ಎಂಬ ಆತಂಕ. ಹೀಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ವಾಹನವಿದ್ದರೂ ಪ್ರವಾಸ ಹೋಗಲು ಹಿಂಜರಿಯುವವರಿಗೆಂದೇ ಟಾಟಾ ಸಂಸ್ಥೆ ಫುಲ್ ಥ್ರೋಟಲ್ ಎಂಬ ಕಾರ್ಯಕ್ರಮ ಹುಟ್ಟುಹಾಕಿದೆ.
ಚಕ್ರವರ್ತಿಗಳಿಗಾಗಿಯೇ ಇರುವ ಇಂತಹ ಪ್ರವಾಸವೊಂದರಲ್ಲಿ ಭಾಗವಹಿಸುವ ಅವಕಾಶ 'ಕನ್ನಡಪ್ರಭ'ಕ್ಕೆ ಲಭ್ಯವಾಗಿತ್ತು. ಟಾಟಾ ಸಫಾರಿ ಸ್ಟಾರ್ಮ್ ವಾಹನವನ್ನು ದೆಹಲಿಯಿಂದ ಮಧ್ಯಪ್ರದೇಶದ ಪೆಂಚ್ ಎಂಬಲ್ಲಿಯವರೆಗೆ (1350 ಕಿ.ಮೀ.) ಚಲಾಯಿಸುವ ಮತ್ತು ಪರೀಕ್ಷಿಸುವ ಅವಕಾಶ 'ಕನ್ನಡಪ್ರಭ'ಕ್ಕೆ ದೊರಕಿತ್ತು.
ಟಾಟಾ ಮೋಟಾರ್ಸ್ ಸಂಸ್ಥೆ ದಿಲ್ಲಿಯ ಕೂಗರ್ ಗ್ರೂಪ್‌ಗೆ ಇಂತಹ ಪ್ರವಾಸಗಳನ್ನು ಆಯೋಜಿಸುವ ಜವಾಬ್ದಾರಿ ನೀಡಿದೆ. ಅವರು ಆಯಾ ಕಾಲಕ್ಕೆ ಸಾಹಸ, ಥ್ರಿಲ್ ಮತ್ತು ಪ್ರವಾಸಿ ಸ್ಥಳಗಳನ್ನು ಒಳಗೊಂಡ ಮಾರ್ಗಗಳನ್ನು ಹುಡುಕಿ ಪ್ರವಾಸ ಆಯೋಜಿಸುತ್ತಾರೆ. ಎಲ್ಲಿಂದ ಹೊರಡುವುದು ಎಂಬುದರಿಂದ ಆರಂಭಿಸಿ, ಎಷ್ಟು ಹೊತ್ತಿಗೆ ಹೊರಡಬೇಕು, ಯಾವ ಮಾರ್ಗವಾಗಿ ಹೋಗಬೇಕು, ಮಧ್ಯಾಹ್ನದ ಊಟ ಎಲ್ಲಿ ಮಾಡಬೇಕು, ಎಲ್ಲಿ ಉಳಿದುಕೊಳ್ಳಬೇಕು ಹೀಗೆ ಪ್ರತಿಯೊಂದನ್ನೂ ಯೋಚಿಸಿ, ಪರಾಮರ್ಶಿಸಿ ನಿರ್ಧರಿಸುತ್ತದೆ. ಅದರ ಪ್ರಕಾರ ಪ್ರವಾಸ ಆಯೋಜಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಪ್ರವಾಸಕ್ಕೆ ತೆರಳಲು ಇಚ್ಛಿಸುವ ಗ್ರಾಹಕರು ಒಬ್ಬ ವ್ಯಕ್ತಿಗೆ ಇಷ್ಟು ಎಂದು ನಿಗದಿತ ಹಣ ಪಾವತಿಸಿ ಹೆಸರು ನೋಂದಾಯಿಸಬೇಕು. ನಿಮ್ಮ ವಾಹನ. ಇಂಧನವೂ ನಿಮ್ಮದು. ನಿಮ್ಮ ಜತೆ ವಾಹನದಲ್ಲಿ ಕುಟುಂಬದವರು ಅಥವಾ ಗೆಳೆಯರು ಇರಬಹುದು. ಊಟ- ವಸತಿ ಅವರೇ ವ್ಯವಸ್ಥೆ ಮಾಡಿರುತ್ತಾರೆ.
ಬಹಳ ಮುಖ್ಯವಾದ ಸಂಗತಿಯೆಂದರೆ 3-4 ದಿನದ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯ ಮತ್ತು ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಆಯೋಜಕರು ಮಾಡಿಕೊಂಡಿರುತ್ತಾರೆ. ಪ್ರವಾಸಕ್ಕೆ ತೆರಳುವ ವಾಹನಗಳ ಸಾಲಿನಲ್ಲಿ ಮೊದಲ ವಾಹನ ಪ್ರಾಯೋಜಕರದ್ದಾಗಿದ್ದರೆ, ಸಾಲಿನ ಹಿಂಭಾಗದಲ್ಲಿ ಒಂದು ವಾಹನದಲ್ಲಿ ವೈದ್ಯರು, ಇನ್ನೊಂದು ವಾಹನ ಆ್ಯಂಬುಲೆನ್ಸ್, ಇನ್ನೊಂದು ವಾಹನದಲ್ಲಿ ಮೆಕ್ಯಾನಿಕ್‌ಗಳು ಮತ್ತು ರಿಪೇರಿ ಸಾಧನಗಳು ಇರುತ್ತವೆ. ವಾಹನಗಳು ಹಾಳಾದಲ್ಲಿ ಸ್ಥಳದಲ್ಲೇ ದುರಸ್ತಿ ಮಾಡಲಾಗುತ್ತದೆ. ದುರಸ್ತಿ ಮಾಡಲಾಗದಷ್ಟು ಹಾಳಾಗಿದ್ದಲ್ಲಿ ಅಥವಾ ಬಿಡಿಭಾಗಗಳು ಲಭ್ಯವಿಲ್ಲದೇ ಇದ್ದಲ್ಲಿ ವಾಹನವನ್ನು ಎಳೆದುಕೊಂಡು ಹೋಗುವ ವ್ಯವಸ್ಥೆ ಕೂಡ ಇರುತ್ತದೆ.
ಪ್ರತಿದಿನ ಊಟ ಮತ್ತು ವಸತಿಯನ್ನು ಉತ್ತಮ ಹೊಟೆಲ್‌ಗಳಲ್ಲೇ ವ್ಯವಸ್ಥೆ ಮಾಡಲಾಗುತ್ತದೆ. ನಾವೇ ಹೊಟೆಲ್ ವ್ಯವಸ್ಥೆ ಮಾಡಿಕೊಂಡು, ನಮ್ಮಷ್ಟಕ್ಕೇ ಹೋದರೆ ಟಾಟಾ ಸಂಸ್ಥೆ ನಿಗದಿ ಪಡಿಸಿದ ಹಣಕ್ಕಿಂತ ದುಪ್ಪಟ್ಟು ಹಣ ಕರ್ಚಾಗುತ್ತದೆ. ಫುಲ್ ಥ್ರೋಟಲ್ ಕಾರ್ಯಕ್ರಮದಲ್ಲಿ ಹೋದರೆ ವ್ಯವಸ್ಥೆಯ ಜತೆಗೆ ಭದ್ರತೆ ಮತ್ತು ಒಂದಷ್ಟು ಗೆಳೆಯರು ಫ್ರೀ.
ಎಲ್ಲೆಲ್ಲಿಗೆ ಪ್ರವಾಸ
ವಿಶೇಷವಾಗಿ ಎಸ್‌ಯುವಿಗಳ ಮಾಲಿಕರಿಗಾಗಿಯೇ ಫುಲ್ ಥ್ರೋಟಲ್ ಎಂಬ ಕಾರ್ಯಕ್ರಮ ಆಯೋಜಿಸಿರುವುದರಿಂದ ಕೊಂಚ ಸವಾಲಿನ ಪ್ರದೇಶಗಳೂ ಪ್ರವಾಸದಲ್ಲಿರುವುದು ಸಾಮಾನ್ಯ. ಕೆಟ್ಟ ರಸ್ತೆಗಳನ್ನೂ ಉದ್ದೇಶಪೂರ್ವಕವಾಗಿಯೇ ಆಯ್ಕೆ ಮಾಡಲಾಗಿರುತ್ತದೆ. ವಿಶೇಷವಾಗಿ ಲೇಹ್‌ಲಡಾಕ್‌ಗೆ ಪ್ರತಿ ವರ್ಷವೂ ಪ್ರವಾಸ ಆಯೋಜಿಸಲಾಗುತ್ತದೆ. ಗುಜರಾತ್‌ನಲ್ಲಿರುವ ಕಛ್ ಮರುಭೂಮಿಗೆ ಹೀಗೆ ಬೇರೆ ಭೌಗೋಳಿಕ, ಹವಾಮಾನ ವ್ಯತ್ಯಾಸವಿರುವ ಪ್ರದೇಶಗಳಿಗೂ ಪ್ರವಾಸ ಆಯೋಜಿಸಲಾಗುತ್ತದೆ. ಟಾಟಾ ಸಂಸ್ಥೆಯ ಎಸ್‌ಯುವಿಗಳು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತವೆ ಎಂಬುದನ್ನು ಗ್ರಾಹಕರಿಗೆ ತೋರಿಸುವುದು ಮತ್ತು ತಮ್ಮ ವಾಹನಗಳ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸುವುದು ಟಾಟಾ ಸಂಸ್ಥೆಯ ಉದ್ದೇಶ. ಇಂತಹ ಸಾಮಾನ್ಯ ಪ್ರವಾಸದ ಜತೆಗೆ ರ್ಯಾಲಿ, ಸಾಹಸಯುಕ್ತ ರ್ಯಾಲಿ, ರೇಸ್‌ಗಳನ್ನು ಕೂಡ ಫುಲ್ ಥ್ರೋಟಲ್ ಹೆಸರಿನಲ್ಲಿಯೇ ಆಯೋಜಿಸಲಾಗುತ್ತದೆ.
- ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


