ನನ್ನದು!
ಏ.26ರಂದು ವಿಶ್ವ ಬೌಧ್ಧಿಕ ಹಕ್ಕು ದಿನದ ಹಿನ್ನೆಲೆಯಲ್ಲಿ ತಿಳಿವು ಮೂಡಿಸುವ ಲೇಖನ.

ಕಣ್ಣಿಗೆ ಕಾಣುವ ಸಂಪತ್ತಿನ ಪರಿಭಾಷೆ ನಮಗೆಲ್ಲ ಚೆನ್ನಾಗಿ ಗೊತ್ತು. ಪರಿಶ್ರಮದಿಂದ ನಾವು ಮಾಡಿಕೊಂಡ ಮನೆ, ಕಾರು, ಉದ್ದಿಮೆ, ತೋಟಗಳೆಲ್ಲ ಸಂಪತ್ತುಗಳೇ. ಇದಕ್ಕೆ ಹೊರತಾಗಿ, ಮನುಷ್ಯ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಸೃಷ್ಟಿಸುವ ಹಲವು ಬಗೆಯ ಸಂಪತ್ತುಗಳು ಇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಹೊಸ ಆವಿಷ್ಕಾರ, ಚಿತ್ರಕಲೆ, ಛಾಯಾಚಿತ್ರ, ಬರಹ, ಸಾಹಿತ್ಯ, ಚಲನಚಿತ್ರದಂತಹ ಸೃಜನಶೀಲ ವಿಷಯಗಳು 'ಬೌಧ್ಧಿಕ' ಸಂಪತ್ತಾಗಿವೆ. ಸಾಮಾನ್ಯವಾಗಿ ಬಳಸುವ ಪದಗಳಾದ ಕಾಪಿರೈಟ್, ಟ್ರೇಡ್ಮಾರ್ಕ್, ಟ್ರೇಡ್ ಸೀಕ್ರೆಟ್, ಪೇಟೆಂಟ್ ಇವುಗಳೆಲ್ಲ ಬೌಧ್ಧಿಕ ಸಂಪತ್ತಿನ ಕೆಲ ಉದಾಹರಣೆಗಳು.
ಕೃತಿಸ್ವಾಮ್ಯ (ಕಾಪಿರೈಟ್)
ಪುಸ್ತಕ, ಸಂಗೀತ, ಚಿತ್ರಕಲೆ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ನಾವು ಕಾಪಿರೈಟ್ ಶಬ್ದ ಕೇಳಿರುತ್ತೇವೆ. ಕಾಪಿರೈಟ್ನಲ್ಲಿ ಅಭಿವ್ಯಕ್ತಿಯನ್ನು ಕಾಪಾಡಲಾಗುತ್ತದೆಯೇ ಹೊರತು, ಯೋಚನೆ, ಸಂಗತಿ, ಕಲ್ಪನೆಗಳನ್ನಲ್ಲ. ಕಾಗದ, ಲೋಹ, ಸೀಡಿ, ಡಿವಿಡಿ ಮೊದಲಾದ ಮಾಧ್ಯಮಗಳಲ್ಲಿ ಹಿಡಿದಿಟ್ಟ ಸ್ವಂತದ ಅಭಿವ್ಯಕ್ತಿಗೆ ಕಾಪಿರೈಟ್ ಪಡೆಯಬಹುದು. ಇದು ವ್ಯಕ್ತಿಯ ಪ್ರತಿಭೆಗೆ ಕೊಡುವ ಬೆಲೆ. ಸಾಮಾನ್ಯವಾಗಿ ಕಾಪಿರೈಟ್ ಪುನರ್ಮುದ್ರಣ, ಪುನರ್ಬಳಕೆಗೆ ಸಂಬಂಧಿಸಿರುತ್ತದೆ, ಹಾಗೆಯೇ ಕಾಲಮಿತಿ ಹೊಂದಿರುತ್ತದೆ. ಹೀಗೆ ಕಾಪಿರೈಟ್ ಪಡೆದ ವಿಷಯಗಳನ್ನು, ಅವರ ಅನುಮತಿ ಇಲ್ಲದೆ ಯಾರೇ ಬಳಸಿದರೂ ಅದು ಶಿಕ್ಷಾರ್ಹ.
ವ್ಯಾಪಾರ ಮುದ್ರೆ (ಟ್ರೇಡ್ಮಾರ್ಕ್)
ಒಂದು ಸಂಸ್ಥೆಗೆ ಸಂಬಂಧಿಸಿದ ಗುರುತನ್ನು ವಿಶಿಷ್ಟ ರೀತಿಯಲ್ಲಿ ಸಂಕೇತ ಅಥವಾ ಸಂಕೇತ ಪದಗಳ ಮೂಲಕ ತೋರಿಸುವ ಸಂಜ್ಞೆಯೇ ಟ್ರೇಡ್ಮಾರ್ಕ್. ಇದು ಒಂದು ಸಂಸ್ಥೆಯ ವಸ್ತುಗಳನ್ನು ಪ್ರತಿಸ್ಪರ್ಧಿಗಳ ವಸ್ತುಗಳ ನಡುವೆ ತಕ್ಷಣ ಗುರುತಿಸಲು ಸಹಾಯ ಮಾಡುತ್ತದೆ. ಕಂಪನಿಯ ಹೆಸರು, ಘೋಷಣೆ, ಲೋಗೋ ಸಹ ಟ್ರೇಡ್ಮಾರ್ಕ್ಗಳಾಗಬಹುದು. ನೋಂದಾಯಿಸಿದ ಟ್ರೇಡ್ಮಾರ್ಕ್ ಆಗಿದ್ದರೆ, ಉತ್ಪನ್ನದ ಹೆಸರಿನ ಮೇಲೆ 'ಆರ್' ಅಕ್ಷರದ ಚಿಹ್ನೆ ನೋಡಬಹುದು. ಟಾಟಾ ಕಂಪನಿಯ 'ಟಾಟಾ', ಮ್ಯಾಕ್ಡೊನಾಲ್ಡ್ನ 'ಎಂ' ಅಕ್ಷರ, ಆಪಲ್ ಕಂಪ್ಯೂಟರ್ನ ಆಪಲ್ ಚಿತ್ರ, ಗೂಗಲ್ನ 'ಗೂಗಲ್' ಅಕ್ಷರಗಳು ಕೆಲ ಪ್ರಮುಖ ಟ್ರೇಡ್ಮಾರ್ಕ್ ಉದಾಹರಣೆಗಳು. ಇವುಗಳನ್ನು ಬೇರೊಬ್ಬರು ಕಾಪಿ ಮಾಡುವಂತಿಲ್ಲ.
ವ್ಯಾಪಾರ ರಹಸ್ಯ (ಟ್ರೇಡ್ ಸೀಕ್ರೆಟ್)
ಇತರರಿಗೆ ತಿಳಿಯದ ಮೌಲ್ಯಯುತವಾದ ವ್ಯಾಪಾರದ ಗುಟ್ಟೇ ವ್ಯಾಪಾರ ರಹಸ್ಯ. 125 ವರ್ಷಗಳಿಂದ ಮೂರುಕಟ್ಟೆಯಲ್ಲಿ ಪ್ರಖ್ಯಾತವಾಗಿರುವ ಕೋಕಾಕೋಲಾ ಈ ವಿಷಯಕ್ಕೆ ಉತ್ತಮ ಉದಾಹರಣೆ. ಅಟ್ಲಾಂಟ ಡೌನ್ಟೌನಿನ ಬ್ಯಾಂಕ್ನ ನೆಲಮಾಳಿಗೆಯಲ್ಲಿ ಕೋಕಾಕೋಲಾದ ಪಾಕ ವಿಧಾನದ ರಹಸ್ಯವನ್ನು ಭದ್ರವಾಗಿ ಕಾದಿರಿಸಲಾಗಿದೆ ಎನ್ನುವುದು ದಂತಕಥೆಯಂತೆ ಅಮೆರಿಕದಲ್ಲಿ ಪ್ರಚಲಿತವಾಗಿತ್ತು. ಕೋಕ್ ಕಂಪನಿ ತನ್ನ ರಹಸ್ಯ ಪಾಕಸೂತ್ರವನ್ನು ಇರಿಸಿದ ಸ್ಥಳವನ್ನು ಬದಲಾಯಿಸಿದ್ದೂ ಸುದ್ದಿಯಾಗಿತ್ತು. ಕೆಲವರು ಅದನ್ನು ಕದಿಯಲು ಹೋಗಿ ಕಂಬಿ ಎಣಿಸಿದ ಸುದ್ದಿಯೂ ವರದಿಯಾಗಿತ್ತು. ಯಶಸ್ವೀ ಉದ್ದಿಮೆಗಳ ಯಶಸ್ಸಿನ ರಹಸ್ಯವೇ ಒಂದು ಬೌಧ್ಧಿಕ ಸಂಪತ್ತು.
ಸ್ವಾಮ್ಯ (ಪೇಟೆಂಟ್)
ಇದು ಒಡೆತನದ ದಾಖಲೆ. ಪೇಟೆಂಟ್ ಪಡೆದವರು ಅಥವಾ ಅದರ ಲೈಸೆನ್ಸ್ ಹೊಂದಿದವರು, ಆ ಉತ್ಪನ್ನವನ್ನು ತಯಾರಿಸಲು, ಉಪಯೋಗಿಸಲು ಮತ್ತು ಮಾರಾಟ ಮಾಡಲು ಪಡೆದ ಪರವಾನಿಗೆ. ಒಂದು ಗೊತ್ತಾದ ಕಾಲಾವಧಿಗೆ ಇದನ್ನು ಪಡೆದಿರುವುದನ್ನು ನಿರೂಪಿಸುವ ಗುರುತೇ, ಸ್ವಾಮ್ಯ ಅಥವಾ ಪೇಟೆಂಟ್. ಪೇಟೆಂಟ್ ಪಡೆಯುವ ಮೂಲಕ ತನ್ನ ಉತ್ಪನ್ನದ ಏಕಸ್ವಾಮ್ಯ ರಕ್ಷಿಸಿಕೊಳ್ಳಬಹುದಾಗಿದೆ.ಸಾಫ್ಟ್ವೇರ್ ಕ್ಷೇತ್ರದಲ್ಲೂ ಪೇಟೆಂಟ್ ಈಗ ಬಹಳ ಪ್ರಾಮುಖ್ಯ ಪಡೆಯುತ್ತಿದೆ. ಸರ್ಚ್ ಎಂಜಿನ್, ಇಂಟರ್ನೆಟ್ ಹಾಗೂ ಮೊಬೈಲ್ ತಂತ್ರಜ್ಞಾನದಂತಹ ಹೊಸ ತಾಂತ್ರಿಕ ನೈಪುಣ್ಯಗಳ ವಿಷಯಗಳಲ್ಲಿ ಈಗ ಪೇಟೆಂಟ್ ಪಡೆಯುತ್ತಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ ಔಷಧ ತಯಾರಿಕೆ ಕಂಪನಿ ನೊವಾರ್ಟಿಸ್ ಪೇಟೆಂಟಿಗೆ ಸಂಬಂಧಿಸಿದ ವಿಷಯದಲ್ಲಿ ಸುದ್ದಿಮಾಡಿತ್ತು. ಪೇಟೆಂಟ್ ಹೆಸರಲ್ಲಿ ಬಡ ರೋಗಿಗಳ ಕೈಗೆ ನಿಲುಕದ ದುಬಾರಿ ಬೆಲೆಯಲ್ಲಿ ಔಷಧವನ್ನು ಮಾರುಕಟ್ಟೆಗೆ ತರಲು ಯೋಚಿಸಿತ್ತು. ನಮ್ಮ ಸುಪ್ರೀಂ ಕೋರ್ಟ್ ಆ ಪೇಟೆಂಟಿನ ಕೋರಿಕೆಯನ್ನು ತಳ್ಳಿ ಹಾಕಿತು.
ಕೈಗಾರಿಕಾ ವಿನ್ಯಾಸ (ಇಂಡಸ್ಟ್ರಿಯಲ್ ಡಿಸೈನ್)
ಒಂದು ವಸ್ತುವಿಗೆ ತಾಂತ್ರಿಕ ವಿಧಾನದ ಮೂಲಕ ಸಮಗ್ರ ಆಕಾರ ಹಾಗೂ ವಿನ್ಯಾಸ ಕೊಟ್ಟು, ಉತ್ಪನ್ನಕ್ಕೆ ಒಂದು ವಿಶಿಷ್ಟ ಹೊರನೋಟ ನೀಡುವುದೇ ಕೈಗಾರಿಕಾ ವಿನ್ಯಾಸ. ಮೋಟರ್ ಸೈಕಲ್ನಲ್ಲಿ ಅಳವಡಿಸಿರುವ ಮೀಟರ್ನ ಆವರಣದ ವಿನ್ಯಾಸ ಇದಕ್ಕೊಂದು ಉತ್ತಮ ಉದಾಹರಣೆ. ಮೀಟರ್ ಆವರಣ ನೋಡಿಯೇ ನಾವು ಮೋಟರ್ ಸೈಕಲ್ ಯಾವ ಕಂಪನಿಯದು ಎಂದು ಗುರುತಿಸಬಹುದು. ಹೀಗೆ ವಿನ್ಯಾಸಗಳು ಆಯಾ ಉತ್ಪನ್ನಗಳಿಗೆ ಸೀಮಿತವಾಗಿರುತ್ತವೆ.
ಭೌಗೋಳಿಕ ಸೂಚಕಗಳು (ಜಾಗ್ರಫಿಕಲ್ ಇಂಡಿಕೇಷನ್)
ಡಾರ್ಜಲಿಂಗ್ ಟೀಯ ಸ್ವಾದ, ಪೋಚಂಪಲ್ಲಿ ಸೀರೆಯ ವಿಶಿಷ್ಟ ಸೊಬಗು, ಸ್ಕಾಚ್ ವಿಸ್ಕಿಯ ರುಚಿ, ಸ್ವಿಸ್ ಗಡಿಯಾರದ ತಾಂತ್ರಿಕ ನೈಪುಣ್ಯ- ಇವೆಲ್ಲವೂ ಆಯಾ ಸ್ಥಳಗಳೊಂದಿಗೆ ಗುರುತಿಸಲ್ಪಡುವ ವಿಶೇಷ ಉತ್ಪನ್ನಗಳು. ಆ ಉತ್ಪನ್ನಗಳನ್ನು ಬೇರೆಲ್ಲೇ ತಯಾರಿಸಿದರೂ ಕಾನೂನಿನ ಪ್ರಕಾರ ಆ ಸ್ಥಳದ ಹೆಸರು ಕೊಡುವಂತಿಲ್ಲ. ಇದೂ ಬೌಧ್ಧಿಕ ಸಂಪತ್ತಿನ ಒಂದು ಬಗೆ.
ವಿಶ್ವ ಬೌಧ್ಧಿಕ ಸಂಪತ್ತಿನ ಸಂಸ್ಥೆ
ಆವಿಷ್ಕಾರ ಮತ್ತು ಸೃಜನಶೀಲತೆಗಳನ್ನು ಉತ್ತೇಜಿಸುವ, ಬೌಧ್ಧಿಕ ಸಂಪತ್ತಿನ ಬಳಕೆಗೆ ಮೀಸಲಾಗಿಟ್ಟ, ವಿಶ್ವ ಸಂಸ್ಥೆಯ ಒಂದು ಅಂಗ ಸಂಸ್ಥೆಯೇ ವಿಶ್ವ ಬೌಧ್ಧಿಕ ಸಂಪತ್ತಿನ ಸಂಸ್ಥೆ. 1967ರಲ್ಲಿ ಆರಂಭವಾದ ಈ ಸಂಸ್ಥೆಯ ಮುಖ್ಯ ಕಚೇರಿ ಜಿನೇವಾದಲ್ಲಿದೆ. 185 ದೇಶಗಳು ಇದರ ಸದಸ್ಯತ್ವ ಪಡೆದಿವೆ. ಬೌದ್ಧಿಕ ಸಂಪತ್ತಿನ ರಕ್ಷಣೆಗಾಗಿಯೇ ಹಕ್ಕುಗಳಿವೆ. ಕಾನೂನುಗಳನ್ನು ರೂಪಿಸಲಾಗಿದೆ. ಪ್ರತೀ ವರ್ಷ ಏ.26ರಂದು ವಿಶ್ವ ಬೌಧ್ಧಿಕ ದಿನ ಆಚರಿಸಲಾಗುತ್ತದೆ. 'ಮುಂದಿನ ಜನಾಂಗದ ಸೃಜನಶೀಲತೆ' ಈ ವರ್ಷದ ಆಚರಣೆಯ ಥೀಮ್.
ಲೌಕಿಕ ಸಂಪತ್ತಿಗೆ ಸಿಗುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯ ಬೌದ್ಧಿಕ ಸಂಪತ್ತಿಗೆ ದೊರೆಯುತ್ತದೆ. ಗ್ರಾಹಕರ ಬೇಡಿಕೆ ಮತ್ತು ವ್ಯಾಪಾರಗಳಿಗೆ ಪೂರಕವಾಗಿ, ತಾಂತ್ರಿಕ ಆವಿಷ್ಕಾರಗಳು, ಸೃಜನಶೀಲ ಚಿಂತನೆಗಳು ಬೆಳೆದು, ಬೌದ್ಧಿಕ ಸಂಪತ್ತಿನ ಅಭಿವೃಧ್ಧಿಗೆ ಕಾರಣವಾಗುತ್ತವೆ. ಇವುಗಳನ್ನು ವಿಶ್ಲೇಷಿಸುವ ಮತ್ತು ಬೆಳೆಸುವ ಅಪರೂಪದ ಕಸರತ್ತಿಗೆ ವಿಶ್ವ ಬೌದ್ಧಿಕ ಸಂಪತ್ತಿನ ದಿನ ವೇದಿಕೆ.
- ವಸಂತಲಕ್ಷ್ಮಿ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


