ಬೈಟುಕಾಫಿ

ಫಾರಿನ್ ಲ್ಯಾಂಗ್ವೇಜ್

ಫಾರಿನ್ ಲ್ಯಾಂಗ್ವೇಜ್
Published On :

ಇಂಗ್ಲಿಷ್ ಭಾಷೆ ವಿಶಿಷ್ಟ ಮತ್ತು ವಿಶ್ವವ್ಯಾಪಿ. ಆದರೆ ಕೆಲವು ದೇಶಗಳಲ್ಲಿ ಇಂಗ್ಲಿಷ್‌ಗೆ ನಯಾಪೈಸೆ ಬೆಲೆಯಿಲ್ಲ ಎನ್ನುವುದು ನಿಮಗೆ ಗೊತ್ತೆ? ಇಂಗ್ಲಿಷ್ ಕಲಿತರೆ ಸಾಕು ಎಂದುಕೊಂಡಿರುವವರು ತಿಳಿಯಬೇಕಾದ ಸತ್ಯವೊಂದಿದೆ. ಬೇರೆ ಬೇರೆ ದೇಶಗಳ ಜನರೊಂದಿಗೆ ವ್ಯವಹರಿಸಲು, ಅಲ್ಲಿನ ಸಾಹಿತ್ಯ, ಪ್ರವಾಸ, ಹಣಕಾಸು, ವ್ಯಾಪಾರ, ಭಾಷಾಂತರ, ಅನುವಾದ, ಪತ್ರಿಕೋದ್ಯಮ, ಐಟಿ ಬಿಟಿ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ, ಅಟೋಮೊಬೈಲ್, ನಾಸಾದಂತಹ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಲು ಅಲ್ಲಿನ ಭಾಷೆ ಕಲಿಯುವುದು ಅವಶ್ಯಕ. ಒಂದೇ ಭಾಷೆ ಕಲಿಯುವವ ಒಮ್ಮೆ ಬದುಕಿದರೆ, ಹೊಸ ಭಾಷೆ ಕಲಿಯುವವ ಪ್ರತಿ ದಿನ ಹೊಸ ಬದುಕು ಕಾಣುತ್ತಾನೆ ಎಂಬ ಮಾತಿದೆ.
ನಮ್ಮ ದೇಶದ ಪ್ರಮುಖ ವಾಣಿಜ್ಯ, ತಂತ್ರಜ್ಞಾನ ನಗರಗಳಾದ ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್, ಚೆನ್ನೈ, ಕೋಲ್ಕತಾಗಳಲ್ಲಿ ಜರ್ಮನಿ, ಫ್ರಾನ್ಸ್, ಜಪಾನ್, ರಷ್ಯಾ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು ತಲೆ ಎತ್ತಿವೆ. ಅಲ್ಲಿ ಕೆಲಸ ನಿರ್ವಹಿಸಲು ಇಲ್ಲಿನ ಪ್ರಾದೇಶಿಕ ಭಾಷೆಯೊಂದಿಗೆ ಆಯಾ ದೇಶಗಳ ಭಾಷಾಜ್ಞಾನ ಅಗತ್ಯ.
ಜಗತ್ತಿನಲ್ಲೇ ಅಟೋಮೊಬೈಲ್ ಕ್ಷೇತ್ರದ ಮುಂಚೂಣಿ ಕಂಪನಿಗಳಾದ ಮರ್ಸಿಡಿಸ್ ಬೆಂಜ್, ಆಡಿ, ಬಿಎಂಡಬ್ಲ್ಯು, ವೋಕ್ಸ್‌ವ್ಯಾಗನ್, ಸ್ಕೋಡಾ ಜರ್ಮನಿ ದೇಶದ್ದು. ಶೂ ತಯಾರಿಕೆಯಲ್ಲಿ ಜಗದ್ವಿಖ್ಯಾತವಾದ ಅಡಿದಾಸ್ ಕಂಪನಿ ಕೂಡ ಜರ್ಮನಿಯದು. ಆ ದೇಶದ ಕಂಪನಿಗಳು ಇಂದು ವಿಶ್ವಾದ್ಯಂತ ಗ್ರಾಹಕರಿಗಾಗಿ ತಮ್ಮ ಶೋರೂಂಗಳನ್ನು ತೆರೆಯುತ್ತಿವೆ. ಅವುಗಳಿಗೆ ತಮ್ಮ ದೇಶಭಾಷೆ ಜತೆಗೆ ಜರ್ಮನ್ ಭಾಷೆ ಕಲಿತಿರುವ ತಂತ್ರಜ್ಞರು, ವಿಷಯ ತಜ್ಞರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ಪಿಆರ್‌ಒಗಳ ಅವಶ್ಯಕತೆಯಿದೆ.
ಅದರಂತೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೆಸರು ಮಾಡಿರುವ ರಷ್ಯಾದಲ್ಲಿ ಅನೇಕ ಉದ್ಯೋಗಾವಕಾಶಗಳಿವೆ. ಐಟಿ ಬಿಟಿ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಯಾನಿಗಳಿಗೆ ಅಲ್ಲಿ ಅವಕಾಶ ಹೆಚ್ಚು. ರಷ್ಯಾದ ಸಾಹಿತ್ಯ ಸಮೃದ್ಧವಾಗಿದೆ. ಅದನ್ನು ಭಾರತೀಯ ಭಾಷೆಗಳಿಗೆ ತರ್ಜುಮೆ, ವಿಮರ್ಶೆ ಮಾಡುವ ಮಂದಿ ಬೇಕಾಗಿದ್ದಾರೆ.
ಇದಲ್ಲದೆ ಜರ್ಮನಿ ಮತ್ತು ರಷ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ಮೂಲದ ಯೋಗ ಶಿಕ್ಷಕರಿಗೆ ಬೇಡಿಕೆ ಇದೆ. ಈ ಎರಡೂ ದೇಶಗಳ ಭಾಷೆ ಕಲಿತವರಿಗೆ ಉದ್ಯೋಗಗಳು ಕೈಬೀಸಿ ಕರೆಯುತ್ತವೆ.
ಫ್ರಾನ್ಸ್, ಜಪಾನ್, ಸ್ಪೇನ್ ದೇಶಗಳ ಕಂಪನಿಗಳು ಇಂದು ವಿಶ್ವದ ಮೂಲೆ ಮೂಲೆಗೂ ಕಾಲಿಟ್ಟಿವೆ. ಜಪಾನಿನ ತಂತ್ರಜ್ಞಾನವನ್ನು ಜಗತ್ತಿನ ಬಹುತೇಕ ದೇಶಗಳು ಬಳಸುತ್ತಿವೆ. ಹೇಗಾಗಿ ಆ ದೇಶದಲ್ಲಿ ಕೆಲಸ ಮಾಡಲು ಜಪಾನಿ, ಸ್ಪಾನಿಶ್ ಮತ್ತು ಫ್ರೆಂಚ್ ಕಲಿತ ಉದ್ಯೋಗಿಗಳ ಅಗತ್ಯವಿದೆ. ಹೀಗಾಗಿ, ಇಂಗ್ಲಿಷ್‌ನೊಂದಿಗೆ ಇನ್ನೊಂದು ಭಾಷೆಯನ್ನು ಕಲಿತವರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೆಚ್ಚಿನ ಅವಕಾಶ ಎಬುದರಲ್ಲಿ ಅನುಮಾನವಿಲ್ಲ.

ಶ್ರದ್ಧೆ ಬೇಕು
ಅನ್ಯಭಾಷೆ ಕಲಿಯಲು ಸ್ವಲ್ಪ ಶ್ರಮ ಮತ್ತು ಶ್ರದ್ಧೆ ಬೇಕು. ಅನ್ಯಭಾಷೆ ಕಲಿವುದೆಂದರೆ ಕೇವಲ ವ್ಯಾಕರಣ ಮತ್ತು ಮಾತನಾಡುವುದನ್ನು ಕಲಿಯುವುದಲ್ಲ. ಬದಲಾಗಿ ಹೊಸ ಧ್ವನಿ ಮತ್ತು ಹೇಳುವ ರೀತಿಯನ್ನು ಕಲಿಯುವುದು. ಇದಕ್ಕಾಗಿ ರಾಜ್ಯದ ಬೆಂಗಳೂರು, ಧಾರವಾಡಗಳಲ್ಲಿ ವಿದೇಶಿ ಭಾಷೆ ಕಲಿಸುವ ಸಂಸ್ಥೆಗಳು ಇವೆ. ಧಾರವಾಡ ವಿವಿಯಲ್ಲಿ ಪ್ರತ್ಯೇಕ ವಿದೇಶಿ ಭಾಷೆ ವಿಭಾಗವಿದೆ. ಇಲ್ಲಿ ಜರ್ಮನ್, ಫ್ರೆಂಚ್, ರಷ್ಯನ್ ಭಾಷೆಗೆ ಸಂಬಂಧಿಸಿದ ವಿವಿಧ ಕೋರ್ಸ್‌ಗಳಿವೆ. ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈಗಳಲ್ಲೂ ಶಿಕ್ಷಣ ಸಂಸ್ಥೆಗಳಿವೆ.

ಅವಕಾಶ ಮತ್ತು ಅನುಕೂಲ

  •     ವಿದೇಶಿ ಭಾಷೆಗಳ ಸಾಹಿತ್ಯದ ಭಾಷಾಂತರಕಾರ, ನಿರೂಪಕ, ಭಾಷಾ ಶಿಕ್ಷಕ ಅಥವಾ ಭಾಷಾಶಾಸ್ತ್ರಜ್ಞರಾಗಬಹುದು.
  •     ಒಂದು ಅಥವಾ ಹೆಚ್ಚು ವಿದೇಶಿ ಭಾಷೆಗಳ ಕಲಿಕೆಯಿಂದ ಆಳವಾದ ಜ್ಞಾನ, ನೆನಪಿನ ಶಕ್ತಿ, ಗ್ರಹಿಕಾ ಸಾಮರ್ಥ್ಯ ವೃದ್ಧಿ.
  •     ಆ ದೇಶಗಳ ಉತ್ಪನ್ನಗಳು, ವ್ಯಾಪಾರ, ವಹಿವಾಟು, ಹಣಕಾಸು ನಿರ್ವಹಣೆ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ.
  •     ಅನುವಾದಕರು ಸ್ವಯಂ ಉದ್ಯೋಗ ಆರಂಭಿಸಬಹುದು. ಆನುವಾದ ಏಜೆನ್ಸಿಗಳನ್ನು ತೆರೆಯಬಹುದು.
  •     ಪ್ರವಾಸೋದ್ಯಮ ಇಲಾಖೆಯಲ್ಲಿ ಆಕರ್ಷಕ ವೇತನದೊಂದಿಗೆ ಉನ್ನತ ಸ್ಥಾನದ ಉದ್ಯೋಗ.
  •     ಭಾಷಾಶಾಸ್ತ್ರಜ್ಞರು ವಿಶ್ವವಿದ್ಯಾಲಯಗಳಲ್ಲಿ, ಹೈಟೆಕ್ ಕಂಪನಿಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ, ಸಲಹಾ ಸಂಸ್ಥೆಗಳಲ್ಲಿ, ಸರ್ಕಾರಿ ಮತ್ತು ಸೇನೆಯ ಸಂಸ್ಥೆಗಳಲ್ಲಿ ನೌಕರಿ ಪಡೆಯಬಹುದು.
  •     ಆಟೋಮೊಬೈಲ್ ಕ್ಷೇತ್ರದಲ್ಲಿ ಜರ್ಮನಿಯ ಕಂಪನಿಗಳು ಹೆಚ್ಚಿವೆ. ಆ ಕಂಪನಿಗಳ ತಯಾರಿಕಾ ಘಟಕಗಳಿಗೆ ಎಂಜಿನಿಯರ್‌ಗಳು, ತಜ್ಞರು, ಷೋರೂಂಗಳಲ್ಲಿ ಸಂವಹನಕಾರ, ಪಿಆರ್‌ಓ ಹುದ್ದೆಗಳಿವೆ.
  •     ಫ್ರಾನ್ಸ್ ಫ್ಯಾಶನ್ ಕ್ಷೇತ್ರದ ಮುಂಚೂಣಿಯಲ್ಲಿದೆ. ಫ್ಯಾಶನ್ ಡಿಸೈನಿಂಗ್ ಕಲಿತ ಪದವೀಧರರು ಫ್ರೆಂಚ್ ಕಲಿತರೆ ಹೆಚ್ಚು ಸಾಧಿಸಬಹುದು.
  •     ಜಪಾನಿ ಭಾಷೆ ಕಲಿತರೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಗಳಲ್ಲಿ ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.
  •     ರಷ್ಯಾದ ಬಾಹ್ಯಾಕಾಶ ಕೇಂದ್ರಗಳಲ್ಲಿ ರಷ್ಯನ್ ಕಲಿತ ಭಾರತೀಯ ಪದವೀಧರರಿಗೆ ಅವಕಾಶಗಳು ಹೆಚ್ಚಿವೆ.
- ಶಕುಂತಲಾ ಕುಂದೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.