ಮೊದಲೇ ಆದರೆ ಪ್ರಥಮ ರಾತ್ರಿಯಾದರೂ ಏತಕ್ಕೆ?
ಮದ ಇಳಿದ ಮೇಲೆ ಸಮಸ್ಯೆ
ವಿವಾಹ ಪೂರ್ವ ಲೈಂಗಿಕತೆ ಕುತೂಹಲ ಮತ್ತು ಆಕರ್ಷಣೆಗೆ ಬಿದ್ದು ಪ್ರೀತಿ, ಪ್ರೇಮ ಎಂಬ ಭ್ರಾಮಕ ಲೋಕದಲ್ಲಿ ವಿಹರಿಸುತ್ತ ದೇಹದ ವಾಂಛೆಯನ್ನು ತೃಪ್ತಿಪಡಿಸಿಕೊಳ್ಳುವುದೇ ಆಗಿದೆ. ಮೈಮನಗಳ ಮದ ಇಳಿದ ಮೇಲೆ ಸಮಸ್ಯೆಗಳ ಸರಮಾಲೆಯಲ್ಲಿ ಸಿಕ್ಕಿ ನರಳಬೇಕಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಬೆನ್ನು ಬಿದ್ದು, ಸ್ವೇಚ್ಛಾಚಾರವೇ ಬದುಕೆಂದು ತಿಳಿದು ವಿವಾಹ ಪೂರ್ವ ಲೈಂಗಿಕ ಸುಖವನ್ನು ಪಡೆದು, ಯುವತಿ ಗರ್ಭಿಣಿಯಾದಾಗ ಯುವಕ ಯುವತಿಗೆ ಕೈಕೊಟ್ಟು ಓಡಿ ಹೋಗುವುದು, ಯುವತಿ ಪ್ರೀತಿ ಪ್ರೇಮ ಎಂದು ಯುವಕನ ಮನೆ ಮುಂದೆ ಸತ್ಯಾಗ್ರಹ ಕೂರುವುದು, ಜನರ ಬಾಯಿಗೆ ಆಹಾರವಾಗುವುದು ಇವೆಲ್ಲಾ ಬೇಕಾ? ತಾವಿಟ್ಟುಕೊಂಡ ಗುರಿಸಾಧಿಸಲು ನಿರ್ದಿಷ್ಟ ಕಾಲದವರೆಗೆ ಮೈ-ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು, ಗುರಿ ಸಾಧಿಸಿದ ಮೇಲೆ ವಿವಾಹವಾಗಿ ಸುಖ ನೆಮ್ಮದಿಯ ಜತೆಗೆ ಸಂತಾನಾಭಿವೃದ್ಧಿ ಮಾಡಿಕೊಳ್ಳುವುದೇ ನಮ್ಮ ಸಂಸ್ಕೃತಿಯ ಸಂದೇಶ.
-ಅರಳಕುಪ್ಪೆ ಶ್ರೀನಿವಾಸ್, ಪಾಂಡವಪುರ
ಹರಿಯುವುದು ಬಾಳೆ ಎಲೆಯೇ!
ವಿವಾಹ ಪೂರ್ವ ಲೈಂಗಿಕ ಕ್ರಿಯೆಯ ಅವಶ್ಯಕತೆ ಎಳ್ಳಷ್ಟೂ ಇರದಿರುವುದರಿಂದ ಅದು ಬೇಡವೇ ಬೇಡ. ಹುಡುಗರನ್ನು ಯಾವುದೇ ರೀತಿಯಲ್ಲಿ ಸಾಮಾಜಿಕವಾಗಿ ಬಾಧಿಸದ ಈ ಕ್ರಿಯೆ, ಹುಡುಗಿಯರ ಚಾರಿತ್ರ್ಯಕ್ಕೆ ಕಪ್ಪುಚುಕ್ಕೆ. ಹೆಚ್ಚು ಗರ್ಭಪಾತಗಳಾಗುತ್ತಿರುವುದು ವಿವಾಹ ಪೂರ್ವ ಲೈಂಗಿಕ ಕ್ರಿಯೆಯ ಫಲಿತಾಂಶದಿಂದಲೇ. 'ಬಾಳೆ ಎಲೆ ಮುಳ್ಳಮೇಲೆ ಬಿದ್ದರೂ, ಮುಳ್ಳೇ ಬಾಳೆ ಎಲೆಮೇಲೆ ಬಿದ್ದರೂ ಹರಿಯುವುದು ಬಾಳೆ ಎಲೆ'. ಆದ್ದರಿಂದ ಇದು ಹೆಣ್ಣು ಮಕ್ಕಳ ಜೀವನವನ್ನೇ ನಾಶ ಮಾಡುತ್ತದೆ. ಹುಚ್ಚು ಮನಸ್ಸಿನ ಕೈಗೆ ಬುದ್ಧಿ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ, ಕೆಲವೊಮ್ಮೆ ಸಾವಿಗೆ ಹೆದರಿ ತನ್ನನ್ನರಿಯದೆಡೆಗೆ ಹೋಗಿ ಹೊಟ್ಟೆ ತುಂಬಿಸಿಕೊಳ್ಳಲು, ಹೆದ್ದಾರಿಯಿಂದಾಗದಿದ್ದರೆ ಅನಿವಾರ್ಯವಾಗಿ ಅಡ್ಡದಾರಿಗಿಳಿಯಬೇಕಾಗುತ್ತದೆ. ಇನ್ನು ಹುಡುಗರು ರೋಗ-ರುಜಿನಗಳ ಗೂಡಾಗುತ್ತಾರೆ. ಆದ್ದರಿಂದ ವಿವಾಹ ಪೂರ್ವ ಲೈಂಗಿಕ ಕ್ರಿಯೆಯನ್ನು ಕಡ್ಡಾಯವಾಗಿ ನಿಲ್ಲಿಸಲೇಬೇಕು. 'ಅಲ್ಲಾ! ಎಲ್ಲಾ ಮೊದಲೇ ಮುಗಿಸಿಕೊಂಡರೆ, ಹಿರಿಯರೇ ಗಂಡು-ಹೆಣ್ಣು ಕೂಡಿಸುವ ಪ್ರಥಮ ರಾತ್ರಿಯಾದರೂ ಏತಕ್ಕೆ ?'
-ಮಲ್ಲಿಕ್ ಭರತ್. ಎಸ್, ಮಂಡ್ಯ
ಮದುವೆಗೆ ಗೌರವ ಬೇಡವೇ?
ವಿವಾಹ ಎಂದರೆ ಮಧುರ ಬಂಧನ. ಜೀವನದ ಒಂದು ಪ್ರಮುಖ ಹಂತ. ನಿಶ್ಚಿತಾರ್ಥ, ಮದುವೆ ಸಂಭ್ರಮ, ಎಲ್ಲಾ ಸೇರಿ ಸಂಭ್ರಮಿಸುವ ಕಾಲ. ಹೆಣ್ಣು ಮಗಳನ್ನು ಧಾರೆ ಎರೆದುಕೊಡುವ ಹೆತ್ತವರು ಕಂಬನಿ ಸುರಿಸುವ ದಿನ. ಗಂಡನ ಮನೆ ಸೇರುವ ಮಗಳು, ಅತ್ತೆ ಮನೆಯಲ್ಲಿ ಸೇರು ಒದ್ದು ಮನೆ ಪ್ರವೇಶಿಸಿ, ಪ್ರಥಮ ರಾತ್ರಿ ಪತಿಯೊಂದಿಗೆ ಲೈಂಗಿಕತೆ ಹೊಂದಿ, ಆ ಮೂಲಕ ಮೈ ಮನಸ್ಸು ಹಂಚಿಕೊಂಡು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಂಪ್ರದಾಯ. ಅದು ಈಗ ಎಲ್ಲಿದೆ? ಮದುವೆಗೆ ಮೊದಲೇ ರಾತ್ರಿ ಜತೆಯಾಗಿ ಕಳೆದು ನಂತರ ಎಲ್ಲಿ ಬೇಕಾದಲ್ಲಿ ಓಡಾಡಿ ನಂತರ ಜನರ ಮುಂದೆ ಮದುವೆ ಅಂತ ನಡೆದರೆ 'ಸಂಪ್ರದಾಯಕ್ಕೆ ಬೆಲೆ ಎಲ್ಲಿದೆ?' ವಿವಾಹ ಪೂರ್ವ ಲೈಂಗಿಕತೆ ತಪ್ಪು, ತಪ್ಪು, ತಪ್ಪು. ಇದು ನನ್ನ ವಾದ.
-ಬಿ.ಪರಮೇಶ್ವರಯ್ಯ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

