ಈ ಕ್ಷಣವೇ ಕಲ್ಲು ಮನಸ್ಸು ಕದಲಿಸಿ
ಬದುಕು ಬದಲಾಯಿಸಿಕೊಳ್ಳಲು ಜೀವನದಲ್ಲಿ ಭಾರೀ ಸಮಯವೇನೂ ಬೇಕಾಗಿಲ್ಲ. ಎಲ್ಲರೂ ಹೇಳುವಂತೆ ಅಘಟಿತವೋ, ಅಪರೂಪದ ಸನ್ನಿವೇಶಕ್ಕಾಗಿಯೋ ಕಾಯಲೇಬೇಕೆಂದೇನೂ ಇಲ್ಲ. ಇಂಥವೆಲ್ಲಾ ನೆಪವನ್ನು ನಮ್ಮ ಮನಸ್ಸು ಹೂಡುತ್ತಲೇ ಇರುತ್ತದೆ. ಅಷ್ಟೇಕೆ? ನಮಗೆ ನಾವೇ ಬದಲಾಗಲೇಬಾರದು ಎಂದು ಹಠಕ್ಕೆ ಬಿದ್ದುಕೊಂಡು ವಂಚಿಸಿಕೊಳ್ಳುತ್ತಿರುತ್ತೇವೆ. ಅದು ನಮಗೂ ಗೊತ್ತು. ನಾವು ಮನಸ್ಸು ಮಾಡಿದರೆ ಯಾವುದೇ ಬದಲಾವಣೆಯಾಗಲಿ ಅಂಥದ್ದಕ್ಕೆ ತೆರೆದುಕೊಳ್ಳಲು ನಮಗೆ ಒಂದೇ ಒಂದು ಕ್ಷಣ ಸಾಕು. ಮೊದಲು ನಮ್ಮೊಳಗೆ ನಾವು ನಿರ್ಧರಿಸಕೊಳ್ಳಬೇಕು. ಅಂಥ ನಿರ್ಧಾರಕ್ಕೆ ನಾವು ತೆಗೆದುಕೊಳ್ಳುವುದು ಹೆಚ್ಚೆಂದರೆ ಒಮ್ಮೆ ಧಿಗ್ಗನೆದ್ದು ನಿಲ್ಲಲು ಬೇಕಿರುವಷ್ಟೇ ಸಮಯ. ಬಹುಳಷ್ಟು ಸಂದರ್ಭದಲ್ಲಿ ನಿರ್ಧಾರವನ್ನು ಯಾವ್ಯಾವುದೋ ನೆಪವನ್ನು, ಕಾರಣಗಳನ್ನು ಒಡ್ಡಿಕೊಳ್ಳುತ್ತಾ ಮುಂದೂಡುತ್ತಲೇ ಬಂದಿರುತ್ತೇವೆ. ಇವತ್ತೊಂದು ದಿನ ಬಿಟ್ಟುಬಿಡೋಣ, ನಾಳೆಯಿಂದ ಮಾಡಿದರಾಯಿತು. ನಾಳೆ ಬಹುಶಃ ಆಗಲಿಕ್ಕಿಲ್ಲ, ನಾಡಿದ್ದಾಗುವಷ್ಟರಲ್ಲಿ ಆಗುವುದೇನಿದೆ? ಇಷ್ಟೇ ದಿನ ಕಳೆದಿದೆಯಂತೆ, ಒಂದು ದಿನದಲ್ಲಿ ತಲೆ ಹೋಗುವುದೇನಿದೆ?... ಹೀಗೆಯೇ ನಿರ್ಧಾರವನ್ನು ಮುಂದಕ್ಕೆ ಹಾಕುತ್ತಲೇ ಬಂದಿರುತ್ತೇವೆ. ಇಂಥ ಮನಃಸ್ಥಿತಿ ಯಾವತ್ತಿಗೂ ಅಪಾಯಕಾರಿಯೇ. ಹೀಗೆ ಮುಂದೂಡುವ ಮನೋಭಾವದವರು ಯವತ್ತಿಗೂ ಜೀವನದಲ್ಲಿ ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುವುದೇ ಇಲ್ಲ. ಬೇಕಿದ್ದರೆ 'ನಾನು ಹೀಗೆಯೇ ಇರುವವನು. ನಾನ್ಯಾವತ್ತೂ ಬದಲಾಗುವುದೇ ಇಲ್ಲ' ಎಂದು ಹಠ ಮಾಡುವ ಮನಸ್ಸನ್ನು ಬದಲಿಸಬಹುದು. ಕಲ್ಲನ್ನು ಕಡೆದು ಒಂದು ಆಕಾರಕ್ಕೆ ತರುವುದು ಹೆಚ್ಚಿನ ಸಾಹಸವೇನಲ್ಲ. ಆದರೆ ರಬ್ಬರ್ ಅನ್ನು ನಮಗೆ ಬೇಕಾದ ಆಕಾರಕ್ಕೆ ತಂದು ನಿಲ್ಲಿಸುವುದು ಕಷ್ಟದ ಕೆಲಸ. ನಾವು ತಿರುಚಿದಂತೆ ಅದು ಸುಲಭದಲ್ಲಿ ತಿರುಗುತ್ತದೆ ಎಂಬುದು ಸತ್ಯ. ಆದರೆ ರಬ್ಬರಿನ ಮೇಲೆ ನಾವು ಒತ್ತಡ ಹೇರಿಟ್ಟುಕೊಂಡಷ್ಟೇ ಸಮಯ ಅದು ನಮಗೆ ಬೇಕಾದಂಥ ಆಕಾರದಲ್ಲಿ ಅದಿರುವುದು. ನಾವು ಬಲವನ್ನು ಸಡಿಲಿಸಿದಾಕ್ಷಣವೇ ಅದು ಮತ್ತೆ ತನ್ನ ಮೊದಲಿನ ಆಕಾರಕ್ಕೇ ಬರುತ್ತದೆ. ಕಲ್ಲು ನಾವು ಕಡಿದಿಟ್ಟಂತೆಯೇ ಉಳಿಯುತ್ತದೆ. ಕಲ್ಲನ್ನು ಕದಲಿಸಲಷ್ಟೇ ನಮ್ಮ ಪ್ರಯತ್ನ ಅಗತ್ಯ. ಅಂಥ ಕ್ಷಣಕ್ಕೆ ಹಿಂದೆ ಮುಂದೆ ಮಾಡಬೇಡಿ. ನಿಮ್ಮನ್ನು ನೀವು ಸುಂದರ ಮೂರ್ತಿಯನ್ನಾಗಿಸಿಕೊಳ್ಳಲು ನಿಮ್ಮ ಬಂಡೆ ಮನಸ್ಸನ್ನು ತಕ್ಷಣ ಕದಲಿಸಿಕೊಳ್ಳಿ. ಮನಸ್ಸನ್ನು ರಬ್ಬರಿನಂತೆ ಜಗ್ಗಾಡುತ್ತಿರಬೇಡಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

