ನಂಬಿದವರಿಗೆ ಇಂಬು
ವಾಸ್ತು ಬೇಕೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ವಾಸ್ತು ಯಾವಾಗ ಬೇಕು ಎಂಬ ಪ್ರಶ್ನೆಯೂ ಎದುರಾಗುತ್ತದೆ. ಮನುಷ್ಯನಿಗೆ ಇರಲೊಂದು ಮನೆಯೇ ಇಲ್ಲದಾಗ ವಾಸ್ತು ಬೇಕಾಗಲಾರದು. ಕನಿಷ್ಠ ದರ್ಜೆಯ ಬಾಡಿಗೆ ಮನೆ ಹೊಕ್ಕುವಾಗಲೂ ವಾಸ್ತುವಿನ ತಲೆಬಿಸಿ ಇರಲಾರದು. ಅತ್ಯಂತ ಕನಿಷ್ಠ ದರ್ಜೆಯ ನಿವೇಶನಗಳಲ್ಲಿ ಮನೆ ಕಟ್ಟುವವರಿಗೂ ವಾಸ್ತು ಅತ್ಯವಶ್ಯಕವಲ್ಲ. ಅಲ್ಲಿಗೆ ಸರಿಸುಮಾರು ಭಾರತ ದೇಶದ ಅರ್ಧಕ್ಕೂ ಮಿಕ್ಕಿದ ಜನರಿಗೆ ವಾಸ್ತು ಅಗತ್ಯವಿಲ್ಲ ಎಂದಾಯಿತು. ಹಾಗಾದ್ರೆ ವಾಸ್ತು ಯಾರಿಗೆ ಬೇಕು ಎಂಬ ಪ್ರಶ್ನೆಗೆ ಉತ್ತರದ ಬೆನ್ನೇರಿ ಹೊರಟಾಗ ತನ್ನ ಆಯ್ಕೆಯ ಬಾಡಿಗೆ ಮನೆಯನ್ನು ಹೊಂದುವ ಸಾಮರ್ಥ್ಯ ಇರುವವರಿಗೆ, ತನ್ನ ಆಯ್ಕೆಯ ನಿವೇಶನವನ್ನು ಹೊಂದುವ ಸಾಮರ್ಥ್ಯ ಇರುವವರಿಗೆ, ವಾಸ್ತು ನಿಯಮಗಳಿಗೆ ಅನುಗುಣವಾಗಿ ಇರುವ ಮನೆ ನಿರ್ಮಿಸುವ ತಾಕತ್ತು ಇರುವವರಿಗೆ ವಾಸ್ತು ಬೇಕು ಎಂಬುದು ಸ್ಪಷ್ಟವಾಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬಹುದಾದರೆ ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಆಸ್ತಿಕ ಜನರಿಗೆ ವಾಸ್ತು ಅವಶ್ಯಕ ಎಂದು ಹೇಳಬಹುದು. ಕೊನೆಯಲ್ಲಿ ಉತ್ತರವನ್ನೇ ಸ್ಪಷ್ಟಪಡಿಸಬೇಕಾದ ಅನಿವಾರ್ಯತೆ ಎದುರಾದರೆ ವಾಸ್ತು ಶಾಸ್ತ್ರವು ನಂಬಿದವರಿಗೆ ಇಂಬು ಕೊಡುವ ದೇವರಂತಹುದು ಎಂದಷ್ಟೇ ಹೇಳಬಹುದು.
= ಮಹೇಶ್ಮೂರ್ತಿ, ಸುರತ್ಕಲ್
ವಾಸ್ತುಗಿಂತ ವಾಸ್ತವ ತಿಳಿ
ವಾಸ್ತು ಎಂದರೆ ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮನೆ ನಿರ್ಮಿಸುವವರು ಮೊದಲೇ ನುರಿತ ವಾಸ್ತು ತಜ್ಞರನ್ನು ಸಂಪರ್ಕಿಸಿ ನಕ್ಷೆಯ ಹಂತದಲ್ಲೇ ಸಲಹೆ ಪಡೆಯುವುದು ಒಳ್ಳೆಯದು. ಅದರಿಂದ ಯಾರಿಗೂ ಹಾನಿ ಇಲ್ಲ. ಹಣದ ವೃಥಾ ಖರ್ಚು ಇರುವುದಿಲ್ಲ. ಅದನ್ನು ಬಿಟ್ಟು ಮನೆ ಕಟ್ಟಿ ಆದಮೇಲೆ ಯಾರೋ ಹೇಳಿದರಂದು ಕಟ್ಟಿರುವುದನ್ನು ಕೆಡವಿ ಬದಲಾಯಿಸುವುದರಲ್ಲಿ ಏನೂ ಅರ್ಥವಿಲ್ಲ. ಉಳ್ಳವರನ್ನು ನೋಡಿ ಸಾಮಾನ್ಯ ಜನರೂ ಸಹ ಕೆಡವುದರಲ್ಲಿ ಆಸಕ್ತಿ ತೋರಿಸುತ್ತಿರುವುದು ಖೇದಕರ ಸಂಗತಿ. ಯಾವುದೇ ರೀತಿಯಲ್ಲಿ ಮನೆ ಕಟ್ಟಿದರೂ ಅದರಲ್ಲಿ ನೆಮ್ಮದಿ, ಸುಖ, ಸಂತಸವನ್ನು ಕಾಣಬೇಕು. ಅದನ್ನು ಬಿಟ್ಟು ಇರದುದರೆಡೆಗೆ ನೋಡಿದರೆ ದುಖಃ ಖಂಡಿತ. ವಾಸ್ತು ಪ್ರಕಾರ ಮನೆ ಕಟ್ಟಿದಲ್ಲಿ ಸಕಲ ಸೌಭಾಗ್ಯ ದೊರೆಯುತ್ತದೆ ಎಂಬ ಭ್ರಮೆ ಬಿಡಬೇಕು. ಮುಖ್ಯವಾಗಿ ವಾಸ್ತು ಎಂಬುದನ್ನು ಅರಿಯುವುದಕ್ಕಿಂತ ವಾಸ್ತವ ಅರಿಯುವುದು ಲೇಸು.
ಪತಂಗಿ ಮುರಳಿ, ಬೆಂಗಳೂರು
ಕರ್ತವ್ಯ ಶ್ರದ್ಧೆಯೇ ವಾಸ್ತು!
ಇಂದು ಬಹುತೇಕರು ವಾಸ್ತುಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ಸ್ವಲ್ಪ ಎಡವಟ್ಟಾದರೆ, ತಮ್ಮ ಕೆಲಸ ಸುಗಮವಾಗಿ ಸಾಗದಿದ್ದರೆ ವಾಸ್ತು ದೋಷವೇ ಕಾರಣ ಎಂದು ಅದಕ್ಕಾಗಿ ಮತ್ತ ಷ್ಟು ಹಣ ಖರ್ಚು ಮಾಡಿ ಆರ್ಥಿಕವಾಗಿ ಇನ್ನಷ್ಟು ತೊಂದರೆ ಅನುಭವಿಸುತ್ತಾರೆ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡದರೆ ತಾನೇ ಅವು ಸಫಲಗೊಳ್ಳುವುದು? ಈ ಮಾನವ ಜೀವನವೇ ಏರಿಳಿತದಿಂದ ಕೂಡಿದೆ. ಕತ್ತಲೆಯ ನಂತರ ಬೆಳಕು, ಬೆಳಕಿನ ನಂತರ ಮತ್ತೆ ಕತ್ತಲು. ಅದು ಸೃಷ್ಟಿ ನಿಯಮ. ಹೀಗಿರುವಾಗ ನಮಗೆದುರಾದ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ವಾಸ್ತು ದೋಷ, ಮತ್ತೇನೋ ದೋಷ ಹುಡುಕುತ್ತ ಸಮಯ, ಹಣ ವ್ಯಯ ಮಾಡುವುದಕ್ಕಿಂತ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಸಾಕಲ್ಲವೇ? ನಾವು ಶ್ರದ್ಧೆಯಿಂದ ಮಾಡುವ ಕೆಲಸವೇ ದೇವನ ಪೂಜೆ ಎಂದು ಬಸವಣ್ಣನವರು ಹೇಳಿದ್ದಾರೆ.
= ನಾಗಶೆಟ್ಟಿ ಪಾಟೀಲ್, ಗಾದಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

