ನಿಷ್ಕಾರಣ ಪ್ರೀತಿ
ಹೆಂಡತಿಯನ್ನು ಪ್ರೀತಿಸುತ್ತೇವೆ. ಆಕೆಯಿಲ್ಲದೆ ಐಹಿಕ ಬದುಕಿನ ಸುಖ ಸಿಗಲಾರದು ಎಂಬ ಆತಂಕ. ಮಗುವನ್ನು ಅಕ್ಕರೆಯಿಂದ ಕಾಣುತ್ತೇವೆ. ಆತ ಮುಂದೆ ದೊಡ್ಡವನಾದ ಬಳಿಕ ತಮ್ಮನ್ನು ಸಾಕಿಯಾನು ಎಂಬ ಸ್ವಾರ್ಥ. ನೆರೆಮನೆಯವನನ್ನು ಪರಿಚಯ ಮಾಡಿಕೊಳ್ಳುತ್ತೇವೆ. ಆತ ನಮ್ಮ ಸಂಕಟದ ಸಮಯದಲ್ಲಿ ಒದಗಬಹುದು ಎಂಬ ಮುಂದಾಲೋಚನೆ. ಬಂಧುಗಳನ್ನು ಆಗಾಗ ಕಂಡುಬರುತ್ತೇವೆ. ಅವರು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡದಿರಲಿ ಎಂಬ ಆಶಯ. ನಿಷ್ಕಾರಣವಾಗಿ ಪ್ರೀತಿಸಲು ನಮಗೆ ಗೊತ್ತೇ ಇಲ್ಲವೆ?
ನಾವು ಮಾನವಮಾತ್ರರು. ಮಹಾತ್ಮರಿಗೆ ಸಾಧ್ಯವಾಗುವ ಅಪಾರ ಪ್ರೀತಿ, ಸಹನೆ, ಇಡೀ ಮಾನವ ಜನಾಂಗವನ್ನೇ ಸಹಾನುಭೂತಿಯಿಂದ ಕಾಣುವ ವೈಶಾಲ್ಯ ನಮಗಿಲ್ಲವೆಂದೇ ಇಟ್ಟುಕೊಳ್ಳೋಣ. ಆದರೆ, ನಮ್ಮ ಆರೋಗ್ಯಕ್ಕಂತೂ ನಿಸ್ವಾರ್ಥ ಪ್ರೀತಿಯ ಅವಶ್ಯಕತೆ ಇದೆ. ನಮ್ಮ ಪುರಾತನರೂ ಇದನ್ನು ಹೇಳಿದ್ದಾರೆ, ಆಧುನಿಕ ವಿಜ್ಞಾನವೂ ಇದನ್ನು ದೃಢೀಕರಿಸಿದೆ. ಯಾವಾತನ ಮನಸ್ಸು ಪ್ರಾಂಜಲ ಪ್ರೇಮದ ಹೊಳೆಯಲ್ಲಿ ಮೀಯುತ್ತಿರುತ್ತದೋ, ಆತನಿಗಿಂತ ಆರೋಗ್ಯವಂತ ಬೇರ್ಯಾರೂ ಇಲ್ಲವಂತೆ.
ಪ್ರೇಮವು ನಮ್ಮನ್ನು ಮಾನವತೆಯ ವಿಶಾಲ ಹುಲ್ಲುಗಾವಲಿನಲ್ಲಿ ಶುಭ್ರ ಸ್ವಚ್ಛ ಗಾಳಿಯನ್ನು ಸೇವಿಸುತ್ತ ಅಡ್ಡಾಡುವಂತೆ ಮಾಡುತ್ತದೆ. ನಾವು ಪ್ರೇಮವನ್ನು ಯಾರಿಗಿತ್ತೆವೋ. ಆದೇ ಮಾನವತೆಯೇ ನಮ್ಮನ್ನು ಪೊರೆಯುತ್ತದೆ. ಲೌಕಿಕ ಪ್ರೀತಿಯೇ ಅಷ್ಟರ ಮಟ್ಟಿಗೆ ಫಲಪ್ರದ ಎಂದ ಮೇಲೆ, ಅಲೌಕಿಕ ಪ್ರೀತಿಯ ಪರಿಣಾಮವನ್ನು ಹೇಳಬೇಕೆ? ನಾವೇಕೆ ನಮ್ಮ ನಮ್ಮ ಪರಿಧಿಗಳನ್ನು ತುಸುಮಟ್ಟಿಗೆ ವಿಸ್ತರಿಸಿಕೊಳ್ಳಬಾರದು? ನಾವೇಕೆ ನಮ್ಮ ಗಡಿಗಳನ್ನು ದಾಟಿ ಆಚೆಹೋಗಿ ಅಗತ್ಯವುಳ್ಳವರಿಗೆ ನಮ್ಮ ವಾತ್ಸಲ್ಯವನ್ನು ಹಂಚಬಾರದು?
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

