ಆತ್ಮ ಸುಖವೇ ಧರ್ಮ

ನೀವದನ್ನು ಸ್ವಾರ್ಥ ಅಂತಾದರೂ ಹೇಳಿ. ಅಥವಾ ಚಾಲೂ ಎಂದು ಬೇಕಾದರೂ ವ್ಯಾಖ್ಯಾನಿಸಿಕೊಳ್ಳಿ. ಅಥವಾ ಬುದ್ಧಿವಂತಿಕೆಯೂ ಆಗಿರಬಹುದು. ಜೀವನದಲ್ಲಿ ಒಮ್ಮೊಮ್ಮೆ ಅಂಥದ್ದು ಅನಿವಾರ್ಯವಾಗಿರುತ್ತದೆ. ನಮ್ಮ ಕಾಲ ಮೇಲೆ ನಾವೇ ಕಲ್ಲು ಎತ್ತಿಹಾಕೊಳ್ಳುವುದು ಅಂದರೆ ಇದನ್ನೇ ಹೇಳುವುದು. ಇನ್ನೂ ಒಂದು ಮಾತಿದೆ. ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಅಂತ. ಯಾವುದಾದರೂ ಸರಿಯೇ, ಪರಿಣಾಮ ಒಂದೇ. ನೋವು ನಮಗೇ. ಜೀವನದಲ್ಲೂ ಹಾಗೆಯೇ. ಬಹುತೇಕ ಸಂದರ್ಭದಲ್ಲಿ ಮುಂಬರುವ ನೋವನ್ನು, ಸಂದಿಗ್ಧವನ್ನು ನಿರೀಕ್ಷಿಸಬಲ್ಲವರಾಗಿರುತ್ತೇವೆ.
ಹಾಗೆ ನೋಡಿದರೆ ಖಂಡಿತಾ ಅದು ನಮಗೆ ನೋವು ಕೊಡುತ್ತದೆ ಎಂಬುದು ಖಚಿತವಾಗಿರುತ್ತದೆ. ಆದರೂ ಯಾವುದೋ ಹಠಕ್ಕೆ ಬಿದ್ದು ನಾವು ಅಂಥ ಸಂದರ್ಭವನ್ನು ತಂದುಕೊಳ್ಳುತ್ತೇವೆ. ಕೊನೆಗೊಮ್ಮೆ ಅದರ ಫಲ ದೊರೆತಾಗ ನೋಯುತ್ತೇವೆ. ಅದರಿಂದ ಸಾಧಿಸುವುದೇನೂ ಇಲ್ಲ. ಸಂದರ್ಭಕ್ಕಾಗಿ, ಮುಂದಿನ ದೊಡ್ಡ ಸಮಸ್ಯೆಯನ್ನು ತಪ್ಪಿಸುವುದಕ್ಕಾಗಿ, ಇಡೀ ಜೀವನದಲ್ಲಿ ಎದುರಾಗಬಹುದಾದ ಕೊರಗನ್ನು ಇಲ್ಲವಾಗಿಸಿಕೊಳ್ಳುವುದಕ್ಕಾಗಿ ಪುಟ್ಟದೊಂದು ಸುಳ್ಳು ಹೇಳಿ ಬಚಾವಾಗುವುದು ಅಥವಾ ಅದು ನ್ಯಾಯವೋ ಅನ್ಯಾಯವೋ ಆ ಕ್ಷಣದಿಂದ ತಪ್ಪಿಸಿಕೊಳ್ಳುವುದು ನಿಜವಾಗಲೂ ವಿಹಿತ. ಆತ್ಮ ಧರ್ಮ ಎನ್ನುವುದು ಅದನ್ನೇ. ನಾವು ಸತ್ಯಸಂಧರು, ಪ್ರಾಮಾಣಿಕರು ಎಂಬ ಹಮ್ಮಿನೊಂದಿಗೆ ಗೊತ್ತಿದ್ದೂ ಗೊತ್ತಿದ್ದೂ ಸಮಸ್ಯೆಯನ್ನು ತಂದುಕೊಳ್ಳುವುದಕ್ಕಿಂತ ಆತ್ಮ ಸುಖಕ್ಕೆ ಅನುಗುಣವಾಗಿ ನಡೆದುಕೊಳ್ಳುವುದೇ ಯುಕ್ತ. ಅದರಿಂದ ಯಾವ ಪ್ರಪಂಚವೂ ಮುಳುಗಿಹೋಗುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಜಗತ್ತಿನಲ್ಲಿ ಇನ್ನೊಂದು ಜೀವಿಗೆ ಅನ್ಯಾಯವಾಗದಿದ್ದರೆ, ಇನ್ನೊಂದು ವ್ಯಕ್ತಿಗೆ ನೋವು ತಾರದಿದ್ದರೆ ನಮ್ಮ ಯಾವುದೇ ನಡೆಯೂ ಅನ್ಯಾಯ- ಅಧರ್ಮ ಎನ್ನಿಸಿಕೊಳ್ಳುವುದಿಲ್ಲ. ಬದಲಾಗಿ ನಮ್ಮ ಆತ್ಮವನ್ನು ನೋಯಿಸಿಕೊಳ್ಳುವುದೇ ಹೆಚ್ಚು ಅನ್ಯಾಯವಾಗಿರುತ್ತದೆ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


