ಬೈಟುಕಾಫಿ

ಕಪ್ಪು ಜನರಲ್ಲಿ ಕಂಡದ್ದು ಬಿಳಿಯ ಮನಸ್ಸು

ಕಪ್ಪು ಜನರಲ್ಲಿ ಕಂಡದ್ದು ಬಿಳಿಯ ಮನಸ್ಸು
Published On :

ಒಂದು ಊರನ್ನು ಎಷ್ಟು ಹೆಸರುಗಳಿಂದ ಕರೆಯಲು ಸಾಧ್ಯ?
ಜೋಹಾನೆಸ್ಬರ್ಗ್ಗೆ ಒಂದಲ್ಲ, ಎರಡಲ್ಲ, ಐದು ಹೆಸರುಗಳು. ಹೆಚ್ಚಿನ ಜನ ಜೋಬರ್ಗ್ ಎಂದು ಕರೆಯುತ್ತಾರೆ. ಜೋಹಾನೆಸ್ಬರ್ಗ್ಎಂದು ಉದ್ದವಾಗಿ ಹೇಳುವ ಬದಲು ಚುಟುಕಾಗಿ ಜೋಬರ್ಗ್ ಅಂದ್ರೆ ಎಂಥವರಿಗೂ ಅರ್ಥವಾಗುತ್ತದೆ. ಆದರೆ, ಅದನ್ನು ಜೋಜಿ, ಜೋನಿ, ಇಗೋಲಿ, ಜೋಯ್ಸ್ ಎಂದು ಕರೆಯುವುದೂ ಉಂಟು. Johannesburg ಎಂದು ಬರೆಯುವ ಬದಲು Jhb ಎಂದು ಬಾಲಂಗೋಚಿಯಂತೆ ಬರೆಯುವುದೇ ಪ್ರಚಲಿತ. ಇದು ದಕ್ಷಿಣ ಆಫ್ರಿಕಾದ ದೊಡ್ಡ ನಗರ. ಗೌಟೆಂಕ್ ಪ್ರಾಂತದಲ್ಲಿ ಜೋಬರ್ಗ್ ನಂತರದ ಸ್ಥಾನ ಪ್ರಿಟೋರಿಯಾಕ್ಕೆ. ಇದು ಆ ದೇಶದ ಶ್ರೀಮಂತ ಪ್ರದೇಶವೂ ಹೌದು.
ಸುಮಾರು ಹತ್ತು ಲಕ್ಷ ಜನಸಂಖ್ಯೆ ಹೊಂದಿರುವ ಜೋಹಾನೆಸ್ಬರ್ಗ್ನಲ್ಲಿ ಕರಿಯರೇ ಹೆಚ್ಚು ಸಂಖ್ಯೆ (ಶೇ.64)ಯಲ್ಲಿದ್ದಾರೆ. ಭಾರತೀಯರ ಸಂಖ್ಯೆ ಶೇ.7ರಷ್ಟು. ಇಂಗ್ಲಿಷ್, ಝುಲು, ಆಫ್ರಿಕಾನ್ಸ್, ಕ್ಸೋಸಾ ಪ್ರಮುಖ ಭಾಷೆ. ಜಗತ್ತಿನ ಐವತ್ತು ಪ್ರಮುಖ ನಗರಗಳ ಪೈಕಿ ಇದೂ ಒಂದು. ದಕ್ಷಿಣ ಆಫ್ರಿಕಾದಲ್ಲಿಯೇ ದೊಡ್ಡನಗರವಾದರೂ, ಜೋಹಾನೆಸ್ಬರ್ಗ್ಗೆ ರಾಜಧಾನಿಯಾಗುವ ಭಾಗ್ಯವಿಲ್ಲ. ಪ್ರಿಟೋ ರಿಯಾ (ಕಾರ್ಯಾಂಗ ), ಬ್ಲೂಮ್ಫೌಂಟೇನ್(ನ್ಯಾಯಾಂಗ) ಹಾಗೂ ಕೇಪ್ಟೌನ್(ಶಾಸಕಾಂಗ) ರಾಜಧಾನಿಗಳಾದರೂ, ಜೋಹಾನೆಸ್ಬರ್ಗ್ಸಾಂವಿಧಾನಿಕ ಕೋರ್ಟನ್ನು ಹೊಂದುವುದರ ಮೂಲಕ ಸಮಾಧಾನ ಪಟ್ಟುಕೊಳ್ಳಬೇಕಿದೆ. ಜೋಹಾನೆಸ್ಬರ್ಗ್ ಬಂಗಾರ ಹಾಗೂ ವಜ್ರದ ವ್ಯಾಪಾರಕ್ಕೆ ಪ್ರಸಿದ್ಧ.
ಜೋಹಾನೆಸ್ಬರ್ಗ್ ನಗರ ತನ್ನ ಜತೆಯಲ್ಲಿ ಸೊವೆಟೋ (South-Western Township) ಎಂಬ ಮತ್ತೊಂದು ನಗರವನ್ನು ಇಟ್ಟುಕೊಂಡಿದೆ. 1948ರಿಂದ 1994ರವರೆಗೆ ಸೊವೆಟೋ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿತ್ತು. ಆ ಅವಧಿಯಲ್ಲಿದ್ದ ಬಿಳಿಯರ ಸರ್ಕಾರ  ಹೆಚ್ಚಾಗಿ ಕರಿಯರೇ ಇರುವ ಸೊವೆಟೋವನ್ನು ಜೋಹಾನೆಸ್ಬರ್ಗ್ ನೊಳಗೆ ಸೇರಲು ಬಿಟ್ಟಿರಲಿಲ್ಲ. ಆದರೆ, 1994ರ ನಂತರ ಪ್ರಜಾಸತ್ತಾತ್ಮಕ ಸರ್ಕಾರ  ಬಂದ ನಂತರ ಸೊವೆಟೋ ಜೋಹಾನೆಸ್ಬರ್ಗ್ ಜತೆಗೆ ಕೈಜೋಡಿಸಿತು. ಇದು ಅನಿವಾರ್ಯವೂ ಆಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಆ ಪ್ರಮಾಣದಲ್ಲಿ ಜೋಹಾನೆಸ್ಬರ್ಗ್ ಬೆಳೆದಿತ್ತು.
ಈ ನಗರ ನಿಜಕ್ಕೂ ಸುಂದರವಾಗಿದೆ. ಆದರೆ ಅತಿಯಾದ ಅಪರಾಧದಿಂದಾಗಿ ತನ್ನ ಹೆಸರನ್ನು ಕೆಡಿಸಿಕೊಂಡಿದೆ. ಇದನ್ನು ಅಲ್ಲಿನ ಜನರೂ ಒಪ್ಪಿಕೊಳ್ಳುತ್ತಾರೆ. ಆದರೇನು ಮಾಡುವುದು, ಅಪರಾಧವನ್ನು ನಿಯಂತ್ರಿಸಲು ಆಗಿಲ್ಲವೆಂಬುದು ಸಹ ಅಷ್ಟೇ ಸತ್ಯ. ವಿದೇಶಿ ಪ್ರವಾಸಿಯ ಒಂದು ಕೊಲೆ, ಅತ್ಯಾಚಾರ, ವಂಚನೆಯ ಪ್ರಕರಣ ಅಂತಾರಾಷ್ಟ್ರೀಯ ಗಮನ ಸೆಳೆದು ಪ್ರವಾಸಿಗರಲ್ಲಿ ಭಯ, ಆತಂಕವನ್ನು ಸೃಷ್ಟಿಸುತ್ತದೆ. ವರ್ಷದಲ್ಲಿ ಇಂಥ ಮೂರ್ನಾಲ್ಕು ಘಟನೆಗಳಾದರೂ ಸಂಭವಿಸುವು ದರಿಂದ ಈ ನಗರದ ಮರ್ಯಾದೆ  ಮಣ್ಣುಪಾಲಾಗಿದೆ. ಆದರೆ, ಅದು ಕ್ಷಣಿಕ ಭಾವನೆ. ಏಕೆಂದರೆ ಅಲ್ಲಿಗೆ ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಖ್ಯಾತಿ, ಕುಖ್ಯಾತಿಗಳು ಏಕಕಾಲಕ್ಕೆ.
ಡರ್ಬನ್ನಿಂದ ಜೋಹಾನೆಸ್ಬಗರ್್ಗೆ ಬಂದಿಳಿದಾಗ ನಮ್ಮ ತಂಡದ ಮುಖ್ಯಸ್ಥ, ಜಾಗರೂಕವಾಗಿರುವಂತೆ ಪದೇಪದೆ ಎಚ್ಚರಿಸಿದ್ದರಿಂದ, ಆರಂಭದಲ್ಲಿ ಆ ಎಚ್ಚರಿಕೆಗಳು ಆತಂಕದಂತೆ ಭಾಸವಾದವು. ಒಂದೆರಡು ತಾಸುಗಳ ಬಳಿಕ ಆ ಆತಂಕಗಳೆಲ್ಲ ತಮ್ಮಷ್ಟಕ್ಕೇ ಆವಿಯಾಗಿದ್ದವು.
ಯಾವ ಊರಾಗಲಿ, ನಗರವಾಗಲಿ ತನ್ನದೇ ಆದ ವೈಶಿಷ್ಟ್ಯ ಗಳನ್ನು ಹೊಂದಿರುತ್ತವೆ. ಪ್ರತಿಯೊಂದು ನಗರಕ್ಕೆ ಅದರದೇ ಆದ ಆತ್ಮವೆಂಬುದು ಇರುತ್ತದೆ. ಕೇಪ್ಟೌನ್, ಡರ್ಬನ್, ಪ್ರಿಟೋರಿಯಾಕ್ಕಿರುವ ಇತಿಹಾಸ, ಸೊಗಡು, ಜೋಹಾನೆಸ್ಬರ್ಗ್ಗೆ ಇಲ್ಲ. ಮೊದಲ ಮೂರು ನಗರ ಸಂತೆಪೇಟೆಯೋ, ಮಂಡಿಪೇಟೆಯೋ ಆದರೆ ಜೋಹಾನೆಸ್ಬರ್ಗ್ ಆಧುನಿಕ ಮಾಲ್ ಇದ್ದಂತೆ. ಕಡಿಮೆ ಸೊಗಡು ಹೆಚ್ಚು ಬೆಡಗು. ಇಂಥ ನಗರಗಳಿಗೆ ಹೇಳಿಕೊಳ್ಳಲು ಹೆಚ್ಚಿಗೆ ಇರುವುದಿಲ್ಲ. ಕಾರಣ ಅವು ತೋರಿಸಿಕೊಂಡೇ ಬರಿದಾಗಿರುತ್ತವೆ. ಎಲ್ಲ ಊರುಗಳಲ್ಲೂ ಕಾಣುವ ಬ್ರ್ಯಾಂಡ್ಗಳು ಇಲ್ಲೂ ಹಲ್ಕಿರಿಯುವುದರಿಂದ ಅಂಥ ಉಮ್ಮೇದಿಯನ್ನು ಉಕ್ಕಿಸುವುದಿಲ್ಲ. ಹೀಗಾಗಿ ಜೋಹಾನೆಸ್ಬರ್ಗ್ ಬುರುಗು ನೊರೆಯಂತೆ ಕಂಡಿದ್ದು ಸುಳ್ಳಲ್ಲ.
ವರ್ಣಭೇದ ನೀತಿ ಕೊನೆಗೊಂಡು ಎರಡು ದಶಕಗಳ ಬಳಿಕ ದಕ್ಷಿಣ ಆಫ್ರಿಕಾ ಹೊಸ ಭರವಸೆಯೊಂದಿಗೆ ದಾಪುಗಾಲು ಇಡುತ್ತಿದೆಯೆಂಬ ತೀರ್ಮಾನಕ್ಕೆ ಬರುವಷ್ಟು ಚಟುವಟಿಕೆಗಳು, ಬದಲಾವಣೆಗಳು ಯಾರಿಗಾದರೂ ಗೋಚರಿಸುತ್ತವೆ. ಬಿಳಿಯರು-ಕರಿಯರು ಎಂಬ ಭೇದ-ಭಾವ ಅಳಿದಿದ್ದರೂ, ಸಂಪೂರ್ಣ ಕಣ್ಮರೆಯಾಗಿದೆಯೆಂದು ಅನಿಸುವುದಿಲ್ಲ. ಆದರೆ, ಇಪ್ಪತ್ತು ವರ್ಷಗಳ ಅನುಭವ ಅವರಲ್ಲಿ ಸಾಕಷ್ಟು ಪರಿವರ್ತನೆಯನ್ನಂತೂ ತಂದಿದೆ. 1996ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಿಕೊಂಡ ಬಳಿಕ ದೇಶ ಪ್ರಗತಿಪರ ಚಿಂತನೆಗಳಿಗೆ, ಹೊಸ ಹೊಸ ಪ್ರಯೋಗಗಳಿಗೆ, ಆಡಳಿತ ವಿಧಾನಗಳಿಗೆ ತೆರೆದುಕೊಂಡು ಮಗ್ಗುಲು ಬದಲಿಸಿದ ಆಧುನಿಕತೆಯ ಜತೆ ಪಾಲು ಕೇಳುತ್ತಿದೆ. ದುರಂತವೆಂದರೆ, ದಕ್ಷಿಣ ಆಫ್ರಿಕಾ ಆರ್ಥಿಕವಾಗಿ ಎಷ್ಟೇ ಸದೃಢವಾಗುತ್ತಿದ್ದರೂ ತನ್ನದಲ್ಲದ ಸಮಸ್ಯೆಗಳಿಗೂ ಹೆಗಲು ಕೊಡಲೇಬೇಕಾಗಿದೆ. ತನ್ನ ಗಡಿಯನ್ನು ಹಂಚಿಕೊಂಡಿರುವ ನಮೀಬಿಯಾ, ಬೋಟ್ಸವಾನ, ಜಿಂಬಾಬ್ವೆ, ಮೊಝಾಂಬಿಕ್ ದೇಶಗಳ ಸಮಸ್ಯೆಗಳ ಜತೆ ಆಫ್ರಿಕಾ ಖಂಡದ ಕೆಲವು ಅನಿಷ್ಟಗಳ ಪಿಂಡವನ್ನೂ ಹೊಟ್ಟೆಯಲ್ಲಿಟ್ಟುಕೊಳ್ಳಲೇಬೇಕಾದ ಅನಿವಾರ್ಯತೆ. ನೆರೆಯ ದೇಶಗಳಿಂದ ಬರುವ ನಿರ್ವಸತಿಗರು, ನುಸುಳುಕೋರರು ದಕ್ಷಿಣ ಆಫ್ರಿಕಾದ ಆಥರ್ಿಕತೆಗೆ ಹೊರೆಯಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮ ಬೇರೊಂದು ರೀತಿಯಲ್ಲಿ ಹಿಂಸಾತ್ಮಕವಾಗಿ ಪ್ರತಿಫಲಿತವಾಗುತ್ತದೆ. 2008ರಲ್ಲಿ ನಡೆದ ಗಲಭೆಯಲ್ಲಿ ಇದು ಬಹಿರಂಗಗೊಂಡ ಅನುಭವ ಕಣ್ಣೆದುರಿಗಿದೆ. ಬೇರೆಡೆಯಿಂದ ಬಂದವರ ಬದ್ಧತೆಯ ಕೊರತೆ ಹಿಂಸಾಚಾರದಲ್ಲಿ ಪ್ರಕಟವಾಗುತ್ತಿರುವುದನ್ನು ತಕ್ಷಣ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಈ ಸಮಸ್ಯೆಯ ಆಯಾಮಗಳು ಹಲವು. ಬಡವರು, ನಿರ್ಗತಿಕರು ಆಫ್ರಿಕಾದ ಬೇರೆ ಬೇರೆ ದೇಶಗಳಿಂದ ಬರುತ್ತಿರುವುದರಿಂದ, ಅವರು ಬರುವಾಗ ರೋಗ ರುಜಿನುಗಳಂಥ ಅನಿಷ್ಟಗಳನ್ನೂ ತಮ್ಮೊಂದಿಗೆ ತರುತ್ತಿದ್ದಾರೆ. ಇದು ಸೃಷ್ಟಿಸುತ್ತಿರುವ ಸಮಸ್ಯೆ ಸಣ್ಣದಲ್ಲ. ಇದರ ಪರಿಣಾಮ ಎಂಥ ಘನಘೋರ ಸ್ಥಿತಿ ತಲುಪಿದೆಯೆಂದರೆ ದಕ್ಷಿಣ ಆಫ್ರಿಕಾ ಅತಿಹೆಚ್ಚು ಎಚ್ಐವಿ/ಏಡ್ಸ್ ರೋಗಿಗಳಿರುವ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿ ತನ್ನದಲ್ಲದ ಪಾಪಕ್ಕೆ ಬೆಲೆತೆರುವ ಹಂತವನ್ನು ತಲುಪಿದೆ. ಈ ಎಲ್ಲ ಸವಾಲುಗಳನ್ನೂ ಒಡಲಲ್ಲಿ ಇಟ್ಟುಕೊಂಡೇ ಮುನ್ನಡೆಯುವ ಅನಿವಾರ್ಯತೆ. ಆದರೆ, ಜನಸಂಖ್ಯೆ ಪ್ರಮಾಣ ಕಡಿಮೆಯಿರುವುದರಿಂದ(ಪ್ರತಿಚದರ ಕಿ.ಮೀ.ಗೆ ಒಬ್ಬರು) ಈ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು ಕಷ್ಟದ ಮಾತೇನೂ ಅಲ್ಲ.
ಎಲ್ಲ ದೇಶಗಳು ಎದುರಿಸುತ್ತಿರುವ, ಆಧುನಿಕತೆ ತನ್ನೊಂದಿಗೆ ತರುವ ಎಲ್ಲ ಜಟಿಲತೆಗಳನ್ನು ಹೊತ್ತುಕೊಂಡು ಅಭಿವೃದ್ಧಿಯ ಪಥದಲ್ಲಿ ವಿಶ್ವಾಸದ ಹೆಜ್ಜೆಯನ್ನಿರಿಸುತ್ತಿರುವಂತೆ ಕಾಣುವ ದಕ್ಷಿಣ ಆಫ್ರಿಕಾ, ಮುಂದಿನ ದಶಕದಲ್ಲಿ ಪ್ರಬಲ economy  ಆಗುವುದರಲ್ಲಿ ಸಂದೇಹವಿಲ್ಲ.
ಈ ಎಲ್ಲ ಅಂಶಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ದಕ್ಷಿಣ ಆಫ್ರಿಕಾ ಮೊಗೆದಷ್ಟೂ ಅಚ್ಚರಿಗಳನ್ನೂ ಕೊಡುವ ದೇಶ. ಇಲ್ಲಿನ ವನ್ಯಧಾಮ ಜಗತ್ತಿನಲ್ಲಿಯೇ ಅಪರೂಪವಾದುದು. ಪ್ರವಾಸಿಗರ ದೃಷ್ಟಿಯಿಂದ ಇದು ಅತ್ಯಂತ ಮುಖ್ಯ ಅಂಶ. ಹತ್ತೊಂಬತ್ತು ರಾಷ್ಟ್ರೀಯ ಅಭಯಾರಣ್ಯಗಳು ಸೇರಿದಂತೆ ಏಳು ನೂರಕ್ಕೂ ಹೆಚ್ಚು ಅಭಯಾರಣ್ಯಗಳು, ಇನ್ನೂರಕ್ಕೂ ಹೆಚ್ಚು ಖಾಸಗಿ ಒಡೆತನದ ಗೇಮ್ ರಿಸರ್ವಗಳು, ಜಗತ್ಪ್ರಸಿದ್ಧ ಕ್ರುಗರ್ ನ್ಯಾಷನಲ್ ಪಾರ್ಕ್ಗಳನ್ನು ನೋಡಲೇಬೇಕು. ಕಾಡು, ಕಾಡು ಪ್ರಾಣಿಗಳ ಬಗೆಗೆ ಇರುವ ನಮ್ಮ ಕಲ್ಪನೆಯೇ ಬದಲಾಗುತ್ತದೆ. ಗೇಮ್ ರಿಸರ್ವಗಳಲ್ಲಿ ಒಂದೆರಡು ದಿನ ವನ್ಯ ಪ್ರಾಣಿಗಳ ನಡುವೆಯೇ ಉಳಿಯುವುದು ಜೀವಮಾನದ ಅನುಭವ. ವನ್ಯಪ್ರಾಣಿಗಳನ್ನು ಕೈಗೆಟಕುವಷ್ಟು ಅಂತರದಲ್ಲಿ ನೋಡುವ ಅವಕಾಶ ವಣರ್ಿಸಲಸದಳ.
ದಕ್ಷಿಣ ಆಫ್ರಿಕಾಕ್ಕೆ ಹೊರಟು ನಿಂತಾಗ, ಸ್ನೇಹಿತರೊಬ್ಬರು `ಹುಷಾರು, ಅಲ್ಲಿ ಕೊಲೆ, ವಂಚನೆ, ಅತ್ಯಾಚಾರ ಜಾಸ್ತಿಯಂತೆ' ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು. `ಹಲ್ಲುಬ್ಬಿದ ಅವಳ ಚಿಕ್ಕಮ್ಮ, ಗಿಡ್ಡ ಜಡೆಯ ಅವಳ ದೊಡ್ಡಮ್ಮನನ್ನು ನೋಡಿ ಮದುವೆಯಾಗಬೇಕೆಂದು ನಿರ್ಧರಿಸಿದ ಹುಡುಗಿಯ ಕೈಬಿಡುವುದುಂಟಾ?' ಎಂದು ಕೇಳಿದ್ದೆ. ಅಲ್ಲಿಂದ ಸುರಕ್ಷಿತವಾಗಿ ವಾಪಸ್ ಬಂದಾಗ ಈ ಮಾತು ಎಷ್ಟು ನಿಜ ಅನ್ನಿಸಿತು.
ಕಿಸೆಯಲ್ಲಿ ಒಂದೂವರೆ ಲಕ್ಷ ರುಪಾಯಿ, ಹತ್ತು ದಿನ ರಜಾ ಇದ್ದರೆ ದಕ್ಷಿಣ ಆಫ್ರಿಕಾದಲ್ಲೊಂದು ಪ್ರದಕ್ಷಿಣೆ ಹಾಕಿ. ನಮ್ಮಲ್ಲಿ ಅನೇಕರು ಮತ್ತೆ ಮತ್ತೆ ಹೋದ ದುಬೈಗೆ, ಮಲೇಷ್ಯಾ, ಥಾಯ್ಲೆಂಡ್ಗೆ ಪುನಃ ಪುನಃ ಹೋಗುತ್ತಿರುತ್ತಾರೆ. ಗಾಜಿನ ಕಪಾಟಿನಲ್ಲಿಟ್ಟ ಗೊಂಬೆಯಂತಿರುವ ಅಮೆರಿಕವನ್ನು ನೋಡಿ ಬೆರಗಾಗುತ್ತಾರೆ. ತಪ್ಪಲ್ಲ ಬಿಡಿ, ನನಗೂ ಹಾಗೇ ಆಗಿತ್ತು. ಆದರೆ, ಆಫ್ರಿಕಾ ಖಂಡದ ಬಗ್ಗೆ ಇರುವ ಪೂರ್ವಗ್ರಹ, ತಪ್ಪು ಕಲ್ಪನೆಯನ್ನು ಹೊಡೆದು ಹಾಕಲು ಇದು ಸಕಾಲ. ಆ ಕಪ್ಪು ಜನರಲ್ಲಿ ಬಿಳಿ ಮನಸ್ಸಿದೆ. ನಮಗಿಂತ ಮುಂದುವರಿದಿದ್ದಾರೆ. ಎಲ್ಲ ರಂಗಗಳಲ್ಲಿಯೂ ಮೇಲುಗೈ ಸಾಧಿಸುತ್ತಿದ್ದಾರೆ. ಎಲ್ಲ ವೈರುಧ್ಯಗಳನ್ನು ದಾಟಿ ಬದುಕನ್ನು ಸುಂದರಗೊಳಿಸಿಕೊಳ್ಳುವ ಕಾಯಕದಲ್ಲಿ ಶ್ರಮಿಸುತ್ತಿದ್ದಾರೆ. ಇತರರಿಗೂ ಮಾದರಿಯಾಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಹತ್ತು ದಿನ ಸುತ್ತಿ ಬಂದ ಬಳಿಕ ಹೊಸ ದೇಶಕ್ಕಲ್ಲ, ಹೊಸ ಜಗತ್ತಿಗೆ ಹೋಗಿ ಬಂದ ಅನುಭವವಾಯಿತು. ಯಾವುದೇ ದೇಶವಾಗಲಿ ಜೀವಮಾನ ಕಳೆದರೂ ತನ್ನ ಕೆಲವು ರಹಸ್ಯಗಳನ್ನು ಕಾಪಾಡಿಕೊಳ್ಳುತ್ತದೆಯಂತೆ. ಇನ್ನು ಹತ್ತು ದಿನಗಳಲ್ಲಿ ಅದನ್ನು ಅಳೆಯುವುದಾದರೂ ಹೇಗೆ? ಆದರೆ, ಬೋಗುಣಿಯಲ್ಲಿರುವ ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಎಲ್ಲ ಅಗುಳನ್ನೂ ಹಿಚುಕಬೇಕಿಲ್ಲ. ಒಂದನ್ನು ಹಿಚುಕಿದರೂ ಸಾಕು.
ದಕ್ಷಿಣ ಆಫ್ರಿಕಾವನ್ನು ಡೆಸ್ಮಂಡ್ ಟುಟು `ಕಾಮನಬಿಲ್ಲಿನ ದೇಶ' ಎಂದು ಬಣ್ಣಿಸಿದ್ದು ಎಷ್ಟು ನಿಜ, ಸಮರ್ಪಕ! ನನ್ನ ಚಿಂತನೆಯ ಜಗತ್ತನ್ನು ವಿಸ್ತರಿಸಿದ, ಹೊಸ ಕಣ್ಣು ಮೂಡಿಸಿದ ದಕ್ಷಿಣ ಆಫ್ರಿಕಾ ಎಂಬ ಚಿರಂತನ ವಿಸ್ಮಯಕ್ಕೆ ಒಂದು ಸಲಾಮು ಹೊಡೆಯದಿದ್ದರೆ ಹೇಗೆ?

(ಮುಗಿಯಿತು)

- ವಿಶ್ವೇಶ್ವರ್ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.