ಬೈಟುಕಾಫಿ

ಗಂಟು ಸಡಿಲಿಸದ ಶುಂಠಿ

ಗಂಟು ಸಡಿಲಿಸದ ಶುಂಠಿ
Published On :

ಭೋಜರಾಜನ ಓಲಗದಲ್ಲಿ ಕಾಳಿದಾಸ ಆಸ್ಥಾನ ಕವಿಯಾಗಿದ್ದ. ಆತ ಪಡೆದ ಸ್ಥಾನಮಾನಗಳನ್ನು ಕಂಡು, ಈಗಾಗಲೇ ಹಳಬರಾದ ಕವಿಗಳಿಗೆ ಅಸೂಯೆ. ಕಾಳಿದಾಸ ಎಷ್ಟೇ ಅದ್ಭುತವಾದ ಶ್ಲೋಕ ರಚಿಸಿ ಹೇಳಲಿ, ಅದರಲ್ಲಿ ಯಾವುದಾದರೂ ಕೊಂಕು ಹುಡುಕಿ ಹೇಳುತ್ತಿದ್ದರು. ಇದನ್ನು ನೋಡಿ ನೋಡಿ ಕಾಳಿದಾಸನಿಗೆ ರೇಗಿಹೋಯಿತು. ಒಂದು ಬಾರಿ ತುಂಬಿದ ಸಭೆಯಲ್ಲೇ ಹೀಗೆ ಕೊಂಕೆತ್ತಿದ ಎದುರಾಳಿ ವಿದ್ವಾಂಸನಿಗೆ ಝಾಡಿಸಿಬಿಟ್ಟ:

ಶ್ಲೋಕಾರ್ಥ ಸ್ವಾದಕಾಲೇ ತು ಶಬ್ದೋತ್ಪತ್ತಿ ವಿಚಾರಕಾಃ
ನೀವೀವಿಮೋಕ್ಷವೇಲಾಯಾಂ ವಸ್ತ್ರಮೌಲ್ಯ ವಿಚಿಂತಕಾಃ


ಶ್ಲೋಕದ ಧ್ವನಿಯನ್ನೂ ಭಾವವನ್ನೂ ಆಸ್ವಾದಿಸಿ ಆನಂದಿಸಬೇಕಾದ ಹೊತ್ತಿನಲ್ಲಿ ಅದರ ಶಬ್ದ ವ್ಯುತ್ಪತ್ತಿ, ವ್ಯಾಕರಣ ಇತ್ಯಾದಿಗಳ ಕುರಿತು ಚಿಂತಿಸುತ್ತಾ ಕಾಲಹರಣ ಮಾಡುವವರಿದ್ದಾರೆ. ಇದು ಹೇಗೆ ಗೊತ್ತೆ? ಹೊಸದಾಗಿ ಮದುವೆಯಾದ ವಧು- ವರರಿಬ್ಬರೂ ಮಧುಮಂಚದಲ್ಲಿದ್ದಾರೆ. ಸರಸ ಸಲ್ಲಾಪದ ಉತ್ಕಟಾವಸ್ಥೆ. ನಲ್ಲೆಯ ಸೊಂಟದ ಬಟ್ಟೆಯನ್ನು ಇನ್ನೇನು ಆತ ಸಡಿಲಿಸಬೇಕು. ಆ ಹೊತ್ತಿನಲ್ಲಿ ತಟ್ಟನೆ, ಆಕೆ ಉಟ್ಟ ಸೀರೆಯ ಮೇಲೆ ಆತನ ಕಣ್ಣು ಬೀಳುತ್ತದೆ. ಅರೆ, ಇದು ಎಷ್ಟೊಂದು ಚೆನ್ನಾಗಿದೆಯಲ್ಲಾ, ಇದರ ಬೆಲೆಯೆಷ್ಟು, ಯಾವ ಸೆಟ್ಟರ ಅಂಗಡಿಯಲ್ಲಿ ಕೊಂಡದ್ದು, ತೊಳೆದಾಗ ಬಣ್ಣ ಉಳಿಯುವುದೋ ಹೋಗುವುದೋ, ಸೆರಗಿನ ಅಂಚು ಇನ್ನೊಂದಿಷ್ಟು ತೆಳ್ಳಗಿರಬೇಕಿತ್ತು...ಹೀಗೆಲ್ಲ ಚೆಂತಿಸುತ್ತಾ ಕುಳಿತುಬಿಡುತ್ತಾನೆ! ಅಂಥವನ ಪಾಡಾಯಿತು ಇದು!
ಕಾಳಿದಾಸ ಇಲ್ಲಿ ಅರಸಿಕರಿಗೂ, ಕಾವ್ಯದ್ವೇಷಿಗಳಿಗೂ ಏಕಕಾಲದಲ್ಲಿ ಸರಿಯಾಗಿಯೇ ಇಕ್ಕಿದ್ದಾನೆ. ಮಧುಮಂಚದಲ್ಲಿ ವ್ಯವಹಾರ ತರುವವನು ಎಷ್ಟು ಅರಸಿಕನೋ, ಕಾವ್ಯದ ಸ್ವಾದವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಶುಷ್ಕ ವಿಮರ್ಶೆಯ ಮೂಲಕ ಇನ್ನೊಬ್ಬರ ತಲೆ ತಿನ್ನುವವನೂ ಅಷ್ಟೇ ಮೊದ್ದ, ಮಡೆಯ.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.