ಅನ್ನದಿಂದ ಅಲ್ಸರ್ ಹೆಚ್ಚುತ್ತಂತೆ ನಿಜವಾ?

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಕ್ಕಿ ಬಳಕೆ ಜಾಸ್ತಿ. ಆದರೆ ಉತ್ತರ ಭಾರತಕ್ಕೆ ಹೋಲಿಸಿದರೆ ಅಲ್ಸರ್ನಿಂದ ಬಳಲುವವರ ಸಂಖ್ಯೆಯೂ ಇಲ್ಲಿಯೇ ಹೆಚ್ಚು ಎನ್ನುತ್ತವೆ ಅಧ್ಯಯನಗಳು. ಅದು ಏಕೆ ಎನ್ನುವುದನ್ನು ಊಹಿಸಬಲ್ಲಿರಾ? ಆಹಾರ ಪದ್ಧತಿ! ಹೌದು. ಉತ್ತರದಲ್ಲಿ ಕಚ್ಚಾ ಗೋಧಿ ಬಳಕೆ ಹೆಚ್ಚು, ದಕ್ಷಿಣದಲ್ಲಿ ಅಕ್ಕಿ ಬಳಕೆ ಅಧಿಕ. ಅವರಿಗೆ ಚಪಾತಿ, ರೊಟ್ಟಿ ಮುಖ್ಯವಾದರೆ ನಮಗೆ ಅನ್ನವೇ ಪ್ರಧಾನ. ಕೆಲವು ಕಡೆಗಳಲ್ಲಂತೂ, ವಿಶೇಷತಃ ನಮ್ಮ ಮಲೆನಾಡಿನಲ್ಲಿ ನಿತ್ಯ ಮುಂಜಾನೆ ತಿಂಡಿಗೆ ಅಕ್ಕಿ ದೋಸೆ. ಹೀಗಾಗಿಯೇ ಉತ್ತರದವರಿಗೆ ಹೋಲಿಸಿದರೆ ದಕ್ಷಿಣದಲ್ಲಿ ಅಲ್ಸರ್ಗೆ ತುತ್ತಾಗುವವರ ಸಂಖ್ಯೆ ಜಾಸ್ತಿ!
ಅಲ್ಸರ್ಗೆ ಸಂಬಂಧಿಸಿ ಶತಮಾನಗಳಿಂದ ರೂಢಿಸಿಕೊಂಡು ಬಂದಿದ್ದ ಡಯಟ್ ಕುರಿತು ಸಂಶೋಧನೆ ನಡೆಸುವಾಗ ಇಂಥದ್ದೊಂದು ಸಂಗತಿಯೂ ಪತ್ತೆಯಾಗಿದೆ. ಹಿಂದೆ ಅಧಿಕ ನಾರಿನ ಅಂಶವಿರುವ ಆಹಾರಗಳನ್ನು ಅಲ್ಸರ್ನಿಂದ ಬಳಲುವವರಿಗೆ ನೀಡುತ್ತಿರಲಿಲ್ಲ. ಅದು ತಪ್ಪು ಎನ್ನುತ್ತದೆ ಆಧುನಿಕ ವೈದ್ಯ ವಿಜ್ಞಾನ. ಅದನ್ನು ಸಮರ್ಥಿಸಿಕೊಳ್ಳಲು ತಜ್ಞರು ನೀಡುವ ಉದಾಹರಣೆ ಉತ್ತರ ಮತ್ತು ದಕ್ಷಿಣ ಭಾರತೀಯರ ಆಹಾರ ಪದ್ಧತಿ ಕುರಿತಾದದ್ದು. ಸಂಸ್ಕರಿಸದ ಗೋಧಿಯಲ್ಲಿ ನಾರು ಹೇರಳವಾಗಿರುತ್ತದೆ. ಅಕ್ಕಿಯಲ್ಲಿ ಕಡಿಮೆ. ಉತ್ತರ ಭಾರತೀಯರ ಆಹಾರದಲ್ಲಿ ನಾರಿಗೆ ಪ್ರಮುಖವಾದ ಸ್ಥಾನ ಇರುವುದರಿಂದಲೇ ಅವರಲ್ಲಿ ಅಲ್ಸರ್ ಸಾಧ್ಯತೆ ಕಡಿಮೆ ಎನ್ನುವ ತೀರ್ಮಾನಕ್ಕೆ ತಜ್ಞರು, ಸಂಶೋಧಕರು ಬಂದಿದ್ದಾರೆ.
ಮುಂಬೈನಲ್ಲಿ ಡಾ.ಎಸ್.ಎಲ್. ಮಲ್ಹೋತ್ರಾ ಎನ್ನುವವರು ಇದನ್ನು ಖಚಿತಪಡಿಸಿಕೊಳ್ಳಲು ಮುಂದಾದರು. ಅಲ್ಸರ್ನಿಂದ ಗುಣಮುಖರಾಗಿದ್ದ 42 ಜನರನ್ನು ಎರಡು ಗುಂಪುಗಳಾಗಿ ವಿಭಾಗಿಸಿದರು. ಒಂದು ಗುಂಪಿಗೆ ಪಂಜಾಬಿ ಆಹಾರ ಶೈಲಿ ರೂಢಿಸಿಕೊಳ್ಳಲು ಸಲಹೆ ಮಾಡಿದರು. ಅದರಲ್ಲಿ ಸಂಸ್ಕರಿತವಲ್ಲದ ಗೋಧಿಗೆ ಪ್ರಾಧಾನ್ಯತೆ ಇತ್ತು. ಇನ್ನೊಂದು ಗುಂಪಿಗೆ ಎಂದಿನಂತೆ ಅನ್ನವನ್ನೇ ಪ್ರಮುಖವಾಗಿ ಸೇವಿಸಲು ಸೂಚಿಸಿದರು. ನಿರಂತರಪ ಐದು ವರ್ಷ ನಿಗಾ ವಹಿಸಿದರು. ಪಂಜಾಬಿ ಶೈಲಿ ರೂಢಿಸಿಕೊಂಡಿದ್ದವರಲ್ಲಿ ಶೇ 14ರಷ್ಟು ಮಂದಿಗೆ ಮಾತ್ರ ಅಲ್ಸರ್ ಪುನಃ ಕಾಣಿಸಿಕೊಂಡಿತ್ತು. ಅದೇ ಮತ್ತೊಂದು ಗುಂಪಿನಲ್ಲಿ ಶೇ 81ರಷ್ಟು ಮಂದಿಗೆ ಅಲ್ಸರ್ ಮತ್ತೆಮತ್ತೆ ಬಾಧಿಸಿತ್ತು.
ಜಪಾನ್, ಪಾಕಿಸ್ತಾನ ಸೇರಿದಂತೆ ಏಷ್ಯದ ಬಹುತೇಕ ರಾಷ್ಟ್ರಗಳಲ್ಲಿ ಊಟದಲ್ಲಿ ಅನ್ನವೇ ಮುಖ್ಯವಾದದ್ದು. ಅಲ್ಲಿಯೂ ಅಲ್ಸರ್ನಿಂದ ಬಳಲುವವರು ಜಾಸ್ತಿ ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಇದಕ್ಕೆ ಕಾರಣ ಎಂದರೆ ಅನ್ನದಲ್ಲಿ ನಾರಿನ ಅಂಶ ಕಡಿಮೆ ಎನ್ನುವುದೇ ಆಗಿದೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


