ಬಾಳೆಹಣ್ಣಿನಲ್ಲಿದೆ ಆರೋಗ್ಯದ ಗುಟ್ಟು

ನನ್ನ ಅಜ್ಜನಿಗೊಂದು ಅಭ್ಯಾಸ. ನಿತ್ಯ ಮಧ್ಯಾಹ್ನ ಊಟ ಮಾಡುತ್ತಲೇ ಒಂದು ಬಾಳೆಹಣ್ಣು ತಿನ್ನಬೇಕು. ಮನೆಯಲ್ಲಿ ಬೇರೆ ಹಣ್ಣುಗಳು ಇಲ್ಲದಿದ್ದರೂ ಪರವಾಗಿಲ್ಲ, ಬಾಳೆಹಣ್ಣು ಇರಲೇಬೇಕು. ಒಂದು ದಿನ ಏನಾದರೂ ಮಿಸ್ಸಾಯಿತೋ, ಅವತ್ತು ಅವನದ್ದು ರೌದ್ರಾವತಾರ. ನನ್ನಜ್ಜ ಅಥವಾ ಆ ತಲೆಮಾರಿನವರು ಅಂತಲೇ ಅಲ್ಲ. ಭಾರತೀಯರೇ ಹಾಗೆ.
ಮೊದಲಿನಿಂದಲೂ ಬಾಳೆಹಣ್ಣಿಗೆ ಮಹತ್ವ ನೀಡುತ್ತಲೇ ಬಂದಿದ್ದಾರೆ. ಪೂಜೆ-ಪುನಸ್ಕಾರಗಳಲ್ಲಿ ಮಾತ್ರವಲ್ಲ, ಆಹಾರದಲ್ಲಿ ಕದಳಿ ಫಲಕ್ಕೆ ಆದ್ಯತೆ. ವಿಶೇಷತಃ ಊಟದ ಬಳಿಕ ಈ ಹಣ್ಣು ತಿನ್ನುವ ರೂಢಿ ಬಹಳಷ್ಚು ಕಡೆ ಇದೆ. ಇನ್ನು ಮದುವೆ, ಮುಂಜಿಯಂಥ ಶುಭ ಕಾರ್ಯಗಳಲ್ಲಿ ಊಟದ ನಂತರ ತಾಂಬೂಲದ ಜತೆ ಬಾಳೆಹಣ್ಣು ಕೊಡುವ ಸಂಪ್ರದಾಯವಿದೆ. ಅಜೀರ್ಣ ವಾಗದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ಹೊಟ್ಟೆಯ ಆರೋಗ್ಯ ಕೆಡದಂತೆಯೂ ನೋಡಿಕೊಳ್ಳುವ ವಿಶಿಷ್ಟ ಗುಣ ಬಾಳೆಹಣ್ಣಿನದ್ದು. ಈಗಲೂ ಅಷ್ಟೆ, ಹಳ್ಳಿಗಳಲ್ಲಿ ಅತಿಥಿ ಸತ್ಕಾರದಲ್ಲೂ ಬಾಳೆಹಣ್ಣು ಮುಖ್ಯ ಪಾತ್ರ ವಹಿಸುವುದುಂಟು. ಅಪರೂಪಕ್ಕೆ ನೆಂಟರು ಬಂದಿದ್ದಾರೆ, ಊಟಕ್ಕೆ ಉಳಿಯುವವರಲ್ಲ. ಸಿಹಿ ಮಾಡಲು ಸಮಯವಿಲ್ಲ. ಅಂಥ ಸಂದರ್ಭಗಳಲ್ಲಿ ಪಾನೀಯದ ಜತೆ ಬಾಳೆಹಣ್ಣು, ಸಕ್ಕರೆ ನೀಡುವುದುಂಟು. ಗ್ರಾಮೀಣ ಭಾಗದಲ್ಲಿ ಬೆಳೆ ಗಿಡಗಳನ್ನು ಬೆಳೆಸದ ಮನೆಗಳೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ನಗರಗಳಲ್ಲೂ ಸ್ವಲ್ಪ ಜಾಗವಿದ್ದರೆ ಬಾಳೆ ಗಿಡ ಬೆಳೆಸುವವರನ್ನು ನೋಡಿದ್ದೇನೆ. ತೀರಾ ಹಸಿವಾಗಿದೆ, ಸುಸ್ತಾಗಿದೆ ಎನ್ನಿಸಿದಾಗ ಒಂದು ಬಾಳೆಹಣ್ಣು ತಿಂದರೆ ಆಯಾಸವೆಲ್ಲ ಮಾಯ. ಅಂಥ ಶಕ್ತಿ ಇದಕ್ಕುಂಟು. ಅದೆಲ್ಲಕ್ಕಿಂತ ಆಶ್ಚರ್ಯವಾಗುವುದು ನಮ್ಮ ಹಿರೀಕರು ಬಾಳೆಹಣ್ಣನ್ನು ಅಲ್ಸರ್‌ಗೆ ಔಷಧವಾಗಿ ಬಳಸುತ್ತಿದ್ದರು ಎನ್ನುವುದು.
ಇವತ್ತಿನ ಆಧುನಿಕ ವಿಜ್ಞಾನ ಕೂಡ ನಮ್ಮ ಹಿರಿಯರ ಈ ಶೋಧನೆಯನ್ನು ಕೊಂಡಾಡಿದೆ. ಅನೇಕ ಪ್ರಯೋಗಗಳು ಬಾಳೆಹಣ್ಣು ತಿಂದರೆ ಅಲ್ಸರ್ ಬಹುಬೇಗ ಗುಣವಾಗುತ್ತದೆ ಎನ್ನುವುದನ್ನು ದೃಢಪಡಿಸಿವೆ. ಪಾಶ್ಚಾತ್ಯರು ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳು ಬಾಳೆಹಣ್ಣಿನ ಮಹಿಮೆಯನ್ನು ಸಾರಿ ಹೇಳಿವೆ. ಬಾಳೆ ಹಣ್ಣು ಮಾತ್ರವೇ ಅಲ್ಲ, ಬಾಳೆ ಕಾಯಿ ಕೂಡ ಅಲ್ಸರ್‌ಗೆ ಪರಿಣಾಮಕಾರಿ ಮದ್ದು. ಜೀರ್ಣಾಂಗ ವೃಣ ಆದವರಿಗೆ ಬಾಳೆ ಕಾಯಿಯನ್ನು ಒಣಗಿಸಿ ಸಿದ್ಧಪಡಿಸಿದ ಪುಡಿಯನ್ನು ಔಷಧ ರೂಪದಲ್ಲಿ ನೀಡುವುದು ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇತ್ತಂತೆ. ಅಚ್ಚರಿ ಆದೀತು. ಅಲ್ಸರ್ ಚಿಕಿತ್ಸೆಯಲ್ಲಿ ಬಾಳೆಹಣ್ಣು ಬಳಸಿದರೆ ಯಶಸ್ಸಿನ ಪ್ರಮಾಣ ಎಷ್ಟು ಗೊತ್ತಾ? ಶೇ 70! ಮಿಗಿಲಾಗಿ ಅಡ್ಡಪರಿಣಾಮಗಳಿಲ್ಲ. ಬಾಳೆಹಣ್ಣಿನಲ್ಲಿರುವ ಮುಖ್ಯ ಗುಣ ಎಂದರೆ ಇವು ಹೊಟ್ಟೆ ಸ್ರವಿಸುವ ವಿಚ್ಛಿದ್ರಕಾರಿ ಆ್ಯಸಿಡ್ ಪ್ರತಿರೋಧಕಗಳು ಎನ್ನುವುದು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


