ಬೈಟುಕಾಫಿ

ಬಾಳೆಹಣ್ಣು ತಿನ್ನಿ ನೆಮ್ಮದಿಯಿಂದ ಇರಿ

ಬಾಳೆಹಣ್ಣು ತಿನ್ನಿ ನೆಮ್ಮದಿಯಿಂದ ಇರಿ
Published On :

ಜೀವನದಲ್ಲಿ ಒಮ್ಮೆ ಕೇರಳ ಸುತ್ತಬೇಕು. ಅಲ್ಲಿ ಬಾಳೆಕಾಯಿ ಮತ್ತು ಬಾಳೆಹಣ್ಣುಗಳ ಬಳಕೆ ನಮ್ಮನ್ನು ದಂಗುಬಡಿಸುತ್ತದೆ. ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಬಾಳೆಕಾಯಿಯನ್ನು ತರಕಾರಿಯಂತೆಯೂ ಬಳಸುವುದುಂಟು. ಬಾಳೆಕಾಯಿ ಪಲ್ಯ, ಸಾಂಬಾರ್, ಹಶಿ (ಮೊಸರು ಬಜ್ಜಿ ಥರದ ಪದಾರ್ಥ), ಮಜ್ಜಿಗೆಹುಳಿ ಇತ್ಯಾದಿಗಳನ್ನು ಮಾಡುತ್ತಾರೆ. ಅವುಗಳಲ್ಲಿ ಬೆಲ್ಲ ಜಾಸ್ತಿ ಹಾಕಿರಲಿ ಅಥವಾ ಖಾರ ಹೆಚ್ಚಿರಲಿ, ಬಾಳೆಕಾಯಿ ಪದಾರ್ಥಗಳ ರುಚಿಯೇ ಬೇರೆ. ತಿಂದವನ್ನೇ ಬಲ್ಲ ಎನ್ನುತ್ತಾರಲ್ಲ, ಹಾಗೆ ಇದರ ರುಚಿಯನ್ನು ಸವಿದವನೇ ಬಲ್ಲ. ಬಾಳೆಕಾಯಿ ದಿಂಡಿನಿಂದಲೂ ಕೋಸಂಬರಿ, ಪಲ್ಯ ಮೊದಲಾದುವನ್ನು ಮಾಡುತ್ತಾರೆ. ಹಾಗೆಯೇ ಹಣ್ಣಿನಿಂದಲೂ ದೋಸೆ, ರಸಾಯನ, ರೊಟ್ಟಿ, ಸುಟ್ಟೇವು ಇತ್ಯಾದಿಗಳನ್ನು ತಯಾರಿಸುತ್ತಾರೆ. ಏನೇ ಆದರೂ ನಾವು ಈ ವಿಚಾರದಲ್ಲಿ ಕೇರಳೀಯರನ್ನು ಮೀರಿಸಲು ಸಾಧ್ಯವಿಲ್ಲ ಬಿಡಿ.
ಅಲ್ಸರ್ ಆದಾಗ ಅನುಸರಿಸಬೇಕಾದ ಆಹಾರ ಪದ್ಧತಿಯಲ್ಲಿ ಬಾಳೆಹಣ್ಣು, ಬಾಳೆಕಾಯಿಗಳ ಕುರಿತು ಚರ್ಚಿಸುತ್ತಿದ್ದೆವು. ಬಾಳೆಕಾಯಿ ಹೆಚ್ಚಾಗಿ ಬೆಳೆಯುವ ಪ್ರದೇಶಗಳ ಆಹಾರ ಸಂಸ್ಕೃತಿಯಲ್ಲಿ ಬಾಳೆ ಹೇಗೆ ಹಾಸುಹೊಕ್ಕಾಗಿ ಬೆಸೆದುಕೊಂಡಿರುತ್ತದೆ ನೋಡಿ. 'ನಮ್ಮ ರಾಜ್ಯದ ಮಲೆನಾಡು, ಕರಾವಳಿ ಭಾಗಗಳಲ್ಲಿ ಅಲ್ಸರ್ ತೀವ್ರತೆ ಕಡಿಮೆ ಎಂದೇ ಹೇಳಬಹುದು. ಅದಕ್ಕೆ ಕಾರಣ ಅಲ್ಲಿನ ಆಹಾರ ಪದ್ಧತಿಯಲ್ಲಿ ಬಾಳೆಕಾಯಿ, ಬಾಳೆಹಣ್ಣುಗಳ ಬಳಕೆ ಜಾಸ್ತಿ ಇರುವುದೂ ಆಗಿರಬಹುದು' ಎನ್ನುವುದು ನನ್ನ ವೈದ್ಯ ಮಿತ್ರರೊಬ್ಬರ ಅಭಿಪ್ರಾಯ.
ಬಾಳೆ ಮಾಡುವ ಮೋಡಿಯಾದರೂ ಏನು? ಬಹಳ ವರ್ಷಗಳ ಹಿಂದೆ ಇದ್ದ ನಂಬಿಕೆ ಎಂದರೆ ಆ್ಯಸಿಡ್‌ಗಳನ್ನು ಇದು ತಟಸ್ಥಗೊಳಿಸುತ್ತದೆ ಎನ್ನುವುದು. ಬಾಳೆ ಪ್ರಮುಖವಾಗಿ ಆ್ಯಂಟಿಆ್ಯಸಿಡಿಕ್ ಗುಣ ಹೊಂದಿರುವಂಥದ್ದು ಎನ್ನುವುದು ನಿಜ. ಅಲ್ಸರ್ ಆದಾಗ ಉದರವು ಸ್ರವಿಸುವ ವಿಚ್ಛಿದ್ರಕಾರಿ ಆ್ಯಸಿಡ್‌ಗಳನ್ನು ಸಮರ್ಥವಾಗಿ ಪ್ರತಿರೋಧಿಸುತ್ತವೆ. ಜತೆಜತೆಯಲ್ಲೇ ಲೋಳೆಯಂಥ ದ್ರಾವಣದಿಂದ ಜೀರ್ಣಾಂಗ ವ್ಯೂಹದ ಸುತ್ತಲೂ ಪ್ರಬಲವಾದ ತಡೆಗೋಡೆಯೊಂದನ್ನು ನಿರ್ಮಿಸುತ್ತದೆ. ವಿಚ್ಛಿದ್ರಕಾರಿ ಆ್ಯಸಿಡ್‌ಗಳು ಹಾಗೂ ಅತಿಯಾಗಿ ಉತ್ಪಾದನೆಯಾಗುವ ಕಿಣ್ವಗಳು ಈ ಗೋಡೆಯನ್ನು ಭೇದಿಸಿ ಉದರ, ಜೀರ್ಣಾಂಗಗಳಿಗೆ ಹಾನಿ ಉಂಟುಮಾಡಲು ಸಾಧ್ಯವಿಲ್ಲ. ಜೀವಕೋಶಗಳು ಇನ್ನಷ್ಟು ಬಲಿಷ್ಠಗೊಳ್ಳಲು ಮತ್ತು ಅವು ವೇಗವಾಗಿ ಹರಡಿಕೊಳ್ಳಲು ಕೂಡ ಬಾಳೆ ನೆರವಾಗುತ್ತದೆ. ಇವೆಲ್ಲ ಆಧುನಿಕ ಸಂಶೋಧನೆಗಳಿಂದ ದೃಢಪಟ್ಟಿರುವ ಸಂಗತಿಗಳು.
ಬಾಳೆ ಕಾಯಿ ಅಥವಾ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಜೀರ್ಣಾಂಗಗಳನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಅಲ್ಲವೆ?

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.