ಹೋಗಿ ಬನ್ನಿ
ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಅತ್ಯಂತ ಅಗತ್ಯ. ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಲು ಪ್ರವಾಸ ಪೂರಕ...

ಚಿಮ್ಮುವ ತೊರೆಯಲ್ಲಿ ಈಸಾಡುತ್ತಾರೆ. ಕಂಗೆಡಿಸುವ ಗುಹೆಗಳಲ್ಲಿ ಭಯ ಬೀಳುತ್ತಾರೆ. ತಲೆಯೆತ್ತಿ ನಿಂತ ಗುಡ್ಡಗಳನ್ನು ನಿರ್ಭೀತಿಯಿಂದ ಹತ್ತಿಳಿಯುತ್ತಾರೆ. ಮೃಗಾಲಯದ ಪ್ರಾಣಿಗಳನ್ನು ಕಂಡು ಹರ್ಷದಿಂದ ಉದ್ಗರಿಸುತ್ತಾರೆ. ಪ್ಲಾನೆಟೋರಿಯಂನಲ್ಲಿ ತಾರೆ ನೀಹಾರಿಕೆಗಳ ಗುರುತು ಮಾಡಿಕೊಳ್ಳುತ್ತಾರೆ. ಅದು ನಾಲ್ಕು ಗೋಡೆಗಳ ನಡುವೆ ಉರುಹಚ್ಚುವ ಸಾಲುಗಳಲ್ಲ. ಹರ್ಷ ಸಂತಸಗಳು ಬೆರೆತು, ಕಲಿಕೆಯೆಂದೇ ಗೊತ್ತಾಗದೆ ಕಲಿಯುವ ಪಾಠಗಳು. ಅದು ಶಾಲಾ ಮಕ್ಕಳ ಪ್ರವಾಸ.
ಡಿಸೆಂಬರ್- ಜನವರಿ ಬಂತೆಂದರೆ ಎಲ್ಲಾ ಶಾಲೆಗಳಲ್ಲೂ ಶಾಲಾ ಪ್ರವಾಸದ ತಯಾರಿ. ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಅತ್ಯಂತ ಅಗತ್ಯ. ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಲು ಪ್ರವಾಸ ಪೂರಕ. ಇತ್ತೀಚಿನ ವರ್ಷಗಳಲ್ಲಿ, ಸರ್ಕಾರ ಆಯ್ದ ಮಕ್ಕಳಿಗೆ ಉಚಿತವಾಗಿ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದೆ. ರಾಜ್ಯದಲ್ಲಿರುವ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾ ಪ್ರವಾಸದ ಅರಿವೇ ಇಲ್ಲ. ಏಕೆಂದರೆ, ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋದರೆ ಅನಗತ್ಯ ತೊಂದರೆ ಎಂಬ ಭಾವ. ಪ್ರವಾಸದ ಸಮಯ ಅಕಸ್ಮಾತ್ ಏನಾದರೂ ಅವಘಡ ಸಂಭವಿಸಿದರೆ, ಅದಕ್ಕೆ ಶಿಕ್ಷಕರೇ ಹೊಣೆಯಾಗಬೇಕಾಗುತ್ತದೆ. ಅಲ್ಲದೆ ಆರ್ಥಿಕ ಸ್ಥಿತಿಯೂ ಕೂಡಾ ಕೆಲವೊಮ್ಮೆ ಪ್ರವಾಸಕ್ಕೆ ತೊಂದರೆಯಾಗುತ್ತದೆ. ಇನ್ನು ಕೆಲವು ಸಂಸ್ಥೆಗಳಲ್ಲಿ ಶೈಕ್ಷಣಿಕ ಪ್ರವಾಸವು ಅತ್ಯಂತ ಪ್ರಮುಖ ಭಾಗ. ಪ್ರವಾಸವು ಪ್ರಯಾಸವಾಗದಿರಲು ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.
ಮಕ್ಕಳೇ ಜೋಪಾನ
- ನೀವು ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿ, ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಬೇಡಿ. ಇದರಿಂದಾಗಿ ಬೇರೆ ಮಕ್ಕಳು ಅವಕಾಶ ವಂಚಿತರಾಗುತ್ತಾರೆ.
- ನಮಗೆ ಅಗತ್ಯವಿರುವ ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಹೋಗಿ. ಸ್ನೇಹಿತರೊಂದಿಗೆ ಯಾವುದಕ್ಕೂ ಅಂಗಲಾಚಬೇಡಿ.
- ವಾಹನದಲ್ಲಿ ಪ್ರಯಾಣಿಸುವಾಗ ಕೈ ಹಾಗೂ ತಲೆಯನ್ನು ಕಿಟಕಿಯಿಂದ ಹೊರಗೆ ಹಾಕಿ ಮುಂದಿನ ವಾಹನಕ್ಕೆ ನೀವು ಗೈಡ್ ಆಗಬೇಡಿ.
- ಅನಗತ್ಯವಾಗಿ ಚಾಲಕರೊಂದಿಗೆ ಹರಟುತ್ತಾ, ಮುಂದೆ ಹೋಗುವ ವಾಹನವನ್ನು ಹಿಂದಿಕ್ಕಲು ಪ್ರೋತ್ಸಾಹಿಸಬೇಡಿ.
- ನಿಮ್ಮ ಶಿಕ್ಷಕರು ನೀಡುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿ.
- ನೀವು ಪ್ರವಾಸ ಕೈಗೊಂಡ ತಾಣದ ಬಗ್ಗೆ ಮಾಹಿತಿ ಬರೆದುಕೊಳ್ಳಲು ಪುಟ್ಟದೊಂದು ಡೈರಿ ಹಾಗೂ ಒಂದು ಪೆನ್ ಜೊತೆಗಿಟ್ಟುಕೊಳ್ಳಿ. ಪ್ರಮುಖವಾದುದನ್ನು ನೋಟ್ ಮಾಡಿಕೊಳ್ಳಿ.
- ನಿಮಗೆ ಬೇಕಾದ ಅಗತ್ಯ ವಸ್ತುಗಳಾದ ಸೋಪು, ಪೇಸ್ಟ್, ಟವೆಲ್ ಮುಂತಾದವನ್ನು ಕೆಲಸ ಮುಗಿದ ಕೂಡಲೇ ಜೋಪಾನವಾಗಿ ಬ್ಯಾಗಿನಲ್ಲಿಡುವುದನ್ನು ಮರೆಯಬೇಡಿ. ಇಲ್ಲವಾದರೆ, ಪ್ರತಿ ಊರಿನಲ್ಲಿಯೂ ಹೊಸದಾಗಿ ಇವನ್ನು ಕೊಂಡುಕೊಳ್ಳಬೇಕಾದೀತು.
- ನೀವು ಅಗತ್ಯಕ್ಕಿಂತ ಹೆಚ್ಚಿನ ಹಣ ಕೊಂಡೊಯ್ದಿದ್ದರೆ ಅದನ್ನು ನಿಮ್ಮ ಶಿಕ್ಷಕರ ಬಳಿ ಕೊಟ್ಟುಬಿಡಿ. ಅಗತ್ಯ ಬೇಕಾದಾಗ ಕೇಳಿ ಪಡೆದುಕೊಳ್ಳಬಹುದು.
- ನಿಮ್ಮ ಹಾಗೂ ಶಾಲೆಯ ಪೂರ್ಣ ಹೆಸರು, ವಿಳಾಸ, ನಿಮ್ಮ ಹಾಗೂ ಶಿಕ್ಷಕರ ದೂರವಾಣಿ ಸಂಖ್ಯೆ ಬರೆದ ಒಂದು ಚೀಟಿ ನಿಮ್ಮ ಬಳಿ ಸದಾ ಇರಲಿ. ಅಕಸ್ಮಾತ್ತಾಗಿ ನೀವು ತಪ್ಪಿಸಿಕೊಂಡರೆ ಇದು ಉಪಯೋಗವಾಗುತ್ತದೆ.
- ಶೌಚಾಲಯಕ್ಕೆ ಹೋಗುವುದಾದರೆ, ಶಿಕ್ಷಕರ ಅನುಮತಿ ಪಡೆದುಕೊಂಡೇ ಹೋಗಬೇಕು.
- ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ಹೊರಡುವ ಮುನ್ನವೇ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಕೆಲವೊಮ್ಮೆ ಒಂದೇ ರೀತಿಯ ಹಲವು ವಾಹನಗಳಲ್ಲಿ ನಿಮಗೆ ಗಲಿಬಿಲಿ ಆಗುವ ಸಾಧ್ಯತೆಯಿರುತ್ತದೆ.
ಮೇಷ್ಟ್ರೇ ಹುಷಾರ್
- ಪ್ರವಾಸ ಹೊರಡುವ ಮುನ್ನ ವಾಹನ ತಪಾಸಣೆ ಮಾಡಿಸಿ, ಅದಕ್ಕೆ ಸಂಬಂಧಪಟ್ಟ ದಾಖಲೆಗಳ ಪ್ರತಿಯ ಬಗ್ಗೆ ನಿಗಾ ಇರಲಿ.
- ನಿಮ್ಮ ಶಾಲೆಯ ಮಕ್ಕಳ ಆರ್ಥಿಕ ಸ್ಥಿತಿಗೆ ತಕ್ಕಂತೆ ಪ್ರವಾಸ ಏರ್ಪಡಿಸಿ. ಪೋಷಕರಿಗೆ ಪ್ರವಾಸಕ್ಕಾಗಿ ಅನಗತ್ಯ ಹೊರೆ ಹೊರಿಸದಿರಿ.
- ಮಕ್ಕಳು ಇಷ್ಟಪಡುವ ತಾಣಗಳಿಗೆ ಕರೆದುಕೊಂಡು ಹೋಗಿ, ಅಲ್ಲಿಯೂ ಅವರು ಶಿಸ್ತಿನ ಸಿಪಾಯಿಗಳಾಗಿರಬೇಕೆಂದು ತಾಕೀತು ಮಾಡದಿರಿ. ನೀವೂ ಮಕ್ಕಳೊಂದಿಗೆ ಮಕ್ಕಳಾಗಿ, ಇದರಿಂದ ಮಕ್ಕಳ ಮತ್ತು ನಿಮ್ಮ ಬಾಂಧವ್ಯ ವೃದ್ಧಿಸುತ್ತದೆ.
- ಪ್ರವಾಸಕ್ಕೆ ಮಕ್ಕಳು ತರಬೇಕಾಗಿರುವ ವಸ್ತುಗಳ ಒಂದು ನಿಗದಿತ ಪಟ್ಟಿ ಮಾಡಿ. ಇದರಿಂದ ಮಕ್ಕಳು ಸುಲಭವಾಗಿ ತಯಾರಾಗಬಹುದು.
- ಪ್ರವಾಸಕ್ಕೆ ಹೊರಡುವ ಮಕ್ಕಳ ಹಾಜರಾತಿ ಕಡ್ಡಾಯವಾಗಿ ತೆಗೆದುಕೊಳ್ಳಿ. ಹಾಗೂ ವಾಹನದಲ್ಲಿ ಅವರು ಕುಳಿತುಕೊಳ್ಳುವ ಜಾಗ ನಿಗದಿಪಡಿಸಿ.
- ಪ್ರವಾಸಕ್ಕೆ ಹೋಗುವಾಗ ವೈಯಕ್ತಿಕವಾಗಿ ಮಕ್ಕಳಿಗೆ ಕುರುಕಲು ತಿಂಡಿ ತರಲು ಹೇಳಬೇಡಿ. ಇದರಿಂದ, ಮಕ್ಕಳಲ್ಲಿ ಭೇದಭಾವ ತಂದಂತಾಗುತ್ತದೆ. ಶಾಲೆಯಿಂದಲೇ ತಿಂಡಿ ಮಾಡಿಸಿಕೊಂಡು ಹೋಗಿ.
- ಎರಡು-ಮೂರು ದಿವಸ ಪ್ರವಾಸದಲ್ಲಿ, ನೀವೇ ಅಡುಗೆಯವರನ್ನು ಕರೆದುಕೊಂಡು ಹೋದಲ್ಲಿ, ಶುಚಿ-ರುಚಿಯಾದ ಆಹಾರ ಮಕ್ಕಳಿಗೆ ನೀಡಲು ಸಹಾಯವಾಗುತ್ತದೆ.
- ಸಮಯಪಾಲನೆಯ ಬಗ್ಗೆ ನಿಗಾ ಇರಲಿ. ಆದರೆ, ಅತಿಯಾದ ಶಿಸ್ತುಪಾಲನೆ ಅನವಶ್ಯಕ.
- ಹೊರಡುವ ಮುನ್ನ ಪ್ರತಿ ಮಗುವಿಗೂ ಒಂದೊಂದು ಪ್ಲಾಸ್ಟಿಕ್ ಕವರ್ ನೀಡಲು ಮರೆಯದಿರಿ. ವಾಂತಿ ಬಂದಾಗ ಅದನ್ನು ಬಳಸುವುದು ಹೇಳಿಕೊಡಿ.
- ನೀವು ಹೋಗುತ್ತಿರುವ ಸ್ಥಳಗಳ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿ. ಇದರಿಂದ ಮಕ್ಕಳಿಗೆ ವಿವರಿಸಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಸ್ಥಳೀಯ ಗೈಡ್ಗಳಿಂದ ವಿವರಣೆ ಪಡೆಯಿರಿ.
- ಪ್ರವಾಸಕ್ಕೆ ಮೊದಲೇ, ಮಕ್ಕಳನ್ನೆಲ್ಲಾ ಗುಂಪು ಸೇರಿಸಿ, 6ರಿಂದ 7 ಜನರ ತಂಡ ಮಾಡಿ, ಅದಕ್ಕೆ ಒಬ್ಬ ನಾಯಕನನ್ನು ಹಾಗೂ ಓರ್ವ ಶಿಕ್ಷಕರನ್ನೂ ನೇಮಕ ಮಾಡಿ. ಇದರಿಂದ ಮಕ್ಕಳು ತಪ್ಪಿಸಿಕೊಳ್ಳುವುದನ್ನು ತಡೆಯಬಹುದು. ಪ್ರತಿ ಬಾರಿ ಇಳಿದಾಗಲೂ ಹಾಜರಾತಿ ತೆಗೆದುಕೊಳ್ಳಲು ಮರೆಯದಿರಿ.
- ಮಕ್ಕಳನ್ನು ನೀರಿರುವ ಜಾಗಕ್ಕೆ ಕರೆದುಕೊಂಡು ಹೋಗುವುದಾದರೆ ಎಚ್ಚರಿಕೆ ವಹಿಸಿ.
ಪೋಷಕರೇ ನೆನಪಿಡಿ
- ಮಕ್ಕಳಿಗೆ ಶಿಕ್ಷಕರ ಆದೇಶವನ್ನು ತಪ್ಪದೇ ಪಾಲಿಸುವಂತೆ ತಿಳಿ ಹೇಳಿ.
- ನಿಮ್ಮ ಮಗುವಿಗೆ ಯಾವುದಾದರೂ ಕಾಯಿಲೆ ಅಥವಾ ಅರೋಗ್ಯ ಸಮಸ್ಯೆಯಿದ್ದರೆ, ಮುಂಚಿತವಾಗಿಯೇ ಶಿಕ್ಷಕರಿಗೆ ತಿಳಿಸಿ ಬಿಡಿ.
- ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸಲು ಸಾಧ್ಯವಾದಷ್ಟು ಪ್ರಯತ್ನಿಸಿ. ನಿಮ್ಮೊಂದಿಗಿಂತಲೂ ಮಕ್ಕಳು ಸಹಪಾಠಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಪ್ರವಾಸ ಹೋಗಲು ಹೆಚ್ಚು ಆಸಕ್ತಿ ವಹಿಸುತ್ತಾರೆ.
- ಭಾಗ್ಯ ನಂಜುಂಡಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


