ಹಳೆಯ ನೆನಪು

ಒಬ್ಬ ಸಂಗಾತಿಯೊಡನೆ ಮದನ ಕೇಳಿಯಲ್ಲಿ ನಿರತನಾಗಿರುವಾಗ, ಹಳೆಯ ಅಥವಾ ಇನ್ನೊಬ್ಬ ಸಂಗಾತಿಯನ್ನು ನೆನಪಿಸಿಕೊಳ್ಳಕೂಡದು. ನೆನಪಿಸಿಕೊಂಡರೇನಾಗುತ್ತದೆ? ಅದು ಹೇಗೋ, ಪಕ್ಕದಲ್ಲಿರುವ ಸಂಗಾತಿಗೆ ಅದರ ಸುಳಿವು ಸಿಕ್ಕುಬಿಡುತ್ತದೆ. ಇದೊಂದು ಸಂಕೀರ್ಣ ಮನೋವ್ಯಾಪಾರ ಎಂಬುದು ನಿಜ. ಇದಕ್ಕೂ ಕೃಷ್ಣನೇ ಉದಾಹರಣೆ.
ಸಂವಿಷ್ಟೋ ಮಣಿವಿಷ್ಟರೇಂಕತಲಮಧ್ಯಾಸೀನ ಲಕ್ಷ್ಮೀಮುಖೇ
ಕಸ್ತೂರೀತಿಲಕಂ ಮುದಾ ವಿರಚಯನ್ ಹರ್ಷಾಕ್ಕುಚೌ ಸಂಸ್ಪೃಶನ್
ಅನ್ಯೋನ್ಯಸ್ಮಿತ ಚಂದ್ರಿಕಾ ಕಿಸಲಯೈರಾರಾಧಯನ್ಮನ್ಮಥಂ
ಗೋಪೀ ಗೋಪಪರಿವೃತೋ ಯದುಪತಿಃ ಪಾಯಾಜ್ಜಗನ್ಮೋಹನಃ
ಒಮ್ಮೆ ಕೃಷ್ಣ ಗೋಪಿಕೆಯರಿಂದ ಪರಿವೃತನಾಗಿ ಆಡುತ್ತಿದ್ದಾನೆ. ಗೋಪಿಕೆಯರ ಸ್ಪರ್ಶ, ಮಧುರವಚನ ಇವೆಲ್ಲವುಗಳಿಂದ ಆತನಿಗೆ ಇನ್ನೇನೋ ನೆನಪು ಸ್ಫುರಿಸಿದೆ. ಅದನ್ನು ನೆನಪಿಸಿಕೊಂಡು ಆತ ಮುಗುಳ್ನಗುತ್ತಿದ್ದಾನೆ. ತಮ್ಮಲ್ಯಾರನ್ನೂ ಉದ್ದೇಶಿಸಿರದ ಈ ನಗುವಿನಿಂದಾಗಿ ಗೋಪಿಕೆಯರಿಗೆ ಕುತೂಹಲ ಉಕ್ಕೇರಿದೆ. ಕಾರಣವನ್ನು ಕೃಷ್ಣ ಹೇಳಲೊಲ್ಲ. ಅದೇನು? ಕವಿಮನಕ್ಕೆ ಮಾತ್ರ ಅದು ಗೊತ್ತು.
ತನ್ನ ಮೂಲ ನೆಲೆಯಾದ ಕ್ಷೀರಸಾಗರದಲ್ಲಿ ಶ್ರೀಮನ್ನಾರಾಯಣ ಶೇಷನ ಮೇಲೆ ಪವಡಿಸಿದ್ದಾನೆ. ಪಕ್ಕದಲ್ಲಿ ಲಕ್ಷ್ಮಿ. ನಾರಾಯಣ ಈಗ ತನ್ನ ಕೈಯಲ್ಲಿ ತುಸು ಕಸ್ತೂರಿಯನ್ನು ತೆಗೆದುಕೊಂಡು ಕಲೆಸಿ, ಎಡಗೈಯಲ್ಲಿ ದೇವಿಯ ಮುಖವನ್ನು ಎತ್ತಿಹಿಡಿದು ಬಲಗೈಯ ಕಿರುಬೆರಳಿನಿಂದ ಆಕೆಗೆ ತಿಲಕವನ್ನು ಇಡುತ್ತಿದ್ದಾನೆ. ಆಗ ಆತನ ಮೊಣಕೈ ಆಕೆಯ ವಕ್ಷಗಳನ್ನು ಹಿತವಾಗಿ ಸ್ಪರ್ಶಿಸುತ್ತಿದೆ. ಈ ಒಂದು ಮಧುರವಾದ ನೆನಪೇ ಜನ್ಮಾಂತರಗಳನ್ನು ದಾಟಿ ಬಂದು ಆತನಲ್ಲಿ ನಗೆ ಉಕ್ಕಿಸಿದೆ.
ಲೀಲಾಮಾನುಷ ವಿಗ್ರಹನಾದುದರಿಂದಾಗಿ ಆತ ಬಚಾವು. ನಮ್ಮ ನಿಮ್ಮಂಥವರು ಹೀಗೆ ಮುಗುಳ್ನಕ್ಕರೆ ಬದುಕಿಕೊಳ್ಳಲುಂಟೆ?
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


