ಆಳ್ವಾಸ್ ಯಾನ
ಒಂದು ಕಾಲೇಜಿಂದ 80 ಸ್ಟೂಡೆಂಟುಗಳ ದಂಡು ಫಾರಿನ್ನಿಗೆ ಕಾಲಿಡಲು ಸಾಧ್ಯವಾ?

ಅವರೆಲ್ಲ ಸಾಂಸ್ಕೃತಿಕ ರಾಯಭಾರಿಗಳು...
ಅಷ್ಟಕ್ಕೂ ಏಕಾಏಕಿ ಒಂದು ಕಾಲೇಜಿಂದ 80 ಸ್ಟೂಡೆಂಟುಗಳ ದಂಡು ಫಾರಿನ್ನಿಗೆ ಕಾಲಿಡಲು ಸಾಧ್ಯವಾ? ಅಷ್ಟೂ ಮಂದಿಗೆ ಪಾಸ್ಪೋರ್ಟು ಬೇಕು, ವೀಸಾ ಸಿಗ್ಬೇಕು. ಒಟ್ಟಿಗೆ ಹೋಗೋದಿಕ್ಕೆ ವಿಮಾನದ ಟಿಕೆಟ್ ಸಿಗ್ಬೇಕು. ಮಿಗಿಲಾಗಿ ಲಕ್ಷಗಟ್ಟಲೆ ಕಾಸು ಬೇಕು. ತಂಗುವ ವ್ಯವಸ್ಥೆ, ಸಾರಿಗೆ ಮತ್ತು ಏನೇನೋ... ಬೇಕೇ ಬೇಕು.
ಈ ಹತ್ತಾರು 'ಬೇಕು'ಗಳನ್ನು ವ್ಯವಸ್ಥೆ ಮಾಡಿಕೊಂಡೇ ಫಾರಿನ್ನಿಗೆ ಲಗ್ಗೆಯಿಟ್ಟಿದ್ದು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ಮೂಡುಬಿದಿರೆಯ ಕಾಲೇಜಿನ ಈ ಹುಡುಗರು ಡಾ.ಎಂ. ಮೋಹನ ಆಳ್ವರ ನೇತೃತ್ವದಲ್ಲಿ ವಿದೇಶದಲ್ಲಿ ಸಾಂಸ್ಕೃತಿಕ ಮಳೆಯನ್ನೇ ಸುರಿಸಿಬಿಟ್ಟರು.
ಡಿಸೆಂಬರ್ನಲ್ಲಿ ನಡೆಯುವ 'ವಿಶ್ವ ಆಳ್ವಾಸ್ ನುಡಿಸಿರಿ- ವಿರಾಸತ್ ಸಮ್ಮೇಳನ'ಕ್ಕೆ ಇಷ್ಟೆಲ್ಲ ತಯಾರಿ. ಕನ್ನಡ ಮನಸುಗಳನ್ನು ಸಂಘಟಿಸುವ ಉದ್ದೇಶದಿಂದ ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ, ಗಡಿನಾಡುಗಳಲ್ಲಿ, ಹಲವು ರಾಜ್ಯಗಳಲ್ಲಿ 50ಕ್ಕೂ ಅಧಿಕ ಕಾರ್ಯಕ್ರಮ ನೀಡಿರುವ ಈ ತಂಡ, ಇದೀಗ ಕಡಲನ್ನು ದಾಟಿ ಗಲ್ಫ್ ರಾಷ್ಟ್ರಗಳಾದ ದುಬೈ, ಅಬುಧಾಬಿ, ಬಹರೈನ್ಗಳಲ್ಲೂ ಮಿಂಚಿತು. ಮೂರೂವರೆ ಗಂಟೆಗಳ ಸಾಂಸ್ಕೃತಿಕ ಮೆರುಗನ್ನು ನೀಡಿ ಅನಿವಾಸಿ ಭಾರತೀಯರ ಮನ ಗೆದ್ದಿತು.
ಆಂಧ್ರದ ಬಂಜಾರ ನೃತ್ಯ, ಬಂಗಾಳದ ಪುರುಲಿಯೋ ಛಾವೋ, ಮಣಿಪುರದ ಧೋಲ್ ಚಲೋ, ಸ್ಟಿಕ್ ಡ್ಯಾನ್ಸ್, ಉತ್ತರ ಭಾರತದ ಕಥಕ್, ಮಹಾರಾಷ್ಟ್ರದ ಲಾವಣಿ, ಕೇರಳದ ಮೋಹಿನಿಯಾಟ್ಟಂ, ಕರ್ನಾಟಕದ ತೆಂಕು- ಬಡಗು ಯಕ್ಷಗಾನ, ಭರತನಾಟ್ಯ, 'ದೇವವೃದ್ಧರು' ಕಿರುನಾಟಕ... ಹೀಗೆ ವೈವಿಧ್ಯದಲ್ಲಿ ಐಕ್ಯ ಸಾರುವ ಭಾರತೀಯತೆಯ ಪ್ರತಿಬಿಂಬವೆಂಬಂತೆ ಕಾರ್ಯಕ್ರಮದ ಸಂಯೋಜನೆ. ಸಹಜವಾಗಿಯೇ ವಿದೇಶಿ ನೆಲದ ಕನ್ನಡಿಗರು ಮಾತ್ರವಲ್ಲ ತೆಲುಗು, ತಮಿಳು ಮಲಯಾಳ ತುಳು ಭಾಷಿಕರೂ ಕಾರ್ಯಕ್ರಮ ಆಸ್ವಾದಿಸಿದರು.
ಕಾರ್ಯಕ್ರಮಕ್ಕೆ ಅಲ್ಲಿನ ರಾಜವಂಶಸ್ಥರು, ಭಾರತೀಯ ರಾಯಭಾರಿಗಳು ಆಗಮಿಸಿದ್ದರು. ಬಹರೈನ್ನ ಕಾರ್ಯಕ್ರಮದಲ್ಲಂತೂ ಅಲ್ಲಿನ ಸ್ಥಳಿಯಾಡಳಿತ ಎಷ್ಟು ಇಂಪ್ರೆಸ್ ಆಯ್ತೆಂದರೆ, ಆಗಸ್ಟ್ನ ಸ್ವಾತಂತ್ರ್ಯೋತ್ಸವಕ್ಕೆ ಬರಲೇಬೇಕು ಎಂಬ ಆಫರನ್ನೂ ಕೊಟ್ಟರು.
ದೇಶದಲ್ಲಿ, ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಬೃಹತ್ ರೂಪದಲ್ಲಿ ಕಟ್ಟಿದವರು ಹಲವರಿದ್ದಾರೆ. ಆಳ್ವರಿಗಿಂತ ಹತ್ತು ಪಟ್ಟು ದುಡ್ಡುಳ್ಳವರು ನೂರಾರು ಮಂದಿಯಿದ್ದಾರೆ. ಆದರೆ, ಆಳ್ವರಂತೆ ಕೆರೆಯ ನೀರನು ಕೆರೆಗೆ ಚೆಲ್ಲಿ ನಾಡಿನ ಘನತೆ ಗೌರವವನ್ನು ಹೆಚ್ಚಿಸಿದವರು ವಿರಳ. ಮರಳುನಾಡಿನಲ್ಲಿ ನಮ್ಮ ಸಂಸ್ಕೃತಿಯ ಸಿಂಚನದ ತಂಪನ್ನು ನೀಡಿ ಬಂದ ತಂಡವನ್ನು ನೀವೂ ಅಭಿನಂದಿಸುವುದಾದರೆ ಮೊ. 9845303031 ಸಂಪರ್ಕಿಸಿ.
ವಿದ್ಯಾರ್ಥಿಗಳು ಹೇಳಿದ್ದು...
ದುಬೈಯ ಅಲ್ಮಸೂರಿನ ಐಸ್ರಿಂಕ್. ಹಗಲಿನ ಬಿಸಿಲ ಬೇಗೆಯಿಂದ ಪಾರಾಗಿ ತಣ್ಣಗೆ ಐಸ್ ಗಡ್ಡೆಯ ಮೇಲೆ ತಾಲೀಮು ಮಾಡುವ ವಿಶಾಲ ಪ್ರದೇಶ. ಆ ತಂಪಿನ ಮೇಲೆಯೇ ಮರದ ಹಾಸುಗಳನ್ನು ಹಾಸಿ ಸಂಜೆಯ ವೇಳೆಗೆ ವೇದಿಕೆ ರೆಡಿ. ಅದರ ತಂಪಿನ ನಡುವೆ ಗೆಜ್ಜೆ ಕಟ್ಟಿ ಕುಣಿಯುವುದು, ಆ ಆವರಣದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುವುದು ಭಾರತದಿಂದ ಹೋದ ನಮಗೆ ಒಂದು ವಿಶಿಷ್ಟ ಅನುಭವ.
ಮೂರೂ ಕಡೆಯೂ ಬಹುಸಂಖ್ಯೆಯಲ್ಲಿ ಜನ ಸೇರಿದ್ದರು. ದುಬೈಯಲ್ಲಿ 3500, ಅಬುಧಾಬಿಯಲ್ಲಿ 2000, ದ್ವೀಪರಾಷ್ಟ್ರ ಬಹರೈನ್ನಲ್ಲಿ 2500 ಜನ ಸೇರಿದ್ದು ನಿಜಕ್ಕೂ ನಮ್ಮನ್ನು ಬೆರಗುಗೊಳಿಸಿತ್ತು. ಆತಿಥ್ಯದಲ್ಲಂತೂ ಮನೆಮಕ್ಕಳಂತೆ ನೋಡಿಕೊಂಡರು.
- ಧನಂಜಯ ಕುಂಬ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


