

ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಹೇಳುವವರು ಸಾಣೆಕಟ್ಟಾದ ಉಪ್ಪಿನ ಉದ್ಯಮವನ್ನೊಮ್ಮೆ ನೋಡಿ ಬರಬೇಕು. ಕರ್ನಾಟಕದ ಮೊತ್ತಮೊದಲ ಉಪ್ಪು ಮಾಲಕರ ಸಹಕಾರಿ ಸಂಘ ಇಲ್ಲಿ ಅಸ್ತಿತ್ವಕ್ಕೆ ಬಂದದ್ದು 1952ರಲ್ಲಿ. ಅರವತ್ತರ ಸಂಭ್ರಮದಲ್ಲಿರುವ ಸಂಘವು ಸಹಕಾರಿ ತತ್ವದ ಆಧಾರದಲ್ಲಿ ವೈಜ್ಞಾನಿಕ ರೀತಿಯ ಉಪ್ಪು ತಯಾರಿಕೆಯಲ್ಲಿ ಖ್ಯಾತಿ ಗಳಿಸಿದೆ.
ಉತ್ತರ ಕನ್ನಡದ ಕುಮಟಾದಿಂದ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಸಿಗುವ ಊರು ಸಾಣೆಕಟ್ಟಾ. ಇಲ್ಲಿನ 'ಉಪ್ಪುಗಾರಿಕೆ'ಗೆ ಸುಮಾರು ಮೂರು ಶತಮಾನಗಳ ಇತಿಹಾಸ. 1720ರಲ್ಲಿ ಅಲ್ಲಲ್ಲಿ ಸಣ್ಣ ಘಟಕಗಳಾಗಿ ಉಪ್ಪಿನ ತಯಾರಿಕೆ ಆರಂಭವಾಯಿತಂತೆ. ಈ ವೇಳೆಗೆ ಸಾಣೆಕಟ್ಟಾ ಬಿದನೂರಿನ ಅರಸರ ಆಳ್ವಿಕೆಯಲ್ಲಿತ್ತು. ಅವರು ಉಪ್ಪಿನ ಮೇಲೆ ಕರ ಹೇರಿರಲಿಲ್ಲ. ನಂತರ ಬಿದನೂರಿನ ಒಡೆತನ ಟಿಪ್ಪುವಿನ ವಶವಾದಾಗ ಉಪ್ಪನ್ನು ಸರಕಾರದ ಆದಾಯ ಮೂಲವೆಂದು ಪರಿಗಣಿಸಿ ಉಪ್ಪಿನ ಮೇಲೆ ಕರ ಹೇರಿದ. ಜತೆಯಲ್ಲೇ ಅದರ ವ್ಯವಹಾರ ವಿಸ್ತಾರವಾಗಲು ಘಟ್ಟ ಪ್ರದೇಶಗಳೊಂದಿಗೆ ಸಂಪರ್ಕಕ್ಕಾಗಿ ರಸ್ತೆಗಳನ್ನು ನಿರ್ಮಿಸಿದ. ಸಾಣೆಕಟ್ಟಾದ ವಿಶೇಷವೆಂದರೆ ಎಲ್ಲೆಡೆಯಂತೆ ಉಪ್ಪು ತಯಾರಿಕೆ ಕೇಂದ್ರ ವಿಸ್ತಾರವಾಗಿರದೆ ಸಾಂದ್ರವಾಗಿದೆ.
ನಾಡಕರ್ಣಿಗಳ ಶ್ರಮ
ನದಿ ಪಾತ್ರದಲ್ಲಿದ್ದ 400 ಎಕರೆ ಎಕರೆ ಸ್ಥಳವನ್ನು ಉಪ್ಪು ತಯಾರಿಕೆಗೆ ಯೋಗ್ಯವಾಗುವಂತೆ ಪರಿಶ್ರಮಪಟ್ಟವರು ಹದಿನಾರು ನಾಡಕರ್ಣಿ ಕುಟುಂಬದ ಸದಸ್ಯರು. 1890ರಲ್ಲಿ 300 ಎಕರೆಗಳನ್ನು ಉಪ್ಪು ತಯಾರಿಗೆ ಅನುಗೊಳಿಸಿದರು. ನೂರು ಎಕರೆ ವಿಸ್ತಾರದ ಜಲಾನಯನ ಪ್ರದೇಶವನ್ನು ಕಾಲುವೆಯಾಗಿ ಮಾಡಿ ತಯಾರಿಸಿದ ಉಪ್ಪನ್ನು ಅದರಲ್ಲಿ ದೋಣಿಗಳ ಮೂಲಕ ಉಗ್ರಾಣಕ್ಕೆ ಸಾಗಿಸಲು ಬಳಸಿದರು. 1904ರಲ್ಲಿ ಉಪ್ಪು ತಯಾರಿಸುವವರು ಒಂದು ಒಕ್ಕೂಟ ಮಾಡಿಕೊಂಡರು. ತಾವೇ ಆಡಳಿತ ಮಂಡಳಿಯೊಂದನ್ನು ಮಾಡಿಕೊಂಡು ಉಪ್ಪಿಗೆ ಬೆಲೆ ನಿಗದಿಪಡಿಸುವ ಅಧಿಕಾರ ಆಡಳಿತ ಮಂಡಳಿಗೆ ನೀಡಿದರು. ಐದು ಎಕರೆ ಜಮೀನನ್ನು ಖರೀದಿಸಿ ಉಪ್ಪು ಸಂಗ್ರಹಣೆಗೆ ಆವಾರ ಗೋಡೆ ನಿರ್ಮಿಸಿದರು. ಒಂದು ಮಣ ಉಪ್ಪಿಗೆ ಒಂದು ಪೈಸೆಯ ಕರ ಸಂಗ್ರಹಿಸುವ ಬಿಲ್ಲಿ ಫಂಡ್ ಅಥವಾ ಪೈಸಾಫಂಡ್ ವಿಧಾನ ಜಾರಿಗೆ ತಂದರು. ಆದರೆ ಉಪ್ಪು ತಯಾರಕರ ಶ್ರಮವನ್ನು ಮಧ್ಯವರ್ತಿಗಳು ದುರುಪಯೋಗ ಮಾಡಿಕೊಂಡು ಲಾಭ ಮಾಡುತ್ತಿರುವುದನ್ನು ಗಮನಿಸಿ 60ಕ್ಕೂ ಹೆಚ್ಚು ಸಣ್ಣ, ದೊಡ್ಡ ಉಪ್ಪು ತಯಾರಕರೆಲ್ಲ ಒಂದಾಗಿ 1952ರಲ್ಲಿ ನಾಗರಬೈಲು ಉಪ್ಪು ತಯಾರಕರ ಹಾಗೂ ಮಾರಾಟಗಾರರ ಸಹಕಾರ ಸಂಘವನ್ನು ಸ್ಥಾಪಿಸಿದರು. ಉಪ್ಪಿನ ಸಹಕಾರಿ ಸಂಸ್ಥ್ಥೆಯೊಂದು ಹೀಗೆ ರಾಜ್ಯದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂತು. 1954ರಲ್ಲಿ ಅದು ನಾಗರಬೈಲು ಸಹಕಾರ ಸಂಘದೊಂದಿಗೆ ವಿಲೀನವಾಯಿತು. ಆ ವೇಳೆಗೆ ಭಾರತ ಸರಕಾರವು ಶೇ.96ರಷ್ಟು ಸೋಡಿಯಂ ಕ್ಲೋರೈಡ್ ಇಲ್ಲದ ಉಪ್ಪಿನ ಮಾರಾಟ ನಿಷೇಧಿಸಿತು. ಆಗ ಸಾಣೆಕಟ್ಟಾದಲ್ಲಿ ಉಪ್ಪುತಯಾರಕರ ಸಂಖ್ಯೆ 150ಕ್ಕಿಂತ ಹೆಚ್ಚಿತ್ತು. ಅವರೆಲ್ಲರೂ ಒಂದಾಗಿ ಉತ್ತಮ ಗುಣಮಟ್ಟದ ಉಪ್ಪು ತಯಾರಿಸಿ ಈವರೆಗೆ ಆಯಾತವಾಗುತ್ತಿದ್ದ ಉಪ್ಪಿಗೆ ನಿರ್ಯಾತದ ಗೌರವ ತಂದು ಕೊಡುತ್ತೇವೆ ಎಂದು ಮನವಿ ಮಾಡಿದರು. ಹೇಳಿದಂತೆಯೇ ಸಾಣೆಕಟ್ಟಾದ ಉಪ್ಪಿನ ಉದ್ಯಮವನ್ನು ಲಾಭದಾಯಕಗೊಳಿಸಿ ಬೇರೆ ರಾಜ್ಯಗಳಿಗೂ ರವಾನಿಸಲಾರಂಭಿಸಿದರು.
ಮತ್ತೆ ಬಿರುಗಾಳಿ
ಸರಕಾರ ಮತ್ತೊಮ್ಮೆ ಅಯೋಡಿನ್ ಇಲ್ಲದ ಉಪ್ಪಿನ ಮಾರಾಟವನ್ನು ನಿರ್ಬಂಧಿಸಿದಾಗ ಸಾಣೆಕಟ್ಟಾದ ಸಹಕಾರಿ ವ್ಯವಸ್ಥೆ ಹಿಂದೆಗೆಯದೆ ಸುಧಾರಿತ ಯಂತ್ರವನ್ನು ಖರೀದಿಸಿ ಈ ಕೊರತೆಯನ್ನು ನಿವಾರಿಸಿಕೊಂಡಿದೆ. ಸಮುದ್ರದ ನೀರು ಅಳಿವೆಯ ಮೂಲಕ ಹರಿದು ಹೊಲದಂತಹ ಪ್ರದೇಶ ಸೇರುತ್ತದೆ. ಸ್ವಲ್ಪ ಸಾಂದ್ರವಾಗುತ್ತಲೇ ಕೆಳಗಿನ ಹೊಲಕ್ಕೆ ಹರಿಯುತ್ತದೆ. ಹೀಗೆ ಆರು ಹಂತಗಳಲ್ಲಿ ಹರಳು ಉಪ್ಪಾಗಿ ಬದಲಾಗುತ್ತದೆ. ನೂರಾರು ಜನರಿಗೆ ಇಲ್ಲಿ ಉದ್ಯೋಗ ಸಿಕ್ಕಿದೆ. ಮಾಲೀಕರಿಗೂ ಲಾಭವಾಗುತ್ತಿದೆ. ಸಹಕಾರಿ ವ್ಯವಸ್ಥೆಯೊಂದು ಕೋಟ್ಯಂತರ ರುಪಾಯಿ ವ್ಯವಹಾರ ಮಾಡುತ್ತ ರುಚಿಕರವಾದ ಉಪ್ಪನ್ನು ದೇಶದಾದ್ಯಂತ ಹಂಚುತ್ತಿದೆ. ಅನೇಕ ಸಲ ಮಳೆಯಿಂದಾಗಿ ದಾಸ್ತಾನಿರಿಸಿದ ಲಕ್ಷಾಂತರ ರುಪಾಯಿ ಮೌಲ್ಯದ ಉಪ್ಪು ಕರಗಿದ್ದೂ ಇದೆ. ಆದರೂ ಸ್ವರ್ಣ ಮಹೋತ್ಸವದ ವರ್ಷ 18 ಸಾವಿರ ಮೆಟ್ರಿಕ್ ಟನ್‌ನಷ್ಟು ಉಪ್ಪು ತಯಾರಿಸಿ ಸರ್ವಕಾಲಿಕ ದಾಖಲೆ ಬರೆದಿತ್ತು.
ಸಾನುವಿನ ಸಾಣೆಕಟ್ಟಾ
1775ರಲ್ಲಿ ಸಮುದ್ರದ ಹಿನ್ನೀರು ಅಘನಾಶಿನಿ ಅಳಿವೆಯ ಮೂಲಕ ಭರತ ಮತ್ತು ಇಳಿತದ ಸಂದರ್ಭದಲ್ಲಿ ಒಳನುಗ್ಗುವ ಕೊಲ್ಲಿಗೆ ತೊರ್ಕೆ ಮತ್ತು ಗೋಕರ್ಣದಿಂದ ತದಡಿಗೆ ಹೋಗುವ ದಾರಿಯ ಎರಡು ಗುಡ್ಡಗಳನ್ನು ಜೋಡಿಸುವ ಒಂದು ಒಡ್ಡು ನಿರ್ಮಾಣವಾಯಿತು. ಸಾನು ನಾಯ್ಕ ಎಂಬಾತ ಈ ಒಡ್ಡು ನಿರ್ಮಿಸಿದ್ದರಿಂದಾಗಿ ಊರಿಗೆ ಸಾಣೆಕಟ್ಟಾ ಎನ್ನುವ ಹೆಸರಾಯಿತಂತೆ. ಸಾನು ನಾಯ್ಕ ಹಳ್ಳಿಯ ಒಬ್ಬ ಅವಿದ್ಯಾವಂತನಾದರೂ ಆತನ ತಾಂತ್ರಿಕ ಕೌಶಲ್ಯದಿಂದಾಗಿ 400 ಎಕರೆಗಳಲ್ಲಿ ಉಪ್ಪು ತಯಾರಿಸಲು ಅನುಕೂಲವಾಯಿತು. ಇಲ್ಲಿ ಹನ್ನೆ ಎಂಬ ಹುಲ್ಲು ಬೆಳೆಯುತ್ತಿದ್ದುದರಿಂದ ಹನ್ನೇಬಯಲು ಎನ್ನುವ ಹೆಸರೂ ಇತ್ತು. 1863ರಲ್ಲಿ ಕಂದಾಯ ಇಲಾಖೆ ನಾಗರ ಬಯಲು ಎಂಬ ಹೆಸರಿಟ್ಟಿತು.
-ಚಿತ್ರ-ಲೇಖನ: ಪ.ರಾಮಕೃಷ್ಣ ಶಾಸ್ತ್ರಿ