ಒಂದು ಹಳ್ಳಿ. ಆ ಹಳ್ಳಿಯಲ್ಲೊಬ್ಬ ಕುರಿಕಾಯುವ ಹುಡುಗ. ಆತ ಕುರಿಗಳನ್ನು ಮೇಯಿಸಲು ಪಕ್ಕದ ಬೆಟ್ಟದ ತಪ್ಪಲಿಗೆ ಹೋಗುತ್ತಿದ್ದ. ಆತ ಅಲ್ಲಿ ಹಾಡು ಹೇಳಿಕೊಂಡು ಆನಂದದಿಂದ ಕಾಲ ಕಳೆಯುತ್ತಿದ್ದ.
ಒಂದಿ ದಿನ ರಾಜ ಬೇಟೆ ಆಡುತ್ತಾ ಅದೇ ಬೆಟ್ಟದ ತಪ್ಪಲಿಗೆ ಬಂದ. ಕುರಿಕಾಯುವ ಹುಡುಗ ಆನಂದದಿಂದ ಹಾಡು ಹೇಳುತ್ತಿದ್ದುದನ್ನು ಕೇಳಿ ಆತನ ಬಳಿಗೆ ಬಂದು 'ಮಗು ನೀನು ಇಷ್ಟೊಂದು ಆನಂದದಿಂದ ಕುರಿ ಮೇಯಿಸುತ್ತಿರುವೆಯಲ್ಲ, ಇದಕ್ಕೆ ಕಾರಣ ಏನು?' ಎಂದ.
ಹುಡುಗ ನಗುತ್ತ 'ನನ್ನ ಬಳಿ ನಿಮಗಿಂತ ಹೆಚ್ಚು ಸಂಪತ್ತಿದೆ. ನನ್ನ ಸಂಪತ್ತು ಈ ಆಕಾಶ, ಭೂಮಿ, ಬೆಟ್ಟ ಗುಡ್ಡ, ಮರಗಿಡಗಳೇ ಆಗಿರುವಾಗ ನನಗೆ ಇನ್ನೇನು ಬೇಕು? ಪ್ರತಿದಿನ ಈ ಎಲ್ಲವನ್ನೂ ನೋಡುತ್ತಾ ಆನಂದದಿಂದ ಹಾಡುತ್ತಾ ಕುರಿಮೇಯಿಸಿಕೊಂಡಿದ್ದೇನೆ. ಈ ತಂಪಾದ ಗಾಳಿ, ನನಗೆ ಮತ್ತಷ್ಟು ಆನಂದ ನೀಡಿದೆ' ಎಂದನು.
ಅಸಲು ರಹಸ್ಯ
ಒಬ್ಬ ಧನಿಕ ರೈತನಿದ್ದ. ಅವನಿಗೊಬ್ಬ ಮಗಳಿದ್ದಳು. ಅವಳಿಗೆ ಮದುವೆ ನಿಶ್ಚಯವಾಯಿತು. ಮದುವೆಯ ಸಿದ್ಧತೆ ಜೋರಾಗಿ ನಡೆಯುತ್ತಿತ್ತು. ರೈತನ ಎತ್ತುಗಳಿಗೆ ಕೆಲಸವೂ ಜಾಸ್ತಿಯಾಯಿತು. ಅವುಗಳಿಗೆ ಸರಿಯಾದ ತಿಂಡಿ, ವಿಶ್ರಾಂತಿ ಇಲ್ಲದಾಯಿತು. ಅವು ತಮ್ಮೊಳಗೆ 'ನೋಡಿದಿರಾ, ಒಡೆಯನ ಮಗಳ ಮದುವೆಗೆ ನಾವೆಲ್ಲಾ ಮೈಮುರಿದು ದುಡಿದು ಸಾಯುತ್ತಿದ್ದೇವೆ. ನಮಗಿಂತ ಆ ಕುರಿಗಳೂ, ಆಡುಗಳೂ ಎಷ್ಟೋ ವಾಸಿ. ಅವುಗಳಿಗೆ ಇತ್ತೀಚೆಗೆ ಜಾಸ್ತಿ ತಿಂಡಿ ಕೊಟ್ಟು ಪೋಷಿಸುತ್ತಿದ್ದಾರೆ. ನಮ್ಮ ತಿಂಡಿ ವಿಷಯ ನೋಡುವವರೇ ಇಲ್ಲ'. ಎಂದು ಮಾತಾಡಿಕೊಂಡವು.
ಇದನ್ನು ಕೇಳಿದ ನಾಯಿ- 'ಅಯ್ಯೋ ಮೂಢರಾ! ಆಡು, ಕುರಿಗಳನ್ನು ಮದುವೆ ಔತಣಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಅದಕ್ಕೇ ಅವುಗಳಿಗೆ ಅಷ್ಟೊಂದು ತಿನಿಸುತ್ತಿದ್ದಾರೆ. ನೀವೇಕೆ ಅಸೂಯೆ ಪಡುತ್ತೀರಿ' ಎಂದಿತು.
- ಶಿವರಾಮ ಭಟ್, ಹತ್ತೊಕ್ಕಲು