ಈ ಕ್ಷಣ ನಿಮ್ಮದು, ಕಾಪಾಡಿಕೊಳ್ಳಿ
ಯಾವುದಕ್ಕೂ ನಮಗೆ ಸಮಯ ಎಂಬುದು ಇರುವುದೇ ಇಲ್ಲ. ಸಮಯವೆಂಬುದನ್ನು ನಾವು ಮಾಡಿಕೊಳ್ಳಬೇಕಷ್ಟೆ. ಯಾರನ್ನೇ ಕೇಳಿದರೂ ಈಗ ಟೈಮಿಲ್ಲ ಎಂತಲೇ ಹೇಳುವುದು. ಉಂಡಾಡಿಯಾಗಿ, ಸದಾ ಕಾಲ ನಿದ್ರಿಸುತ್ತಲೇ ಇರುವ ಶುದ್ಧ ಸೋಂಬೇರಿಯನ್ನು ಕೇಳಿದರೂ ನಿಮಗೆ ಇದೇ ಉತ್ತರ ಬರುತ್ತದೆ. ಸಮಯ ಎಂಬುದೊಂದು ನೆಪವಷ್ಟೆ. ಯಾವುದೇ ಕೆಲಸವಿರಲಿ, ಅದನ್ನು ಮಾಡಲಿಕ್ಕಾಗದ ಔದಾಸಿನ್ಯ ಅಥವಾ ಆ ಬಗ್ಗೆ ನಮಗೆ ಇಲ್ಲದ ಮನಸ್ಸುಗಳಿಂದಾಗಿ ನಾವು ಸಮಯ ಇಲ್ಲವೆಂಬ ನೆಪವನ್ನು ಹೇಳುತ್ತಿರುತ್ತೇವೆ. ನೈಜ ಸಂಗತಿ ಏನೆಂದರೆ ನಮಗೆ ಆ ಕೆಲಸವನ್ನು ಮಾಡಲೇಬೇಕೆನಿಸಿದರೆ ಅದು ಎಂಥದ್ದೇ ಒತ್ತಡವಿದ್ದರೂ, ಎಷ್ಟೇ ಕೆಲಸಗಳಿದ್ದರೂ ಅದನ್ನೆಲ್ಲ ಬಿಟ್ಟು ನಾವು ಹೊಸ ಕೆಲಸಕ್ಕೆ ತೊಡಗಿಸಿಕೊಳ್ಳಲು ಸಾಧ್ಯ. ಸಮಯವೆನ್ನುವುದು ಯಾವತ್ತಿಗೂ ಸಿಗುವುದಲ್ಲ. ಅದೊಂದು ರೀತಿಯಲ್ಲಿ ಅವಕಾಶವಿದ್ದಂತೆ. ಅದನ್ನು ಎಲ್ಲಿಯೂ ಖರೀದಿಸಲು, ಹುಡುಕಿಕೊಳ್ಳಲು ಸಾಧ್ಯವಿಲ್ಲ. ಸಮಯ ಮತ್ತು ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಹಾಗೆ ಸೃಷ್ಟಿಸಿಕೊಳ್ಳುವ ಸಮಯವನ್ನು ಕೊಲ್ಲದೇ ಯಶಸ್ವಿಯಾಗಿ ಬಳಸಿಕೊಳ್ಳುವುದೂ ಅಷ್ಟೇ ಮುಖ್ಯವಾದುದು. ಬಹುತೇಕರು ಸಮಯದ ಅತ್ಯಂತ ಸಣ್ಣ ಘಟಕಗಳನ್ನು ನಿರ್ಲಕ್ಷ್ಯಿಸುತ್ತಾರೆ. ಉದಾಹರಣೆಗೆ ಒಂದು ಸೆಕೆಂಡ್, ಒಂದೈದು ನಿಮಿಷ, ಕಾಲುಗಂಟೆ... ಹೀಗೆ, ಇವೆಲ್ಲಾ ನಮಗೆ ಮಹತ್ವದ ಕಾಲಾವಕಾಶ ಅಂಥ ಅನ್ನಿಸುವುದೇ ಇಲ್ಲ. ಹತ್ತು ನಿಮಿಷ ತಾನೆ ಏನು ಮಹಾ ಸಮಯವದು? ಹೋದರೆ ಹೋಗಲಿ ಎಂದುಕೊಳ್ಳುವವರೇ ಹೆಚ್ಚು. ಆದರೆ ಒಂದು ಸೆಕೆಂಡ್ನಲ್ಲಿ ಏನೆಲ್ಲ ಆಗಿ ಹೋಗಲು ಸಾಧ್ಯ ಎಂಬುದರ ಅರಿವೇ ಇರುವುದಿಲ್ಲ. ನೀವು ವಾಹನ ಚಲಾಯಿಸುತ್ತಿರುವಾಗ ಒಂದೇ ಒಂದು ಸೆಕೆಂಡ್ ಕಣ್ಮುಚ್ಚಿದರೂ ಅಪಘಾತದ ಸಾಧ್ಯತೆಯಿದೆ. ಹಾಗೆಯೇ ಐದೇ ಐದು ನಿಮಿಷ ಮುಂಚೆ ಬಂದಿದ್ದರೆ ಬಸ್ ಸಿಗುತ್ತಿತ್ತು ಎಂಬುದನ್ನು ಕೇಳುತ್ತಲೇ ಇರುತ್ತೇವೆ. ಅಂದರೆ ಸಮಯದ ಅತ್ಯಂತ ಸಣ್ಣ ಪರಿಮಾಣವನ್ನು ನಾವು ಪಾಲಿಸಲು ಗೊತ್ತಿದ್ದರೆ ಮಾತ್ರವೇ ಅದರ ಮೌಲ್ಯವನ್ನು ಅರಿಯಲು ಸಾಧ್ಯ. ನಿಮಿಷಗಳ ಬಗ್ಗೆ ಎಚ್ಚರದಿಂದ ಇರುವವನು ಮಾತ್ರ ಗಂಟೆಗಳನ್ನು ಅವನಿಗಾಗಿ ಉಳಿಸಿಕೊಳ್ಳಲು ಸಾಧ್ಯ. ದಿನದ 24 ಗಂಟೆಗಳೂ ನಾವು ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ಇದ್ದೇ ಇರುತ್ತೇವೆ. ಹೀಗಾಗಿ ಯಾರ ಬಳಿಯೂ ಸಮಯವೆನ್ನುವುದು ಇರುವುದೇ ಇಲ್ಲ. ಅದನ್ನು ನಿರ್ವಹಣೆ ಮಾಡಿಕೊಳ್ಳುವುದು ಜೀವನದ ಅತ್ಯಂತ ಮೊದಲ, ಮಹತ್ವದ ಶಿಸ್ತು ಎನಿಸಿಕೊಳ್ಳುತ್ತದೆ. ಅದೊಂದು ಕಲೆ. ನಿಗದಿತ ಸಮಯದಲ್ಲಿ ನಿಗದಿತ ಕೆಲಸವನ್ನು ಮಾಡಿ ಮುಗಿಸದಿದ್ದರೆ ಅದಕ್ಕೆ ಮತ್ಯಾವತ್ತಿಗೂ ಸಮಯ ಸಿಗುವುದೇ ಇಲ್ಲ. ಸಮಯವೆಂದರೆ ಸಮುದ್ರದ ಅಲೆಗಳಿದ್ದಂತೆ. ಅವೆರಡೂ ಯಾವತ್ತಿಗೂ ಯಾರಿಗೂ ಕಾಯುವುದೇ ಇಲ್ಲ. ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಅದನ್ನು ತಡೆ ಹಿಡಿದು ನಿಲ್ಲಿಸಲೂ ಸಾಧ್ಯ ಇಲ್ಲ ಎಂಬುದನ್ನು ನೆನಪಿಡಿ. ಬದುಕಿನ ಈ ಕ್ಷಣ ನಿಮ್ಮದು, ಅದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

