ಬೈಟುಕಾಫಿ

ದ್ರಾಕ್ಷಿ ಬೀಜದಲ್ಲೂ ಇದೆ ಮಾಯಾ ಶಕ್ತಿ!

Published On :

ನಿಮಗೆ ಆಶ್ಚರ್ಯ ಆಗಬಹುದು. ದ್ರಾಕ್ಷಿಯಂತೆ ಅದರ ಬೀಜ ಕೂಡ ಕೊಲೆಸ್ಟರಾಲ್ ತಗ್ಗಿಸುವಲ್ಲಿ ಉಪಕಾರಿ. ಹಾಗಂತ ನೇರವಾಗಿ ಬೀಜವನ್ನೇ ತಿಂದು ಬಿಡುವುದು ಅಥವಾ ಬೀಜ ಸಹಿತ ದ್ರಾಕ್ಷಿ ತಿನ್ನುವುದು ಸರಿಯಲ್ಲ. ಬೀಜದಿಂದ ಎಣ್ಣೆ ಮಾಡುತ್ತಾರೆ. 'ಗ್ರೇಪ್ ಸೀಡ್ ಆಯಿಲ್‌' ಈಗ ಬೆಂಗಳೂರಿನಂಥ ನಗರಗಳಲ್ಲೂ ಪ್ರಸಿದ್ಧಿ ಪಡೆಯುತ್ತಿದೆ. ಮಾಲ್‌ಗಳಲ್ಲಿ, ಪ್ರಮುಖ ಆಯುರ್ವೇದ ಔಷಧ ಅಂಗಡಿಗಳಲ್ಲಿ, ಸೌಂದರ್ಯವರ್ಧಕ ಮಳಿಗೆಗಳಲ್ಲಿ ಸಿಗುತ್ತಿದೆ. ಈ ಎಣ್ಣೆಯನ್ನು ನಿಯಮಿತವಾಗಿ ಬಳಸಿದರೆ ಕೊಲೆಸ್ಟರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದರ ಪ್ರಮುಖ ಗುಣ ಎಂದರೆ ಒಳ್ಳೆಯ ಅಂದರೆ ಎಚ್‌ಡಿಎಲ್ ಕೊಲೆಸ್ಟರಾಲ್ ಹೆಚ್ಚಿಸುವುದು. ವೈನ್ ತಯಾರಿಸಿದ ನಂತರ ಉಳಿಯುವ ಬೀಜದಿಂದ ಎಣ್ಣೆ ತೆಗೆಯುತ್ತಾರೆ. ದ್ರಾಕ್ಷಿಯ ಉಪ ಉತ್ಪನ್ನಗಳಲ್ಲಿ ಇದೂ ಒಂದು ಎನ್ನಬಹುದು.
ಯೂರೋಪ್ ರಾಷ್ಟ್ರಗಳಲ್ಲಿ ದ್ರಾಕ್ಷಿ ಬೀಜದ ಎಣ್ಣೆ ಬಳಕೆ ಲಾಗಾಯ್ತಿನಿಂದಲೂ ಇದೆ. ಅಲ್ಲಿ ಇದು ಪ್ರಮುಖ ಸೌಂದರ್ಯವರ್ಧಕ. ತ್ವಚೆಯನ್ನು ಮೃದುವಾಗಿಟ್ಟು ಹೊಳಪಾಗಿಸಲು, ಮೊಡವೆಗಳನ್ನು ಹೋಗಲಾಡಿಸಲು, ಚರ್ಮದ ಕಲೆ ಮತ್ತು ಸುಕ್ಕುಗಳ ನಿವಾರಣೆಗೆ ಇದನ್ನು ಬಳಸಲಾಗುತ್ತಿತ್ತು. ಶೇವಿಂಗ್ ಕ್ರೀಂ ಆಗಿಯೂ ಉಪಯೋಗಿಸುತ್ತಿದ್ದರು. ಕ್ರಮೇಣ ಜಗತ್ತಿನ ಇತರೆಡೆ ಇದರ ಬಳಕೆ ವ್ಯಾಪಕವಾಯಿತು. ಅಡುಗೆಯಲ್ಲೂ ಇದನ್ನು ಬಳಸುತ್ತಾರೆ. ಸಾಲಾಡ್‌ಗಳಲ್ಲಿ ಉಪಯೋಗಿಸುವುದು ಹೆಚ್ಚು.
ಹೃದ್ರೋಗಿಗಳ ಮೇಲೆ ಇದರ ಪ್ರಯೋಗ ಕೈಗೊಂಡವರಲ್ಲಿ ಮೊದಲಿಗರು ಅಮೆರಿಕದ ಹೃದ್ರೋಗ ತಜ್ಞ ಡಾ.ಡೆವಿಡ್ ಟಿ. ನ್ಯಾಶ್ ಅವರು. ಎಚ್‌ಡಿಎಲ್ ಕೊಲೆಸ್ಟರಾಲ್ ಮಟ್ಟ 45ಕ್ಕಿಂತ ಕಡಿಮೆ ಇದ್ದ 23 ಪುರುಷ ಮತ್ತು ಮಹಿಳೆಯರನ್ನು ಆರಿಸಿಕೊಂಡು, ನಾಲ್ಕು ವಾರ ನಿತ್ಯ ಎರಡು ಚಹಾ ಚಮಚದಷ್ಟು ಗ್ರೇಪ್ ಸೀಡ್ ಆಯಿಲ್ ಸೇವನೆಗೆ ಶಿಫಾರಸ್ಸು ಮಾಡಿದರು. ಬೇರೆ ಯಾವುದೇ ಡಯಟ್ ಅನ್ನು ಅವರಿಗೆ ಸೂಚಿಸಿರಲಿಲ್ಲ. ತಮ್ಮ ದೈನಂದಿನ ಆಹಾರದ ಜತೆಯಲ್ಲೇ ಇದನ್ನು ಸೇವಿಸಬೇಕಿತ್ತು. ಒಂದು ತಿಂಗಳ ನಂತರ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಸರಾಸರಿ ಶೇ 14ರಷ್ಟು ಏರಿಕೆ ಕಂಡುಬಂದಿತ್ತು.
ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ವಿಟಮಿನ್ ಡಿ, ಇ ಮತ್ತು ಸಿ ಹೇರಳವಾಗಿವೆ. ಅನೇಕ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಎಚ್‌ಡಿಎಲ್ ಹೆಚ್ಚಳಕ್ಕೆ ಇವೇ ಕಾರಣ ಎಂದು ಭಾವಿಸಲಾಗಿದೆ. 'ಅಪರೂಪಕ್ಕೆ ಕೆಲವರ ಮೇಲೆ ಇದು ಪರಿಣಾಮ ಬೀರದೇ ಇರಬಹುದು. ಆದರೆ ಅಡ್ಡ ಪರಿಣಾಮವಂತೂ ಇಲ್ಲ' ಎನ್ನುತ್ತಾರೆ ಡಾ.ನ್ಯಾಶ್.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.