ಒಲವೇ ನಮ್ಮ ಬದುಕು

'ಮದುವೆಯಾಗು..' ಪೋಷಕರು ಈ ಬಂಧಕ್ಕೆ ಬಿದ್ದು ಕಡಿದಿರುವುದೋ ಏನೋ ಗೊತ್ತಿಲ್ಲ. ಮಕ್ಕಳು ಮಾತ್ರ ಒಂದು ವಯಸ್ಸಿಗೆ ಬಂದ ಮೇಲೆ ಸಪ್ತಪದಿ ತುಳಿಯುವಂತೆ ಒತ್ತಾಯಿಸುತ್ತಲೇ ಇರುತ್ತಾರೆ.
ಬಹುಶಃ ಅವರು ಆಡಿದ ಜಗಳದಲ್ಲಿ, ತೆಗೆದುಕೊಳ್ಳುವ ರಿಸ್ಕಲ್ಲಿ ಸುಖ ಕಂಡಿರಬೇಕು. ಅದಕ್ಕೆ ಮದುವೆ ಎಂಬ ಬಂಧನವನ್ನು ಹಿರಿಯರು ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರುವುದು. ಆದರೆ, ಈಗೀಗ ಜೋಡಿಯೊಂದು ಸಾಯುವವರೆಗೂ ಒಟ್ಟಾಗಿ ಬಾಳೋದನ್ನು ಯೋಚಿಸುವುದ ಬಿಟ್ಟು, ಬೇರೆ ಆಗುವುದನ್ನೇ ಚಿಂತಿಸುತ್ತಿರುತ್ತದೆ.
ಇವರೆಲ್ಲರಿಗೂ ಬರ್ಬರಾ ಕೂಪರ್ ರೋಲ್ ಮಾಡೆಲ್. ಪತಿ ಹ್ಯಾರಿಯೊಂದಿಗೆ ಏಳು ದಶಕಗಳ ಕಾಲ ಜೀವನ ನಡೆಸಿದ ಈಕೆ ಅಷ್ಟು ಸುದೀರ್ಘ ಕಾಲ ಒಬ್ಬನೊಂದಿಗೇ, ಅದೂ ಖುಷ್ ಖುಷ್ಯಾಗಿಯೇ ಬದುಕಿದ್ದು ಹೇಗೆ ಎಂಬುದನ್ನು 'ಫಾಲ್ ಇನ್ ಲವ್ ಫಾರ್ ಲೈಫ್' ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಬರ್ಬರಾ ಪುಸ್ತಕದಲ್ಲಿ ಹೇಳಿದ್ದನ್ನು ಆಕೆ ಜೀವನದಲ್ಲಿ ಇಂಪ್ಲಿಮೆಂಟ್ ಮಾಡಿಕೊಂಡಿದ್ದರಿಂದಲೇ ಅಷ್ಟು ಸುದೀರ್ಘ ಕಾಲ ಅವಳ ದಾಂಪತ್ಯ ಸುಖವಾಗಿತ್ತು.
ಚೆನ್ನಾಗಿ, ಅರ್ಥಪೂರ್ಣವಾಗಿ ಜಗಳವಾಡಿ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂದು ಮುಂದು ನೋಡಬೇಡಿ ಹಾಗೂ ಸದಾ ನಗುತ್ತಲೇ ಇರಿ ಎನ್ನುವ ಬರ್ಬರಾ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಾಗ ತುಸು ಕೇರ್ಫುಲ್ ಆಗಿರಿ ಎಂದು ಎಚ್ಚರಿಸುತ್ತಾಳೆ. ಅಟ್ರ್ಯಾಕ್ಟಿವ್ ಇದಾನೆ/ಳೆ ಎನ್ನುವ ಒಂದೇ ಕಾರಣಕ್ಕೆ ಯಾರ್ಯಾರಿಗೋ ಹೃದಯ ಕೊಟ್ಟು ಬಿಡಬೇಡಿ. ನಿಮ್ಮ ಆಸೆ, ಆಕಾಂಕ್ಷೆಗಳೇನು? ಬೇಡಿಕೆಗಳೇನು? ಅವುಗಳಲ್ಲಿ ಎದುರಿಗೆ ಇರುವವರು ಎಷ್ಟು ಫುಲ್ಫಿಲ್ ಮಾಡ್ತಾರೆ ಎಂಬುದನ್ನು ಪಟ್ಟಿ ಮಾಡಿಕೊಂಡೇ, ಸಾಂಗತ್ಯ ನೀಡಬಲ್ಲರು ಎಂದೆನಿಸಿದರೆ ಮಾತ್ರ ಮದುವೆಯಾಗಿ ಎನ್ನುತ್ತಾಳೆ.
ಹಾಗಂತ ಬಯಸಿದ್ದೆಲ್ಲ ಸಿಗದು ಬಾಳಲ್ಲಿ. ಕೆಲವೊಂದನ್ನು ನಾವೇ ಒತ್ತಾಯಪೂರ್ವಕವಾಗಿ ಸಿಕ್ಕಿಸಿಕೊಳ್ಳಬೇಕು. ಅದರಲ್ಲೂ ದಾಂಪತ್ಯದಲ್ಲಿ ಸಂಗಾತಿಯೊಂದಿಗೆ ಜಗಳವಾಡಿದಾಗಲೆಲ್ಲಾ 'ಜೀವನವೇ ಮುಗೀತು' ಎನಿಸುತ್ತಲೇ ಇರುತ್ತದೆ. ಆದರೆ, ಅಲ್ಲಿಂದಲೇ ಮತ್ತೆ ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಲು ಆರಂಭಿಸಬೇಕು. ಮುಕ್ತಾಯದಿಂದ ಹೊಸ ಜೀವನ ಆರಂಭಿಸಿ, ಜೀವನದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕೆಂಬುದು ಬರ್ಬರಾ ನಿಲುವು. ಜೊತೆಗ ಆಕೆ ಜೀವನದಲ್ಲಿ ಅಳವಡಿಸಿಕೊಂಡ ಕೆಲವು ಟಿಪ್ಸ್ಗಳನ್ನು ಈ ಪುಸ್ತಕದಲ್ಲಿ ಹೇಳಿದ್ದಾಳೆ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಮನಸ್ಸು ಮಾಡಿ. ಬರ್ಬರಾ ಹೇಳಿದ್ದನ್ನು ಜೀವನದಲ್ಲಿ ಅಳವಡಿಸಿಕೊಂಡು ಬರ್ಬಾದ್ ಆಗುತ್ತಿರುವ ಲೈಫ್ಗೆ ಜೀವ ತುಂಬಿ.
ಲವ್ ಮಾಡೋಕೆ ಟೈಂ ಬೇಕಾ?
ಈಗೀಗ ಬಹುತೇಕರು ಅದ್ರಲ್ಲೂ ಎಂಎನ್ಸಿಗಳಲ್ಲಿ ರಾತ್ರಿ ಬೆಳಗೂ ದುಡಿಯುವ ದಂಪತಿ ಜೊತೆಗೆ ಮಲಗ್ಲಿಕ್ಕೂ ಸುಸ್ತು ಎನ್ನುತ್ತಾರೆ. ಇವರಿಗೆ ಜೀವನದಲ್ಲಿ ಯಾವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂಬುದೇ ಗೊತ್ತಿಲ್ಲ. ಅಲ್ಲ ನಿಮ್ಮ ಸಂಗಾತಿಯನ್ನು ಪ್ರೇಮಿಸಲು, ಇರುವ ಪ್ರೀತಿಯನ್ನು ನಿವೇದಿಸಲಾಗದಷ್ಟು ದುಡಿಯುವ ಅವಶ್ಯಕತೆ ಏನು ಎಂಬುದು ಬರ್ಬರಾ ಕ್ವೆಷ್ಚನ್. ಪ್ರಾಯ ಇರುವಾಗ ಎಲ್ಲವೂ ಓಕೆ. ಆದರೆ, ಬದುಕಿನ ಮುಸ್ಸಂಜೆ ಹೊತ್ತಲ್ಲಿ ಸಂಗಾತಿಯನ್ನು ಪ್ರೀತಿಸಲೂ ಸಮಯ ನೀಡದೇ, ಜೀವನದಲ್ಲಿ ಎಂಥ ದೊಡ್ಡ ತಪ್ಪು ಮಾಡಿದೆವು ಎಂದು ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದರೆ, ಸಮಯ, ಶಕ್ತಿ ಎರಡೂ ಆಗ ನಿಮ್ಮ ಕೈಯಲ್ಲಿರೋಲ್ಲ. ಉದ್ಯೋಗದಲ್ಲಿ ಎಷ್ಟೇ ಬ್ಯುಸಿಯಿದ್ದರೂ, ಫ್ಯಾಮಿಲಿಗೆಂದು ತುಸು ಸಮಯ ಮೀಸಲಿಡಿ.
ಜಗಳವಾಡುವಾಗ ಎಚ್ಚರವಿರಲಿ
ಪತಿ-ಪತ್ನಿ ಜಗಳವಾಡ್ತಾರೆ. ಸಿಟ್ಟು ಬಂದಾಗ ಏನ್ ಹೇಳ್ತಾರೆ? ಏನ್ ಬಿಡ್ತಾರೆ ಎನ್ನೋದೇ ಗೊತ್ತಾಗೋಲ್ಲ. ಹಿಂದು ಮುಂದು ನೋಡದೆ ಮನಸ್ಸಿಗೆ ಬಂದಿದ್ದನ್ನೆಲ್ಲ ಒದರಿ ಬಿಡುತ್ತಾರೆ. ಹೋಗಲಿ. ಕೋಪ, ತಾಪ ಮನುಷ್ಯನಿಗಲ್ಲದೇ ಇನ್ಯಾರಿಗೆ ಬರುತ್ತೆ ಹೇಳಿ? ಸಿಟ್ಟಲ್ಲಿ ಆಡಿದ ಮಾತುಗಳಿಗೆ ಒಂದು 'ಸಾರಿ'. ಊಹ್ಞೂ...ಇಬ್ಬರೂ ಕೇಳಲು ಒಪ್ಪುವುದಿಲ್ಲ. ಬಹಳಷ್ಟು ಸಮಸ್ಯೆಗಳನ್ನು ಒಂದು 'ಸಿಂಪಲ್ಲಾಗಿ ಸಾರಿ' ಕೇಳುವ ಮೂಲಕ ಬಗೆಹರಿಸಿಕೊಳ್ಳಬಹುದು. ಆಡಿದ ಜಗಳಕ್ಕೆ ಒಂದು ಫುಲ್ಸ್ಟಾಪ್ ನೀಡಲೇಬೇಕು. ಇಲ್ಲದಿದ್ದರೆ ಅದು 'ಬೂದಿ ಮುಚ್ಚಿದ ಕೆಂಡದಂತೆ' ಇರುತ್ತದೆ. ಇನ್ಯಾವತ್ತೋ ಸ್ಫೋಟಗೊಳ್ಳುತ್ತದೆ. ಆಡಿದ ಜಗಳಕ್ಕೆ ಶುದ್ಧ ಮನಸ್ಸಿನಿಂದ ಕ್ಷಮೆ ಯಾಚಿಸುವ ಮೂಲಕ ತೆರೆ ಎಳೆದುಬಿಡಿ. ಚೂಯಿಂಗ್ಗಮ್ನಂತೆ ಎಳೆದಾಡಬೇಡಿ. ಸೂಕ್ಷ್ಮ ಮನಸ್ಸಿನವರಾದರೆ ಸಿಟ್ಟಲ್ಲಿ ಆಡಿದ ಮಾತುಗಳು ಸದಾ ತಲೇಲಿ ಕೊರೀತಾ ಇರುತ್ತೆ. ಅದರಿಂದ ಸಂಬಂಧದಲ್ಲಿ ಕಿರಿಕಿರಿ ತಪ್ಪೋಲ್ಲ.
ಅನಪೇಕ್ಷಿತ ಮುದ್ದು ಅಪ್ಪುಗೆಗಳಿರಲಿ
ದಾಂಪತ್ಯದಲ್ಲಿ ಏರು ಪೇರುಗಳು ಇದ್ದಿದ್ದೇ. ಜೀವನದಲ್ಲಿ ಎಲ್ಲವೂ ಮೊನೋಟನಸ್ ಆಗಿ ಬಿಡಬಾರದು. ಕೆಲವೊಮ್ಮೆ ಚೇಂಜ್ ತಂದುಕೊಳ್ಳಲು ಟೈಂ ಅಥವಾ ಆರ್ಥಿಕ ಸುಸ್ಥಿತಿ ಚೆನ್ನಾಗಿಲ್ಲದೇ ಇರಬಹುದು. ಬಿಟ್ಹಾಕಿ. ಅಪರೂಪಕ್ಕೊಮ್ಮೆ ಸರ್ಪ್ರೈಸ್ ಗಿಫ್ಟ್ ಕೊಡ್ಲಿಕ್ಕೆ ಆಗದೇ ಹೋದರೂ ಪರ್ವಾಗಿಲ್ಲ, ಸರಪ್ರೈಸ್ ಅಪ್ಪುಗೆ, ಕಿಸ್. ಕೊಡೋಕೆ ಏನ್ ಕಷ್ಟ? ವಿಶೇಷವಾಗಿ ಇಬ್ಬರಲ್ಲಿ ಯಾರಾದ್ರೂ ಮುನಿಸಿಕೊಂಡಿದ್ದರೆ ಇಂಥದ್ದೊಂದು ಪ್ರಯೋಗಕ್ಕೆ ಮುಂದಾದರೆ ಎಲ್ಲವೂ ಸರಿ ಹೋಗುತ್ತದೆ. ಒಬ್ಬರನ್ನೊಬ್ಬರು ಅಪ್ರಿಷಿಯೇಟ್ ಮಾಡಿಕೊಳ್ಲಿಕ್ಕೆ, ಗೌರವಿಸೋಕೆ, ಆರಾಧಿಸೋಕೆ ಕಾರಣಗಳ್ಯಾಕೆ? ಇಬ್ಬರ ನಡುವೆ ಜಗಳ ತಾರಕಕ್ಕೇರಿದರೂ ರಾತ್ರಿ ಅಟ್ಲೀಸ್ಟ್ ಕೈ ಹಿಡಿದುಕೊಂಡು ಮಲಗಿಕೊಳ್ಳಿ.
ಕಾಣದ ಕಡಲಿಗೆ ಹಂಬಲಿಸದಿರಲಿ ಮನ
ಸಾಮಾನ್ಯವಾಗಿ ಅನೈತಿಕ ಸಂಬಂಧವಿಟ್ಟುಕೊಂಡವರು 'ನಮಗೆ ನಮ್ಮ ಸಂಗಾತಿ ಸೋಲ್ಮೇಟ್ ಎನ್ನಿಸೋಲ್ಲ್ಲ. ನಮ್ಮ ವೇವ್ಲೆಂಥ್ಗೆ ಚೂರೂ ಮ್ಯಾಚ್ ಆಗೋಲ್ಲ. ನನ್ನ ಶ್ರಮದಿಂದ ಕಂಪನಿಗೆ ಸಿಕ್ಕಿರುವ ದೊಡ್ಡ ಪ್ರಾಜೆಕ್ಟ್ ಬಗ್ಗೆ ಮಾತನಾಡುತ್ತಿದ್ದರೆ, ನನ್ನ ಹೆಂಡತಿ ತಾರದ ಶ್ಯಾವಿಗೆ ಬಗ್ಗೆ ಕ್ಯಾತೆ ತೆಗೆಯುತ್ತಾಳೆ..' ಅದೂ, ಇದೂ ಆರೋಪಿಸುತ್ತಲೇ ಇರುತ್ತಾರೆ. ನೆನಪಿರಲಿ ನಿಮ್ಮ ತರಾನೇ ನಿಮ್ಮ ಸಂಗಾತಿಗೆ ನೀವೂ ಪರ್ಫೆಕ್ಟ್ ಸೋಲ್ಮೇಟ್ ಆಗಿರಲ್ಲ. ಆದರೂ ಅವರೇನೂ ಹಾದರಕ್ಕೆ ಇಳಿದಿರೋಲ್ಲ. ಯಾರೂ ಪರಿಪೂರ್ಣರಲ್ಲ. 'ಪರ್ಫೆಕ್ಟ್ ಸ್ಪೌಸ್, ಪರ್ಫೆಕ್ಟ್ ಮ್ಯಾರಿಡ್ ಲೈಫ್' ಅಂಥ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಸಂಗಾತಿಯನ್ನು ಗೌರವಿಸೋದ ಕಲಿಯಿರಿ. ಕಾಣದ ಕಡಲಿಗೆ ಮನಸ್ಸು ಏಕೆ ಹಂಬಲಿಸಬೇಕು ಹೇಳಿ?
ಕೈ ತುತ್ತು ತಿನ್ನಿಸೋಕೆ ಮಗುವಿದ್ದರೇನು?
ಮಗು ಆದ ಕೂಡಲೇ ಎಲ್ಲವೂ ಮುಗಿಯಿತು ಎಂಬ ಭಾವನೆ ಎಲ್ಲರದ್ದೂ. ಅದ್ರಲ್ಲೂ ಹೆಣ್ಣು ಮಕ್ಕಳು ಮುದುಕಿಯಾದಂತೆಯೇ ಆಡುತ್ತಾರೆ. ರೊಮ್ಯಾನ್ಸ್ಗೆ ಟೈಂ, ವಯಸ್ಸು ಯಾವುದೂ ಅಡ್ಡಿಯಾಗಕೂಡದು. ಅಷ್ಟಕ್ಕೂ ರೊಮ್ಯಾನ್ಸ್ ಎಂದರೆ ಲೈಫ್ ಅನ್ನು ಎಂಜಾಯ್ ಮಾಡೋದು ಎಂದರ್ಥ. ಅಲ್ಲಿ ಸೆಕ್ಸ್ ಹೊರತಾಗಿಯೂ ಅನೇಕ ವಿಷ್ಯಗಳಿರುತ್ತವೆ. ನಿಮ್ಮ ನಿಮ್ಮ ಭಾವನೆ, ಅಭಿರುಚಿ ತಕ್ಕಂತೆ ಖುಷ್ ಖುಷ್ಯಾಗಿರ್ಲಿಕ್ಕೇನು ದಾಡಿ?
ಸಿಗುವ ಚೂರು ಪಾರು ಸಮಯವನ್ನೇ ನಗ್ ನಗ್ತಾ ಕಳೆಯಿರಿ. ಮಗುವಿಗೆ ಊಟ ಮಾಡಿಸುವಾಗ ಸಂಗಾತಿಗೂ ಒಂದು ತುತ್ತು ತಿನ್ನಿಸಬಹುದು ಅಲ್ವಾ?
ಶ್ರೀಮಂತಿಕೆ ಇರಬಹುದು. ಆದರೆ, ಅದು ಸದಾ ನಮ್ಮೊಟ್ಟಿಗೆ ಇರುವುದು ಗ್ಯಾರಂಟಿ ಇಲ್ಲ. ಆದರೆ, ದಂಪತಿಯಲ್ಲಿ ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆಗಳು ಮಾತ್ರ ಸದಾ ಅಮರ. ಆಗೊಮ್ಮೆ, ಈಗೊಮ್ಮೆ ಆರ್ಥಿಕ ಸಂಕಟಗಳು ಎದುರಾಗೋದು ಮನುಷ್ಯನ ಜೀವನದಲ್ಲಿ ಸಹಜ. ಅದನ್ನೇ ದೊಡ್ಡದು ಮಾಡದೇ ಇಬ್ಬರೂ ಹೊಂದಿಕೊಂಡು ಉಳಿತಾಯದ ಬಗ್ಗೆ ಯೋಚಿಸಿ, ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಬೇಕು.
ಬಡವನಾದರೇನು, ಕೈ ತುತ್ತು ನೀಡಿ ನಿಮ್ಮ ಶ್ರೀಮಂತಿಕೆ ತೋರಿಸಿಕೊಳ್ಳಬಹುದು. ಆರ್ಥಿಕ ಸ್ಥಿತಿ ಹೇಗೇ ಇರಲಿ, ಪ್ರೀತಿ, ಪ್ರೇಮಕ್ಕೆ ಯಾವತ್ತೂ ಕುಂದಾಗದಿರಲಿ. ಇಬ್ಬರೂ ಮದುವೆಯಾದ ಮೇಲೆ ಯಾರಿಗೆ ಆರ್ಥಿಕ ಸಂಕಷ್ಟ ಎದುರಾದರೂ ಅನುಭವಿಸುವವರು ಇಬ್ಬರೂ. ಅದಕ್ಕೆ ಒಲವೇ ದಾಂಪತ್ಯದ ಬದುಕಾಗಬೇಕು.
ಇರುವ ಹಾಗೆ ಸ್ವೀಕರಿಸಿಬಿಡಿ
ಸಾಮಾನ್ಯವಾಗಿ ದಾಂಪತ್ಯದಲ್ಲಿ ಸಮಸ್ಯೆ ಆರಂಭವಾಗೋದೇ ನನ್ನ ಮೂಗಿನ ನೇರಕ್ಕೆ ನನ್ನ ಸಂಗಾತಿ ಇಲ್ಲ ಎನ್ನುವ ವಿಷಯದಿಂದ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಜೊತೆಯಾಗುವ ಗಂಡ ಹೆಂಡತಿಗೆ ತಕ್ಕಂತೆ ಇರಬೇಕು ಎಂದರೆ ಹೇಗ ಸಾಧ್ಯ? ಇಬ್ಬರೂ ಒಬ್ಬರನ್ನೊಬ್ಬರನ್ನು ಅಕ್ಸೆಪ್ಟ್ ಮಾಡಿಕೊಂಡು ಬದುಕಿದರೆ ಬಾಳು ಬಂಗಾರ. ಮೊದ ಮೊದಲು ಸಂಗಾತಿಯ ಕೆಲವು ನಡೆ ನುಡಿಗಳು ಇರಿಟೇಟ್ ಎನಿಸಬಹುದು. ಆದರೆ, ಅದನ್ನೇ ಸಹಿಸಿಕೊಳ್ಳೋದನ್ನು ಕಲಿತರೆ ಎಲ್ಲವೂ ಅಡ್ಜಸ್ಟ್ ಆಗಿ ಬಿಡುತ್ತೆ. ಅದು ಬಿಟ್ಟು ಸದಾ ಡಿವೋರ್ಸ್ ಕೊಡ್ತೀನ್ ಎಂದೇ ಹೆದರಿಸುತ್ತಿರಬೇಡಿ. ಮದುವೆಯಾಗೋದು ಬಿಡ್ಲಿಕ್ಕಲ್ಲ. ಕೂಡಿ ಬಾಳ್ಳಿಕ್ಕೆ. ಆಗಲೇ ಸ್ವರ್ಗ ಸುಖ.
ಆಗಿದ್ದಾಯಿತು, ಮರೆತು ಬಿಡಿ
ಗಂಡ ಹೆಂಡಿರಲ್ಲಿ ಬಿರುಕು ಬಿಡೋದೆ ಆಡಿದ ಜಗಳವನ್ನು ಮತ್ತೆ ಮತ್ತೆ ಕೆದಕುವುದರಿಂದ. ಒಂದ ಸಂದರ್ಭದಲ್ಲಿ, ಇರುವ ಮನಸ್ಥಿತಿಯಲ್ಲಿ ಏನಾದ್ರೂ ಹೇಳಿಯಾಗಿರುತ್ತೆ. ಅದೂ ಸಿಟ್ಟು ಬಂದಾಗ ಮನುಷ್ಯ ಅವಿವೇಕದಿಂದ ವರ್ತಿಸೋದು ಸಹಜ. ಅದನ್ನ ಇಬ್ಬರಲ್ಲಿ ಯಾರೂ ಮತ್ತೆ ಮತ್ತೆ ಕೆದಕೋದು ಬೇಡ. ಈ ನಿಯಮ ಪಾಲಿಸಿಬಿಟ್ಟರೆ ಬಹುತೇಕ ದಾಂಪತ್ಯಗಳು ಮುರಿದು ಬೀಳುವುದೇ ಇಲ್ಲ. ಆದರೆ, ಇಬ್ಬರೂ ಮಾಡಿದ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸೋದು ಮುಖ್ಯ. ತಪ್ಪು ಮಾಡಿದಾಗ ಪ್ರಾಮಾಣಿಕವಾಗಿ ಕ್ಷಮೆ ಕೋರುವುದೇ ಗಾಯಕ್ಕೆ ಹಚ್ಚುವ ಮದ್ದು.
ಕೋಪ, ತಾಪದಿಂದೇನು ಸುಖ?
ಕೋಪವೇ ಬಹುತೇಕ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಕೋಪ ಮನುಷ್ಯನನ್ನು ಅವಿವೇಕಿಯನ್ನಾಗಿಸುತ್ತದೆ. ಇಬ್ಬರಲ್ಲಿ ಒಬ್ಬರಿಗೆ ಕೋಪವಿದ್ದರೂ, ಮತ್ತೊಬ್ಬರು ಸಹಿಸಿಕೊಳ್ಳಬೇಕು. ಅವರು ಮಾತನಾಡಲು ಆರಂಭಿಸಿದಾಗ ಇವರು ಮೌನಿಯಾಗಬೇಕು. ಆಗ ಸಂಭವಿಸಬಹುದಾದ ಅನೇಕ ಅನಾಹುತಗಳು ತಪ್ಪುತ್ತವೆ. ಇಲ್ಲದೇ ಹೋದಲ್ಲಿ ಗಂಡ ಹೆಂಡಿರ ನಡುವ ಹೊಡೆತ ಬಡಿತಗಳೂ ಆಗಬಹುದು. ಅದಕ್ಕೇ ಕೋಪಕ್ಕೆ ಬ್ರೇಕ್ ಹಾಕೋದು ಒಳಿತು. ಸಿಟ್ಟು ನಮ್ಮನ್ನು ಸುಡೋದಲ್ಲದೇ, ನಮ್ಮೊಂದಿಗೆ ಇರುವವರನ್ನೂ ಸುಡುತ್ತದೆ. ಸಿಟ್ಟು ಬಂದಾಗ ಮಾತನಾಡದೇ ಮೌನವಾಗಿರೋದನ್ನ ಕಲಿತುಕೊಂಡರೆ ಉದ್ಭವಿಸುವ ಅನೇಕ ಸಮಸ್ಯೆಗಳು ಅಲ್ಲಿಯೇ ಮರೆಯಾಗುತ್ತವೆ.
ಕೇಳ್ಲಿಕ್ಕೆ ಸುಲಭ. ಆದರೆ, ಬರ್ಬರಾ ನೀಡಿರುವ ಈ ಕೆಲವು ಟಿಪ್ಸ್ಗಳನ್ನು ಮದುವೆಯಾದ ಕೆಲವು ದಿನಗಳವರೆಗೆ ಕಷ್ಟಪಟ್ಟು ಇಂಪ್ಲಿಮೆಂಟ್ ಮಾಡಲು ಯತ್ನಿಸಿದರೆ, ಅದೇ ಜೀವನವಾಗುತ್ತದೆ. ನಂತರ ಯಾವುದೂ ಕಷ್ಟ ಎನಿಸುವುದೇ ಇಲ್ಲ. ಆಲ್ ದಿ ಬೆಸ್ಟ್. ಬದುಕಿನಲ್ಲಿ ಹಾಲು ಹಳ್ಳ ಹರಿಯಲಿ. ತೆನೆಯು ಚಿನ್ನವಾಗಲಿ.
- ಕೆ.ಎಸ್.ನಿರುಪಮಾ
ksnirupamarao@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


