ಮೂಕಾಭಿನಯದ ಸ್ಪರ್ಧೆ
ಮಧ್ಯಯುಗದ ಕಾಲದಲ್ಲಿ ಪೋಪ್ರಿಗೆ ಅವರ ಸಲಹೆಗಾರರು ರೋಮ್ನಲ್ಲಿರುವ ಎಲ್ಲ ಯೆಹೂದ್ಯರನ್ನೂ ಹೊರದಬ್ಬಬೇಕೆಂದು ಒತ್ತಾಯಿಸಿದರು. ಅಂತೆಯೇ ರೋಮ್ನಿಂದ ಯೆಹೂದ್ಯರನ್ನು ಉಚ್ಚಾಟಿಸಲಾಗಿದೆ ಎಂದು ಫರ್ಮಾನು ಹೊರಡಿಸಲಾಯಿತು. ಇದನ್ನು ಕೇಳಿದ ಯೆಹೂದ್ಯರು ತಮ್ಮನ್ನು ಗಡಿಪಾರು ಮಾಡುವ ಆಜ್ಞೆಯನ್ನು ಪುನರ್ ಪರಿಶೀಲಿಸಬೇಕೆಂದು ಪೋಪ್ರನ್ನು ವಿನಂತಿಸಿಕೊಂಡರು. ಮೃದುಮನಸ್ಸಿನ ಪೋಪ್, ಯೆಹೂದ್ಯರು ಮೂಕಾಭಿನಯದ ಮೂಲಕ ನನ್ನೊಡನೆ ಚರ್ಚಿಸಿ ಗೆದ್ದರೆ ಯೆಹೂದ್ಯರು ರೋಮ್ನಲ್ಲಿಯೇ ಉಳಿಯಬಹುದು ಎಂಬ ಪ್ರಸ್ತಾವವನ್ನಿಟ್ಟರು. ಯೆಹೂದ್ಯರ ಆರಾಧನಾ ಮಂದಿರದ ದ್ವಾರಪಾಲಕ ತಾನು ಪೋಪ್ರವರೊಂದಿಗೆ ಚರ್ಚೆಯಲ್ಲಿ ಭಾಗವಹಿಸುವುದಾಗಿ ಹೇಳಿದ.
ಚರ್ಚೆ ಪ್ರಾರಂಭವಾಯಿತು. ಪೋಪ್ ತಮ್ಮ ಒಂದು ಬೆರಳನ್ನೆತ್ತಿ ಅತ್ತಿತ್ತ ಆಡಿಸಿದರು. ಕೂಡಲೇ ದ್ವಾರಪಾಲಕ ತನ್ನ ಬೆರಳೊಂದನ್ನು ಕೆಳಕ್ಕೆ ಬಾಗಿಸಿ ನೆಲದತ್ತ ತೋರಿಸಿದ. ಪೋಪ್ ಮೂಕವಿಸ್ಮಿತರಾದರು. ಅವರು ಇನ್ನೊಮ್ಮೆ ತಮ್ಮ ಬೆರಳನ್ನು ದ್ವಾರಪಾಲಕನ ಮುಖದತ್ತ ಹಿಡಿದರು. ದ್ವಾರಪಾಲಕ ತನ್ನ ಮೂರು ಬೆರಳುಗಳನ್ನೆತ್ತಿ ಅಷ್ಟೇ ಸ್ಥಿರವಾಗಿ ಪೋಪ್ರ ಮುಖದ ಎದುರು ಹಿಡಿದ. ಪೋಪ್ ಅವಾಕ್ಕಾದರು! ನಂತರ ಅವರು ತಮ್ಮ ನಿಲುವಂಗಿಯೊಳಗೆ ಕೈತೂರಿ ಒಂದು ಸೇಬನ್ನು ಹೊರತೆಗೆದರು. ಅದನ್ನು ನೋಡಿ ದ್ವಾರಪಾಲಕ ತನ್ನ ಚೀಲದಿಂದ ಬ್ರೆಡ್ಡಿನ ಚೂರೊಂದನ್ನು ಹೊರತೆಗೆದ. ಇದನ್ನು ನೋಡಿದ ಪೋಪ್, ಯೆಹೂದ್ಯರ ಪ್ರತಿನಿಧಿ ಗೆದ್ದಿದ್ದಾನೆ ಎಂದು ಘೋಷಿಸಿದರು.
ಯೆಹೂದ್ಯರೆಲ್ಲದ್ವಾರಪಾಲಕನ ಸುತ್ತುವರಿದು ಇದೆಲ್ಲ ಹೇಗಾಯಿತು? ಎಂದು ಕೇಳಿದರು, ಅದಕ್ಕೆ ದ್ವಾರಪಾಲಕ, ಮೊದಲು ಪೋಪರು ಬೆರಳಾಡಿಸುತ್ತ, ಎಲ್ಲ ಯೆಹೂದ್ಯರೂ ರೋಮ್ ಬಿಟ್ಟು ತೆರಳಬೇಕೆಂದು ಸೂಚಿಸಿದರು. ಅದಕ್ಕೆ ನಾನು ನೆಲವನ್ನು ತೋರಿಸುತ್ತ, ನಾವಂತೂ ಇಲ್ಲಿಂದ ಅಲ್ಲಾಡುವುದಿಲ್ಲ ಎಂದೆ. ಅದಕ್ಕವರು ನಿನ್ನ ಧಾರ್ಷ್ಟ್ಯ ಬೇಡ ಎಂದು ಸೂಚಿಸಿದರು. ಆಗ ನಾನು, ನೀವು ಇದರ ಮೂರುಪಟ್ಟು ಧಾರ್ಷ್ಟ್ಯ ತೋರಿದ್ದೀರಿ ಎಂದು ಸೂಚಿಸಿದೆ. ನಂತರ ಅವರು ಮಧ್ಯಾಹ್ನದ ಊಟವನ್ನು ಹೊರತೆಗೆಯುವುದನ್ನು ನೋಡಿ ನಾನೂ ನನ್ನ ಊಟವನ್ನು ಹೊರತೆಗೆದೆ ಎಂದ.
ನೀತಿ: ಹೆಚ್ಚಾಗಿ ವಾಸ್ತವವು ಏನು ನಿಜವೋ ಅದಾಗಿರುವುದಿಲ್ಲ; ಬದಲು ನಾವು ಅದೇನೆಂದು ತೀರ್ಮಾನಿಸಿರುತ್ತೇವೆಯೋ ಅದಾಗಿರುತ್ತದೆ.
- ನಂದಿನಿ ಡಿ. ಕಾಮತ್
- ಮೂಲ: ಅಂತೋನಿ ಡಿಮೆಲ್ಲೊ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

