ಬೈಟುಕಾಫಿ

ರಿಯಾಲಿಟಿ ಶೋಗಳಲ್ಲಿ ಪಾರದರ್ಶಕತೆ ಏಕಿಲ್ಲ?

Published On :

ಟಿಆರ್‌ಪಿಯೇ ಪುರುಷಾರ್ಥ!
ಈಗಿನ ಕಾಲದಲ್ಲಿ ಟಿವಿ ಮಾಧ್ಯಮದಲ್ಲಿ ರಿಯಾಲಿಟಿ ಶೋಗಳ ಕಾರುಬಾರು ಹೆಚ್ಚಾಗಿದೆ. ಆದರೆ, ಇಂತಹ ರಿಯಾಲಿಟಿ ಶೋಗಳಲ್ಲಿ ಎಷ್ಟು 'ರಿಯಾಲಿಟಿ' ಇದೆ ಎಂಬುದೇ ಅನುಮಾನಾಸ್ಪದವಾಗಿದೆ. ಖಾಸಗಿ ಚಾನೆಲ್ ಒಂದರಲ್ಲಿ ಇತ್ತೀಚೆಗೆ ಪ್ರಸಾರವಾದ 'ಬಿಗ್ ಬಾಸ್‌' ಕಾರ್ಯಕ್ರಮವನ್ನು ನೋಡಿದವರೆಲ್ಲರಿಗೂ ಈ ಅನುಮಾನ ಕಾಡುತ್ತಿದೆ. ಇಂತಹ 'ರಿಯಾಲಿಟಿ ಇಲ್ಲದ' ರಿಯಾಲಿಟಿ ಶೋಗಳು ವೀಕ್ಷಕರನ್ನು ಮರುಳು ಮಾಡಿ ಕೇವಲ ತಮ್ಮ ಚಾನೆಲ್‌ನ ಟಿಆರ್‌ಪಿ ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ವಿನಃ ಮತ್ತ್ಯಾವ ಪುರುಷಾರ್ಥ ಸಾಧನೆಗಲ್ಲವೆಂಬುದು ನಾವು ತಿಳಿಯಬೇಕಾದ ಸತ್ಯ. ಇದರಲ್ಲಿ ಭಾಗವಹಿಸಿದ ಕೆಲವು ಸ್ಪರ್ಧಿಗಳೇ ಹೇಳಿದಂತೆ ಇವು 'ಎವರಿಥಿಂಗ್ ಈಸ್ ಸ್ಕ್ರಿಪ್ಟೆಡ್ ಆ್ಯಂಡ್ ಫ್ರೀ-ಫಿಕ್ಸೆಡ್‌' ಶೋಗಳು ಹಾಗೂ ಅದರಲ್ಲಿ ವ್ಯಕ್ತಪಡಿಸುವ ಹಾವ-ಭಾವ, ಕೋಪ-ತಾಪ, ನೋವು-ನಲಿವುಗಳೆಲ್ಲವೂ ಕೇವಲ ನಾಟಕೀಯವಾಗಿರುವುದರಿಂದ, ಇವನ್ನು 'ರಿಯಾಲಿಟಿ ಶೋ' ಎನ್ನುವುದಕ್ಕಿಂದ 'ರೀಲ್-ಶೋ' ಎನ್ನುವುದೇ ಸೂಕ್ತ. ಆದ್ದರಿಂದ, ಟಿವಿ ಮಾಧ್ಯಮಗಳು ಇಂತಹ ಶೋಗಳ ಬದಲು, ನಮ್ಮ ನಾಡು-ನುಡಿ ಮತ್ತು ಸಂಸ್ಕೃತಿ-ಸಂಪ್ರದಾಯವನ್ನು ಬಿಂಬಿಸುವಂತಹ ನಿಜವಾದ 'ರಿಯಾಲಿಟಿ ಶೋ'ಗಳನ್ನು ಬಿತ್ತರಿಸಿದರೆ ರಿಯಾಲಿಟಿ ಶೋಗಳು 'ರಿಯಲ್-ರಿಯಾಲಿಟಿ' ಶೋಗಳಾಗುತ್ತವೆ.
- ಸಿ.ಎಂ. ರೆಡ್ಡಿ, ಬೆಂಗಳೂರು

ಅಂಕಿ-ಸಂಖ್ಯೆ ಆಟ!

ಕೆಲವು  ರಿಯಾಲಿಟಿ ಶೋಗಳ ವೈಖರಿಯು ಕೇವಲ ಮಾದಕತೆ, ಅಶ್ಲೀಲತೆ, ವೃಥಾ ಜಗಳ, ಅನಗತ್ಯವೆನಿಸುವ ಅಳು, ಹುಚ್ಚೆದ್ದು ವರ್ತಿಸುವುದು, ಮಾರಾಮಾರಿ ಮುಂತಾದ ಅನಗತ್ಯ ಅಂಶಗಳ ವೈಭವೀಕರಣವಷ್ಟೇ ಅನಿಸುತ್ತಿದೆ. ಬಾಂಧವ್ಯ, ಸ್ನೇಹ, ಸಹಕಾರ, ಸಹಿಷ್ಣುತೆ, ಪರೋಪಕಾರಗಳ ನೈಜತೆ ಪ್ರಸಾರವಾಗುವುದು ಕೊಂಚವೇ ಕೊಂಚ. ವೀಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಂಡು, ಕಾತರತೆ, ವಿಷಾದ, ತಹತಹಿಕೆಯ ದಿಗ್ಬಂಧನವನ್ನು ವಿಧಿಸಿ ಆ ಮೂಲಕ ಕೇವಲ ಅಂಕಿ ಸಂಖ್ಯೆಗಳ ಆಧಾರದಲ್ಲಿ ಕಾರ್ಯಕ್ರಮದ ಯಶಸ್ಸನ್ನು ತೋರ್ಪಡಿಸುವುದಷ್ಟೇ ಅವರ ಉದ್ದೇಶ. ಇನ್ನು ವೀಕ್ಷಕರು ಕಳುಹಿಸುವ ದುಬಾರಿ ಸಂದೇಶಗಳು ಹಾಗೂ ಕರೆಗಳು, ವಿಜಯಿಗಳ ಘೋಷಣೆಯಲ್ಲಿ ಅವುಗಳ ಮಹತ್ವ, ಅವರು ಅನುಸರಿಸುವ ಮಾರ್ಗಗಳು, ಮಾನದಂಡಗಳು ಹಾಗೂ ಆ ಮೂಲಕ ಸಂಗ್ರಹವಾಗುವ ಹಣ ಮತ್ತು ಅದರ ಆದಾಯದ ಬಗ್ಗೆ ಈ ಶೋ ನಡೆಸುವವರು ಯಾಕೆ ಪಾರದರ್ಶಕವಾಗಿರಬಾರದು?
- ಸಂದೇಶ ಎಚ್. ನಾಯ್ಕ, ಹಕ್ಲಾಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.