ಖಾರ ಖಾರ ಮೆಣಸು ರಕ್ತಕ್ಕೆ ಸೊಗಸು
ಹಸಿಮೆಣಸಿಗೆ ಎಷ್ಟು ಅಭಿಮಾನಿಗಳಿದ್ದಾರೋ ಅಷ್ಟೇ ಶತ್ರುಗಳೂ ಇದ್ದಾರೆ. ಪದಾರ್ಥಕ್ಕೆ ರುಚಿ ಬರಬೇಕು ಎಂದರೆ ಹಸಿಮೆಣಸೇ ಬೇಕು ಎನ್ನುವವರು ಎಷ್ಟಿದ್ದಾರೋ, ಹಸಿಮೆಣಸು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಖಾರ ಸಹಿಸಲು ಸಾಧ್ಯವಿಲ್ಲ ಎಂದು ಹೇಳುವವರೂ ಅಷ್ಟೇ ಇದ್ದಾರೆ. ಮಿರ್ಚಿ ಬಜ್ಜಿ ತಿನ್ನುವವರಲ್ಲಿ ಕೆಲವರು ಮೆಣಸನ್ನು ಬಿಟ್ಟು ಕಡಲೆಹಿಟ್ಟಿನ ಸಿಪ್ಪೆಯನ್ನಷ್ಟೇ ತಿನ್ನುತ್ತಾರೆ. ಅದೇ ಕಡಲೆಹಿಟ್ಟಿನಿಂದ ಮಾಡಿದ ಸಾದಾ ಬಜ್ಜಿ ತಿನ್ನಬಹುದಲ್ಲ? ಅದಾಗದು. ಏಕೆಂದರೆ ಮೆಣಸಿನಕಾಯಿಯ ಫ್ಲೇವರ್ ಹಾಗಿದೆ. ಹಸಿಮೆಣಸಿನ ಕಥೆ ಹಾಗಿದ್ದರೆ ಡೊಳ್ಳುಮೆಣಸು ಅದಕ್ಕೆ ವಿರುದ್ಧ. ಇದು ಹಸಿಮೆಣಸಿನಷ್ಟು ಖಾರವಲ್ಲ. ಇದೊಂಥರ ಅಜಾತಶತ್ರು. ಹೀಗಾಗಿ ಡೊಳ್ಳುಮೆಣಸಿನ ಪಲ್ಯ, ಬಜ್ಜಿ, ರೈಥಾ ಏನೇ ಮಾಡಿದರೂ ಆಸ್ವಾದಿಸುತ್ತ ಸವಿಯುವವರಿಗೆ ಬರವಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕ್ಯಾಪ್ಸಿಕಂ ಪ್ರಿಯರಿದ್ದಾರೆ. ಒಣಮೆಣಸು ಹೆಂಗಸರಿಗೆ ಬಹಳ ಇಷ್ಟ. ಮೆಣಸಿನ ಪುಡಿ ಸಿಗುತ್ತದಲ್ಲ, ಅದಕ್ಕೆ ಬಳಕೆಯಾಗುವುದೂ ಒಣಮೆಣಸೇ. ಹಸಿಮೆಣಸು, ಡೊಳ್ಳುಮೆಣಸು, ಒಣಮೆಣಸು ಏನನ್ನೇ ತಿನ್ನಿ. ರಕ್ತದ ಸುಗಮ ಪರಿಚಲನೆಗೆ ಸಹಕಾರಿ.
ಥೈಲೆಂಡ್ನಲ್ಲಿ ಡೊಳ್ಳುಮೆಣಸು, ಹಸಿಮೆಣಸಿನ ಬಳಕೆ ಹೆಚ್ಚು. ಅವರಲ್ಲಿ ರಕ್ತದ ಸಮಸ್ಯೆ ಇರುವವರೂ ಕಡಿಮೆಯೇ. ರಕ್ತ ಹೆಪ್ಪುಗಟ್ಟುವ ಪ್ರಕರಣಗಳಂತೂ ಬಹಳ ಅಂದರೆ ಬಹಳ ಕಡಿಮೆ. ಅದರ ಗುಟ್ಟು ಮೆಣಸು ಎನ್ನುವುದು ಅಲ್ಲಿನ ಸಂಶೋಧಕರ ಅನುಮಾನವಾಗಿತ್ತು. ಬ್ಯಾಂಕಾಕ್ನ ಸಿರಿರಾಜ್ ಆಸ್ಪತ್ರೆಯ ಹೆಮಾಟೊಲೊಜಿಸ್ಟ್ ಸುಖೋನ್ ವಿಸುದಿಪ್ಪನ್ ಎಂಬುವರು ಈ ಗುಮಾನಿಯ ಬೆನ್ನು ಹತ್ತಿ ಹೋದರು. ಅವರ ಸಹೋದ್ಯೋಗಿಗಳೂ ಸಹಕಾರಕ್ಕೆ ನಿಂತರು. ಇವರೊಂದು ಪ್ರಯೋಗ ಕೈಗೊಂಡರು. 16 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿಗೆ 200 ಗ್ರಾಂ ರೈಸ್ ನ್ಯೂಡಲ್ಸ್ಗೆ ಎರಡು ಹಸಿಮೆಣಸು ಹಾಕಿದ್ದ ಅನ್ನು ನೀಡಿದರು. ನಾಲ್ವರಿಗೆ ಮೆಣಸು ಹಾಕದ ಸಾದಾ ರೈಸ್ ನ್ಯೂಡಲ್ಸ್ ಕೊಡಲಾಯಿತು. ಮೆಣಸಿನ ಅಂಶವಿದ್ದ ನ್ಯೂಡಲ್ಸ್ ತಿಂದವರಲ್ಲಿ ತಿಂದ ತಕ್ಷಣ ಅಂದರೆ ಒಂದೆರಡು ಕ್ಷಣಗಳಲ್ಲಿಯೇ ರಕ್ತದ ಹೆಪ್ಪುಗಟ್ಟುವುದನ್ನು ತಡೆಯುವ ಚಟುವಟಿಕೆಗಳು ಶುರುವಾದವು. ಸುಮಾರು 20 ನಿಮಿಷಗಳಲ್ಲಿ ಆ ಕ್ರಿಯೆ ನಿಂತಿತು. ಮೆಣಸುರಹಿತ ನ್ಯೂಡಲ್ಸ್ ಸೇವಿಸಿದ್ದವರ ರಕ್ತದಲ್ಲಿ ಇಂಥ ಯಾವ ಚಟಪವಟಿಕೆಯೂ ನಡೆಯಲಿಲ್ಲ. ಇದರ ಆಧಾರದ ಮೇಲೆ ಮೆಣಸಿನಲ್ಲಿ ರಕ್ಕ ಹೆಪ್ಪುಗಟ್ಟುವುದನ್ನು ತಡೆಯುವ ಅಂಶವಿದೆ ಎನ್ನುವ ನಿರ್ಧಾರಕ್ಕೆ ಬರಲಾಯಿತು.
ರಕ್ತದ ಚಟುವಟಿಕೆ ಮೇಲೆ ಮೆಣಸಿನ ಪ್ರಭಾವ ತೀರಾ ಕ್ಷಣಿಕ. ಆದರೆ ನಿಮ್ಮ ಆಹಾರದಲ್ಲಿ ಮೆಣಸಿಗೂ ಸ್ಥಾನವಿದ್ದರೆ, ನಿಯಮಿತವಾಗಿ ಮೆಣಸು ಶರೀರದೊಳಕ್ಕೆ ಹೋಗುತ್ತಿದ್ದರೆ ರಕ್ತ ಹೆಪ್ಪುಗಟ್ಟುವ ಮತ್ತು ರಕ್ತ ಪರಿಚಲನೆಗೆ ಅಡೆತಡೆಗಳು ಉಂಟಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಡಾ.ವಿಸುದಿಪ್ಪನ್.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

