ಬೈಟುಕಾಫಿ

ಅಡುಗೆ ಮನೆಯಲ್ಲಿ ಹೃದ್ರೋಗಿಗಳ ಅಮೃತ!

Published On :

ಹೃದ್ರೋಗಿಗಳು 'ಅಮೃತ' ಎನ್ನಬಹುದಾದ ಪದಾರ್ಥ ಅಡುಗೆ ಮನೆಯಲ್ಲಿದೆ ಎಂದರೆ ಆಶ್ಚರ್ಯವಾಗಬಹುದು. ಅದಾವುದು ಅಂತೀರಾ? ಮತ್ತಾವುದೂ ಅಲ್ಲ, ಬೆಳ್ಳುಳ್ಳಿ. ಸಾಸಿವೆ ಇಲ್ಲದ ಮಸಾಲೆಡಬ್ಬಿಯಂತೆ ಬೆಳ್ಳುಳ್ಳಿ ಇಲ್ಲದ ಅಡುಗೆ ಮನೆಯೂ ಅಪರೂಪವೇ. ಈರುಳ್ಳಿ ವಿಚಾರದಲ್ಲಿ ಕಟ್ಟುನಿಟ್ಟು ಅನುಸರಿಸಬಹುದು, ಆದರೆ ಎಷ್ಟೇ ಸಂಪ್ರದಾಯಸ್ಥರಾದರೂ ಬೆಳ್ಳುಳ್ಳಿ ಬಳಸದೇ ಇರುವವರು ಕಡಿಮೆ. ಲಾಗಾಯ್ತಿನಿಂದಲೂ ಬಳಕೆಯಲ್ಲಿದ್ದರೂ ನಮಗೆ ಬೆಳ್ಳುಳ್ಳಿಯ ಔಷಧೀಯ ಮಹತ್ವ ಗೊತ್ತಿರಲಿಲ್ಲ ಅಷ್ಟೆ. ಅದರ ಮಹತ್ವ ಗೊತ್ತಾದ ಬಳಿಕ ಈಗ ಪಾಶ್ಚಾತ್ಯರಂತೂ ಬೆಳ್ಳುಳ್ಳಿಗೆ ಮುಗಿಬೀಳುತ್ತಾರೆ. ಅದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿಯೊ, ಜ್ಯೂಸ್ ರೂಪದಲ್ಲಿಯೊ ಸೇವಿಸುವುದು ಅವರಿಗೆ ಭಾರಿ ಇಷ್ಟ. ಬೇಯಿಸಿದರೆ ಅದರಲ್ಲಿನ ಸತ್ವಗಳು ನಾಶವಾಗುತ್ತವೆ ಎಂಬ ಕಲ್ಪನೆ ಅವರಿಗೆ.
ಹಿಂದೊಮ್ಮೆ ಇದೇ ಅಂಕಣದಲ್ಲಿ ಬೆಳ್ಳುಳ್ಳಿಯ ಕುರಿತು ವಿವರವಾಗಿ ಓದಿದ್ದೀರಿ. ಆಗ ಅದನ್ನು ಔಷಧವಾಗಿ ಬಳಸುತ್ತಾರೆ ಎಂದಷ್ಟೇ ಹೇಳಿದ್ದೆ. ಜತೆಗೆ ಹಳ್ಳಿಗಳಲ್ಲಿ ಯಾವ್ಯಾವ ಕಾಯಿಲೆಗೆ ಇದನ್ನು ಬಳಸುತ್ತಾರೆ ಎಂಬುದನ್ನು ವಿವರಿಸಿದ್ದೆ. ಆಧುನಿಕ ಕಾಲದಲ್ಲಿ ವೈದ್ಯಕೀಯ ರಂಗ ಅದಕ್ಕೆ ಎಷ್ಟು ಮಹತ್ವ ನೀಡುತ್ತಿದೆ ಎನ್ನುವುದನ್ನು ಪ್ರಸ್ತಾಪಿಸಿರಲಿಲ್ಲ.  ಬೆಳ್ಳುಳ್ಳಿಯ ವಿಶೇಷತೆ ಎಂದರೆ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ಕೊಲೆಸ್ಟಾರಲ್ (ಎಚ್‌ಡಿಎಲ್) ಮಟ್ಟದಲ್ಲಿ ಏರಿಳಿತಕ್ಕೆ ಅವಕಾಶ ಕೊಡದೆ ಕೆಟ್ಟ ಕೊಲೆಸ್ಟರಾಲ್ (ಎಲ್‌ಡಿಎಲ್) ಅನ್ನು ನಿಯಂತ್ರಿಸುತ್ತದೆ. ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಅದು ಗೊತ್ತಾದ ನಂತರ ಹೃದ್ರೋಗವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಪಾಶ್ಚಾತ್ಯರಷ್ಟೇ ಅಲ್ಲ, ಭಾರತೀಯರೂ ಈ ವಿಚಾರವಾಗಿ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಂಥವರಲ್ಲಿ ಚೆನ್ನೈನ ಟ್ಯಾಗೋರ್ ಮೆಡಿಕಲ್ ಕಾಲೇಜಿನ ಹೃದ್ರೋಗ ತಜ್ಞ ಡಾ.ಅರುಣ್ ಬೋರ್ಡಿಯಾ ಅಗ್ರಗಣ್ಯರು. ಮೊಲಗಳ ಮೇಲೆ ಸಾಕಷ್ಟು ಪ್ರಯೋಗ ನಡೆಸಿ ಶೇ 80ರಷ್ಟು ರಕ್ತನಾಳ ತಡೆಯನ್ನು ಬೆಳ್ಳುಳ್ಳಿ ಹೋಗಲಾಡಿಸಬಲ್ಲದು. ಜತೆಗೆ, ರಕ್ತನಾಳಗಳನ್ನು ಆರೋಗ್ಯಕರವಾಗಿಡಬಲ್ಲದು ಎಂಬುದನ್ನು ಕಂಡುಕೊಂಡಿದ್ದಾರೆ.
ತಮ್ಮ ಪ್ರಯೋಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಡಾ.ಬೋರ್ಡಿಯಾ ಅವರು ಮಾನವರ ಮೇಲೂ ಸಂಶೋಧನೆಗೆ ತೊಡಗಿದರು. ಹೃದಯಾಘಾತದಿಂದ ಚೇತರಿಸಿಕೊಳ್ಳುತ್ತಿದ್ದ 432 ರೋಗಿಗಳನ್ನು ಅವರು ಆಯ್ಕೆ ಮಾಡಿಕೊಂಡರು. ಮೂರು ವರ್ಷ ಕಾಲ ಮಾಹಿತಿಗಳನ್ನು ದಾಖಲಿಸಿದರು. ಕೊನೆಯಲ್ಲಿ ಅವನ್ನು ತುಲನೆ ಮಾಡಿ ನೋಡಿದಾಗ ಸ್ವತಃ ಅವರಿಗೇ ಅಚ್ಚರಿ ಉಂಟುಮಾಡಿತು.
ಆ ಸಂಶೋಧನೆಯಲ್ಲಿ ಕಂಡುಬಂದಿದ್ದಾರೂ ಏನು?

-ಡಾ. ಪಿ. ಸದಾನಂದ ಮೈಯ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.