ಇದೆಂಥಾ ಜಾಣತನ?
ಬೇರೆ ಯಾರಾದರೂ ಅದನ್ನು ಮಾಡುವವರಿದ್ದಾರೆ ಎಂದಾದರೆ ಮಾಡಲಿ ಬಿಡಿ. ಹೇಗಿದ್ದರೂ ಅವರಿಗೆ ಅದು ಸಾಧ್ಯ ಎಂದಾಯಿತಲ್ಲ. ಅನಗತ್ಯ ನಾನೇಕೆ ಮತ್ತೆ ಕಸರತ್ತುಪಡಬೇಕು? ಯಾವುದೇ ಒಂದು ಕೆಲಸದ ಬಗ್ಗೆ ನಮ್ಮ ಧೋರಣೆಯೇ ಹಾಗಿರುತ್ತದೆ. ಈ ವಿಷಯದಲ್ಲಿ ಅವರಿವರೆಂಬುದಿಲ್ಲ. ಸರ್ವೇಸಾಮಾನ್ಯ ಎಲ್ಲರದ್ದೂ ಅದೇ ಮನೋಭಾವ. ಯಾರು ಮಾಡಲಿ ಬಿಡಲಿ ನಾನಂತೂ ಈ ಕೆಲಸವನ್ನು ಮಾಡಲೇಬೇಕೆಂದು ಒಬ್ಬರೂ ಯೋಚಿಸುವುದಿಲ್ಲ. ಸಾಧ್ಯವಾದಷ್ಟು ಹೊಣೆಗಾರಿಕೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸುವುದರಲ್ಲೇ ನಮ್ಮ ಬುದ್ಧಿವಂತಿಕೆಯನ್ನು ಖರ್ಚು ಮಾಡುತ್ತೇವೆ.
ಇದು ಎಲ್ಲರೂ ಮಾಡಬಹುದಾದ ಕೆಲಸದ ಬಗ್ಗೆಯಾಯಿತು. ಇನ್ನು ಅಸಾಧ್ಯವಾದುದನ್ನು ನಾನು ಸಾಧ್ಯವಾಗಿಸುವ ಪ್ರಶ್ನೆ ಎಲ್ಲಿಂದ ಬಂತು? ಯಾರೂ ಮಾಡಲಿಕ್ಕೆ ಸಾಧ್ಯವಾಗದೇ ಇರುವಂಥದ್ದು ಅಂದರೆ ಅದರ ಉಸಾಬರಿ ನನಗೇಕೆ? ಬೇರಾರೂ ಅಂಥ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದಾದ ಮೇಲೆ ನನಗೇಕೆ ಅಂಥ ತಲೆಹರಟೆ. ನನ್ನದೆಷ್ಟೋ ಅಷ್ಟನ್ನು ನೋಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಆಮೇಲೆ ಇರುವ ನೆಮ್ಮದಿಯನ್ನೂ ಹಾಳು ಮಾಡಿಕೊಂಡಂತಾದೀತು....ಇಂಥ ಮುನ್ನೆಚ್ಚೆರಿಕೆಯನ್ನು ನಮಗೆ ಯಾರೂ ಹೇಳಿಕೊಡಬೇಕಾದುದಿಲ್ಲ. ಇಷ್ಟೇ ಅಲ್ಲ. ಇಂಥ ನಿರ್ಧಾರ ಕೈಗೊಂಡು ನಮ್ಮನ್ನು ನಾವೇ ಬುದ್ಧಿವಂತರೆಂದು, ಜಾಣತನ ಪ್ರದರ್ಶಿಸಿದೆವೆಂದು ಬೆನ್ನು ತಟ್ಟಿಕೊಳ್ಳುತ್ತೇವೆ.
ಈ ಮನೋಭಾವಕ್ಕಿಂತ ಭಿಕ್ಷುಕನ ಸಾಧನೆ ಎಷ್ಟೋ ಆದೀತು. ಆತ ಕೊನೇ ಪಕ್ಷ ತಾನು ತಿನ್ನುತ್ತಿರುವುದು ಏನೆಂಬುದು ಅರಿವಿಲ್ಲದಿದ್ದರೂ, ಬೇರೆಯವರು ಹಾಕಿದ್ದನ್ನು ಕಣ್ಮುಚ್ಚಿ ತಿನ್ನುವ ಧೈರ್ಯ ಪ್ರದರ್ಶಿಸಬಲ್ಲ. ನಿಜವಾದ ಸಾಹಸಿಯ ಜೀವನವೆಂದರೆ, ಈ ಕೆಲಸವನ್ನು ಬೇರೆ ಯಾರಾದರೂ ಮಾಡಬಹುದು ಎಂದಾದರೆ ಅದು ನನ್ನಿಂದ ಏಕೆ ಸಾಧ್ಯವಾಗುವುದಿಲ್ಲ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ಮುನ್ನುಗ್ಗಬೇಕು. ಬೇರೆಯವರು ಮಾಡಲಿ, ಬಿಡಲಿ, ಅವರೆಲ್ಲರಿಗಿಂತ ಮೊದಲು ಅದನ್ನು ಮಾಡಿ ಮುಗಿಸಿರಬೇಕೆಂಬ ಸಂಕಲ್ಪದೊಂದಿಗೆ ಗುರಿ ಮುಟ್ಟಿರುತ್ತಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೇರಾರಿಂದಲೂ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಅಂಥದ್ದನ್ನು ಖಂಡಿತಾ ನಾನೇ ಮಾಡಬೇಕು. ಮಾಡಿ ತೋರಿಸಬೇಕು ಎಂಬ ಹಂಬಲದೊಂದಿಗೆ ಸಾಧನೆಗೆ ಇಳಿಯುತ್ತಾನೆ. ಜೀವ ಚೈತನ್ಯ ಚಿಮ್ಮುವುದೆಂದರೆ ಇದೇ. ಅಂಥ ಚೈತನ್ಯ ನಮ್ಮಲ್ಲಿ ಸದಾ ಚಿಮ್ಮುತ್ತಲೇ ಇರಲಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

