ಬೈಟುಕಾಫಿ

ಕೊರತೆ ಇಲ್ಲದ ಬದುಕು

Published On :

ನಮಗೆ ಎಷ್ಟೋ ಬಾರಿ ಅನಿಸಿರುತ್ತದೆ. ಇದು ಸರಿಯಿಲ್ಲ, ನಾವು ಹೀಗೆ ಮಾಡಬಾರದು. ನಮ್ಮ ಮನೋಭಾವಕ್ಕೂ ಇದು ಹೊಂದುವುದಿಲ್ಲ ಎಂದು. ಆದರೂ ಭಾವನೆಗಳ ಮಹಾಪೂರದಲ್ಲಿ ಕೊಚ್ಚಿ ಹೋಗಿರುತ್ತೇವೆ. ಆ ಪ್ರವಾಹವನ್ನು ಹತ್ತಿಕ್ಕುವುದು ಸಾಧ್ಯವೇ ಆಗುವುದಿಲ್ಲ. ಆಗ ಬುದ್ಧಿಯ ಮಾತು ಎಲ್ಲೋ ಕಳೆದುಹೋಗಿರುತ್ತದೆ. ವಿವೇಕಕ್ಕೆ ಬೆಲೆಯಿರುವುದಿಲ್ಲ. ಆಗ ನಾವು ಕೈಗೊಳ್ಳುವ ನಿರ್ಧಾರದ ಮೇಲೆ ಇಡೀ ಬದುಕು ನಿಂತಿದೆ ಎಂಬ ವಾಸ್ತವದ ಅರಿವಿದ್ದರೂ ಅದನ್ನು ಮೆಟ್ಟಿನಿಲ್ಲುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
ಕೆಲ ಕಾಲದ ಬಳಿಕ ಆ ನಮ್ಮ ನಿಲುವಿನ ಬಗ್ಗೆ ಪಶ್ಚಾತ್ತಾಪ ಪಡಲು ಆರಂಭಿಸಿಬಿಡುತ್ತೇವೆ. ಆಗ ನಮಗೆ ಏನಾಗಿತ್ತು ಎಂದು ನಮ್ಮನ್ನೇ ಹಳಿದುಕೊಳ್ಳಲು ಶುರು ಮಾಡುತ್ತೇವೆ. ಆಗಲೇ ಬೇರೆಯವರ ಬದುಕಿನೊಂದಿಗೆ ನಮ್ಮದನ್ನು ಹೋಲಿಸಿಕೊಳ್ಳುವ ದುರ್ಬಲ ಮನಸ್ಥಿತಿ ನಮ್ಮದಾಗುತ್ತದೆ. ನಾವು ಆಯ್ಕೆ ಮಾಡಿಕೊಂಡ ಬದುಕಿನಿಂದ ಹೊರಬೀಳಲೂ ಸಾಧ್ಯವಾಗದೇ, ಇರಲೂ ಆಗದೇ ಒದ್ದಾಡುತ್ತೇವೆ.
ಆದರೆ, ಒಮ್ಮೆ ಚಿಂತಿಸಿ. ಈಗ ಆಗಿರುವಂಥದ್ದಾದರೂ ಏನು? ನಿಮ್ಮ ಆಯ್ಕೆ ಸರಿಯಾಗಿಲ್ಲವೆಂದು ಈಗೇನೋ ನಿಮಗೆ ಅನಿಸುತ್ತಿರಬಹುದು. ಆದರೆ, ಹಿಂದೊಮ್ಮೆ ಅದನ್ನೇ ಆಸೆಯಿಂದ ನೀವು ಆಯ್ದುಕೊಂಡಿಲ್ಲವೇ? ಹೀಗಾಗಿ ಅದರ ಬಗ್ಗೆ ಈಗ್ಯಾಕೆ ಪಶ್ಚಾತ್ತಾಪ? ಎಲ್ಲ ಅತೃಪ್ತಿಗಳೊಂದಿಗೇ ಬದುಕಲು ಸಾಧ್ಯವೇ ಇಲ್ಲವೇ? ಅಕಸ್ಮಾತ್ ನೀವು ಬೇರೊಂದು ಬದುಕನ್ನು ಆಯ್ದುಕೊಂಡಿದ್ದರೂ ಅದು ಇನ್ನಷ್ಟು ಅಪರಿಪೂರ್ಣವಾಗಿರುವುದಿಲ್ಲವೆಂಬ ಗ್ಯಾರೆಂಟಿ ಏನು? ಅಷ್ಟಕ್ಕೂ ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿಯೇ ಇರುತ್ತದೆ ಎಂದು ಅಂದುಕೊಳ್ಳುವುದು ತಪ್ಪಲ್ಲವೇ? ಅದರ ಬದಲು ಎಲ್ಲರ ಬದುಕೂ ಹೀಗೆಯೇ. ಏನಾದರೊಂದು ಕೊರತೆ ಇಲ್ಲದ ಬದುಕೊಂದು ಇರಲು ಸಾಧ್ಯವೇ ಎಂದು ಚಿಂತಿಸಿ ಮನಸ್ಸನ್ನು ತಹಬಂದಿಗೆ ತಂದುಕೊಂಡರೆ, ಕನಿಷ್ಠ ಪಕ್ಷದ ನೆಮ್ಮದಿ ನಮ್ಮದಾಗುತ್ತದೆ. ಆಗದಿರುವುದನ್ನು ಚಿಂತಿಸುತ್ತಿದ್ದರೆ ನಮ್ಮಿಂದ ಸಾಧ್ಯವಿರುವಂತಹದ್ದೂ ಆಗುವುದಿಲ್ಲ ಎಂಬುದು ನೆನಪಿರಲಿ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.