ಆಚಾರ್ಯ ವಿಚಾರ

'ಜೀಯಾ ನೀನಲ್ಲದೆ ಇನ್ಯಾರು ಕಾಯ್ವರೋ...'
ನೀವು ಈ ಹಾಡನ್ನು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀ ಗುರುರಾಘವೇಂದ್ರ ವೈಭವ'ದಲ್ಲಿ ಕೇಳಿರಬಹುದು. ಬೇರೆಲ್ಲಿ ಕೇಳಿದರೂ, ಓಹ್ ಇವರು ಅವರೇ... ಎಂದು ಸ್ಪಷ್ಟವಾಗಿ ಗುರುತಿಸಬಲ್ಲ ವಿಶಿಷ್ಟ ಧ್ವನಿ. ಅವರೇ ಮೈಸೂರು ರಾಮಚಂದ್ರಾಚಾರ್.
ಆಚಾರರು ಹುಟ್ಟಿದ್ದು 1967ರ ಜೂನ್ 10, ಮೈಸೂರಿನಲ್ಲಿ. ಓದಿದ್ದು ಮೈಸೂರಿನ ವಿಧ್ಯಾವರ್ಧಕ ಶಾಲೆಯಲ್ಲಿ. ಪಿಯುಸಿಯೇ ಕೊನೆ. ಮನೆಯಲ್ಲಿದ್ದ ಕಡು ಬಡತನದ ಕಾರಣ ಸಂಗೀತಾಭ್ಯಾಸವನ್ನು ಯಾರ ಬಳಿಯೂ ಮಾಡಲಾಗಲಿಲ್ಲ. ತಂದೆ ಸೋಮಸುಂದರ್ ರಾವ್ ಸ್ಕೂಲ್ ಮಾಸ್ಟರ್, ಅವರಿಗೆ ಮೂರು ಮಕ್ಕಳು. ಬರುವ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ತಾಯಿ ಲತಾಮಣಿ ಹತ್ತಾರು ಮನೆಗಳಿಗೆ ಕೆಲಸಕ್ಕೆ ಹೋಗಿ ಆಚಾರರನ್ನು ಓದಿಸಿದರು.
ಓದಿನಿಂದ ಭಜನೆಯಡೆಗೆ
ಪಿಯುಸಿ ಓದುತ್ತಿದ್ದ ಆಚಾರರಿಗೆ ಮನೆಯ ಪರಿಸ್ಥಿತಿ ಅರ್ಥವಾಗಿತ್ತು. ದೇವಸ್ಥಾನದಲ್ಲಿ ಅರ್ಚಕರಾಗಿ ಸೇರಿದರು. ಭಜನಾ ಕೂಟಗಳಲ್ಲಿ ಪಾಲ್ಗೊಂಡರು. ಭಜನೆಗೆ ಬರುತ್ತಿದ್ದ ಜನ ಇವರ ಪ್ರತಿಭೆ ಗುರುತಿಸಿ ಸಂಗೀತ ಕಛೇರಿ ನೀಡಲು ಅವಕಾಶ ಕೊಟ್ಟರು. ಹಾಗೆ 20 ವರ್ಷ ಹಿಂದೆ ಮೊದಲ ಅವಕಾಶ ದೊರೆತದ್ದು ಚನ್ನಪಟ್ಟಣದ ಲಕ್ಷ್ಮೀಕಾಂತ ದೇವಾಲಯದಲ್ಲಿ. ಐದು ವರ್ಷ ನಂತರ ಅಲ್ಲಿಂದ ನೇರ ಬೆಂಗಳೂರಿಗೆ ಬಂದು ನೀಡಿದ ಕಾರ್ಯಕ್ರಮ ಉತ್ತರಾದಿ ಮಠದಲ್ಲಿ. ಅಲ್ಲಿಂದೀಚೆಗೆ 1000ಕ್ಕೂ ಹೆಚ್ಚು ದೇವರನಾಮ ಮತ್ತು ದಾಸರಪದಗಳ ಕಛೇರಿ ನೀಡಿದ್ದಾರೆ.
ಶಾಸ್ತ್ರೀಯವಾಗಿ ಸಂಗೀತ ಕಲಿಯದ ನನಗೆ ಈ ಹಾಡುವ ಅವಕಾಶ ಯೋಗದಿಂದ ಬಂದಿದ್ದೇ ಹೊರತು ಯೋಗ್ಯತೆಯಿಂದಲ್ಲವೆಂದು ಪ್ರಾಮಾಣಿಕವಾಗಿ ನುಡಿಯುತ್ತಾರೆ ಅವರು. ಆದರೆ ಎಷ್ಟೋ ಸಂಗೀತಗಾರರನ್ನು ನಾಚಿಸುವಂತೆ ಹಾಡುತ್ತಾರೆ. ಹಲವಾರು ಗೀತೆಗಳಿಗೆ ಸ್ವತಃ ರಾಗ ಸಂಯೋಜಿಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ, ನರಸಿಂಹ ಎಂಬ ಹುಡುಗನಿಗೆ ಮಾತು ಬರುತ್ತಿರಲಿಲ್ಲ ಹಾಗೂ ಮಾನಸಿಕ ಸಮಸ್ಯೆಯಿತ್ತು. ಆತ ಇವರ ಕಛೇರಿಗಳಿಗೆ ನಿತ್ಯ ಬರುತ್ತಿದ್ದ. ಕ್ರಮೇಣ ಅವರನ್ನು ಅನುಕರಣೆ ಮಾಡುತ್ತಾ ಇಂದು ಸರಾಗವಾಗಿ ಮಾತನಾಡುತ್ತಾನೆ. ಇದು ನಂಬಲಸಾಧ್ಯವೆನಿಸಿದರೂ ನಿಜ ಘಟನೆ.
ಚಿತ್ರಪಟ ತೋರಿಸುತ್ತಾ
ಇವರ ಇನ್ನೊಂದು ವಿಶೇಷತೆಯೆಂದರೆ ಹಾಡನ್ನು ಹಾಡುವಾಗ ಅಲ್ಲಿ ಬರುವ ದೇವರ ಚಿತ್ರಪಟ ತೋರಿಸುತ್ತಾರೆ. ಮೊದಮೊದಲು ಹಾಡುವಾಗ ನಾನೇ ಫೋಟೋ ನೋಡಿಕೊಳ್ಳುತ್ತಿದ್ದೆ. ಒಮ್ಮೆ ಕೃಷ್ಣನ ಅಪರೂಪದ ಫೋಟೋವನ್ನು ಜನರಿಗೆ ತೋರಿಸಿದೆ. ಭಕ್ತಿಯಿಂದ ನಮಸ್ಕರಿಸಿದರು. ಆಗ ಏಕೆ ಫೋಟೋಗಳನ್ನು ತೋರಿಸುತ್ತಾ ಹಾಡಬಾರದು ಎಂದೆನಿಸಿತು. ಅಂದಿನಿಂದ ಶುರುವಾಯಿತು ಎಂದು ನಗುತ್ತಾರೆ. ಇವರ ಬಳಿ 1500ಕ್ಕೂ ಹೆಚ್ಚು ದೇವರ ಭಾವಚಿತ್ರಗಳಿವೆ. ಇದರ ಸಂಗ್ರಹಣೆಗಾಗಿ ಮಥುರಾ ಮತ್ತಿತರೆಡೆ ತಿರುಗಾಡಿದ್ದಾರೆ. ಇವರ ಮೂರು ತಾಸಿನ ಕಾರ್ಯಕ್ರಮದಲ್ಲಿ ಭಾರತದ ಎಲ್ಲಾ ದೇವತೆಗಳ ದರ್ಶನವಾಗುತ್ತದೆ!
ಇಂದು ರಾಮಚಂದ್ರ ಆಚಾರ್ಯರ ಹುಟ್ಟಿದ ಹಬ್ಬ. ಇದರ ಅಂಗವಾಗಿ ಬೆಂಗಳೂರಿನ ಬಸವನಗುಡಿ ದೇವಸ್ಥಾನದ ಎದುರಿನ ಶ್ರೀ ನವಮಂತ್ರಾಲಯ ಮಂದಿರದಲ್ಲಿ ಸಂಜೆ 5.30ಕ್ಕೆ ದಾಸರಪದಗಳು ಮತ್ತು ದೇವರನಾಮದ ಕಛೇರಿ ನಡೆಸಿಕೊಡಲಿದ್ದಾರೆ.
- ಚಿರಂಜೀವಿ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


