ಬೈಟುಕಾಫಿ

ತರಕಾರಿ ಚಿಕಿತ್ಸೆ ಎನ್ನುವ ಮಂತ್ರ!

Published On :

ಆಶ್ಚರ್ಯವಾಗಬಹುದು. ಇವತ್ತು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೃದಯಾಘಾತಕ್ಕೆ ತುತ್ತಾದವರಿಗೆ ಪೋಸ್ಟ್ ಅಟ್ಯಾಕ್ ಟ್ರೀಟ್‌ಮೆಂಟ್ ಭಾಗವಾಗಿ ಸಸ್ಯಾಹಾರವನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲವು ಆಸ್ಪತ್ರೆಗಳಲ್ಲಂತೂ ಸರ್ಜರಿ ನಡೆದ 72 ಗಂಟೆಗಳಲ್ಲೇ 'ವೆಜಿಟೆಬಲ್ ಥೆರಪಿ' ಶುರುವಾಗುವುದೂ ಉಂಟು ಎಂದು ಕೇಳಿದ್ದೇನೆ. ಹೃದ್ರೋಗಿಗಳು ಆಸ್ಪತ್ರೆಯಿಂದ ಮನೆಗೆ ತೆರಳುವಾಗ ವೈದ್ಯರು ಮರೆಯದೇ ನೀಡುವ ಅತಿಮುಖ್ಯ ಸಲಹೆ ಎಂದರೆ, ತಕ್ಷಣದಿಂದಲೇ ಆಹಾರ ಪದ್ಧತಿ ಬದಲಿಸಿಕೊಳ್ಳಿ. ತರಕಾರಿ ಹಾಗೂ ಹಣ್ಣುಗಳನ್ನು ಸಾಧ್ಯವಾದಷ್ಟು ಹೆಚ್ಚು ಸೇವಿಸಿ. ಡೈರಿ ಪ್ರೊಡಕ್ಟ್‌ಗಳನ್ನು ಬಿಟ್ಟುಬಿಡಿ. ಜಂಕ್‌ಫುಡ್‌ಗಳ ಸಹವಾಸ ಬೇಡವೇ ಬೇಡ ಎನ್ನುವುದು.
ಇತ್ತೀಚೆಗೆ ಖ್ಯಾತ ಆಸ್ಪತ್ರೆಯ ಹೃದ್ರೋಗ ತಜ್ಞರು ಹೃದಯಾಘಾತಕ್ಕೆ ಒಳಗಾದ 400 ರೋಗಿಗಳ ಆಹಾರದ ವಿಚಾರದಲ್ಲಿ 'ಪ್ರಯೋಗ' ಕೈಗೊಂಡರು. ತಲಾ 200 ಜನರ ಎರಡು ಗುಂಪುಗಳಾಗಿ ಮಾಡಿದರು. ಒಂದು ಗುಂಪಿಗೆ ಯಥಾಪ್ರಕಾರ ಕಡಿಮೆ ಕ್ಯಾಲರಿ, ಕಡಿಮೆ ಕೊಬ್ಬು ಮತ್ತು ಕೊಲೆಸ್ಟರಾಲ್ ಅಂಶವುಳ್ಳ ಆಹಾರ ಸೇವನೆಗೆ ಶಿಫಾರಸ್ಸು ಮಾಡಿದರು. ಮತ್ತೊಂದು ಗುಂಪಿಗೆ ತರಕಾರಿ, ಹಣ್ಣುಗಳನ್ನೇ ಅಧಿಕವಾಗಿ ಸೇವಿಸಲು ಸೂಚಿಸಿದರು. ದಿನಕ್ಕೆ 14 ಔನ್ಸ್‌ಗಳಷ್ಟಾದರೂ ತರಕಾರಿ, ಹಣ್ಣಿನ ರಸ ಸೇವಿಸಬೇಕು ಎಂದು ಸಲಹೆ ಮಾಡಿದ್ದರು. ಈ ಗುಂಪಿಗೆ ನೀಡಿದ್ದ ಪಟ್ಟಿಯಲ್ಲಿ ಸೀಬೆ, ದ್ರಾಕ್ಷಿ, ಪಪ್ಪಾಯ, ಬಾಳೆಹಣ್ಣು, ಸೇಬು, ಮೂಸುಂಬೆ, ಟೊಮೆಟೊ, ಮೂಲಂಗಿ, ಪಾಲಕ್, ಈರುಳ್ಳಿ, ಬೆಳ್ಳುಳ್ಳಿ, ಶೇಂಗಾ, ಮೆಂತೆ ಕಾಳು ಪ್ರಮುಖವಾಗಿದ್ದವು. ಒಂದು ವರ್ಷದ ನಂತರ ಎಲ್ಲರನ್ನೂ ವಿವರವಾದ ಆರೋಗ್ಯ ತಪಾಸಣೆಗೆ ಒಳಪಡಿಸಿದರು. ತರಕಾರಿ, ಹಣ್ಣುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದ್ದವರಲ್ಲಿ ಮತ್ತೊಂದು ಸರ್ಜರಿ ನಂತರದ ಸಣ್ಣಪುಟ್ಟ ಸಮಸ್ಯೆಗಳೂ ಕಾಣಿಸಿಕೊಂಡಿರಲಿಲ್ಲ. ರಕ್ತನಾಳ ವೈದ್ಯರಿಗೇ ಅಚ್ಚರಿ ಎನ್ನಿಸುವ ರೀತಿಯಲ್ಲಿ ಶಕ್ತಿಯುತವಾಗಿತ್ತು. ಅದರಿಂದ ಆ ಆಸ್ಪತ್ರೆಯ ಹೃದ್ರೋಗ ತಜ್ಞರು ಒಂದು ನಿರ್ಧಾರಕ್ಕೆ ಬಂದರು- ಹೃದಯಾಘಾತ ಸೇರಿದಂತೆ ಹೃದಯದಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣಿಸಿಕೊಂಡರೂ ತರಕಾರಿ, ಹಣ್ಣು ಸೇವನೆ ಪ್ರಮಾಣವನ್ನು ಹೆಚ್ಚಿಸಿದರೆ ರೋಗಿಯನ್ನು ಉಳಿಸಬಹುದು ಮತ್ತು ಮರು ಆಘಾತದ ಸಾಧ್ಯತೆಗಳನ್ನು ಗಣನೀಯವಾಗಿ ತಗ್ಗಿಸಬಹುದು ಎಂದು. ಗಮನಿಸಬೇಕಾದದ್ದು ಎಂದರೆ ಹೃದ್ರೋಗಿಗಳು ಎಷ್ಟು ಸಾಧ್ಯವೋ ಅಷ್ಟು ಬೇಗ ಆಹಾರ ಪದ್ಧತಿ ಬದಲಿಸಿಕೊಳ್ಳಳಬೇಕು; ಸಸ್ಯಾಹಾರಿಗಳು ತರಕಾರಿ, ಹಣ್ಣು ಸೇವನೆಯನ್ನು ತೀವ್ರಗೊಳಿಸಬೇಕು ಎನ್ನುವುದು.
ಡಚ್ ತಜ್ಞರು ಇತ್ತೀಚೆಗೆ ನಡೆಸಿದ ಸಂಶೋಧನೆ ಕೂಡ ಇದನ್ನೇ ಒತ್ತಿಹೇಳಿದೆ. ಹೃದ್ರೋಗಿಗಳು ಎಷ್ಟು ಜಾಸ್ತಿ ಸಸ್ಯಾಹಾರ ಸೇವಿಸುತ್ತಾರೋ ಅಷ್ಟು ತ್ವರಿತವಾಗಿ ಗುಣಮುಖರಾಗುತ್ತಾರೆ ಎನ್ನುವುದು ಡಚ್ಚರ ಶಿಫಾರಸ್ಸು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.