ಹೃದ್ರೋಗ ತಡೆಯಲು ಜಪಾನೀಯರಂತೆ ತಿನ್ನಿ!
'ಮೇಡ್ ಇನ್ ಜಪಾನ್' ಮುದ್ರೆಯುಳ್ಳ ವಸ್ತುಗಳೆಂದರೆ ಭಾರತೀಯರಿಗಂತೂ ಭಾರಿ ಪ್ರೀತಿ. ಅಂಥಾ ವಸ್ತುಗಳನ್ನು ಹೊಂದುವುದು ಕೆಲವರಿಗೆ ಪ್ರತಿಷ್ಠೆ ಕೂಡ. ಕಠಿಣ ಪರಿಶ್ರಮಿಗಳಾದ ಜಪಾನೀಯರು ತಾಂತ್ರಿಕವಾಗಿ ನಮಗಿಂತ ಮುಂದಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು ಬಿಡಿ. ಹಾಗೆಯೇ ಅವರ ಬದ್ಧತೆಯನ್ನು ಕೂಡ. ಹೃದ್ರೋಗ ಮತ್ತು ಆಹಾರದ ಬಗ್ಗೆ ಚರ್ಚಿಸುತ್ತಿರುವಾಗ ಜಪಾನೀಯರ ಪ್ರಸ್ತಾಪ ಏಕೆ ಎನ್ನುವ ಸಂದೇಹ ಬೇಡ. ವಿಷಯ ಏನೆಂದರೆ ಈ ವಿಚಾರದಲ್ಲೂ ಅವರು ನಮಗಿಂತ ಕಡಿಮೆ ಏನಿಲ್ಲ ಎನ್ನುವುದು. 'ಜಪಾನೀಯರ ಥರ ತಿನ್ನಿ' (ಈಟ್ ಲೈಕ್ ಜಪಾನೀಸ್) ಎನ್ನುವ ಮಾತು ಪಶ್ಚಿಮದ ರಾಷ್ಟ್ರಗಳಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಜಪಾನೀಯರ ಆಹಾರ ಪದ್ಧತಿ ಸ್ವಲ್ಪ ನಮ್ಮ ಹಾಗೆಯೇ. ಅವರು ಕೊಬ್ಬಿನ ಪದಾರ್ಥಗಳನ್ನು ಸೇವಿಸುವುದು ಕಡಿಮೆ. ತರಕಾರಿ, ಹಣ್ಣುಗಳಿಗೆ ಆದ್ಯತೆ. ಹೀಗಾಗಿ ಜಪಾನ್ ಅನ್ನು ಒಂದು ಕಾಲದಲ್ಲಿ ಹೃದ್ರೋಗ ಮುಕ್ತ ರಾಷ್ಟ್ರ ಎಂದೇ ಹೇಳಲಾಗುತ್ತಿತ್ತು. ಅಲ್ಲಿ ಯಾರಿಗೂ ಹೃದಯದ ತೊಂದರೆಗಳೇ ಇರಲಿಲ್ಲ ಎಂದು ಅಪಾರ್ಥ ಭಾವಿಸಬೇಕಿಲ್ಲ. ಹೃದಯದ ತೊಂದರೆಗಳಿಂದ ಬಳಲುವವರ ಪ್ರಮಾಣ ನಗಣ್ಯ ಎನ್ನಿಸುವಷ್ಟು ಕಡಿಮೆ ಇತ್ತು. ಈಗೀಗ ಅಲ್ಲಿನ ಷಹರಗಳಲ್ಲಿಯೂ ಫಾಸ್ಟ್ಫುಡ್ ಪ್ರಭಾವ ಜೋರಾಗಿದೆ. ಬೆನ್ನಲ್ಲಿಯೇ ಹೃದ್ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ, ಬೊಜ್ಜು ಮತ್ತಿತರ ಆರೋಗ್ಯ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ. ಅದು ಬೇರೆ ಮಾತು. ತೀರಾ ಈಚಿನ ದಶಕಗಳವರೆಗೂ ಅಲ್ಲಿ ಹೃದ್ರೋಗಗಳಿಂದ ಬಳಲುವವರ ಸಂಖ್ಯೆ ಕಡಿಮೆ ಇತ್ತು ಎನ್ನುವುದು ನಿಜ.
ಯೂನಿವರ್ಸಿಟಿ ಆಫ್ ಮಿನ್ನೆಸೊಟಾದಲ್ಲಿ ಪ್ರಾಧ್ಯಾಪಕರಾಗಿದ್ದ ಆ್ಯಂಕಲ್ ಕೀಸ್ ಎನ್ನುವವರು 1957ರಲ್ಲಿಯೇ ಅಮೆರಿಕ, ಫಿನ್ಲೆಂಡ್, ನೆದರ್ರ್ಲೆಂಡ್, ಇಟಲಿ, ಯುಗೋಸ್ಲಾವಿಯಾ, ಗ್ರೀಸ್ ಮತ್ತು ಜಪಾನ್- ಈ ಏಳು ರಾಷ್ಟ್ರಗಳಲ್ಲಿ ಹೃದಯದ ತೊಂದರೆಯಿಂದ ಬಳಲುವವರ ಕುರಿತು ಸಂಶೋಧನೆಯೊಂದನ್ನು ಕೈಗೊಂಡಿದ್ದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೃದ್ರೋಗದ ತೊಂದರೆ ಜಪಾನ್ಗಿಂತ ಏಳು ಪಟ್ಟು ಹೆಚ್ಚು. ಏಳು ರಾಷ್ಟ್ರಗಳಲ್ಲಿ ಕಡಿಮೆ ಹೃದ್ರೋಗಿಗಳಿರುವ ರಾಷ್ಟ್ರ ಎಂದರೆ ಜಪಾನ್ ಎನ್ನುವುದು ಅವರ ಸಂಶೋಧನೆಯಿಂದ ತಿಳಿದು ಬಂದಿತ್ತು. ಜಪಾನೀಯರ ಆಹಾರ ಪದ್ಧತಿಯೇ ಅವರನ್ನು ಹೃದ್ರೋಗಗಳಿಂದ ದೂರ ಇಟ್ಟಿದೆ ಎನ್ನುವುದು ಗೊತ್ತಾದದ್ದೂ ಆಗಲೇ.
ಸಾಂಪ್ರದಾಯಿಕ ಜಪಾನ್ ಆಹಾರ ಪದ್ಧತಿ ಎಂದರೆ ನಿತ್ಯವೂ (ಸರಾಸರಿ) 4-5 ಕಪ್ ಅನ್ನ, ಒಂಬತ್ತು ಔನ್ಸ್ನಷ್ಟು ತರಕಾರಿ, ಎರಡು ಔನ್ಸ್ನಷ್ಟು ಬೀನ್ಸ್, ಒಂದೂವರೆ ಕಪ್ ಹಾಲು, ಎರಡು ಚಹಾ ಚಮಚದಷ್ಟು ಸಕ್ಕರೆ, ಒಂದೂವರೆ ಚಮಚದಷ್ಟು ಸೋಯಾ ಸಾಸ್. ಕೆಲವರು ಅಲ್ಪಪ್ರಮಾಣದಲ್ಲಿ ಮಾಂಸ, ಒಂದು ಮೊಟ್ಟೆ, 3-4 ಔನ್ಸ್ನಷ್ಟು ಮೀನು ಸೇವಿಸುತ್ತಿದ್ದರು. ಅವರ ಆ ಆಹಾರ ಪದ್ಧತಿಯಲ್ಲಿ ಕೊಬ್ಬು, ಕ್ಯಾಲೊರಿ, ಕೊಲೆಸ್ಟರಾಲ್ ಅಧಿಕವಿರುವ ಆಹಾರ ಕಡಿಮೆ. ಮುಖ್ಯವಾಗಿ ಶರೀರದಲ್ಲಿ ಸೋಡಿಯಂ ಅಂಶ ಏರುಪೇರಾಗದಂತೆ ತಡೆಯುವ ಸಮತೋಲನ ಇವರ ಆಹಾರದಲ್ಲಿತ್ತು. ಹೀಗಾಗಿ ಹೃದ್ರೋಗ ಜಪಾನೀಯರಿಂದ ದೂರವಿತ್ತು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

