ಬಿದಿರಕ್ಕಿ

ಈಗ ಮಲೆನಾಡಿನ ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಭದ್ರ ಬೇಲಿಯಾಗಿದ್ದ ಬಿದಿರ ಹಿಂಡಲುಗಳ ಕೆಳಗೆ ಸ್ಮಶಾನ ಮೌನ ಆವರಿಸಿದೆ. ಹಸಿರು ಚಿಗುರೆಲೆಯ ಹೊತ್ತು ಬಾಗುತ್ತಿದ್ದ ಮೆಳೆಗಳಲ್ಲಿ ಎಲೆಗಳು ಅಗೋಚರ. ಅಲ್ಲೀಗ ಗೊಂಚಲು ಗೊಂಚಲಿನ ಕದಿರು ಬಂಗಾರದ ಬಣ್ಣದಿಂದ ತೂಗುತ್ತಿದೆ. ಕೆಳಗೆ ಬಾಗಿದರೆ ಗೋಧಿಯಂತಿರುವ ಅದರ ಕಾಳುಗಳು ಹರಡಿಕೊಂಡಿವೆ. ಇದನ್ನು ಹಿಸುಕಿದರೆ ಒಳಗಿಂದ ಹೊರಬರುವ ಕಾಳು ಅಕ್ಕಿಯಂತೆಯೇ ಇದ್ದು ವರ್ಣ ಮಾತ್ರ ಗೋಧಿಯಂತಿದೆ. ಇದೇ ಬಿದಿರಕ್ಕಿ!
'ಬಾಳೆಗೆ ಗೊನೆ, ಚೇಳಿಗೆ ಬಸಿರು ಜೀವನದಲ್ಲಿ ಒಂದೇ ಬಾರಿ' ಎಂಬ ಮಾತಿದೆ. ಬಿದಿರೂ ಅಷ್ಟೇ. ಆಕಾಶದೆತ್ತರ ಬೆಳೆದರೂ ಅದರ ಬದುಕಿನಲ್ಲಿ ಒಂದೇ ಸಲ ಹೀಗೆ ಕಾಳು ಹರಡಿ ಅವಸಾನವಾಗುತ್ತದೆ. ಬಿದಿರು ಹುಟ್ಟಿ 40ರಿಂದ 80 ವರ್ಷದ ಒಳಗೆ ಹೂ ಬಿಟ್ಟು ಸಾಯುವ ಈ ಪ್ರಕ್ರಿಯೆ ನಡೆಯುತ್ತದೆ. ಬಿದಿರುಗಳು ಧಾರಾಳವಿರುವಲ್ಲಿ ಹಳ್ಳಿ ಜನರು ಅದರ ಕೆಳಗೆ ನೆಲವನ್ನು ಚೆನ್ನಾಗಿ ಗುಡಿಸಿ ಸಾರಿಸಿಡುತ್ತಾರೆ. ಅಲ್ಲಿ ಉದುರಿದ ಭತ್ತವನ್ನು ಶೇಖರಿಸಿ ಕುಟ್ಟಿ ಹೊಟ್ಟು ತೆಗೆದು ಅಕ್ಕಿ ಮಾಡುತ್ತಾರೆ. ಅನೇಕ ವರ್ಷಗಳ ವರೆಗೆ ದಾಸ್ತಾನಿಡಬಹುದಾದ ಬಿದಿರಕ್ಕಿ ಔಷಧ ಮತ್ತು ಆಹಾರವಾಗಿ ಅನಾದಿಯಿಂದಲೂ ಬಳಕೆಯಲ್ಲಿದೆ. ಅದರಿಂದ ಅರವತ್ತಕ್ಕೂ ಅಧಿಕ ಖಾದ್ಯಗಳನ್ನು ತಯಾರಿಸಬಹುದು ಎನ್ನುತ್ತಾರೆ ಪಾಕ ಪರಿಣತರು.
ಬಿದಿರಕ್ಕಿ ಸಂಪೂರ್ಣ ಆಹಾರವಾದರೂ ಕೊಲೆಸ್ಟ್ರಾಲ್ರಹಿತವಾಗಿದೆ. 'ಎ' ಮತ್ತು 'ಸಿ' ಜೀವಸತ್ವಗಳಿರುವುದರಿಂದ ಚರ್ಮ, ದೃಷ್ಟಿ ಹಾಗೂ ಹಲ್ಲುಗಳ ಆರೋಗ್ಯ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೂಳೆಗಳ ಸವೆತ ತಡೆಯುತ್ತದೆ. ಕೀಲುನೋವು ಇರುವವರು ಅದರ ಗಂಜಿ ಮಾಡಿ ತಿಳಿಗೆ ದನದ ತುಪ್ಪ ಮತ್ತು ಜೇನು ಬೆರೆಸಿ ಕುಡಿಯಬಹುದು ಎನ್ನುತ್ತದೆ ಆಯುರ್ವೇದ. ಶೇ.16ರಷ್ಟು ಕ್ಯಾಲೊರಿಗಳಿರುವ ಬಿದಿರಕ್ಕಿಯಲ್ಲಿ ವಿಪುಲವಾಗಿ ಪ್ರೊಟೀನ್ ಇದೆ. ಶರ್ಕರ, ಸುಣ್ಣ, ಕಬ್ಬಿಣ, ಪೊಟಾಷಿಯಂ, ನಾರು ಇದೆಲ್ಲವೂ ಅಕ್ಕಿಗಿಂತ ಅಧಿಕವಿರುವುದರಿಂದ ಅದು ಅಶಕ್ತರಿಗೆ, ಗರ್ಭಿಣಿಯರಿಗೆ, ಮಕ್ಕಳಿಗೆ ಒಳ್ಳೆಯ ಪೋಷಕಾಂಶ ಪೂರೈಸುವ ಆಹಾರ. ಆದಿವಾಸಿಗಳು ಅತಿಥಿಗಳಿಗೆ ನೀಡುತ್ತಿದ್ದ ವಿಶೇಷ ಆಹಾರವೆಂದರೆ ಬಿದಿರಕ್ಕಿಯ ಗಂಜಿ ಮತ್ತು ಜೇನುತುಪ್ಪಗಳ ಮಿಶ್ರಣ!
ಹಳ್ಳಿಗಳಲ್ಲಿ ಬಿದಿರಕ್ಕಿಯಿಂದ ಇಡ್ಲಿ, ದೋಸೆ, ಹಾಲುಬಾಯಿ, ರೊಟ್ಟಿ ಮತ್ತಿತರ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಆಹಾರ ಸಂಶೋಧನಾಲಯಗಳು ಅದರಿಂದ ಬ್ರೆಡ್ ಮತ್ತಿತರ ಅನೇಕ ಖಾದ್ಯ ಮಾಡಬಹುದೆಂದು ತೋರಿಸಿಕೊಟ್ಟಿವೆ. ಹಾಲು, ಸಕ್ಕರೆ, ಮೊಟ್ಟೆ, ವೆನಿಲಾ, ಎಸೆನ್ಸ್ ಇತ್ಯಾದಿ ಬಳಸಿ ತಯಾರಿಸುವ ಬಿದಿರಕ್ಕಿಯ ಖಾದ್ಯ ಆಹಾರಪ್ರಿಯರ ಮನ ಗೆದ್ದಿದೆ. ಭೇದಿ ನಿವಾರಣೆಗೆ ಬಿದಿರಕ್ಕಿಯ ಔಷಧ ನೀಡಲಾಗುತ್ತದೆ. 'ಬಿದಿರು ಹೂ ಬಿಟ್ಟರೆ ಬರಗಾಲ ಬರುತ್ತದೆ' ಎಂಬ ನಂಬಿಕೆಯಿದೆ. ತಜ್ಞರ ಪ್ರಕಾರ, ಬಿದಿರಕ್ಕಿಯು ಇಲಿ- ಹೆಗ್ಗಣಗಳ ಸಂತಾನಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಬಿದಿರಕ್ಕಿಯನ್ನು ತಿಂದು ಅವುಗಳ ವಂಶ ಅಧಿಕವಾಗುತ್ತದೆ. ಅವು ಹೊಲಗದ್ದೆಗಳಿಗೆ ದಾಳಿಯಿಟ್ಟು ಫಸಲನ್ನು ತಿನ್ನುವುದರಿಂದಾಗಿ ಬರುವ ಅಭಾವವೇ ಬರಗಾಲ ಎನ್ನುತ್ತಾರೆ ಅವರು. ಲೆಕ್ಕ ಹಾಕಿದರೆ ಕರಾವಳಿಯಲ್ಲಿ ಈ ಸಲ ಸಾವಿರಾರು ಟನ್ ಬಿದಿರಕ್ಕಿ ಉದುರಿದೆ. ಇದರ ಶೇಖರಣೆ ಹಾಗೂ ಸ್ವಚ್ಛ ಕಾರ್ಯ ಕಷ್ಟಕರವಾದುದರಿಂದ ವರ್ಷಗಟ್ಟಲೆ ಅಸಂಖ್ಯ ಮಂದಿಯ ಹಸಿವು ನೀಗಲು ಸಾಕಾಗುತ್ತಿದ್ದ ಈ ಅಮೂಲ್ಯ ಆಹಾರ ನಷ್ಟವಾಗಿ ಹೋಗಿದೆ. ಮತ್ತೆ ಬಿದಿರಕ್ಕಿಯ ಮುಖ ನೋಡಲು ಕೆಲವು ದಶಕಗಳೇ ಬೇಕು.
- ಪ. ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


