ಮಹಾ 200

80ರ ದಶಕದಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಹಿಂದಿ ಭಾಷೆಯಲ್ಲಿ ರಾಮಾಯಣ ಮತ್ತು ಮಹಾಭಾರತಗಳು ಸೀರಿಯಲ್ಗಳಾಗಿ ಪ್ರಸಾರವಾಗಿ ಅಪಾರ ಜನಪ್ರಿಯತೆ ಪಡೆದವು. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಅಷ್ಟೊಂದು ಬಜೆಟ್ ಹಾಕಿ, ಲಾಭದ ಗ್ಯಾರಂಟಿಯಿಲ್ಲದೆ, ಇವುಗಳನ್ನು ಸೀರಿಯಲ್ ಮಾಡಲು ಮುಂದೆ ಬಂದವರ ಸಂಖ್ಯೆ ಬಲು ಕಡಿಮೆ. ಅಂಥದೊಂದು ಸಾಹಸವನ್ನು ಮುಂಬಯಿಯ ಸಿನಿವಿಸ್ಟಾಸ್ ಸಂಸ್ಥೆ ಈಗ ಮಾಡುತ್ತಿದೆ.
ಕನ್ನಡದಲ್ಲಿ ಈ ಹಿಂದೆ ಖ್ಯಾತ ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ರಾಮಾಯಣ ಧಾರಾವಾಹಿ ನಿರ್ಮಿಸಲು ಆರಂಭಿಸಿದ್ದರು. ಅವರ ಅಕಾಲಿಕ ಮರಣದಿಂದ ಅದು ಸ್ಥಗಿತವಾಗಿತ್ತು. ನಂತರ ಬಂದ ಪೌರಾಣಿಕ ಧಾರಾವಾಹಿ ಶಿವಲೀಲಾಮೃತ. ಸಿನಿವೆಸ್ಟಾಸ್ ಸಂಸ್ಥೆ ಕನ್ನಡದಲ್ಲಿ 'ಸೀತೆ' ಹೆಸರಿನಲ್ಲಿ ಸಂಪೂರ್ಣ ರಾಮಾಯಣವನ್ನು ಮೊದಲಿಗೆ ನಿರ್ಮಿಸಿತು. ಹಿಂದಿಯಲ್ಲಿ ಬಂದ ರಾಮಾಯಣಕ್ಕಿಂತ ಹೆಚ್ಚು ವಿಸ್ತಾರವಾಗಿ, ಹೆಚ್ಚಿನ ಕಂತುಗಳಲ್ಲಿ, ಇಂದಿನ ತಂತ್ರಜ್ಞಾನವನ್ನು ಬಳಸಿ 560 ಕಂತುಗಳಲ್ಲಿ ಈ ಧಾರಾವಾಹಿಯನ್ನು ಕನ್ನಡ ಕಿರುತೆರೆಗೆ ನಿರ್ಮಿಸಿಕೊಟ್ಟಿತು. ಉದಯ ಚಾನೆಲ್ನಲ್ಲಿ ಬಂದ ಈ ಧಾರಾವಾಹಿ ಜನಮೆಚ್ಚುಗೆಯನ್ನೂ ಗಳಿಸಿತು. ಮುಂದಿನ ಸಾಹಸವೇ ಮಹಾಭಾರತ.
ಹಿಂದಿಯಲ್ಲಿ ಅಂದು ಪ್ರಸಾರವಾದ ಬಿ.ಆರ್.ಚೋಪ್ರಾರ ಮಹಾಭಾರತ ಪ್ರತಿ ಭಾನುವಾರ ಒಂದು ಗಂಟೆ ಪ್ರಸಾರವಾಗುತ್ತಿತ್ತು. ನೂರಕ್ಕಿಂತ ಹೆಚ್ಚು ಕಂತುಗಳು ಬಂದರೂ ಕಥೆಯ ಅಗಾಧ ವ್ಯಾಪ್ತಿಯನ್ನು ಚಿತ್ರಿಸಲಾಗದಂತಹ ಮಿತಿಯಿತ್ತು. ಆದರೆ ಕನ್ನಡ ಮಹಾಭಾರತ ಧಾರಾವಾಹಿ ಆ ಮಿತಿಯನ್ನು ಮೀರಿ ಕಾವ್ಯದಲ್ಲಿರುವ ಘಟನೆಗಳನ್ನು ವಿವರವಾಗಿ ಚಿತ್ರಿಸುತ್ತಿದೆ. ಹಿಂದಿಯ ಮಹಾಭಾರತ ಶಂತನು, ಭೀಷ್ಮರ ಕಥೆಯೊಡನೆ ಆರಂಭವಾದರೆ, ಕನ್ನಡದ ಮಹಾಭಾರತ ಪಾಂಡವರು ಮತ್ತು ಕೌರವರ ಶಸ್ತ್ರಪ್ರದರ್ಶನದ ಘಟನೆಯ ಮೂಲಕ ಆರಂಭವಾಯಿತು. ಅದರ ಹಿಂದಿನ ಕಥೆಗಳನ್ನು ಫ್ಲಾಶ್ಬ್ಯಾಕ್ನಲ್ಲಿ ಅಳವಡಿಸಿಕೊಳ್ಳಲಾಯಿತು.
ಸಂಜೆ 6ರಿಂದ 6.30ರ ಸಮಯದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಈಗ 200 ಕಂತುಗಳ ಹಂತ ತಲುಪಿದೆ. ಶುಕ್ರವಾರ 200ನೇ ಕಂತು. ದ್ರುಪದನ ಪರಾಭವ, ಅರಗಿನ ಮನೆಯ ಘಟನೆ, ಹಿಡಿಂಬ ವಧೆ, ಮತ್ಸ್ಯಯಂತ್ರ ಭೇದನ, ದ್ರೌಪದಿಯ ವಿವಾಹ, ಧರ್ಮರಾಜನ ಪಟ್ಟಾಭಿಷೇಕ, ಇಂದ್ರಪ್ರಸ್ಥ ನಿರ್ಮಾಣಗಳನ್ನು ದಾಟಿ ರಾಜಸೂಯ ಯಾಗದ ಹಂತಕ್ಕೆ ತಲುಪಿದೆ. ಅತ್ಯಂತ ವಿಸ್ತಾರವಾಗಿ ಪ್ರಸ್ತುತಪಡಿಸಲಾಗುತ್ತಿರುವ ಈ ಸೀರಿಯಲ್ನಲ್ಲಿ ಗ್ರಾಫಿಕ್ ತಂತ್ರಜ್ಞಾನ ಮತ್ತು ಸೆಟ್ಗಳ ಅದ್ದೂರಿತನ ಹಿಂದಿನ ಧಾರಾವಾಹಿಗಿಂತ ಹೆಚ್ಚಿನದಾಗಿದೆ. ಇದು ಕನ್ನಡದಲ್ಲೇ ಅತ್ಯಂತ ಹೆಚ್ಚು ವೆಚ್ಚದ ಧಾರಾವಾಹಿ ಎನ್ನಬಹುದು.
ಮಹಾಭಾರತ ಜಗತ್ತಿನಲ್ಲೇ ಅತ್ಯಂತ ಬೃಹತ್ತಾದ ಕಾವ್ಯ. ಇಂತಹ ಬೃಹತ್ ಕಥೆಯನ್ನು ಹೆಚ್ಚಿನ ವಿವರಗಳೊಂದಿಗೆ ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ನೀಡುವುದು ದೊಡ್ಡ ಸವಾಲೇ ಸರಿ. ಈ ಸವಾಲನ್ನು ಸಿನಿವೆಸ್ಟಾಸ್ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಕುಂಬಳಗೋಡಿನಲ್ಲಿ ಹತ್ತು ಸಾವಿರ ಚದರಡಿಯ ಜಾಗದಲ್ಲಿ ಅತ್ಯಂತ ಅದ್ದೂರಿ ಅರಮನೆಯ ಒಳಾಂಗಣದ ಸೆಟ್, ಕ್ರೋಮೋಕೀ ಸೆಟ್ ಹಾಕಲಾಗಿದೆ. ಪಾತ್ರಧಾರಿಗಳ ತನ್ಮಯತೆ ಮತ್ತು ಗ್ರಾಫಿಕ್ಸ್ಗಳ ಬಗ್ಗೆ ಮೆಚ್ಚುಗೆ ಕೇಳಬರುತ್ತಿದೆ. ಶಂಕರ್ ಮಹದೇವನ್ ಹಾಡಿರುವ ಶೀರ್ಷಿಕೆ ಗೀತೆ ಕೂಡ ಗಮನ ಸೆಳೆದಿದೆ.
ಮೂಲ ವ್ಯಾಸಭಾರತವನ್ನೇ ಆಧರಿಸಿ ಚಿತ್ರಕಥೆ, ಸಂಭಾಷಣೆ ರಚನೆಯಾಗುತ್ತಿರುವ ಈ ಧಾರಾವಾಹಿಯಲ್ಲಿ ಭಾಗವತ ಮತ್ತಿತರ ಪುರಾಣಗಳ ಕೆಲವು ಘಟನೆಗಳನ್ನೂ ಅಳವಡಿಸಲಾಗಿದೆ. ಕನ್ನಡದ ಅನುಭವಿ ಕಲಾವಿದರ ಜೊತೆಗೆ ಸಾಕಷ್ಟು ಸಂಖ್ಯೆಯ ಹೊಸ ಪ್ರತಿಭೆಗಳು ಈ ಧಾರಾವಾಹಿಯಲ್ಲಿ ಪಾತ್ರ ವಹಿಸುತ್ತಿದ್ದಾರೆ. ಹೊಸ ಪಾತ್ರಧಾರಿಗಳ ಆಯ್ಕೆ ಮತ್ತು ತರಬೇತಿಗೆ ಸಿನಿವೆಸ್ಟಾಸ್ ಸಾಕಷ್ಟು ಶ್ರಮ ವಹಿಸಿದೆ. ಇಂಥ ಸಾಹಸದ ಮೂಲದಲ್ಲಿ ಸಂಸ್ಥೆಯ ರೂವಾರಿಗಳಾದ ಸುನಿಲ್ ಮೆಹ್ತಾ ಮತ್ತು ಪ್ರೇಮ್ ಕಿಷನ್ ಇದ್ದಾರೆ. ಸೀತೆ ಹಾಗೂ ಈ ಮಹಾಭಾರತದ ನಿರ್ದೇಶಕರು ಕ್ರಿಷನ್ ಸೇಠಿ. ಛಾಯಾಗ್ರಾಹಕರು ಕಿಶೋರ್ ಕಪಾಡಿಯಾ, ಸಂಶೋಧನೆ, ಚಿತ್ರಕಥೆ ಜೆ.ಎಂ.ಪ್ರಹ್ಲಾದ್, ಸಂಭಾಷಣೆ ರುದ್ರಮೂರ್ತಿ ಶಾಸ್ತ್ರಿ ಮತ್ತು ಪ್ರಹ್ಲಾದ್.
- ಪ್ರಹ್ಲಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


