ಸಾಲ್ಟ್ ಡಯೆಟ್
ಹಾಗೊಂದು ಗಾದೆಗೆ ನೀವೂ ಕಿವಿಗೊಟ್ಟಿದ್ದೀರಿ; 'ಉಪ್ಪು ತಿಂದವ ನೀರು ಕುಡಿಯಲೇಬೇಕು'. ಗಾದೆಯ ದನಿ ಬೇರೆಯೇ ಇದ್ದರೂ ನೀರು ಕುಡಿಯದೇ ಉಪ್ಪಿನ ಪರಿಣಾಮವನ್ನು ಒದ್ದೋಡಿಸಲು ಸಾಧ್ಯವೇ ಇಲ್ಲ. ಹಾಗೆಯೇ 'ಉಪ್ಪು ತಿಂದವ ದಡ್ಡನಾಗುವುದಿಲ್ಲ' ಎಂಬ ಮಾತನ್ನೂ ಕೇಳಿರಬಹುದು. ದಕ್ಷಿಣ ಕನ್ನಡ, ಉಡುಪಿ, ಮಂಗಳೂರಿನಂಥ ಕರಾವಳಿ ಪ್ರದೇಶಗಳ ಮಣ್ಣು, ನೀರಿನಲ್ಲಿ ಉಪ್ಪು ಹೆಚ್ಚು ಬೆರೆತಿರುವುದರಿಂದ ಅಲ್ಲಿನ ಜನ ತುಂಬಾ ಚುರುಕು ಎಂಬುದನ್ನೂ ಆಲಿಸಿದ್ದೀರಿ.
ಯಾಕೆ ಈ ಉಪ್ಪಿನ ಬಗ್ಗೆ ಇಷ್ಟು ಪೀಠಿಕೆ ಹಾಕಿದೆ ಎಂದರೆ, ಈಗ ಶುರುವಾಗಿರುವ ಡಯೆಟ್ ಟ್ರೆಂಡ್ನಲ್ಲಿ ಸಾಲ್ಟ್ ಡಯೆಟ್ ಕೂಡ ಒಂದು. ಮಾಲ್ಗಳಲ್ಲಿ ಸಿಗುವ ಸಂಸ್ಕರಿಸಿದ ಆಹಾರ ಪದಾರ್ಥಗಳ ಪ್ಯಾಕೆಟ್ಟಿನಲ್ಲಿ 'ಲೋ ಸಾಲ್ಟ್' ಎಂಬ ಸಾಲುಗಳೂ ಕಾಣಿಸಿಕೊಳ್ಳುತ್ತಿವೆ. 'ರುಚಿಗೆ ತಕ್ಕಂತೆ ಉಪ್ಪು' ಎಂಬ ಕಾಲ ಬದಲಾಗಿ, 'ಆರೋಗ್ಯಕ್ಕೆ ತಕ್ಕಂತೆ ಕಡಿಮೆ ಉಪ್ಪು' ಎಂಬ ಮಾತನ್ನು ಈಗಿನ ಪೀಳಿಗೆ ಅನುಸರಿಸಲು ಹೊರಟಿದೆ.
ಹೌದು, ದೇಹಕ್ಕೆ ಅತಿಯಾಗಿ ಉಪ್ಪು ಬೇಡವೇ ಬೇಡ. ಆದರೆ, ಅಗತ್ಯ ಪ್ರಮಾಣದಲ್ಲಿ ಬೇಕೇ ಬೇಕು. ದೇಹದಲ್ಲಿನ ಅನಗತ್ಯ ತ್ಯಾಜ್ಯ ಬೆವರಿನ ಮೂಲಕ ಹೋಗಬೇಕು. ಹೀಗಾಗಿ, ಉಪ್ಪು ಬೇಕು. ನರವ್ಯೂಹ ಮತ್ತು ಸ್ನಾಯುಗಳಿಗೆ ಶಕ್ತಿ ತುಂಬಲು ಸೋಡಿಯಂ ಅತ್ಯಗತ್ಯ.
ರಕ್ತಚಲನೆಗೂ, ಉಪ್ಪಿಗೂ ನೇರ ಸಂಬಂಧ ಇದೆ. ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದರೆ, ರಕ್ತದೊತ್ತಡ ಜಾಸ್ತಿಯಾಗುತ್ತದೆ. ಅದಕ್ಕಾಗಿಯೇ ವೈದ್ಯರು ಬಿಪಿ ಇದ್ದವರಿಗೆ 'ಜಾಸ್ತಿ ಉಪ್ಪು ತಿನ್ನಬೇಡಿ' ಎಂದು ಸಲಹೆ ನೀಡುತ್ತಾರೆ. ಉಪ್ಪಿಗೆ ನೀರನ್ನು ಹೀರಿಕೊಳ್ಳುವ ಶಕ್ತಿಯೂ ಇದೆ. ನಾಲಗೆ ಮೇಲೆ ಉಪ್ಪು ಬಿದ್ದರೆ ಎಂಜಲು ಹೇಗೆ ಒಣಗುತ್ತದೋ, ದೇಹದಲ್ಲಿ ಸೋಡಿಯಂ ಹೆಚ್ಚಾದರೆ ನೀರಿನಂಶ ಕುಗ್ಗುತ್ತದೆ.
ಉಪ್ಪಿನ ಸೇವನೆ ನಮ್ಮ ವಯೋವಾನವನ್ನೂ ಅವಲಂಬಿಸಿದೆ. 51ಕ್ಕಿಂತ ಕಡಿಮೆ ವಯಸ್ಸಿನವರಿಗೆ ನಿತ್ಯ 2,300 ಮಿಲಿಗ್ರಾಂನಷ್ಟು ಸೋಡಿಯಂ ಬೇಕೇಬೇಕು. 51ಕ್ಕಿಂತ ಮೇಲ್ಪಟ್ಟವರು ಆ ಪ್ರಮಾಣವನ್ನು ಕೊಂಚ ತಗ್ಗಿಸಬೇಕು. ಅಂದರೆ, 1,500 ಗ್ರಾಂ.ನಷ್ಟು ಸಾಕು. ಆದರೆ ವರದಿಯೊಂದರ ಪ್ರಕಾರ, ಪ್ರತೀ ಭಾರತೀಯ 3,400 ಮಿಲಿಗ್ರಾಂ ಉಪ್ಪನ್ನು ನಿತ್ಯ ಸೇವಿಸುತ್ತಿದ್ದಾನೆ. ನಮ್ಮ ಆರೋಗ್ಯದ ಏರುಪೇರಿಗೆ ಇದೂ ಒಂದು ಕಾರಣ.
ಮೂಳೆಗಳು ದುರ್ಬಲಗೊಳ್ಳಲು ಮುಖ್ಯ ಕಾರಣ ಅಧಿಕ ಉಪ್ಪುಸೇವನೆ. ಅಧಿಕ ಉಪ್ಪಿನಿಂದ ಹೃದಯಕ್ಕೂ ತೊಂದರೆಯುಂಟು.
ಜಾಸ್ತಿ ಉಪ್ಪಿನಿಂದ ದಣಿವೂ ಹೆಚ್ಚುತ್ತದೆ. ಮುಖದಲ್ಲಿ ಕಳೆಯೂ ಕುಂದುತ್ತದೆ. ನಮ್ಮ ನಿತ್ಯ ಅನೇಕ ಪದಾರ್ಥಗಳಿಗೆ ಉಪ್ಪಿನ ಅಗತ್ಯವೇ ಇರುವುದಿಲ್ಲ. ಉದಾ: ಅಕ್ಕಿ. ಕೆಲವರು ಅನ್ನ ಮಾಡುವಲ್ಲಿಯೂ ಉಪ್ಪು ಬೆರೆಸುತ್ತಾರೆ. ಹೀಗಾಗಿ, ಉಪ್ಪು ಬಳಕೆಯಲ್ಲೂ ನಾವು ಜಾಣ್ಮೆ ಪ್ರದರ್ಶಿಸಬೇಕಿದೆ. ಬೇರೆಲ್ಲ ಡಯೆಟ್ಗಳನ್ನು ಬದಿಗೊತ್ತಿ, ಸಾಲ್ಟ್ ಡಯೆಟ್ ಅನ್ನು ಆರೋಗ್ಯ ದೃಷ್ಟಿಯಿಂದ ಅನುಸರಿಸೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

