ಮಂಜುಕೇರಿ
ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ.. ಬೆಳ್ಳಿ ಬಳ್ದಿದ್ ರೋಡ್ ಇದ್ದಂಗೆ.. ಸಾಫಾಗ್ ಹಳ್ಳ ತಿಟ್ಟಿಲ್ದಂಗೆ.. ಮಡಿಕೇರಿ ಮೇಲ್ ಮಂಜು...'

'ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ.. ಬೆಳ್ಳಿ ಬಳ್ದಿದ್ ರೋಡ್ ಇದ್ದಂಗೆ.. ಸಾಫಾಗ್ ಹಳ್ಳ ತಿಟ್ಟಿಲ್ದಂಗೆ.. ಮಡಿಕೇರಿ ಮೇಲ್ ಮಂಜು...'
ಇದು ಮಳೆಗಾಲ ಮಾತ್ರವಲ್ಲ ಪ್ರತಿ ನಿತ್ಯ ಮಡಿಕೇರಿಗೆ ಹೊಂದಿಕೊಳ್ಳುವ ಅರ್ಥಪೂರ್ಣ ಹಾಡಿನ ಸಾಲುಗಳು. ಯಾಕೆಂದರೆ ಮಂಜಿಲ್ಲದ ಮಡಿಕೇರಿಯನ್ನು ಊಹಿಸಿಕೊಳ್ಳುವುದೇ ಅಸಾಧ್ಯ. ಮಳೆಯ ಆರಂಭದ ದಿನಗಳಲ್ಲಿ ಮಡಿಕೇರಿ ಮೇಲೆ ಹೊದಿಕೆಯಂತೆ ಹಾಸಿರುವ ದಟ್ಟನೆಯ ಮಂಜಿನ ವೈಭವ ಊಹೆಗೂ ನಿಲುಕದ್ದು. ಮಡಿಕೇರಿ ಸುತ್ತಲಿನ ಹಸಿರಿನ ಗಿರಿಗಳ ಮೇಲಿನಿಂದ ಅಲೆ ಅಲೆಯಾಗಿ ನಗರದ ಮೇಲೆ ಆವರಿಸಿಕೊಳ್ಳುವ ಮಂಜು ಕೆಲವು ಗಂಟೆ ಪಟ್ಟಣವನ್ನು ತನ್ನ ವಶಕ್ಕೆ ತೆಗೆದುಕೊಂಡು ಬಿಡುತ್ತದೆ. ಆಗ ವಾಹನಗಳು ಹಗಲು ಹೊತ್ತಲ್ಲೂ ಲೈಟ್ ಹಾಕಿಕೊಂಡೇ ಸಂಚರಿಸಬೇಕು.
ಮಳೆ ನಿಂತ ಕೂಡಲೆ ತಾನೂ ಇದ್ದೇನೆ ಎಂಬಂತೆ ರಭಸದಿಂದ ಮಂಜು ಕುಳಿರ್ಗಾಳಿಯೊಂದಿಗೆ ಪ್ರತ್ಯಕ್ಷವಾಗುತ್ತದೆ. ಉದ್ಯಾನವನ ರಾಜಾಸೀಟ್ ಸೇರಿದಂತೆ ಸುತ್ತಲಿನ ಹಸಿರಿನ ಮೇಲೆಲ್ಲ ಇಬ್ಬನಿಯ ಸಿಂಚನ. ಮಡಿಕೇರಿ ಮಿಂದು ಮಡಿಯಾದಂತೆ. ತಾನೇ ಎತ್ತರ ಎಂದು ಜಂಭದಿಂದ ಬೀಗುವ ಬೆಟ್ಟಗಳೆಲ್ಲಾ ಮಂಜಿನಡಿ ಮಾಯವಾಗುತ್ತವೆ.
ಶೀತದ ಕಿರಿಕಿರಿ ತಪ್ಪಿಸಿಕೊಳ್ಳಬಯಸುವವರಿಗೆ ಈಗ ಟೋಪಿ, ಶಾಲು, ಸ್ವೆಟರ್, ಜರ್ಕಿನ್ ಬೇಕೇ ಬೇಕು. ಇಲ್ಲಿ ವರ್ಷದ ಯಾವುದೇ ಕಾಲದಲ್ಲಿಯೂ ಮಂಜು ಅತಿಥಿಯೇ. ಆದರೆ ಮಳೆಗಾಲದ ದಟ್ಟ ಮಂಜು ಬೇರೆ ದಿನಗಳಲ್ಲಿ ಕಾಣಸಿಗದು. ಮಳೆ ಕಡಿಮೆ, ಮರ ಕಡಿಮೆ, ಚಳಿ ಕಡಿಮೆ ಎಂದು ಗೊಣಗುವವರು ಮಂಜು ಕಮ್ಮಿಯಾಗಿದೆ ಎಂದು ಹೇಳುವುದಿಲ್ಲ. ಮಂಜು ಮಡಿಕೇರಿಯನ್ನು ಅಷ್ಟೊಂದು ಅಪ್ಯಾಯಮಾನವಾಗಿ ಅಪ್ಪಿಕೊಂಡಿದೆ.
ಜಿ.ಪಿ. ರಾಜರತ್ನಂ 'ಮಡಿಕೇರೀಲಿ ಮಂಜು' ಎಂಬ ಕವಿತೆ ಬರೆದು ದಶಕಗಳೇ ಕಳೆದಿವೆ. ಮಡಿಕೇರಿ ಬಳಿಯ ಗುಂಡುಕುಟ್ಟಿ ಮಂಜುನಾಥಯ್ಯ ಎಂಬ ಹಿರಿಯ ಕಾಫಿ ಬೆಳೆಗಾರರ ಬಂಗಲೆಯಲ್ಲಿ ತಂಗಿದ್ದಾಗ ಮಂಜನ್ನು ಆಸ್ವಾದಿಸಿ ರಾಜರತ್ನಂ ಈ ಕಾವ್ಯ ಬರೆದರಂತೆ. ಮಡಿಕೇರಿಗೆ ಮಂಜು ಎಂಬ ಮಾಯಾಜಾಲ ಸದಾ ಭೂಷಣ. ರಾಜರತ್ನಂ ಬರೆದಂತೆ 'ಹಗಲೇ ಬರಲಿ ರಾತ್ರೇ ಬರಲಿ, ಬಿಸಿಲು ನೆಳ್ಳು ಏನೇ ಇರಲಿ, ಕಣ್ಮರೆಯಾಗಾಕ್ ತಾವ್ ಕೊಡಾಲ್ದು ಮಡಿಕೇರಿಗೆ ಮಂಜು...'
- ಅನಿಲ್ ಎಚ್.ಟಿ
anilmadikeri@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


