ಹುಡುಕಾಟ
ಅಪರಾಧ ಪ್ರಕರಣಗಳಲ್ಲಿ ಪಳಗಿದ ಪೊಲೀಸ್ ಅಧಿಕಾರಿಗಳು, ಯಾವುದೇ ಕಳ್ಳತನ...

ಕದ್ದು ಕದ್ದು ಎಸ್ಕೇಪ್ ಆಗ್ತಿದ್ದ!
ಅಪರಾಧ ಪ್ರಕರಣಗಳಲ್ಲಿ ಪಳಗಿದ ಪೊಲೀಸ್ ಅಧಿಕಾರಿಗಳು, ಯಾವುದೇ ಕಳ್ಳತನ ನಡೆದರೂ ಕಳವು ಮಾಡಿದವ ಇಂಥವನೇ ಎಂದು ಕೂಡಲೇ ಬೆನ್ನು ಬಿದ್ದು, ಅಪರಾಧಿಯಿಂದ ನಿಜ ಕಕ್ಕಿಸುವಲ್ಲಿ ಯಶಸ್ವಿಯಾಗುತ್ತಾರೆ. ಉದಾಹರಣೆಗೆ, ಇಡೀ ರಾಜ್ಯವನ್ನು ನಡುಗಿಸಿದ್ದ ದಂಡುಪಾಳ್ಯದ ಗ್ಯಾಂಗ್, ಸರಣಿ ಹಂತಕ ಉಮೇಶ್ ರೆಡ್ಡಿ, ಸರಣಿ ಹಂತಕಿ ಸೈನೈಡ್ ಮಲ್ಲಿಕಾರಂಥ ಪ್ರಕರಣಗಳು. ಯಾವುದೇ ವೃತ್ತಿಪರ ಅಪರಾಧಿಯಾದವನು ತನ್ನದೇ ವೃತ್ತದೊಳಗೆ ಅಪರಾಧ ಎಸಗುತ್ತಾನೆ. ಯಾವುದೇ ಕಾರಣಕ್ಕೂ ಆತ ತನ್ನ ವೃತ್ತಪರಧಿ ಮೀರಿ ನಡೆಯುವುದಿಲ್ಲ.
ಉದಾಹರಣೆಗೆ, ಬೀಗ ಒಡೆದು ಕಳವು ಮಾಡುವುದು ಒಂದು ಗುಂಪಿನ ಕೃತ್ಯವಾದರೆ, ಬೀಗ ಹಾಕಿದ ಮನೆಗೆ ಕನ್ನ ಹಾಕಿ ಒಳಪ್ರವೇಶಿಸಿ ಕದಿಯುವುದು ಮತ್ತೊಂದು ಗುಂಪಿನ ಕೆಲಸ. ಇವರು ಅಪ್ಪಿತಪ್ಪಿಯೂ ತಮ್ಮ ಕೆಲಸವನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಹಾಗೆ ಬದಲಿಸಿದರೆ ಸಿಕ್ಕಿ ಬೀಳುತ್ತೇವೆ ಎಂಬ ಭೀತಿ ಅವರಲ್ಲಿ ಬಲವಾಗಿ ಬೇರೂರಿರುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.
ಕಳವು ಮಾಡುವ ವಿಧಾನಗಳಲ್ಲಿಯೇ ಆರೋಪಿ ಯಾರೆಂಬುದನ್ನು ಕಂಡುಹಿಡಿಯುವ ತಾಕತ್ತು ಹಿರಿಯ ಪೊಲೀಸರಿಗಿದೆ. ಅದು ಪಳಗಿದ ಹಳೇ ಕಳ್ಳರಾದರೆ ಮಾತ್ರ ಎಂಬುದನ್ನು ಗಮನಿಸಬೇಕಾದ ವಿಷಯ. ಏಕೆಂದರೆ ಈಗ ತಂತ್ರಜ್ಞಾನ ಬೆಳೆದು ರಾಜ್ಯದವರು ಮಾತ್ರವಲ್ಲದೆ ಹೊರ ರಾಜ್ಯದವರೇ ಅಧಿಕವಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವುದು ತಿಳಿದ ವಿಚಾರ.
ಇತ್ತೀಚೆಗೆ ಬೆಂಗಳೂರಿನ ಪೊಲೀಸರು, ಉತ್ತರಪ್ರದೇಶದ ಇಬ್ಬರು ಕಳ್ಳರನ್ನು ಬಂಧಿಸಿದರು. ಲಖ್ನೌದಿಂದ ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು ಬೆಂಗಳೂರಿನಲ್ಲಿ ಸರಗಳ್ಳತನ ಮಾಡಿ ಮತ್ತೆ ವಿಮಾನದಲ್ಲಿ ಪರಾರಿಯಾಗುತ್ತಿದ್ದರು. ವಿಮಾನದಲ್ಲಿ ಸಾಮಾನ್ಯ ಕಳ್ಳರು ಪ್ರಯಾಣಿಸುವುದನ್ನು ಯಾವ ಪೊಲೀಸರೂ ಈವರೆಗೆ ಕಂಡಿರಲಿಲ್ಲ.
ರಾಜ್ಯ ಕಂಡ ಅತ್ಯುತ್ತಮ ಪೊಲೀಸರಲ್ಲೊಬ್ಬರು ಹನುಮಂತಪ್ಪ. ಪೊಲೀಸರಿಗೆ ತೀವ್ರ ತಲೆನೋವಾಗಿದ್ದ ಒಬ್ಬ ಕುಖ್ಯಾತ ರೌಡಿಯನ್ನು ಪಾಯಿಂಟ್ ಬ್ಲಾಕ್ನಲ್ಲಿ ಎನ್ಕೌಂಟರ್ ಮಾಡಿದ ಕೀರ್ತಿ ಇವರ ಖಾತೆಯಲ್ಲಿದೆ. ಇಂಥ ಅಧಿಕಾರಿಗೆ ತಲೆನೋವಾಗಿದ್ದ ಕಳ್ಳನೊಬ್ಬನ ಕಥೆ ಇಲ್ಲಿದೆ...
--
ಮಂಡ್ಯ ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ಹನುಮಂತಪ್ಪ ಇನ್ಸ್ಪೆಕ್ಟರ್ ಆಗಿದ್ದರು. ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಒಬ್ಬ ಕಳ್ಳನ ಕಾಟದ ಬಗ್ಗೆ ಯಾವಾಗಲೂ ದೂರು. ಆತನ ಹೆಸರೇ 'ಕಾಟ'! ಪ್ರತಿ ಗ್ರಾಮದಿಂದ ನಾಲ್ಕೈದು ದೂರುಗಳು ಈತನ ವಿರುದ್ಧ ದಾಖಲು. ಎಲ್ಲ ಪ್ರಕರಣಗಳಲ್ಲೂ ಕಳ್ಳ ಒಬ್ಬನೇ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈತನ ಚಟವೆಂದರೆ ಬೀಗ ಹಾಕಿದ ಮನೆಗಳನ್ನಷ್ಟೇ ಇವನು ಲೂಟಿ ಮಾಡುತ್ತಿದ್ದ.
'ಕಾಟ' ಆರೂವರೆ ಅಡಿ ಎತ್ತರವಿದ್ದ. ಪರ್ವತ ದೇಹ. ಸುಮಾರು ಮೂವತ್ತೈದು ವರ್ಷ ವಯಸ್ಸು. ಹತ್ತು ಜನ ಅವನ ಮೇಲೆ ಬಿದ್ದರೂ ಕೊಡವಿಕೊಂಡು ಓಡಿ ಹೋಗುವ ಸಾಮರ್ಥ್ಯವುಳ್ಳವ. ಜತೆಗೆ ಅವನು ಮನೆಯಲ್ಲಿರುವ ಚಿನ್ನ, ಬೆಳ್ಳಿ ಮತ್ತು ಹಣದ ಜತೆಗೆ ಮನೆಯಲ್ಲಿ ಮಾಡಿಟ್ಟಿರುವ ಅಷ್ಟೂ ಅಡುಗೆಯನ್ನು ತಿಂದು, ಅಡುಗೆಮನೆಯಲ್ಲಿನ ಸಕಲ ಪದಾರ್ಥ, ಸೀಮೆಎಣ್ಣೆ ಮತ್ತು ಸ್ಟವ್ಗಳನ್ನು ಕದಿಯುತ್ತಿದ್ದ! ಅದರಲ್ಲೂ ಮಸಾಲೆ ಪದಾರ್ಥಗಳು ಆತನಿಗೆ ಅಚ್ಚುಮೆಚ್ಚು. ಸಾಕಿದ ಕೋಳಿ ಮತ್ತು ಕುರಿಗಳನ್ನು ಕಿಡ್ನ್ಯಾಪ್ ಮಾಡುತ್ತಿದ್ದ.
ಇಂಥ ವಿಚಿತ್ರ ಕಳ್ಳನ ಬಗ್ಗೆ ಸುತ್ತಮುತ್ತಲ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿತ್ತು. ಈತನ ಬಗ್ಗೆ ಮಾಹಿತಿ ಕಲೆ ಹಾಕಿದ ಇನ್ಸ್ಪೆಕ್ಟರ್ಗೆ ತಲೆಬಿಸಿಯಾಗತೊಡಗಿತು. ಅದಕ್ಕೆ ಕಾರಣ ಇವರ ಠಾಣೆಯಲ್ಲಿದ್ದ ಬಹುತೇಕ ಪೇದೆಗಳು ನಿವೃತ್ತಿಯ ಆಸುಪಾಸಿನಲ್ಲಿದ್ದು, ವಿಪರೀತ ಹೊಟ್ಟೆ ಬೆಳೆಸಿಕೊಂಡಿದ್ದರು. ನೂರು ಮೀಟರ್ ಓಡಲೂ ಆಗುತ್ತಿರಲಿಲ್ಲ. ಕಳ್ಳ ತಿರುಗಿಬಿದ್ದರೆ, ಎದುರಿಸುವ ತಾಕತ್ತೂ ಆ ಪೇದೆಗಳಿಗಿರಲಿಲ್ಲ. ಇನ್ನು ಸಾಮಾನ್ಯ ಕಳ್ಳನ ಮೇಲೆ ಗುಂಡು ಹಾರಿಸುವುದು ಕಾನೂನು ಪ್ರಕಾರ ತಪ್ಪೆಂಬುದು ಅವರಿಗೆ ಮನವರಿಕೆಯಾಗಿತ್ತು. ಹಾಗಾದರೆ ಅವನನ್ನು ಹಿಡಿಯುವುದು ಹೇಗೆ ಎಂಬ ಯೋಚನೆಯಲ್ಲಿಯೇ ಎರಡು ದಿನಗಳು ಕಳೆದಿತ್ತು.
ಅದೇ ಸಮಯಕ್ಕೆ ಪಕ್ಕದ ಒಂದು ಹಳ್ಳಿಯಲ್ಲಿ ಅದೇ ಕಳ್ಳ ಮನೆಗೆ ನುಗ್ಗಿ ಆಹಾರ ಪದಾರ್ಥಗಳನ್ನು ದೋಚುತ್ತಿರುವಾಗ ಅಡ್ಡಿಪಡಿಸಲೆತ್ನಿಸಿದ ಗ್ರಾಮಸ್ಥರಿಗೆ ಮಚ್ಚು ತೋರಿಸಿ ಬೆದರಿಸಿ ಓಡಿಹೋಗಿರುವ ಸುದ್ದಿ ತಿಳಿಯಿತು. ಇದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸುವ ಜತೆಗೆ ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳುವ ಅಪಾಯಕ್ಕೂ ದೂಡಿತ್ತು. ಇನ್ನು ತಡ ಮಾಡಿ ಪ್ರಯೋಜನವಿಲ್ಲ ಎಂದು ಭಾವಿಸಿದ ಇನ್ಸ್ಪೆಕ್ಟರ್ ಕಳ್ಳನ ಬಂಧನಕ್ಕೆ ಮುಂದಾದರು.
---
ಮನೆಗಳಿಗೆ ಬೀಗ ಹಾಕಿರುವುದನ್ನು ಕಾಟ, ಸಂಜೆಯ ಮಬ್ಬುಗತ್ತಲಿನಲ್ಲಿ ಬಂದು ಪರಿಶೀಲಿಸುತ್ತಿದ್ದ. ಮಾಹಿತಿ ಪೂರ್ತಿ ಕಲೆಹಾಕಿದ ಇನ್ಸ್ಪೆಕ್ಟರ್ 'ಕಾಟ'ನನ್ನು ಬಂಧಿಸಲು ಸುಲಭದ ಉಪಾಯ ಮಾಡಿದರು. ಆದರೆ ಅದು ಅವರಿಗೇ ಮುಳುವಾಗುತ್ತದೆ ಅಂತ ಗೊತ್ತಾಗಲಿಲ್ಲ.
ಈ ಎರಡು ವಾರಗಳಿಂದ ಒಂದು ಹಳ್ಳಿಗೆ ಆತ ಬಂದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಇನ್ಸ್ಪೆಕ್ಟರ್ ಅದೇ ಹಳ್ಳಿಯ ಅಂಚಿನಲ್ಲಿದ್ದ ಮನೆಯವರ ಮನವೊಲಿಸಿ ಅವರನ್ನು ಬೇರೆಡೆ ಮಲಗಲು ತಿಳಿಸಿದರು. ಜತೆಗೆ ಆ ಮನೆಗೆ ಹೊರಗಿನಿಂದ ಬೀಗ ಹಾಕಲು ಸೂಚಿಸಿದರು. ಮೂವರು ಪೇದೆಗಳೂಂದಿಗೆ ತಾವೂ ಅದೇ ಮನೆಯಲ್ಲಿ ಅವಿತು ಕೂತರು. ಹಾಗೆ ಎರಡು ದಿನ ಅವಿತು ಕೂತ ಇನ್ಸ್ಪೆಕ್ಟರ್ಗೆ ನಿರಾಶೆ ಎದುರಾಯಿತು. ಆದರೆ ಮೂರನೇ ದಿನ ಇವರು ಕೂತಿದ್ದ ಮನೆಯ ಎದುರಿಗೆ ಕಳ್ಳ ಬರುತ್ತಿರುವುದು ಕಿಟಕಿಯ ಮೂಲಕ ಕಾಣಿಸಿತು. ಇನ್ನೇನು ಕಳ್ಳನನ್ನು ಹಿಡಿದೇ ಬಿಟ್ಟೆವು ಎಂದು ಹಿರಿ ಹಿರಿ ಹಿಗ್ಗುತ್ತಿದ್ದರು... ಆದರೆ ಕೆಲವೇ ಕ್ಷಣಗಳಲ್ಲಿ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದಂತೆ ಕಳ್ಳ ಪಕ್ಕದ ಮನೆಗೆ ನುಗ್ಗಿದ.
ಕಳ್ಳ ನುಗ್ಗಿದ ಮನೆಯವರು ಅಂದು ತಿರುಪತಿಗೆ ಹೋಗಿದ್ದರು. ಅದನ್ನು ಇನ್ಸ್ಪೆಕ್ಟರ್ ಗಮನಿಸಿರಲಿಲ್ಲ. ಆದರೆ ಕಳ್ಳ ಗಮನಿಸಿದ್ದ. ಕಳ್ಳ ಬಂದು ಆ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರೂ ಆತನನ್ನು ಬಂಧಿಸಲು ಆಗದೆ ವಿಲವಿಲನೆ ಒದ್ದಾಡತೊಡಗಿದರು ಪಕ್ಕದ ಮನೆಯಲ್ಲಿದ್ದ ಇನ್ಸ್ಪೆಕ್ಟರ್. ಮನೆಯಲ್ಲಿನ ಆಹಾರ ಪದಾರ್ಥಗಳನ್ನು ಮೂಟೆ ಕಟ್ಟಿಕೊಂಡು ಬಂದಷ್ಟೇ ವೇಗದಲ್ಲಿ ನಾಪತ್ತೆಯಾದ ಅವನನ್ನು ಇನ್ಸ್ಪೆಕ್ಟರ್ ಕೋಪದಿಂದ ದಿಟ್ಟಿಸುತ್ತಿದ್ದರು.
---
ಮಾರನೇ ದಿನ ಹೊರಗಿನಿಂದ ಮನೆಯವರು ಬಂದು ಬಾಗಿಲು ತೆಗೆಯುವ ವರೆಗೆ ಪೊಲೀಸರು ಗೃಹ ಬಂಧನದಲ್ಲೇ ಕಾಲ ಕಳೆದರು. ಇಷ್ಟೆಲ್ಲ ಅವಾಂತರಗಳ ಮಧ್ಯ ಒಂದು ದಿನ ಗಾಬರಿಯಿಂದ ಬಂದ ಗ್ರಾಮಸ್ಥರು, ಕಬ್ಬಿನ ಗದ್ದೆಯಲ್ಲಿ ಕಳ್ಳ ವಾಸ್ತವ್ಯ ಹೂಡಿದ್ದಾನೆಂದು ತಿಳಿಸಿದರು. ಕೂಡಲೇ ಹೆಚ್ಚಿನ ಸಿಬ್ಬಂದಿಯೊಂದಿಗೆ ಕಬ್ಬಿನ ಗದ್ದೆಗೆ ದಾಳಿಯಿಟ್ಟ ಇನ್ಸ್ಪೆಕ್ಟರ್, ಕಳ್ಳನನ್ನು ಬಂಧಿಸಿದರು.
ಮಜಬೂತಾಗಿ ಬೆಳೆದು ನಿಂತಿದ್ದ ಕಬ್ಬಿನ ಗದ್ದೆಯ ನಡುವೆ ಆತ ಒಂದು ಅಟ್ಟ ನಿರ್ಮಿಸಿಕೊಂಡಿದ್ದ. ಹಲವು ದಿನಗಳಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ. ರೈತರು ಸಾಮಾನ್ಯವಾಗಿ ಕಬ್ಬಿನ ಗದ್ದೆಯ ಒಳಗೆ ಹೋಗದೆ ಹೊರಗಿನಿಂದಲೇ ನೀರನ್ನು ಹರಿಸುತ್ತಿದ್ದ ಕಾರಣ, ಕಳ್ಳನಿಗೂ ಯಾವುದೇ ಭಯ ಇರಲಿಲ್ಲ. ಅದೊಂದು ದಿನ ಗದ್ದೆಯಲ್ಲಿ ಯಾರೋ ಇದ್ದಾರೆ ಎಂಬುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೊದಲೇ 'ಕಾಟ'ನ ಬುದ್ಧಿ ತಿಳಿದಿದ್ದ ಇನ್ಸ್ಪೆಕ್ಟರ್ ಹೆಚ್ಚಿನ ಬಂದೋಬಸ್ತ್ನಲ್ಲಿ ಬಂದು ಒಳ್ಳೆಯ ನಿದ್ದೆಯಲ್ಲಿದ್ದ 'ಕಾಟ'ನ ಕೈಗೆ ಕೋಳ ತೊಡಿಸಿದ್ದರು.
ಅವನ ನಿವಾಸ ಸ್ಥಳ ಕಂಡು ಇಡೀ ಪೊಲೀಸರು ಮೂಗಿನ ಮೇಲೆ ಬೆರಳಿಟ್ಟರು. ಕಾರಣ, ಸುಮಾರು ಹತ್ತು ಸ್ಟವ್ಗಳು, ಅಪಾರ ಆಹಾರ ಪದಾರ್ಥಗಳು, ಅಕ್ಕಿ, ಬೇಳೆ... ಹೀಗೆ ಎಲ್ಲವನ್ನೂ ಹಳ್ಳಿಗಳಲ್ಲಿ ಕದ್ದು ತಂದು ಅಲ್ಲಿಯೇ ಬೇಯಿಸಿ, ಹಗಲಿಡೀ ತಿನ್ನುವ ಆತ ರಾತ್ರಿಯಾದ ಕೂಡಲೇ ಗ್ರಾಮಗಳ ಮೇಲೆ ಬೀಳುತ್ತಿದ್ದ. ಅಲ್ಲಿ ಇನ್ನೂ ಅಳಿದುಳಿದ ಆಹಾರ ಪದಾರ್ಥಗಳನ್ನು ಮತ್ತು 'ಕಾಟ'ನನ್ನು ವಶಕ್ಕೆ ಪಡೆದು ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾದರು ಪೊಲೀಸರು.
ಆದರೆ ಆತ ಅಪಾರ ಪ್ರಮಾಣವಾಗಿ ದೋಚಿದ್ದ ಚಿನ್ನಾಭರಣಗಳು ಮತ್ತು ಹಣ ಮಾತ್ರ ಪೊಲೀಸರಿಗೆ ದೊರೆಯಲಿಲ್ಲ. ಅದರ ಬಗ್ಗೆ ಮಾಹಿತಿಯೂ ಗೊತ್ತಾಗಲಿಲ್ಲ.
---
ಮೇಲಿನ ಘಟನೆ ನಡೆದು ಐದು ವರ್ಷಗಳಾಗಿವೆ. ಕೆ.ಆರ್. ನಗರದಲ್ಲಿದ್ದ ಇನ್ಸ್ಪೆಕ್ಟರ್ ಹನುಮಂತಪ್ಪ ನಾಗಮಂಗಲಕ್ಕೆ ವರ್ಗಾವಣೆಯಾಗಿದ್ದಾರೆ. ನಾಗಮಂಗಲಕ್ಕೆ 5 ಕಿ.ಮೀ. ದೂರದ ಒಂದು ಬೆಟ್ಟದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿ ಇದ್ದಾನೆ ಎಂಬ ಮಾಹಿತಿಯನ್ನು ದನ ಮೇಯಿಸುವವರು ಪೊಲೀಸರಿಗೆ ತಿಳಿಸಿದರು. ಅದು ಬೇಸಿಗೆ. ಜತೆಗೆ ನಕ್ಸಲೀಯರ ಚಟುವಟಿಕೆ ರಾಜ್ಯದಲ್ಲಿ ಹರಡುತ್ತಿದೆ ಎಂಬ ಗುಪ್ತಚರ ಮಾಹಿತಿ ಇದ್ದ ಕಾರಣ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರು.
ನಾಲ್ಕೈದು ಸಿಬ್ಬಂದಿಯೊಂದಿಗೆ ಇನ್ಸ್ಪೆಕ್ಟರ್ ಮಾಹಿತಿ ಬಂದ ಬೆಟ್ಟಕ್ಕೆ ಹೋದರು. ಸುಮಾರು ಒಂದು ಕಿ.ಮೀ. ಕಡಿದಾದ ಬೆಟ್ಟ ಹತ್ತಿದ ನಂತರ ಒಂದು ಕಣಿವೆಯಂಥ ಪ್ರದೇಶ. ಅಲ್ಲಿಯೇ ಇದ್ದ ಒಂದು ಗುಹೆಯಲ್ಲಿ ನಾಲ್ಕೈದು ಸ್ಟವ್, ಅಕ್ಕಿ, ವಿವಿಧ ಆಹಾರ ಪದಾರ್ಥಗಳು ಪೊಲೀಸರಿಗೆ ಲಭಿಸಿದವು. ಇವನ್ನು ಕಂಡ ಇನ್ಸ್ಪೆಕ್ಟರ್ಗೆ ಐದು ವರ್ಷಗಳ ಹಿಂದೆ ಕೆ.ಆರ್. ನಗರದಲ್ಲಿ ಬಂಧಿಸಿದ್ದ 'ಕಾಟ'ನ ನೆನಪಾಗಿತ್ತು. ಅದನ್ನು ಅಲ್ಲಿಯೇ ಅವರು ಹೇಳಿದರು. ಇದನ್ನು ಕೇಳಿದ ಗ್ರಾಮಸ್ಥರು ಒಣಗಿ ನಿಂತಿದ್ದ ಬೆಟ್ಟದ ಹುಲ್ಲಿಗೆ ಬೆಂಕಿ ಹಚ್ಚಿದರು.
ತರಗೆಲೆಗಳಂತೆ ಇಡೀ ಕಣಿವೆ ಹೊತ್ತಿ ಉರಿಯಿತು. ಆದರೆ ಆಸಾಮಿ ನಾಪತ್ತೆ. ಅಷ್ಟೊತ್ತಿಗೆ ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿ ಪೊಲೀಸರು ಹಿಂದಿರುಗಿದರು. ಆದರೆ ಇನ್ಸ್ಪೆಕ್ಟರ್ಗೆ ಮಾತ್ರ ನಿದ್ದೆ ಹತ್ತಲಿಲ್ಲ. 'ಕಾಟ'ನೇ ಇಲ್ಲಿಯೂ ಕಾಟ ಕೊಡುತ್ತಿರಬಹುದೇ ಎಂಬ ಸಂಶಯ ಅವರನ್ನು ಕಾಡುತ್ತಿತ್ತು. ಮಾರನೇ ದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಇನ್ಸ್ಪೆಕ್ಟರ್ ಮುಂಜಾನೆಯೇ ಸಿಬ್ಬಂದಿಯೊಂದಿಗೆ ಬೆಟ್ಟಕ್ಕೆ ದಾಳಿಯಿಟ್ಟರು.
ಹಿಂದಿನ ದಿನ ಬೆಟ್ಟಕ್ಕೆ ಬೆಂಕಿ ಕೊಟ್ಟು, ಗುಹೆಯಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಇಷ್ಟೆಲ್ಲ ರಾದ್ಧಾಂತ ನಡೆದಿರುವ ಕಾರಣ ಮತ್ತೆ ಆಸಾಮಿ ಅಲ್ಲಿಗೆ ಬರುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಆದರೂ ಪರೀಕ್ಷೆ ಮಾಡಲು ಅವರು ಪುನಃ ಬಂದಿದ್ದರು. ಆದರೆ ಅವರ ಊಹೆ ತಲೆಕೆಳಗಾಗುವಂತೆ 'ಕಾಟ' ನೆಮ್ಮದಿಯಾಗಿ ಗುಹೆಯಲ್ಲಿ ನಿದ್ದೆಮಾಡುತ್ತಿರುವುದನ್ನು ಕಂಡು ಪೊಲೀಸರು ಎರಡನೇ ಬಾರಿಗೆ ಕೋಳ ಹಾಕುವಲ್ಲಿ ಯಶಸ್ವಿಯಾದರು.
ಇನ್ಸ್ಪೆಕ್ಟರ್ ಹನುಮಂತಪ್ಪರನ್ನು ಕಂಡ ಕಾಟ, 'ಏನ್ ಸಾಮಿ ನನ್ನನ್ನು ಎಲ್ಲಿಯೂ ಇಡಲು ಬಿಡಲ್ವೇ?' ಎಂದು ವ್ಯಂಗ್ಯವಾಗಿಯೇ ಪ್ರಶ್ನಿಸಿದ್ದ. ಜತೆಗೆ 'ಬನ್ನಿ ನಿಮ್ಮ ಕರ್ತವ್ಯಕ್ಕೆ ಮೆಚ್ಚಿದ್ದೇನೆ' ಎಂಬಂತೆ ಕರೆದುಕೊಂಡು ಹೋಗಿ ಬೆಟ್ಟದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಒಂದು ಮರದ ಪೊಟರೆಗೆ ಕೈ ಹಾಕಿ ಅಪಾರ ಪ್ರಮಾಣದ ಚಿನ್ನಾಭರಣ ತೆಗೆದುಕೊಟ್ಟ. ಅದೇ ರೀತಿ ಕಣಿವೆಯ ಒಂದು ಜಾಗದಲ್ಲಿ ಅಗೆದು ಅಲ್ಲಿ ಹೂತಿಟ್ಟಿದ್ದ ಹಣವನ್ನೂ ತೆಗೆದುಕೊಟ್ಟ. <
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


