ಬೈಟುಕಾಫಿ

ಮತ್ತೆ ಎಮರ್ಜೆನ್ಸಿ

ಅಡಗೂರು ಎಚ್. ವಿಶ್ವನಾಥ್ ಎಂದರೆ ಬೇರೆ ಪಕ್ಷದವರಷ್ಟೇ ಅಲ್ಲ ಸ್ವಪಕ್ಷೀಯರೂ...

ಮತ್ತೆ ಎಮರ್ಜೆನ್ಸಿ
Published On :

'ಹಳ್ಳಿ ಹಕ್ಕಿ' ಮತ್ತೆ ಸದ್ದು ಮಾಡುತ್ತಿದೆ. ರಾಜಕೀಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಸಣ್ಣದೊಂದು ತಲ್ಲಣ. ಯಾವ ಬಾಂಬ್ ಸಿಡಿದೀತೊ ಎನ್ನುವ ಆತಂಕ.

ಅಡಗೂರು ಎಚ್. ವಿಶ್ವನಾಥ್ ಎಂದರೆ ಬೇರೆ ಪಕ್ಷದವರಷ್ಟೇ ಅಲ್ಲ ಸ್ವಪಕ್ಷೀಯರೂ ಮೆಲ್ಲಗೆ ನಡುಗುತ್ತಾರೆ. ಅವರ ವ್ಯಕ್ತಿತ್ವವೇ ಹಾಗೆ. ಮುಲಾಜಿಲ್ಲದೆ ಅನ್ನಿಸಿದ್ದನ್ನು ಹೇಳಿಬಿಡುವ ಜಾಯಮಾನ. ತಮ್ಮ ಆತ್ಮಕಥೆ 'ಹಳ್ಳಿ ಹಕ್ಕಿ ಹಾಡು'ನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಹಿರಿಯ ತಾರೆ ಬಿ. ಸರೋಜಾದೇವಿ ನಡುವೆ ತಾರುಣ್ಯದ ದಿನಗಳಲ್ಲಿ ಇದ್ದ 'ಸಂಬಂಧ'ದ ಬಗ್ಗೆ ಪ್ರಸ್ತಾಪಿಸಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದರು (2008). ಮರುವರ್ಷ 'ಮತ ಸಂತೆ'ಯಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಅಕ್ರಮಗಳನ್ನು ಬಯಲು ಮಾಡಿದ್ದರು. ಈಗ ಮತ್ತೊಂದು ಕೃತಿ ರಚಿಸಿದ್ದಾರೆ. 'ಆಪತ್‌ಸ್ಥಿತಿಯ ಆಲಾಪಗಳು' ತುರ್ತು ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ನೋಡುವ ಯತ್ನ.

1975ರ ಜೂನ್ 26ರಿಂದ 1977 ಮಾರ್ಚ್ 21ರವರೆಗೆ 21 ತಿಂಗಳು ದೇಶದಲ್ಲಿದ್ದ ಎಮರ್ಜೆನ್ಸಿ ವಿರೋಧಿಸಿ ಕಾಂಗ್ರೆಸೇತರ ರಾಜಕೀಯ ನಾಯಕರು, ಸಾಹಿತಿಗಳು, ಬುದ್ಧಿಜೀವಿಗಳು, ಪತ್ರಕರ್ತರು ಎಲ್ಲರೂ ಮಾತನಾಡಿದ್ದಾರೆ, ಮಾತನಾಡುತ್ತಲೂ ಇದ್ದಾರೆ. ಎಲ್ಲರ ದೃಷ್ಟಿಯಲ್ಲಿ 'ಅದೊಂದು ಕರಾಳ ಅಧ್ಯಾಯ.' ಕಾಂಗ್ರೆಸ್ ಧುರೀಣ ವಿಶ್ವನಾಥ್ ಪ್ರಕಾರ 'ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಕರುಣಾಳು ಅಧ್ಯಾಯ!'

'ತುರ್ತು ಪರಿಸ್ಥಿತಿ ದಿನಗಳನ್ನು ನಾನು ಪ್ರತ್ಯಕ್ಷ ಕಂಡಿದ್ದು ಕರ್ನಾಟಕದಲ್ಲಿ ಮಾತ್ರ. ಉಳಿದ ರಾಜ್ಯಗಳ ಬಗ್ಗೆ ಓದಿದ್ದೇನೆ. ನಮ್ಮಲ್ಲಿ ದೇವರಾಜ ಅರಸು ಎನ್ನುವ ಮುತ್ಸದ್ದಿ ತುರ್ತು ಪರಿಸ್ಥಿತಿ ಕಾಲವನ್ನು ಅಭಿವೃದ್ಧಿ ಪರ್ವವಾಗಿ ಪರಿವರ್ತಿಸಿದರು. ಉಳುವವನೇ ಭೂಮಿಯ ಒಡೆಯ ಅಂದರು. ಭೂ ಸುಧಾರಣೆಯಂಥ ಐತಿಹಾಸಿಕ ಕಾಯ್ದೆಗಳನ್ನು ಜಾರಿಗೆ ತಂದರು.

ಆ ಅವಧಿಯಲ್ಲಿ ನಮ್ಮ ರಾಜ್ಯದಲ್ಲಿ ಆದ ಬದಲಾವಣೆ, ಸಾಧಿಸಿದ ಅಭಿವೃದ್ಧಿಗಳ ಕುರಿತಾಗಿ ಪ್ರಜೆಗಳ ಅಭಿಪ್ರಾಯ ಏನಿತ್ತು ಎನ್ನುವ ಬಗ್ಗೆ ಬೆಳಕು ಚೆಲ್ಲಿದ್ದೇನೆ' ಎನ್ನುತ್ತಾರೆ ವಿಶ್ವನಾಥ್.
ಇದ್ದಕ್ಕಿದ್ದಂತೆ ಈಗ ಎಮರ್ಜೆನ್ಸಿ ಕುರಿತು ಬರೆಯುವ ಹುಕ್ಕಿ ಬಂದದ್ದಾದರೂ ಹೇಗೆ? ಅವರು ಹೇಳುತ್ತಾರೆ, 'ಪ್ರತಿ ವರ್ಷ ಜೂನ್ 25ರಂದು ಎಲ್ಲಾ ಪತ್ರಿಕೆ, ಮಾಧ್ಯಮಗಳಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಲೇಖನ, ಚರ್ಚೆಗಳು. ತುರ್ತು ಪರಿಸ್ಥಿತಿಯ ಫಲಾಫಲಗಳನ್ನು ಅನುಭವಿಸಿದವರು ಎಲ್ಲಾದರೂ ಮಾತನಾಡಿದ್ದಾರಾ? ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ, ಬದುಕು ಕಟ್ಟಿ ಕೊಡುವ ಕೆಲಸ ತುರ್ತು ಪರಿಸ್ಥಿತಿ ದಿನಗಳಲ್ಲಿ ಆಯಿತು. ಜನಸಾಮಾನ್ಯರು ಎಮರ್ಜೆನ್ಸಿಯನ್ನು ಹೇಗೆ ಸ್ವೀಕರಿಸಿದರು ಎನ್ನುವ ದಾಖಲಾತಿ ಎಲ್ಲಿಯೂ ಆಗಿಲ್ಲ. ಅರಸರು ತಂದ ಭೂ ಸುಧಾರಣೆ ವಿಶ್ವದಲ್ಲೇ ಮೊದಲು ಮತ್ತು ಸದ್ಯಕ್ಕೆ ಏಕೈಕ. ಆ ಬಗ್ಗೆ ವಿಶ್ಲೇಷಣೆಯೇ ನಡೆಯಲಿಲ್ಲ. ಅದನ್ನೆಲ್ಲ ಹೇಳಬೇಕು ಅನ್ನಿಸಿತು. ನಾನು ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮ, ಗರೀಬಿ ಹಠಾವೊ ಜಾರಿಗೆ ದುಡಿದಿದ್ದವ. ಆ ದಿನಗಳ ನೆನಪು, ಅನುಭವಗಳನ್ನೆಲ್ಲ ಕ್ರೋಡೀಕರಿಸಿ ಈ ಪುಸ್ತಕ ಬರೆದಿದ್ದೇನೆ'.

ಯಾವ ಕರಾಳ ಅಧ್ಯಾಯ ಆಯಿತು?
ತುರ್ತು ಪರಿಸ್ಥಿತಿ ಕುರಿತು ಈವರೆಗಿನ ಸ್ಥಾಪಿತ ಅಭಿಪ್ರಾಯಗಳಿಗೆ ವಿರುದ್ಧ ಸಂಗತಿಗಳನ್ನು ಬಿಚ್ಚಿಡುವ ಪ್ರಯತ್ನ ವಿಶ್ವನಾಥ್ ಅವರದು. ಇದು ರಾಜ್ಯದ ರಾಜಕೀಯ, ಸಾಂಸ್ಕೃತಿಕ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದರೂ ಅಚ್ಚರಿ ಇಲ್ಲ. ವಿಶ್ವನಾಥ್‌ಗೆ ಆ ಬಗ್ಗೆ ಅರಿವು ಇಲ್ಲ ಎಂದಲ್ಲ.
'ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ದಿನಗಳಲ್ಲಿ ಅಭಿವೃದ್ಧಿ ಆದದ್ದು ಸುಳ್ಳಾ? ಬಡವರು ಸಾಲಕೂಪದಿಂದ ಹೊರಬಂದಿದ್ದು ಸುಳ್ಳಾ? ಜೀತ ಪದ್ಧತಿ ಕೊನೆಯಾದದ್ದು ಸುಳ್ಳಾ? ಬಡತನ ವಿಮುಕ್ತಿ ಆದದ್ದು ಸುಳ್ಳಾ? ಕರ್ನಾಟಕದಲ್ಲಿ ಯಾವ ಕರಾಳ ಅಧ್ಯಾಯ ಆಯಿತು? ಪ್ರಜಾತಂತ್ರದಲ್ಲಿ, ಆಡಳಿತದಲ್ಲಿ, ಸಂಪತ್ತಿನಲ್ಲಿ ಎಲ್ಲರಿಗೂ ಪಾಲು ಸಿಗುವ ಅವಕಾಶ ಸೃಷ್ಟಿಸಿದವರು ಇಂದಿರಾಗಾಂಧಿ ಮತ್ತು ದೇವರಾಜ ಅರಸು. ಯಾವಾಗಲೂ ನಕಾರಾತ್ಮಕವಾಗಿಯೇ ಮಾತನಾಡುವುದಲ್ಲ, ಸಕಾರಾತ್ಮಕವಾಗಿಯೂ ಆಲೋಚಿಸಬೇಕು' ಎಂದು ಸಮರ್ಥಿಸಿಕೊಳ್ಳುತ್ತಾರೆ ಅಡಗೂರು ಎಚ್. ವಿಶ್ವನಾಥ್.

ಹತ್ತು ಪಾತ್ರಗಳ ಕಥೆ
ತುರ್ತು ಪರಿಸ್ಥಿತಿಯ ಆ ದಿನಗಳಲ್ಲಿ ತಾವು ಕಂಡಿದ್ದನ್ನು ವಿಶ್ವನಾಥ್ ಹತ್ತು ಪಾತ್ರಗಳ ಮೂಲಕ ಹೇಳಿದ್ದಾರೆ. ಶೂದ್ರನಿಗೆ ತನ್ನನ್ನು ಜೀತಮುಕ್ತಿಗೊಳಿಸಿ, ಭೂಮಿ ನೀಡಿ, ಆರ್ಥಿಕವಾಗಿ ಸಬಲಗೊಳಿಸಿದ ಸರ್ಕಾರದ ಬಗ್ಗೆ ಹೆಮ್ಮೆ. ದೇಶವಾಸಿಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳೆಲ್ಲ ಸುಗಮವಾಗಿ ಸಾಗುತ್ತಿರವುದಕ್ಕೆ, ಲಂಚದ ಪಿಡುಗು ಇಲ್ಲವಾಗಿರುವುದಕ್ಕೆ ಅಚ್ಚರಿ. ಮನೋವಿಜ್ಞಾನಿ ಅಧಿಕಾರಸ್ಥ ರಾಜಕೀಯ ನಾಯಕರ ತುಮುಲ, ಅಭದ್ರತೆ ಅವರನ್ನು ಸರ್ವಾಧಿಕಾರಿಯಾಗಿ ರೂಪಿಸುವ ರೀತಿಗಳ ಬಗ್ಗೆ ಹೇಳುತ್ತಾರೆ. ಗೃಹಿಣಿಗೆ ಭ್ರಷ್ಟಾಚಾರ ಮಟ್ಟ ಹಾಕಿದ ಪ್ರಧಾನಿ ಇಂದಿರಾಗಾಂಧಿ ಕುರಿತು ಹೆಮ್ಮೆ. 'ಇಂದಿರಾ ಪರಮ ಭ್ರಷ್ಟೆ ಅಂತಾರೆ. ಅದು ನಿಜವಾಗಿದ್ದರೆ ಆಕೆ ಸರಳ ವಸ್ತ್ರ ತೊಡುತ್ತಿದ್ದರೆ? ಮೈತುಂಬ ಆಭರಣಗಳನ್ನು ಹೇರಿಕೊಳ್ಳುತ್ತಿರಲಿಲ್ಲವೆ?' ಎನ್ನುವ ಮುಗ್ಧ ಪ್ರಶ್ನೆ ಅವರದು. ವೈದ್ಯ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ವಿಚಾರವಾಗಿ ಹಿಂದೂ, ಮುಸ್ಲಿಮರು ತಮ್ಮ ಸಂಪ್ರದಾಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಅಂಜುತ್ತಿದ್ದ ಬಗೆಯನ್ನು ವಿವರಿಸುತ್ತಾರೆ. ಒಬ್ಬ ಸಂಪಾದಕ, ವಕೀಲ, ಕಟ್ಟಾ ಕಾಂಗ್ರೆಸಿಗ, ಶ್ರೀಸಾಮಾನ್ಯನಾಗಿ ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ. ಕೊನೆಗೆ ರಾಹುಲ್ ಎನ್ನುವ ವಿದೇಶದಲ್ಲಿ ನೆಲೆಸುವ ಕನಸು ಕಾಣುತ್ತಿದ್ದ ಯುವಕ ಅಂತರ್ಜಾಲದಲ್ಲಿ ಆಕಸ್ಮಾತ್ ತುರ್ತು ಪರಿಸ್ಥಿತಿ ಬಗ್ಗೆ ಜಾಲಾಡುತ್ತ ಅಂದಿನ, ಇಂದಿನ ಪರಿಸ್ಥಿತಿ ತುಲನೆ ಮಾಡಿದ್ದನ್ನು ಹೇಳುತ್ತಾರೆ. 'ಈಗಿನ ಭ್ರಷ್ಟಾಚಾರ, ದಗಲ್ಬಾಜಿತನ ನೋಡಿದರೆ ತುರ್ತು ಪರಿಸ್ಥಿತಿ ಚೆನ್ನಾಗಿತ್ತು. ಆಗ ಸಾಕಷ್ಟು ಅಭಿವೃದ್ಧಿ ಆಯಿತು. ಬಡತನ ನೀಗಿತು' ಎಂದುಕೊಳ್ಳುತ್ತ, ಪರದೇಶದ ಆಸೆ ಬಿಟ್ಟು, ತಾನೂ ರಾಜಕೀಯಕ್ಕೆ ಇಳಿದು ಮತ್ತೊಂದು ಬದಲಾವಣೆಗೆ ಶ್ರಮಿಸುವ ಸಂಕಲ್ಪ ಮಾಡುತ್ತಾನೆ. ಹೀಗೆ, ಶೂದ್ರ ತನಗೆ ಸಿಕ್ಕ ಹೊಸ ಬದುಕಿನಿಂದ ಪುಳಕಿತನಾಗುವ ಮೂಲಕ ಆರಂಭವಾಗುವ ಕೃತಿ, ಈಗಿನ ಯುವಕ ಮತ್ತೊಂದು ಪರಿವರ್ತನೆಯ ಕನಸು ಕಾಣುವುದರೊಂದಿಗೆ ಮುಕ್ತಾಯವಾಗುತ್ತದೆ.

ಕುರುಡು ವ್ಯಾಮೋಹ ತೋರಿಲ್ಲ
ತುರ್ತು ಪರಿಸ್ಥಿತಿಯ ದಿನಗಳ ವೈಭವೀಕರಣ ಮಾಡಿಲ್ಲ. ಅಭಿಪ್ರಾಯಗಳನ್ನು ಬಲವಂತವಾಗಿ ಹೇರಿಲ್ಲ. ಕಾಂಗ್ರೆಸ್ಸಿಗನಾಗಿ ಕುರುಡು ವ್ಯಾಮೋಹದಿಂದಲೂ ಇದನ್ನು ಬರೆದಿಲ್ಲ. ಕೆಲವರು ತುರ್ತು ಪರಿಸ್ಥಿತಿ ವಿಚಾರವಾಗಿ ತಮಗೆ ಗೊತ್ತಿಲ್ಲದ ವಿಷಯಗಳನ್ನೇ ಸತ್ಯ ಎನ್ನುವ ರೀತಿಯಲ್ಲಿ ಪದೇಪದೇ ಹೇಳುತ್ತ ಇರುತ್ತಾರೆ. ಆದ್ದರಿಂದ ವಾಸ್ತವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ 'ಆಪತ್‌ಸ್ಥಿತಿಯ ಆಲಾಪಗಳು' ಕೃತಿ ಬರೆದಿದ್ದೇನೆ.
- ಎಚ್. ವಿಶ್ವನಾಥ್

-ರಾಜೇಶ ಮುಂಡಿಗೇಸರ
rajeshkhegde@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.