ಗುಳೆ ಹಬ್ಬ
ಮಾರ್ಚ್ 26ರಿಂದ ಏಪ್ರಿಲ್ 12ರ ವರೆಗೆ ಕಾರವಾರ ಜಿಲ್ಲೆಯ ಮುಂಡಗೋಡಿನಲ್ಲಿ ಮಾರಿಕಾಂಬೆ ಜಾತ್ರೆ ನಡೆಯುತ್ತೆ. ಈ ಮಧ್ಯೆ ಬರುವ ಮಂಗಳವಾರ, ಶುಕ್ರವಾರದಂದು ಇಡೀ ಊರೇ ಬೇರೆ ಕಡೆಗೆ ಗುಳೆ ಹೊರಡುತ್ತೆ. ಇದು ಇಲ್ಲಿನ ಗುಳೆ ಹಬ್ಬ!

ಅದು ದೇವಿಯ ಜಾತ್ರೆ. ಆದರೆ, ಊರಿಗೂರೇ ಖಾಲಿ! ಖಾಲಿ!
ಹಾಗಾದರೆ, ಮುಂಡಗೋಡಿನ ಜನ ಆ ವೇಳೆ ಎಲ್ಲಿರ್ತಾರೆ? ಎಂಬುದು ಮುಖ್ಯಪ್ರಶ್ನೆ. ನದಿ ತೀರವೋ, ಇನ್ನಾವುದೋ ಬಯಲೋ... ಅಲ್ಲೇ ಆ ದಿನ ಇವರ ವಾಸ!
ಮಾರ್ಚ್ 26ರಿಂದ ಏಪ್ರಿಲ್ 12ರ ವರೆಗೆ ಕಾರವಾರ ಜಿಲ್ಲೆಯ ಮುಂಡಗೋಡಿನಲ್ಲಿ ಮಾರಿಕಾಂಬೆ ಜಾತ್ರೆ ನಡೆಯುತ್ತೆ. ಈ ಮಧ್ಯೆ ಬರುವ ಮಂಗಳವಾರ, ಶುಕ್ರವಾರದಂದು ಇಡೀ ಊರೇ ಬೇರೆ ಕಡೆಗೆ ಗುಳೆ ಹೊರಡುತ್ತೆ. ಇದು ಇಲ್ಲಿನ ಗುಳೆ ಹಬ್ಬ!
ಪುರುಷ ದೇವರಿಗಿಂತ ಹೆಚ್ಚಾಗಿ ಶಕ್ತಿ ದೇವತೆಗೆ ಹೆದರುವ ಜನತೆ ನಾವು. ಅಲ್ಲದೆ ಭಕ್ತಿಯೂ ಹೆಚ್ಚು. ದೇವಿ ಒಲಿದರೆ ಜೀವನ ಸುಖವೆಂಬ ಬಲವಾದ ಭಾವನೆ ಸರ್ವರಲ್ಲೂ ಬೇರೂರಿದೆ. ಹೀಗಾಗಿ, ಜಾತ್ರೆಯ ಸಮಯದಲ್ಲಿ ಊರಿನ ಜನರೆಲ್ಲಾ ಮನೆಯಿಂದ ಹೊರ ಹೋಗಿ ಹೊಲದಲ್ಲಿಯೋ ಅಥವಾ ನದಿಯ ಪಕ್ಕದಲ್ಲಿಯೋ ಕುಳಿತು ಒಟ್ಟಾಗಿ ಊಟ ಮಾಡುತ್ತಾರೆ. ಸಂತಸದಿಂದ ಆ ದಿನವನ್ನು ಕಳೆಯುತ್ತಾರೆ. ಈ ವೇಳೆ ಬಣ್ಣ ಬಣ್ಣದ ಮಾತುಗಳು, ಹಾಸ್ಯಕ್ಷಣಗಳು, ವನಿತೆಯರ ಹಾಡುಗಳು ಹೆಚ್ಚು ಗಮನ ಸೆಳೆಯುತ್ತವೆ.
ಈ ಜಾತ್ರೆಗೆ ಶತಮಾನದ ಇತಿಹಾಸವಿದೆ. ಆದರೆ, 60 ವರ್ಷಗಳಿಂದ ಈ ಹಬ್ಬವನ್ನು ಇಲ್ಲಿಯವರು ಆಚರಿಸಲಿಲ್ಲವಂತೆ. ಇದರಿಂದಾಗಿ ಜನರಲ್ಲಿ ಪಾಪಪ್ರಜ್ಞೆ ಬೆಳೆದು, ಊರಿನ ಪ್ರಮುಖರೆಲ್ಲ ನಿರ್ಧರಿಸಿ 9 ವರ್ಷದಿಂದ ಮತ್ತೆ 3 ವರ್ಷಕ್ಕೊಮ್ಮೆ ಈ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ.
ಜಾತ್ರೆಗೆ 19 ದಿನ ಇರುವ ಮೊದಲಿನಿಂದ ಐದು ವಾರ ಊರಾಚೆಯ ಬಯಲು, ಹೊಲ, ಗದ್ದೆಗಳಲ್ಲಿ ಆ ದಿನ ಇವರ ವಾಸ. ಊರು ಬಿಡುವ ಆ ದಿನ ಬೆಳಗ್ಗೆ ಊರು ಇದ್ದಕ್ಕಿದ್ದಂತೆ ನಿಶ್ಶಬ್ದವಾಗಿಬಿಡುತ್ತದೆ. ಜನಜಂಗುಳಿಯಿಂದ ತುಂಬಿ ತುಳುಕಬೇಕಾಗಿದ್ದ ಊರಿನಲ್ಲಿ ನರಪಿಳ್ಳೆಯೂ ಇರುವುದಿಲ್ಲ. 'ಇದು ಒಂದು ಊರಾ?' ಎನ್ನುವಷ್ಟು ನೀರವ ಮೌನ. ಊರಿನ ಪ್ರತಿ ಗಲ್ಲಿ ಗಲ್ಲಿಗಳೂ ಬಿಕೋ ಎನ್ನುತ್ತಿರುತ್ತವೆ. ಮುದುಕರು, ಮಕ್ಕಳು, ಸಾಕುಪ್ರಾಣಿಗಳೊಂದಿಗೆ ಇಡೀ ಊರಿಗೆ ಊರೆ ಕಾಡಿನ ಕಡೆ ಮುಖ ಮಾಡಿಬಿಡುತ್ತದೆ.
ಮನೆ ಬಿಡುವ ವೇಳೆ ದೇವರಕೋಣೆಯಲ್ಲಿ ದೀಪ ಹಚ್ಚಲಾಗುತ್ತದೆ. ಹೀಗೆ ಹಚ್ಚಿದ ದೀಪವು ಮನೆಗೆ ಮರಳುವವರೆಗೂ ನಂದಿ ಹೋಗದೇ ಬೆಳಗುತ್ತಿರಬೇಕು. ಈ ರೀತಿ ಗುಳೆ ಹೋಗುವುದು ಇಡೀ ಮುಂಡಗೋಡಿಗೇ ಅನ್ವಯಿಸುತ್ತದೆ. ಹಾಗಾಗಿ ಹಿಂದೂಗಳ ಜತೆ ಮುಸ್ಲಿಮರು, ಕ್ರೈಸ್ತರು ಹೀಗೆ ಪಟ್ಟಣದಲ್ಲಿ ವಾಸಿಸುವ ಎಲ್ಲರೂ ಗುಳೆ ಹೋಗುತ್ತಾರೆ. ಒಂದು ರೀತಿಯಲ್ಲಿ ಭಾವೈಕ್ಯತೆಯನ್ನು ಸಾರಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಈ ಮಾರಿಕಾಂಬ ಜಾತ್ರೆ ಮುನ್ನುಡಿ ಬರೆಯುತ್ತದೆ.
ಮನೆಗೆ ಬೀಗ ಹಾಕಿ ಹೊರನಡೆದ ಮೇಲೆ ಬೀಗವನ್ನು ಪುನಃ ತೆಗೆಯುವಂತಿಲ್ಲ. ತಮಗೆ ಬೇಕಾದ ಸಾಮಗ್ರಿಯನ್ನು ತೆಗೆದುಕೊಂಡು ಕಾರು, ಜೀಪು, ಬಂಡಿ ಇಲ್ಲವೇ ನಡೆದುಕೊಂಡು ಊರ ಬಯಲಿನಲ್ಲಿ ಬೀಡು ಬಿಡಬೇಕು.
ಹೀಗೆ ಖಾಲಿಯಾದ ಊರನ್ನು ಸ್ಥಳೀಯ ಪೊಲೀಸರು ಕಾಯುತ್ತಾರೆ. ಅತ್ತ ಊರಾಚೆಯ ಬಯಲಿನಲ್ಲಿ ಹಬ್ಬದ ವಾತಾವರಣ. ಗುಳೆ ಹೋದವರು ಟೆಂಟು ಆಥವಾ ಪೌಳಿ ಹಾಕಿಕೊಂಡು ಒಲೆಯನ್ನು ಹೂಡಿ, ಬಗೆ ಬಗೆಯ ಅಡುಗೆ ಸಿದ್ಧಪಡಿಸುತ್ತಾರೆ. ಊಟ ಮಾಡಿ, ಸೂರ್ಯ ತನ್ನ ತಾಪವನ್ನು ತಗ್ಗಿಸುತ್ತಿದ್ದಂತೆ ಇವರೆಲ್ಲಾ ಪುನಃ ಮನೆಗೆ ತೆರಳುತ್ತಾರೆ.
ಗುಳೆ ಹಬ್ಬವನ್ನು ನೀವೂ ಸವಿಯಬೇಕಾದರೆ ಮಾ.12ರಂದು ಮುಂಡಗೋಡಿಗೆ ಬನ್ನಿ...
-ಚಿತ್ರ- ಲೇಖನ: ಟಿ. ಶಿವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


