ಬೈಟುಕಾಫಿ

ಭಾರ ಹೊರಲು ಹಿಂಜರಿಯಬೇಡಿ

Published On :

ನೀವು ನಿಮ್ಮ ಗೆಳೆಯನೊಂದಿಗೆ ಯಾವುದೋ ಊರಿಗೆ ಪಯಣ ಹೊರಟಿರುತ್ತೀರಿ. ಇಬ್ಬರದೂ ಲಗ್ಗೇಜು ತುಂಬಿದ ಒಂದೇ ಸೂಟ್‌ಕೇಸ್. ಒಂದಷ್ಟು ದೂರ ಬಸ್ಸಿಳಿದು ನಡೆದುಕೊಂಡು ಹೋಗಬೇಕಾದ ಪ್ರಮೇಯ. ನೀವು ಸೂಟ್‌ಕೇಸ್ ಅನ್ನು ಒತ್ತಾಯಪೂರ್ವಕ ಗೆಳೆಯನಿಗೆ ಕೊಡದೇ ನೀವೇ ಹಿಡಿದು ಹೊರಟಿದ್ದೀರಿ. ಒಂದಷ್ಟು ದೂರ ನಡೆಯುವುದರಲ್ಲೇ ನಿಮಗೆ ಕೈ ಸೋತು, ಅದು ಸಿಕ್ಕಾಪಟ್ಟೆ ಭಾರ ಎನಿಸಲಾರಂಭಿಸುತ್ತದೆ. ಸ್ವಲ್ಪ ಹೊತ್ತು ಹೇಗೆ ಹೇಗೋ ನಿಭಾಯಿಸುತ್ತೀರಿ. ಮುಂದುವರಿದಂತೆಲ್ಲ ಇನ್ನು ಸಾಧ್ಯವೇ ಇಲ್ಲ ಅನಿಸುತ್ತದೆ. ಗೆಳೆಯನಿಗೆ ಹೇಳಲೂ ಮುಜುಗರ. ಹೊರಲು ಭಾರ. ಪೇಚಾಡುತ್ತಿರುವುದು ಗೆಳೆಯನ ಗಮನಕ್ಕೆ ಬರುತ್ತದೆ. ಅವನೇ ಮುಂದಾಗಿ ಸೂಟ್‌ಕೇಸ್ ನಿಮ್ಮಿಂದ ಮರಳಿ ಪಡೆದು ಹೊತ್ತು ಹೊರಡುತ್ತಾನೆ. ಒಮ್ಮೆ ನಿಮ್ಮಲ್ಲಿ ನಿರಾಳತೆ ಆವರಿಸುತ್ತದೆ. ಸಾವರಿಸಿಕೊಂಡು ನೋಡಿದರೆ ಗೆಳೆಯ ಅತ್ಯಂತ ಸುಲಭದಲ್ಲಿ ಅದನ್ನು ಹೊತ್ತು ಹೋಗುತ್ತಿದ್ದಾನೆ. ಅಬ್ಬಾ, ಅಷ್ಟು ಭಾರದ್ದನ್ನು ಅವನು ಹೇಗೆ ನಿರಾಯಾಸವಾಗಿ ಹೊತ್ತು ಹೋಗುತ್ತಿದ್ದಾನೆ. ಅದು ನನ್ನಿಂದ ಹೇಗೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯೊಂದಿಗೆ ನಿಮ್ಮಲ್ಲಿ ಒಂದಷ್ಟು ಕೀಳರಿಮೆಯೂ ಹುಟ್ಟಿಕೊಂಡಿರಲಿಕ್ಕೆ ಸಾಕು.
ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನೂ ನೀವು ಹೀಗೆಯೇ ಯೋಚಿಸಲು ಆರಂಭಿಸಿ. ನಿಮ್ಮಿಂದ ಸಾಧ್ಯವಿಲ್ಲ, ಕಷ್ಟಕರ ಎನಿಸಿದ ಎಷ್ಟೋ ಸಂಗತಿಗಳನ್ನು ಮತ್ತೊಬ್ಬರು ಅನಾಯಸವಾಗಿ ನಿರ್ವಹಿಸುತ್ತಿರುತ್ತಾರೆ. ಹಾಗಿದ್ದರೆ ಅದು ನಿಮ್ಮಿಂದ ಸಾಧ್ಯವಾಗುವುದಿಲ್ಲ ಏಕೆ ಅಂದರೆ ನಿಮಗಿಂತ ಅವರು ಸಮಸ್ಯೆಯನ್ನು ಯಾವ ಭಿನ್ನ ದೃಷ್ಟಿಕೋನದಲ್ಲಿ ನೋಡಿದ್ದಾರೆ? ಸಮಸ್ಯೆಗಳನ್ನು ಯಾವ ರೀತಿಯಲ್ಲಿ ನಿಭಾಯಿಸಲು ಸಮರ್ಥರಾಗಿದ್ದಾರೆ? ನನ್ನಲ್ಲಿರುವ ದೌರ್ಬಲ್ಯವಾದರೂ ಏನು? ಇಂಥ ಸಂಗತಿಗಳನ್ನು ಕೂಲಂಕುಷವಾಗಿ ವಿವೇಚಿಸಿ. ಅವರು ಸಮಸ್ಯೆಯ ಒಳಹೊರಗುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಅಥವಾ ಮೊದಲೇ ಅದನ್ನು ಊಹಿಸಿ ಅದನ್ನು ಹೊರಲು ಮನಸ್ಥಿತಿಯನ್ನು ಸಜ್ಜುಗೊಳಿಸಿಕೊಂಡಿರುತ್ತಾರೆ. ಕೆಲವೊಮ್ಮೆ ನಾವು ಸಮಸ್ಯೆಯನ್ನು ನೋಡುವುದರಲ್ಲೇ ದೋಷವಿರುತ್ತದೆ. ಹೀಗಾಗಿ ಅದು ನಮಗೆ ತೀರಾ ಕಷ್ಟಕರ ಎನಿಸುತ್ತಿರುತ್ತದೆ. ಸೂಟ್‌ಕೇಸ್ ಹಿಡಿದು ಹೊರಟ ಗೆಳೆಯ ಸ್ವಲ್ಪದೂರ ಹೋಗುತ್ತಿದ್ದಂತೆ ಕೈ ಬದಲಿಸಿಕೊಂಡು ಭಾರವನ್ನು ದೇಹದ ಇನ್ನೊಂದು ಪಾರ್ಶ್ವಕ್ಕೆ ವರ್ಗಾಯಿಸಿಕೊಂಡ. ಒಂದಷ್ಟು ದೂರ ಉತ್ತಮ ಜಾಗದಲ್ಲಿ ಅದರ ಗಾಲಿಗಳನ್ನು ಬಿಚ್ಚಿ ಎಳೆದುಕೊಂಡು ಹೋಗಿರಲಿಕ್ಕೂ ಸಾಕು. ತೀರಾ ಏರು ತಗ್ಗಿನಲ್ಲಿ ಹೆಗಲಮೇಲೆ ಹೊತ್ತು ನಡೆಯುವುದಕ್ಕೂ ಹಿಂದೆ ಮುಂದೆ ನೋಡಲಿಲ್ಲ. ಹೀಗಾಗಿ ಅನಿವಾರ್ಯವೆನಿಸಿದ ಆ ಭಾರವನ್ನು ಸುಲಭದಲ್ಲಿ ಕೊನೆ ಮುಟ್ಟಿಸಿದಂತೆ ನಿಮಗೆ ಕಂಡಿತು. ಸಮಸ್ಯೆಗಳನ್ನೂ ಹಾಗೆಯೇ ಅದರ ಸ್ವರೂಪ, ಸನ್ನಿವೇಶಗಳನ್ನು ಅರಿತು, ನಮ್ಮೆಲ್ಲಾ ಪ್ರತಿಷ್ಠೆ, ಹಿಂಜರಿಕೆ ಬಿಟ್ಟು ಹೊತ್ತು ನಡೆಯಲು ಕಲಿಯಬೇಕು. ಆಗ ಯಾವುದೂ ಭಾರವೆನಿಸುವುದೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.