ಹೆಚ್ಚು ತೇವಾಂಶ ಬಯಸುವ ವೆನಿಲ್ಲಾ...
ಕೃಷಿಕರು ಅತಿ ಉತ್ಸಾಹದಿಂದ ಪ್ರಾರಂಭಿಸಿದ ವೆನಿಲ್ಲಾ ಒಂದು ಸಮಯದಲ್ಲಿ ಭಾರೀ ಬೆಳೆ ಹಾಗೂ ಬೆಲೆಯನ್ನು ಕಂಡು ಇದೀಗ ತೀರಾ ಅವಗಣನೆಗೊಳಗಾಗಿದೆ.
ವೆನಿಲ್ಲಾ ಬಹುವಾರ್ಷಿಕ ಬಳ್ಳಿ. ವೆನಿಲ್ಲಾ ಬಳ್ಳಿಯ ಆಯಸ್ಸು ಸುಮಾರು 20 ವರ್ಷಗಳೆಂದರೆ ಅಚ್ಚರಿಯಾಗುತ್ತದೆ. ಹಾಗಿದ್ದರೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇದೇಕೆ ಸಂಪೂರ್ಣ ನಶಿಸಿಹೋಯಿತು ಎಂಬ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಇದನ್ನು ಬೆಳೆಯಲು ವಿಶೇಷ ತರಬೇತಿ ಅತ್ಯಗತ್ಯ. ಬಳ್ಳಿ ಹೇಗೆ ನೆಡಬೇಕು, ಅದಕ್ಕೆ ನೀರು ಎಷ್ಟು ಕೊಡಬೇಕು. ಹೂ ಬಿಟ್ಟ ನಂತರ ಪರಾಗಸ್ಪರ್ಶ ಹೇಗೆ ಮಾಡಬೇಕು ಎಂಬುದರ ಬಗ್ಗೆ ತರಬೇತಿ ಅಗತ್ಯವಿದೆ. ವೆನಿಲ್ಲಾ ಹೂವುಗಳಿಗೆ ಕೃತಕ ಪರಾಗಸ್ಪರ್ಶ ಮಾಡಿದರೆ ಮಾತ್ರ ಕಾಯಿ(ಕೋಡು)ಗಳು ಮೂಡುತ್ತವೆ. ಕೃತಕವಾಗಿ ಏಕೆ ಮಾಡಬೇಕೆಂದರೆ, ವೆನಿಲ್ಲಾ ಹೂವಿನ ರಚನೆ ಪರಾಗಸ್ಪರ್ಶಕ್ಕೆ ಪೂರಕವಾಗಿಲ್ಲ. ಒಂದು ಬೆರಳಿನಿಂದ ಕೇಸರ ಸರಿಸಿ ಪುಷ್ಪಾಂಗವನ್ನು ಹಿಡಿದು, ಬಿದಿರು ಕಡ್ಡಿಯ ಸಹಾಯದಿಂದ ಪರಾಗಸ್ಪರ್ಶ ಮಾಡಿ, ಹೂವಿನ ಗರ್ಭಕ್ಕೆ ಅದೇ ಹೂವಿನ ಪರಾಗರೇಣುವನ್ನು ಚಿಮುಕಿಸಬೇಕು. ಈ ಕೆಲಸವನ್ನು ಸರಿಯಾದ ಕಾಲದಲ್ಲಿ ಸರಿಯಾದ ಸಮಯದಲ್ಲಿ ಮಾಡಬೇಕಾಗುತ್ತದೆ.
ವೆನಿಲ್ಲಾಕ್ಕೆ ನೆರಳಿನ ಆಸರೆ ಬೇಕೇಬೇಕು. ಅದು ತೇವಾಂಶವನ್ನು ಬಯಸುತ್ತದೆ. ಹಾಗಂತ ಬೇಕಾಬಿಟ್ಟಿ ನೀರು ಹರಿಸಿದರೆ ಬಳ್ಳಿ ಕೊಳೆತುಹೋಗುವ ಸಂಭವ ಹೆಚ್ಚು. ಇದರ ಬಳ್ಳಿ ಹಾಗೂ ಎಲೆಗಳು ತುಂಬಾ ಮೃದು ಹಾಗೂ ಹೆಚ್ಚು ನೀರಿನಂಶವನ್ನು ಹೊಂದಿರುತ್ತವೆ. ಆದ್ದರಿಂದ ಇದಕ್ಕೆ ಆಧಾರವಾಗಿ ಅಡಕೆಮರ, ತೆಂಗಿನಮರ, ಚಪ್ಪರ ಅಥವಾ ನೇರವಾದ ಕಾಂಡವನ್ನು ಹೊಂದಿರುವ ಇತರೆ ಮರಗಳಿಗೆ ಹಬ್ಬಿಸುತ್ತಾರೆ. ಕೆಲವು ರೈತರು ಇದಕ್ಕೆಂದೇ ಕೆಲವು ಕಾಡು ಜಾತಿಯ ಮರಗಳನ್ನೂ ಬೆಳೆಸುತ್ತಾರೆ. ಪರಾಗಸ್ಪರ್ಶ ಮಾಡಿದ ತಿಂಗಳ ನಂತರ ಕಾಯಿ ಬೆಳೆಯಲು ಪ್ರಾರಂಭವಾಗುತ್ತದೆ. ಕಾಯಿ ಬೆಳೆದು ತುದಿ ಭಾಗ ಹಳದಿ ಬಣ್ಣಕ್ಕೆ ತಿರುಗುತ್ತಿದ್ದಂತೆ ಕೊಯ್ಲಿಗೆ ಪಕ್ವವಾಗಿದೆ ಎಂದರ್ಥ.
ಹೊಸದಾಗಿ ಬೆಳೆ ಪ್ರಾರಂಭಿಸಿದ ಕರ್ನಾಟಕ ಹಾಗೂ ಕೇರಳ ರಾಜ್ಯದ ಕೃಷಿಕರಿಗೆ ಇದರ ಬೆಲೆ, ಮಾರುಕಟ್ಟೆ ಹಾಗೂ ವೆನಿಲ್ಲಾ ಭವಿಷ್ಯದ ಕುರಿತು ಸರಿಯಾದ ಮಾಹಿತಿಗಳು ದೊರೆಯಲಿಲ್ಲ. ಇದರಿಂದಾಗಿ ಇಲ್ಲಿನ ಕೃಷಿಕರು ಆಸಕ್ತಿ ಕಳೆದುಕೊಂಡರು. ಈ ಎಲ್ಲ ಆತಂಕಗಳ ನಡುವೆ ಸವಾಲಾಗಿ ಹೊರಹೊಮ್ಮಿದ ವೆನಿಲ್ಲಾ ಕೃಷಿ ನಿರೀಕ್ಷಿತ ಮಟ್ಟ ಮುಟ್ಟಲೇ ಇಲ್ಲ.
ವೆನಿಲ್ಲಾಗೆ ಉತ್ತಮ ಭವಿಷ್ಯ ನೀಡಬಹುದೇ? ಎಂಬುದನ್ನು ಕೃಷಿ ತಜ್ಞರು ಸಂಶೋಧನೆ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಪರಿಣಾಮಕಾರಿ ಹೆಜ್ಜೆಗಳನ್ನಿಡಬೇಕಾಗಿದೆ. ಇವು ಯೋಜನಾಬದ್ಧವಾಗಿ ಕಾರ್ಯರೂಪಕ್ಕೆ ಬಂದಲ್ಲಿ ವೆನಿಲ್ಲಾ ಪುನಃ ಅಡಕೆ ಕೃಷಿಕರಿಗೆ ಉಪಬೆಳೆಯಾಗಿ ಆಸರೆಯಾಗಬಹುದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

