ಅಂಗಮಣಿ
ತವರು ಮನೆ ಆತಿಥ್ಯದ ಮಹತ್ವ ಬಿಂಬಿಸುವ ಮೇಲುಕೋಟೆಯ ಅಂಗಮಣಿ ಉತ್ಸವ ಗೊತ್ತೆ?

ಮೇಲುಕೋಟೆಯಲ್ಲಿ ಈಗ ಸಂಪನ್ನಗೊಳ್ಳುತ್ತಿರುವ ರಾಜಮುಡಿ- ವೈರಮುಡಿ ಉತ್ಸವ ಜಗತ್ಪ್ರಸಿದ್ಧ. ಆದರೆ ತವರು ಮನೆ ಆತಿಥ್ಯದ ಮಹತ್ವ ಬಿಂಬಿಸುವ ಇಲ್ಲಿನ ಅಂಗಮಣಿ ಉತ್ಸವ ಗೊತ್ತೆ?
ಉತ್ಸವಗಳು ಸಾಮಾಜಿಕ ಮೌಲ್ಯ ಹಾಗೂ ಮಾನವೀಯ ಸಂಬಂಧದ ಹಿರಿಮೆಯನ್ನು ಸಾರುತ್ತದೆ ಎಂಬುದು ನಿಜವಾದರೆ, ಮೇಲುಕೋಟೆಯ ಅಂಗಮಣಿ ಉತ್ಸವ ಅದಕ್ಕೊಂದು ಉದಾಹರಣೆ.
ಅಂಗಮಣಿ ಅಥವ ತವರುಮನೆ ಉತ್ಸವ ನಡೆಯುವುದು ಮಕರ ಸಂಕ್ರಾಂತಿಯ ಮರುದಿನ, ಜನವರಿ 15ರಂದು. ಮದುವೆಯಾಗಿ ಗಂಡನ ಮನೆಗೆ ಹೋದ ಮನೆಮಗಳು ತವರಿಗೆ ಬರುವಾಗ ತವರು ಹೇಗೆ ಸಂಭ್ರಮಿಸುತ್ತದೆ ಮತ್ತು ಹೇಗೆ ಆತಿಥ್ಯ ನೀಡುತ್ತದೆ ಎಂಬ ಪ್ರತೀಕ ಈ ಉತ್ಸವ. ಮನೆಮಗಳು ಇಲ್ಲಿ ಸಾಕ್ಷಾತ್ ಶ್ರೀದೇವಿ ಮತ್ತು ಭೂದೇವಿಯರು. ಅಳಿಯ ಜಗದೊಡೆಯ ಶ್ರೀಮನ್ನಾರಾಯಣ ಅಂದರೆ ಮೇಲುಕೋಟೆಯ ಅಧಿದೈವ ಶ್ರೀಚೆಲುವರಾಯಸ್ವಾಮಿ.
ಶ್ರೀದೇವಿ ಮತ್ತು ಭೂದೇವಿಯರ ಮನೆ ಮೇಲುಕೋಟೆಯ ಅಂಗಮಣಿ ಮಂಟಪ. ಹಿಂದೊಮ್ಮೆ ಕಳ್ಳತನವಾದ ದೇವಿಯರ ವಿಗ್ರಹಗಳು ಇಲ್ಲಿನ ಬಾವಿಯೊಂದರಲ್ಲಿ ದೊರೆತ ಕಾರಣ ಇಲ್ಲಿಯೇ ತವರುಮನೆ ಉತ್ಸವ ನಡೆಯುತ್ತಿದೆ ಎಂಬುದು ಐತಿಹ್ಯ. ನೂರಾರು ವರ್ಷಗಳಿಂದ ಆಚರಣೆಯಲ್ಲಿದೆ ಈ ಪದ್ಧತಿ. ಒಂದನೇ ಸ್ಥಾನೀಕರಾದ ಕರಗಂ ಕುಟುಂಬ ಮತ್ತು 3ನೇ ಸ್ಥಾನೀಕರಾದ ಸಜ್ಜೆಹಟ್ಟಿ ತಿರುನಾರಾಯಣಯ್ಯಂಗಾರ್ ಕುಟುಂಬಗಳು ದೇವಿಯರಿಗೆ ಮಡಿಲು ತುಂಬುವ ಕಾರ್ಯವನ್ನು ಪಾಲಿಸಿಕೊಂಡು ಬರುತ್ತಿವೆ.
ಊರ ಸಂಭ್ರಮ
ತವರು ಮನೆಗೆ ಶ್ರೀದೇವಿ ಮತ್ತು ಭೂದೇವಿ ಹೊರಟಾಗ ಇಡೀ ಮೇಲುಕೋಟೆ ಸಂಭ್ರಮಗೊಳ್ಳುತ್ತದೆ. ಅಂಗಮಣಿ ಮಂಟಪ ಸಿಂಗಾರಗೊಳ್ಳುತ್ತದೆ. ಮಂಗಳವಾದ್ಯದೊಂದಿಗೆ ದೇವಿಯರ ಮೆರವಣಿಗೆ. ಸಜ್ಜೆಹಟ್ಟಿ ಮನೆ ಮತ್ತು ಕರಗಂ ತಿರುಮಾಳಿಗೆಯಲ್ಲಿ ಎಲ್ಲಾ ವಿಧದ ಹಣ್ಣು, ತರಕಾರಿಗಳ ತಟ್ಟೆಗಳ ಅಲಂಕಾರ ಮಾಡಿ ಜೋಡಿಸಲಾಗುತ್ತದೆ. ಹಳ್ಳಿಯ ಜನರೂ ದೇವಿಯರಿಗೆ ಮೆರವಣಿಗೆಯಲ್ಲಿ ಹಣ್ಣು ತಂದು ನೀಡುತ್ತಾರೆ. ನೂರಾರು ತಟ್ಟೆಗಳಲ್ಲಿ ಜೋಡಿಸಿದ ವೈಭವವೇ ಕಣ್ಣಿಗೆ ಹಬ್ಬ. ರಾತ್ರಿ 8 ಗಂಟೆಯ ವೇಳೆಗೆ ದೇವಿಯ ಉತ್ಸವ ಅಂಗಮಣಿ ಮಂಟಪ ತಲುಪಿ ಅಲ್ಲಿ ಮಡಿಲು ತುಂಬುವ ವೈಭವ.
ಇತ್ತ ದೇವಾಲಯದಲ್ಲಿ ದೇವಿಯರಿಗಾಗಿ ಕಾದ ಚೆಲುವರಾಯಸ್ವಾಮಿ ಇವರು ಎಷ್ಟು ಹೊತ್ತಾದರೂ ಬಾರದಿದ್ದಾಗ ಕೋಪಗೊಂಡು ಕುದುರೆಯೇರಿ ದೇವಾಲಯದಿಂದ ಹೊರಟೇಬಿಡುತ್ತಾನೆ. ಆದರೆ ದಾರಿ ಮಧ್ಯೆ ಮೂರು ಸಲ ಮೊಲ ಅಡ್ಡ ಬಂದಾಗ ವಿಧಿಯಿಲ್ಲದೆ ಮರಳುತ್ತಾನೆ. ಆಗ ದೇವಿಯರ ಆಗಮನವಾಗುತ್ತದೆ. ಸ್ವಾಮಿಯ ಕೋಪವೂ ಕಡಿಮೆಯಾಗುತ್ತದೆ. ಮರುದಿನ ದೇವಿಯರಿಗೆ ಅರ್ಪಿತವಾದ ಹಣ್ಣುಗಳಲ್ಲಿ ಪಂಚಾಮೃತ, ತರಕಾರಿ ಮತ್ತು ಅಕ್ಕಿಯಲ್ಲಿ ಕದಂಬ ತಯಾರಿಸಿ ಪ್ರಸಾದ ವಿತರಿಸಲಾಗುತ್ತದೆ.
-ಸ್ಥಾನೀಕಂ ನಾಗರಾಜ ಅಯ್ಯಂಗಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


