ಬೈಟುಕಾಫಿ

ಡಿವೈನ್ ದ್ರಾಕ್ಷಿ

ಡಿವೈನ್ ದ್ರಾಕ್ಷಿ
Published On :

ಅಕಾಲದಲ್ಲಿ ಮೋಡ ಕಟ್ಟುವಿಕೆ, ಇದ್ದಕ್ಕಿದ್ದಂತೆ ಬಿದ್ದು ಹೋಗುವ ದರ, ಕೈಕೊಡುವ ಕಾರ್ಮಿಕರು, ಮಧ್ಯವರ್ತಿಗಳ ಕಿರಿಕಿರಿಯಿಂದ ರೋಸಿ ಹೋಗಿದ್ದ ಬಾಗಲಕೋಟೆ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಈಗ ಇದ್ದಕ್ಕಿದ್ದಂತೆ ವೈನ್ ಕಿಕ್ ಏರಿದೆ. ಬಳ್ಳಿಯ ಮೈ ತುಂಬ ಹಿರಿದಾದ ಗೊಂಚಲುಗಳು ಇಳಿ ಬಿದ್ದಿದ್ದರೂ ಅಪ್ಪಿತಪ್ಪಿಯೂ ಕಿತ್ತು ತಿನ್ನುವುದಿಲ್ಲ. ಮಧ್ಯವರ್ತಿಗಳು ಬಿಡಿ ಮಾರಾಟಗಾರರು ಮನೆಯ ವರೆಗೆ ಬಂದು ಭಾರಿ ಬೆಲೆ ಕೊಡುತ್ತೇವೆ ಎಂದರೂ ಕ್ಯಾರೆ ಎನ್ನುವುದಿಲ್ಲ. ತೋಟದಲ್ಲಿ ಬೆಳೆದ ಇವರ ದ್ರಾಕ್ಷಿಯೆಲ್ಲ ಸೀದಾ ಹೋಗುವುದು ವೈನ್ ಫ್ಯಾಕ್ಟರಿಗೆ.
ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆದು ಕೈ ಸುಟ್ಟುಕೊಂಡವರೇ ಹೆಚ್ಚು. ಆದರೀಗ ಕಾಲ ಬದಲಾಗಿದೆ. ದ್ರಾಕ್ಷಿ ಬೆಳೆಯಿರಿ ಚಿಂತೆ ಬಿಟ್ಟು ವೈನಾಗಿರಿ ಎನ್ನುವ ಸ್ಲೋಗನ್ನು ಶುರುವಾಗಿದೆ. ಬಂಡವಾಳದ ಅಡಚಣೆಯಿಲ್ಲ. ಅದನ್ನು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ವೈನ್ ಫ್ಯಾಕ್ಟರಿಯವರು ನೋಡಿಕೊಳ್ಳುತ್ತಾರೆ. ಬೀಜ, ಗೊಬ್ಬರ, ಕ್ರಿಮಿನಾಶಕ, ಫಲದ ಕೊಯ್ಲು ಎಲ್ಲ ಜವಾಬ್ದಾರಿಯನ್ನು ವೈನ್ ಫ್ಯಾಕ್ಟರಿ ಮತ್ತು ತೋಟಗಾರಿಕೆ ಇಲಾಖೆ  ಅಧಿಕಾರಿಗಳು ವಹಿಸಿಕೊಳ್ಳುತ್ತಾರೆ.
ಇದಕ್ಕೆಲ್ಲ ಕಾರಣ ಮುಧೋಳದ ಎಲೈಟ್ ವಿಂಟೇಜ್ ವೈನರಿ ಇಂಡಿಯಾ ಪ್ರೈ. ಲಿ. ಮತ್ತು ಜಮಖಂಡಿ ಬಳಿಯ ಚಿಕ್ಕಲಕಿಯ ಕೃಷ್ಣಾ ವ್ಯಾಲಿ ವೈನರಿಗಳು. ಜಗತ್ತಿನ ಎಲ್ಲ ನಮೂನೆಯ ದ್ರಾಕ್ಷಾರಸ (ವೈನ್) ತಯಾರಿಸುವ ಈ ಕಂಪನಿಗಳು ತಮ್ಮ ಸುತ್ತಲಿನ ರೈತರಲ್ಲಿ ಖಚಿತ ಬೆಳೆ, ನಿಗದಿತ ಬೆಲೆಯ ವಿಶ್ವಾಸ ಹುಟ್ಟಿಸಿದ್ದರಿಂದ, ಕೇವಲ ಮೂರು ವರ್ಷದಲ್ಲಿ ಇನ್ನೂರು (200) ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ವೈನ್ ಆಗುತ್ತಿದೆ.

ಬಿಸಿಲುನಾಡಿನ ಪ್ರಯೋಗ
ಬಿಜಾಪುರದ ಬಾಬಾನಗರ ದ್ರಾಕ್ಷಿಯಿಂದ ಪ್ರೇರಿತರಾಗಿ ಈ ಪ್ರದೇಶದ ಕೆಲವು ರೈತರು ದ್ರಾಕ್ಷಿ ಬೆಳೆಯಲು ಶುರುಮಾಡಿದ್ದರು. ಆದರೆ, ಬಹುಬೇಗನೆ ಕೈ ಸುಟ್ಟುಕೊಂಡರು. ಹವಾಮಾನ ವೈಪರೀತ್ಯ, ಕೀಟಗಳ ಬಾಧೆ, ಮಧ್ಯವರ್ತಿಗಳ ಕಿರಿಕಿರಿ, ದಿಢೀರ್ ಬೆಲೆ ಕುಸಿತದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಅಸಹಾಯಕತೆ. ಇಂತಹ ಸಂಕಷ್ಟದಲ್ಲಿ ನೆರವಿಗೆ ಬಂದದ್ದೇ ಎಲೈಟ್ ವಿಂಟೇಜ್ ವೈನರಿ.
ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿ 20 ವರ್ಷ ವಿದೇಶದಲ್ಲಿದ್ದು ವಿವಿಧ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದ ಸ್ಥಳೀಯ ವಿನೋದ ಗುರಡ್ಡಿ, ದ್ರಾಕ್ಷಿ ಬೆಳೆಗಾರರನ್ನೆಲ್ಲ ಒಗ್ಗೂಡಿಸಿದರು. ವೈನ್ ಕಂಪನಿ ತೆರೆದರೆ ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತವೆ. ನೀವೆಲ್ಲ ಮಾತನಾಡಿಕೊಂಡು ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಚಿಂತೆಯನ್ನೆಲ್ಲ ನನ್ನ ಹೆಗಲಿಗೆ ಹಾಕಿ ಎಂದು ಧೈರ್ಯ ತುಂಬಿದರು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ದಿಡ್ಡಿಮನಿ ಕೈಗೂಡಿಸಿದರು.  ದ್ರಾಕ್ಷಿ ಪ್ಲಾಂಟ್, ಹನಿ ನೀರಾವರಿ ಇತ್ಯಾದಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸಬ್ಸಿಡಿ ನೀಡಿತು. ವೈನ್ ಘಟಕಕ್ಕೂ ಸಬ್ಸಿಡಿ. 3 ವರ್ಷಗಳಲ್ಲಿ ಈ ಎರಡೂ ಕಂಪನಿಗಳ ಜತೆ 100ಕ್ಕೂ ಹೆಚ್ಚು ರೈತರು 200 ಎಕರೆ ದ್ರಾಕ್ಷಿ ತೋಟಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಕಂಪನಿಯವರೇ ನಿಗದಿತ ತಳಿ ಪೂರೈಸುತ್ತಾರೆ. ಬೆಳೆ ಬಗ್ಗೆ ನಿಗಾ ಇರಿಸಿರುತ್ತಾರೆ. ಉತ್ತಮ ಬೆಲೆ ಕೊಟ್ಟು ರೈತರನ್ನು ನಿಶ್ಚಿಂತೆಯಿಂದಿರುವಂತೆ ಮಾಡಿದ್ದಾರೆ.

ಬೆಳೆ-ಬೆಲೆ ಖಚಿತ
ಉಳಿದ ದ್ರಾಕ್ಷಿ ಬೆಳೆಗಳಿಗಿಂತ ಈ ಕಂಪನಿಗಳು ಸೂಚಿಸುವ ತಳಿಗಳ ಇಳುವರಿ ಕಡಿಮೆ. ಆದರೆ, ಇಲ್ಲಿ ಆಳು, ಉಳುಮೆ, ರೋಗ, ಮೋಡಗಳ ಭಯ, ಮಾರುಕಟ್ಟೆಯ ಅತಂತ್ರತೆ ಇರುವುದಿಲ್ಲ. ಪ್ರತಿ ವರ್ಷ ಎಕರೆಗೆ ರು. 2ರಿಂದ ರು. 2.5 ಲಕ್ಷ ಆದಾಯ ಖಚಿತ. ರೈತರು ಇದನ್ನು ಒಪ್ಪಿಕೊಂಡಿದ್ದಾರೆ.
ವಿಶೇಷ ಎಂದರೆ ಆಯಾ ತಳಿಯ ಹೆಸರಿನಲ್ಲೇ ವೈನ್ ತಯಾರಾಗುತ್ತಿದೆ. ಎಲೈಟ್ ಶಿರಾಜ್, ಎಲೈಟ್ ಕೆಬರ್ ಹೀಗೆ 13 ಹೆಸರುಗಳು. ಇನ್ನೂ ಹೊರ ರಾಷ್ಟ್ರಗಳಿಗೆ ಕಾಲಿಟ್ಟಿಲ್ಲ. ರಾಜ್ಯದಲ್ಲಿ ಇಲ್ಲಿನ ವೈನ್‌ಗೆ ಮೂರನೇ ಸ್ಥಾನ. ಆದರೆ, ಸ್ಥಳೀಯ ದ್ರಾಕ್ಷಿಯಿಂದ ವೈನ್ ತಯಾರಿಸುವಲ್ಲಿ ಇವರು ರಾಷ್ಟ್ರಕ್ಕೆ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನು ದೇಶಿ ಬ್ರಾಂಡ್ ಮಾಡಲು ಹೊರಟಿರುವ ರಾಜ್ಯ ವೈನ್ ಬೋರ್ಡ್ ಈ ಎಲ್ಲ ರೈತರ, ವೈನ್ ಕಂಪನಿಗಳ ವಿವರ, ಸಾಧನೆಯನ್ನು ತನ್ನ ವೆಬ್‌ಸೈಟ್‌ಗೆ ಹಾಕಿ ಹುರಿದುಂಬಿಸಲು ಮುಂದಾಗಿದೆ.

ಸೋಶಿಯಲ್ ಡ್ರಿಂಕ್
ವೈನ್ ಬಗ್ಗೆ ಮಡಿವಂತಿಕೆ ಬೇಡ. ಇದೊಂದು ಸೋಶಿಯಲ್ ಡ್ರಿಂಕ್. ಮನೆ ಮಂದಿಯೆಲ್ಲ ಕುಡಿಯಬಹುದು. ಹಾಳು-ಮೂಳು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವವರು ಶುದ್ಧ ದ್ರಾಕ್ಷಿಯಲ್ಲಿ ತಯಾರಾದ ಈ ವೈನ್ ಕುಡಿಯುವುದು ಸೂಕ್ತ. ವೈನ್‌ಗೆ ಹಾಕಿದ ದುಡ್ಡು ರೈತರಿಗೆ ಸೇರುತ್ತದೆ ಎನ್ನುವುದು ಇಲ್ಲಿನ ಪ್ರಮುಖ ಅಂಶ.
-ವಿನೋದ ಗುರಡ್ಡಿ ಎಲೈಟ್ ವಿಂಟೇಜ್ ವೈನರಿ ಸಂಸ್ಥಾಪಕ

ಹೊಸ ದಿಕ್ಕಿನೆಡೆ ಹೆಜ್ಜೆ
ತೋಟಗಾರಿಕೆಯಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ. ಬೆಳೆ, ಬೆಲೆ ಅತಂತ್ರತೆ ಮತ್ತು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವುದಕ್ಕಿಂತ ವೈನ್ ಕಂಪನಿಗಳ ಜತೆ ಕೈಗೂಡಿಸುವ ಮೂಲಕ ದ್ರಾಕ್ಷಿ ಬೆಳೆಗಾರರು ತಮ್ಮ ಆದಾಯ ಹೆಚ್ಚಳ ಮಾಡಿಕೊಳ್ಳುವ ಮೂಲಕ ಆರ್ಥಿಕ ಸ್ಥಿರತೆ ಹೊಂದಬಹುದಾಗಿದೆ.
-ಶ್ರೀಶೈಲ ದಿಡ್ಡಿಮನಿ, ಡಿಡಿ ತೋಟಗಾರಿಕೆ ಇಲಾಖೆ


 -ಮಲ್ಲಿಕಾರ್ಜುನ ಸಿದ್ದಣ್ಣವರ
    9379088921

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.