ಬೈಟುಕಾಫಿ

ವಿಶೇಷ ರುಚಿಯ ಅಂಬೆಕೊಂಬು ತಂಬುಳಿ

Published On :

ಶುಂಠಿ ಚಹಾ, ಅದರಕ್ ಕಾ ಚಾಯ್, ಜಿಂಜರ್ ಟೀ ಬಹುಶಃ ಎಲ್ಲರೂ ದಿನನಿತ್ಯ ಟೀ ಸ್ಟಾಲ್‌ಗಳಲ್ಲಿ ಕೇಳಿಯೇ ಇರುತ್ತಾರೆ. ಟೀಗಳಲ್ಲಿ ಮಸಾಲಾ ಟೀ ಹೆಚ್ಚು ರುಚಿಕರ. ಅದರಲ್ಲೂ ಶುಂಠಿ ಚಹಾ ಹೆಚ್ಚು ರುಚಿಯಾಗಿರುತ್ತದೆ. ಅಲ್ಲದೇ ಗ್ಯಾಸ್‌ಟ್ರಬಲ್‌ನಂತಹ ಹೊಟ್ಟೆ ತೊಂದರೆಯನ್ನು ನಿವಾರಿಸುವ ಗುಣ ಇದರಲ್ಲಿದೆ.
ಶುಂಠಿ ಮೊರಬ್ಬ ಕರ್ನಾಟಕದಲ್ಲಿ ಹೆಸರುವಾಸಿ. ಅಲ್ಲಂ ಪಚ್ಚಡಿ ಆಂಧ್ರಪ್ರದೇಶದಲ್ಲಿ, ಭಾವನಾ ಶುಂಠಿ ನಮ್ಮ ಮಲೆನಾಡಿನಲ್ಲಾದರೆ, ಮುಂಬಯಿ ಮಂದಿಗೆ ಚಹಾ ಮಾಡಲು ಅದರಕ್ ಬೇಕೇಬೇಕು. ಇದರಲ್ಲಿರುವ ಸುವಾಸನೆ, ಮಧುರವಾದ ಘಾಟು ಇಷ್ಟೆಲ್ಲಾ ಪ್ರಸಿದ್ಧಿಗೆ ಕಾರಣ.
ಶುಂಠಿಯಿಲ್ಲದ ಪುಲಾವ್ ಊಹಿಸಿಕೊಳ್ಳುವುದೂ ಕಷ್ಟ. ಎಲ್ಲ ಬಗೆಯ ಪುಲಾವ್‌ಗೂ ಶುಂಠಿಯನ್ನು ಬಳಸಿಯೇ ಇರುತ್ತಾರೆ.
ಇನ್ನೊಂದು ವಿಧದ ಶುಂಠಿಯಿದೆ. ಅದೇ ಮಾವು ಶುಂಠಿ. ಮಲೆಯಾಳಂನಲ್ಲಿ ಮಾಙನಾರಿ ಎನ್ನುತ್ತಾರೆ. ನೋಡಲು ಅರಿಸಿನದ ಗಿಡದಂತಿರುವ ಈ ಮಾವು ಶುಂಠಿಗೆ ಉತ್ತರಕನ್ನಡ ಭಾಗದ ಜನ 'ಅಂಬೆಕೊಂಬು' ಎಂತಲೂ ಕರೆಯುತ್ತಾರೆ. ಇದಕ್ಕೆ ಮಾವಿನ ಪರಿಮಳವಿರುವುದೇ ಈ ಹೆಸರು ಬರಲು ಕಾರಣ. ಶುಂಠಿಯಷ್ಟು ಖಾರವಿರುವುದಿಲ್ಲ. ಇದನ್ನು ತೆಂಗಿನಕಾಯಿ ತುರಿಯೊಂದಿಗೆ ಚಟ್ನಿ ಮಾಡಿದರೆ ಮಾವಿನಕಾಯಿಯದೇ ರುಚಿ. ಇದರ ತಂಬುಳಿ ತುಂಬಾ ರುಚಿ ಹಾಗೂ ಬೇಸಿಗೆಯನ್ನು ಇದರ ತಂಬುಳಿ ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುವುದು. ಮಾವು ಶುಂಠಿ ಕರ್ನಾಟಕದ ಎಲ್ಲ ಭಾಗಗಳ ಜನರಿಗೆ ಹೆಚ್ಚು ಪರಿಚಯವಿಲ್ಲ. ಅಪರೂಪವಾಗಿ ಕೆಲವರ ಹಿತ್ತಲಲ್ಲಿ ಕಂಡುಬರುತ್ತದೆ. ಮಾವುಶುಂಠಿ ಬೆಳೆಯುವುದು ಸುಲಭ. ಅದರ ಗಡ್ಡೆಯನ್ನು ಮೃದು ಮಣ್ಣಿನಲ್ಲಿ ನೆಟ್ಟು ಪ್ರತಿದಿನ ಸ್ವಲ್ಪ ನೀರು ಹಾಕುತ್ತಿರಬೇಕು. ಗೊಬ್ಬರದ ಬಯಕೆಯಿಲ್ಲದೆ ಸಮೃದ್ಧವಾಗಿ, ಸುತ್ತಲೂ ಮರಿಗಿಡಗಳೊಂದಿಗೆ ವಿಸ್ತಾರವಾಗಿ ಬೆಳೆಯುತ್ತದೆ. ಏಳೆಂಟು ತಿಂಗಳಲ್ಲಿ ಗಿಡಗಳು ಒಣಗಲು ಪ್ರಾರಂಭವಾದಾಗ ಗಡ್ಡೆ ಕೀಳಲು ಸಿದ್ಧ.
ಇದನ್ನು ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿ ಇಟ್ಟುಕೊಂಡು ಬೇಕಾದಾಗ ಅಡುಗೆಗಳಲ್ಲಿ ಉಪಯೋಗಿಸಿಕೊಳ್ಳಬಹುದು. ಇದನ್ನು ಸರಿಯಾದ ಟೈಮಿನಲ್ಲಿ ಕೀಳದೇ ಹಾಗೇ ಮಣ್ಣಿನಡಿಯಲ್ಲಿ ಬಿಟ್ಟುಬಿಟ್ಟರೆ ಗಡ್ಡೆ ಅಲ್ಲಿಯೇ ಮೊಳಕೆಯೊಡೆದು ಮತ್ತೆ ಗಿಡವಾಗಿ ಹೊರಬರುತ್ತದೆ.
ಹಿತ್ತಲಲ್ಲಿ ಇದರ ಗಿಡವಿದ್ದರೆ ಅಗತ್ಯಬಿದ್ದಾಗ ಅಡುಗೆಗೆ ಉಪಯೋಗಿಸಬಹುದು. ಹೆಚ್ಚು ಆರೈಕೆ ಬೇಡದ, ಬೆಳೆದವರ ಊಟಕ್ಕೆ ರುಚಿ ಕೊಡುವ ಅಂಬೆಕೊಂಬನ್ನು ಮಾರುಕಟ್ಟೆಗೆ ತರುವ ಪ್ರಯತ್ನ ಮಾಡಬೇಕಾಗಿದೆ.
ಅಂಬೆಕೊಂಬನ್ನು ಉಪ್ಪಿನಕಾಯಿಯಲ್ಲೂ ಉಪಯೋಗಿಸುತ್ತಾರೆ. ಇದರ ಉಪ್ಪಿನಕಾಯಿ ವಿಶೇಷ ರುಚಿ ಹಾಗೂ ಪರಿಮಳ ಹೊಂದಿರುತ್ತದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.