ಬೀಗದೇವರು
ನಮ್ಮಲ್ಲಿ ಎಂತೆಂಥದೋ ವಿಚಿತ್ರ ನಂಬಿಕೆ ಹರಕೆಗಳನ್ನು ಕೇಳಿದ್ದೇವೆ. ದೇವಸ್ಥಾನದ ಮೇಲಿನಿಂದ ಮಗುವನ್ನು ಹಾಕುವುದು, ಮುಳ್ಳಿನ...

ನಮ್ಮಲ್ಲಿ ಎಂತೆಂಥದೋ ವಿಚಿತ್ರ ನಂಬಿಕೆ ಹರಕೆಗಳನ್ನು ಕೇಳಿದ್ದೇವೆ. ದೇವಸ್ಥಾನದ ಮೇಲಿನಿಂದ ಮಗುವನ್ನು ಹಾಕುವುದು, ಮುಳ್ಳಿನ ಮೇಲೆ ಹಾಯುವುದು, ಬೆಂಕಿಯ ಮೇಲೆ ನಡೆಯುವುದು, ಗಲ್ಲಕ್ಕೆ ತಂತಿ ಸಿಕ್ಕಿಸಿಕೊಳ್ಳುವುದು ಮುಂತಾದವು. ಇಂತಹವುಗಳಲ್ಲಿ ಬೀಗ ಹಾಕುವ ಹರಕೆಯೂ ಒಂದು.
ಈ ಬೀಗ ಹಾಕುವ ಹರಕೆ ಇರುವುದು ಹಾವೇರಿ ಜಿಲ್ಲೆಯ ಹಾನಗಲ್ಲು ತಾಲ್ಲೂಕಿನ ಬಾಳೂರು ಗ್ರಾಮದ ಹತ್ತಿರವಿರುವ ಭೂತಪ್ಪ ದೇವರಲ್ಲಿ. ರಸ್ತೆಯ ಪಕ್ಕದಲ್ಲಿರುವ ಬೃಹತ್ ಆಲದ ಮರಕ್ಕೆ ಹೊಂದಿಕೊಂಡಿರುವ ಭೂತಪ್ಪ, ಇಲ್ಲಿ ಹಾದುಹೋಗುವವರೆಲ್ಲರ ಅಚ್ಚುಮೆಚ್ಚಿನ ದೇವರು.
ಇಷ್ಟಾರ್ಥ ಸಿದ್ಧಿ, ಸಮಸ್ಯೆ ನಿವಾರಣೆಗಳಿಗಾಗಿ ಇಲ್ಲಿಗೆ ಬಂದು ಹರಕೆ ಒಪ್ಪಿಸುವವರು ಸಾವಿರಾರು ಮಂದಿ.
ಭಾನುವಾರ, ಮಂಗಳವಾರ, ಅಮವಾಸ್ಯೆ ದಿನದಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದವಿಲ್ಲದೆ ಇಲ್ಲಿ ಒಂದು ಚಿಕ್ಕ ಜಾತ್ರೆಯೇ ನಡೆಯುತ್ತದೆ. ಬೆಂಗಳೂರು, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ, ಧಾರವಾಡ, ಗದಗ, ರಾಯಚೂರು, ನೆರೆಯ ರಾಜ್ಯಗಳಾದ ಆಂಧ್ರ, ತಮಿಳುನಾಡು, ಗೋವಾಗಳಿಂದಲೂ ಸಹ ಜನರು ಬರುತ್ತಾರೆ.
ಅವರವರ ಶಕ್ತಿಗನುಸಾರ ಬೀಗ ಹಾಕಿ ಐದು ವಾರ ಅಮಾವಾಸ್ಯೆಯ ದಿವಸ ಬರಬೇಕು. ಬೀಗ ಹಾಕುವ ಹರಕೆ ಇರುವವರು ಮೊದಲು ಭೂತ ದೇವರ ದರ್ಶನ ಮಾಡಿ, ಬೀಗವನ್ನು ದೇವರ ಪಾದದ ಬಳಿ ಇಟ್ಟು ಪೂಜೆ ಸಲ್ಲಿಸಿ, ನಂತರ ಪೂಜಾರಿಯ ಸಲಹೆಯ ಮೇರೆಗೆ ದೇವಾಲಯದ ಯಾವುದಾದರೊಂದು ಕಡೆ ಭಕ್ತಿಯಿಂದ ಪ್ರಾರ್ಥಿಸಿ ಬೀಗ ಹಾಕುತ್ತಾರೆ. ಬೀಗ ಹಾಕಿದ ನಂತರ ಕೋಳಿ ಬಲಿ ಕೊಡುವ ಪದ್ಧತಿ ಇಲ್ಲಿ ಇದೆ. ಕೋಳಿಯ ತಲೆಯನ್ನು ದೇವಾಲಯದ ಮುಂದಿಟ್ಟು ಪ್ರಾರ್ಥಿಸಿ, ಅಕ್ಕಪಕ್ಕದ ಹೊಲಗದ್ದೆಯಲ್ಲಿ ಅಡುಗೆ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸಿ ನಂತರ ಸ್ವೀಕರಿಸುತ್ತಾರೆ.
ಆರನೇ ವಾರದ ನಂತರ ಅವರ ಆಸೆ ಈಡೇರುತ್ತದೆ ಎನ್ನುತ್ತಾರೆ ಭಕ್ತರು. ಆಸೆ ಈಡೇರಿದ ನಂತರ ತಾವು ಹಾಕಿದ ಬೀಗ ತೆಗೆಯಬೇಕು. ಹತ್ತು-ಹದಿನೈದು ವರ್ಷ ಹಿಂದೆ, ಬೇಡಿಕೆ ಈಡೇರಿದರೆ ಖಾರದ ಪುಡಿಯನ್ನು ಅರ್ಪಿಸುತ್ತಿದ್ದರಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಬೀಗ ಹಾಕುತ್ತಿದ್ದಾರೆ. ಇದರ ಪರಿಣಾಮ, ದೇವಾಲಯದ ಸುತ್ತುಮುತ್ತಿನ ಜಾಗವೆಲ್ಲ ಬೀಗಗಳ ಸಾಮ್ರಾಜ್ಯವಾಗಿದೆ.
ಇಲ್ಲಿರುವ ಇನ್ನೊಂದು ವಿಶೇಷ ಎಂದರೆ, ದುಂಡುಕಲ್ಲುಗಳು. ಹರಕೆ ಹೇಳಿಕೊಂಡವರು ಭೂತಪ್ಪನ ಸನ್ನಿದಿ ಎದುರಿರುವ ದುಂಡುಕಲ್ಲುಗಳನ್ನು ಎತ್ತುತ್ತಾರೆ. ಬಯಕೆ ಈಡೇರುತ್ತದೆ ಎಂದಾದರೆ ಕಲ್ಲು ಹಗುರವಾಗಿ ಕಲ್ಲು ಮೇಲೆ ಬರುತ್ತದಂತೆ, ಇಲ್ಲವಾದರೆ ಇಲ್ಲ.
ಬೀಗ ಹಾಕಿದರೆ ಬೇಡಿಕೆ ಈಡೇರುತ್ತದೆ ಎಂಬ ಇಲ್ಲಿನ ಪ್ರತೀತಿ ಚರ್ಚೆಗೊಳಪಡಬಹುದಾದರೂ, ಮತಭೇದವಿಲ್ಲದೆ ಎಲ್ಲರೂ ವಿಚಿತ್ರ ನಂಬಿಕೆಯ ರೂಪದಲ್ಲಿ ಒಂದುಗೂಡುವುದು ಮಾತ್ರ ಅರ್ಥಪೂರ್ಣ.
-ಟಿ. ಶಿವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


