ನ್ಯಾಯ ಪೂರ್ಣೆ
ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿದ್ದ, ನಮ್ಮವರೇ ಆದ ಶಿವರಾಜ್ ಪಾಟೀಲರ ಬಗ್ಗೆ ಕೇಳಿರ್ತೀರಿ....

ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿದ್ದ, ನಮ್ಮವರೇ ಆದ ಶಿವರಾಜ್ ಪಾಟೀಲರ ಬಗ್ಗೆ ಕೇಳಿರ್ತೀರಿ. ಅವರು ತಾವು ಹ್ಯಾಂಡಲ್ ಮಾಡುತ್ತಿದ್ದ ಕೇಸುಗಳ ಬಗ್ಗೆ ಊಟದ ಸಮಯದಲ್ಲಿ ಪತ್ನಿಯ ಜತೆ ಚರ್ಚಿಸುತ್ತಿದ್ದರಂತೆ. ಅದ್ಯಾಕೆ ಅಂತ ಕೇಳಿದಾಗ ಅವರು ಹೇಳಿದ್ದು: 'ನೀನು ಎರಡೂ ಕಡೆ ಭೇದ ಭಾವ ಇಲ್ದೆ ಮಾತಾಡ್ತೀಯಾ, ಅದ್ಕೇ...' ಅಂತ.
ಈ ಉದಾಹರಣೆಯಿಂದಲೇ ನಿಮಗೆ, ಇವರ ದಾಂಪತ್ಯ ಹಾಗೂ ಇವರಿಬ್ಬರ ನ್ಯಾಯಪರ ಮನೋಭಾವಗಳ ಸೂಕ್ಷ್ಮ ನೋಟ ಸಿಕ್ಕಿರಬಹುದು. ಹೌದು, ಇವರು ಶಿವರಾಜ್ ಪಾಟೀಲ್ರ ಪತ್ನಿ ಅನ್ನಪೂರ್ಣ. ಇದು ನ್ಯಾಯಮೂರ್ತಿಗಳ ಮಡದಿಯೊಡನೆ ನಡೆಸಿದ ಮಾತುಕತೆ.
ನ್ಯಾಯಮೂರ್ತಿಗಳ ಅರ್ಧಾಂಗಿ ತಾವು. ನಿಮ್ಮವರು ಮನೇಲಿ ನ್ಯಾಯ ಒದಗಿಸಿದಾರಾ?
ಅವ್ರು ಕೋರ್ಟ್ನಲ್ಲಿ ಹೇಗೋ ಮನೇಲೂ ಹಾಗೇ, ಒಂದೇ ಥರ. ಕರೆಕ್ಟ್ ಇದ್ದಿದ್ದು ಕರೆಕ್ಟು, ತಪ್ಪು ಅಂದ್ರೆ ತಪ್ಪೇ.
ನ್ಯಾಯಾಂಗ ವ್ಯವಸ್ಥೆ ಬಗ್ಗೆ ತಿಳಿದುಕೊಂಡಿದೀರಾ?
ತಾವು ಹ್ಯಾಂಡಲ್ ಮಾಡುವ ಕೇಸ್ ಬಗ್ಗೆ ಡೈನಿಂಗ್ ಟೇಬಲ್ ಹತ್ರ ಕುಳಿತಾಗ ಡಿಸ್ಕಸ್ ಮಾಡ್ತಾರೆ. ಅದು ನಂಗೆ ಅರ್ಥ ಆಗ್ಲಿ ಬಿಡ್ಲಿ, ಅರ್ಥ ಆಗ್ಬೇಕು ಅಂತ ಇಲ್ಲ. ಎಲ್ಲಾ ತಿಳಿಸ್ತಾರೆ. ನಾನ್ಹೇಳ್ತಿದ್ದೆ, ನಂಗೇನೂ ವಿಷ್ಯ ಗೊತ್ತಿಲ್ಲ, ನನಗ್ಯಾಕೆ ಹೇಳ್ತೀರಿ ಅಂತ. ಆಗ ಅವರು ಹೇಳ್ತಾರೆ, ನೀನು ಯಾವಾಗ್ಲೂ, ಎರಡೂ ಕಡೆ ಬೇಧ ಭಾವ ಇಲ್ದೆ ಮಾತಾಡ್ತೀಯಾ, ಅದಕ್ಕೇ ನಿಂಗೆ ತಿಳಿಸ್ತೀನಿ ಅಂತ. ನಾನು ಸಾಮಾನ್ಯವಾಗಿ ತುಂಬಾ ಸ್ಟ್ರೈಟ್ ಫಾರ್ವರ್ಡ್. ಅಪ್ಪ-ಅಮ್ಮ, ಇವ್ರು- ಮಕ್ಳು, ಯಾರೇ ಆಗ್ಲಿ, ತಪ್ಪು ತಪ್ಪೇ.
ನ್ಯಾಯಮೂರ್ತಿಗಳಿಗೆ ನಿಮ್ಮ ಸಪೋರ್ಟ್?
ನಾನು ಅವರಿಗೆ ಸಂಪೂರ್ಣ ಸಪೋರ್ಟ್ ಕೊಟ್ಟಿದ್ದೀನಿ, ಯಾವ ರೀತಿಯಲ್ಲೂ ಅಡ್ಡಿ ಮಾಡಿಲ್ಲ. ಮೊದಲಿಂದ್ಲೂ ಯಾವುದಕ್ಕೂ ಆಸೆ ಪಟ್ಟವಳಲ್ಲ.
ನಿಮಗೆ ಅವರ ಬೆಂಬಲ?
16ನೇ ವಯಸ್ಸಿಗೇ ಮದುವೆಯಾಗಿ ಇಲ್ಲಿಗೆ ಬಂದಾಗ ಏನೂ ಗೊತ್ತಾಗ್ತಿರಲಿಲ್ಲ. ಎಲ್ಲಾ ಇಲ್ಲಿ ಬಂದು ಕಲ್ತೆ. ಎಲ್ಲದಕ್ಕೂ ಇವ್ರು ತುಂಬಾ ಸಪೋರ್ಟ್ ಕೊಡ್ತಿದ್ರು. ತಾಳ್ಮೆ ಜಾಸ್ತಿ ಇವರಿಗೆ. ಯಾವತ್ತೂ ನೀನು ಕಡಿಮೆ ಓದಿದೀಯ, ನಿಂಗೇನೂ ಬರಲ್ಲ ಅಂತ ಕೀಳಾಗಿ ಕಂಡಿಲ್ಲ. ತುಂಬಾ ಅಡ್ಜಸ್ಟ್ ಮಾಡ್ಕೋತಾರೆ. ಅವರಿಗೆ ನಾನು, ನಂಗೆ ಅವರು ಬೆನ್ನೆಲುಬಾಗಿದೀವಿ.
ಅವರೊಂದಿಗಿನ ಮಧುರ ಕ್ಷಣದ ನೆನಪು?
ನಮ್ಮ ಯಜಮಾನ್ರು ರಾಜಸ್ಥಾನದ ಚೀಫ್ ಜಸ್ಟೀಸ್ ಆಗಿದ್ದಾಗ, ಅವರಿಗೆ, ಸುಪ್ರೀಂ ಕೋರ್ಟ್ನ ಜಸ್ಟಿಸ್ ಆಗಿದ್ದೀರಿ ಅನ್ನುವ ಮೆಸೇಜ್ ಬಂತು. ಆಗ, ನಮ್ಮಿಬ್ಬರ ಕಣ್ಣಲ್ಲೂ ತಂತಾನೇ, ಆನಂದಭಾಷ್ಪ ಬಂತು. ಆ ಕ್ಷಣ ನನ್ನ ಬಾಳಿನ ಅತಿ ಮಧುರವಾದ ಕ್ಷಣ.
ಅವರಲ್ಲಿ ನಿಮಗೆ ಅತಿ ಇಷ್ಟವಾದ ಗುಣ?
ನಮ್ಮವರು ಬಹಳಾ ಸೌಮ್ಯ. ಸ್ವಲ್ಪ ಜಾಸ್ತೀನೇ ಸೌಮ್ಯ. ಆಶ್ಚರ್ಯ ಆಗತ್ತೆ. ಒಬ್ಬ ವ್ಯಕ್ತಿ ಇಷ್ಟು ಸೌಮ್ಯವಾಗಿರಕ್ಕೆ ಹೇಗೆ ಸಾಧ್ಯ ಅಂತ.
ಅವರಲ್ಲಿ ಇಷ್ಟವಾಗದ ಗುಣ?
ಅದೇ ಸೌಮ್ಯತೆ. ಸಿಟ್ಟು ಬರತ್ತೆ, ತಪ್ಪಿದ್ರೆ ತಪ್ಪು ಅಂತ ಹೇಳಲ್ಲ. ನಾನು ಹೇಳ್ತಿರ್ತೀನಿ, ನೀವು ಹೇಳಿದ್ರೆ ತಾನೇ ನಾವು ತಿದ್ಕೋತೀವಿ ಅಂತ. ಆದ್ರೆ ಸಿಟ್ಟು ಬಂದ್ರೆ ಮಾತಾಡಲ್ಲ, ಸುಮ್ನೆ ಇದ್ದುಬಿಡ್ತಾರೆ.
ಅಷ್ಟು ದೊಡ್ಡ ಹುದ್ದೆಯಲ್ಲಿದ್ದಾಗ ನೀವು ಅವರನ್ನ ಹೇಗೆ ಕಾಣ್ತಿದ್ರಿ?
ಆ ಥರ ಏನಿಲ್ಲ. ಅವರು ಹಂತ ಹಂತವಾಗಿ ಮೇಲೆ ಬಂದಿರುವವರು. ಎಷ್ಟೇ ದೊಡ್ಡ ಸ್ಥಾನಕ್ಕೇರಿದರೂ, ಅವರಲ್ಲಿ ಯಾವ ಥರದ ವ್ಯತ್ಯಾಸವೂ ಕಂಡಿಲ್ಲ.
ಸ್ಪರ್ಷ್ ಫೌಂಡೇಶನ್ನಲ್ಲಿ ನಿಮ್ಮ ಪಾತ್ರ?
ನನ್ನ ಮಗ ಡಾ. ಶರಣ್ ಯಾವಾಗ್ಲೂ ಹೇಳ್ತಿರ್ತಾನೆ. ಆದ್ರೆ ನಾನು ಏನೂ ಪಾತ್ರ ವಹಿಸಿಲ್ಲ. ನನಗೇನೂ ಗೊತ್ತಾಗಲ್ಲಪ್ಪ ಅಂತೀನಿ, ನನ್ನ ಮಗ ಮತ್ತು ನನ್ನ ಸೊಸೆ ಇಬ್ರೂ ಚೆನ್ನಾಗಿ ನೋಡ್ಕೋತಿದಾರೆ. ನಂಗೆ ಅದೇ ಖುಷಿ.
ಅವರು ಚೀಫ್ ಜಸ್ಟಿಸ್ ಆಗಿದ್ದಾಗ ತುಂಬಾ ಬ್ಯುಸಿ. ಈಗ ಹೇಗೆ?
ಆಗ ಒಂಥರ ಬ್ಯುಸಿ, ಈಗ ಇನ್ನೊಂಥರ. ಆಗ ಒಂದೊಂದು ಸಲ ರಾತ್ರಿ ಊಟ ಮಾಡೋದು 11.30 ಆಗ್ತಿತ್ತು. ಈಗ ಟೂರ್, ಬರೆಯೋದು ಹೀಗೇ.
ನಿಮ್ಮ ಬಾಲ್ಯ, ವಿದ್ಯಾಭ್ಯಾಸ?
ನನ್ನ ತಂದೆ ಕಾಟನ್ ಬಿಸಿನೆಸ್ ಮಾಡ್ತಿದ್ರು. ನಮ್ದು ಜಾಯಿಂಟ್ ಫ್ಯಾಮಿಲಿ. ಅಜ್ಜ- ಅಜ್ಜಿ, ಅಪ್ಪ- ಅಮ್ಮ, 4 ಜನ ಅಕ್ಕ- ತಂಗಿಯರು, 3 ಜನ ಅಣ್ಣ- ತಮ್ಮಂದಿರು, ಎಲ್ಲಾ ಒಟ್ಟಿಗೇ ಇದ್ವಿ. ಆಗೆಲ್ಲಾ ಹುಡ್ಗೀರ್ನ ಜಾಸ್ತಿ ಓದಿಸ್ತಿರಲಿಲ್ಲ. ಹಾಗಾಗಿ ಬರೀ 8ನೇ ಕ್ಲಾಸ್ ವರೆಗೂ ಓದಿದೆ ಅಷ್ಟೆ. ಟ್ರಿಪ್ಗೆ ಹೋಗ್ಬೇಕಿತ್ತು ಸ್ಕೂಲಿಂದ, ಟ್ರಿಪ್ ಎಲ್ಲ ಕೇಳಿದ್ರೆ ಸ್ಕೂಲ್ ಬಿಡಿಸ್ತೀವಿ ಅಂದ್ರು. 16 ವಯಸ್ಸಿಗೇ ಮದುವೆಯಾಯ್ತು.
ನಿಮ್ಮ ಹವ್ಯಾಸಗಳು?
ಮನೆ ಡೆಕೊರೇಟ್ ಮಾಡೋದು, ಗಾರ್ಡನಿಂಗ್, ಹೊಸ ತಿಂಡಿಗಳನ್ನ ಟ್ರೈ ಮಾಡ್ತೀನಿ. ಮಕ್ಳು ಅಂದ್ರೆ ತುಂಬಾ ಇಷ್ಟ.
-ಗೀತಾ ಶ್ರೀನಿವಾಸನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


