ಜಲಯೋಗ
ಇವರು ಜಲತಪಸ್ವಿ. ಈ ಅಪ್ಪ-ಮಗಳ ಜೋಡಿ, ನೀರೊಳಗೆ ಯೋಗ ಮಾಡುವ ಮೋಡಿಗೆ ಪತಂಜಲಿ ಮರ್ಹರ್ಷಿಗಳೂ ಹುಬ್ಬೇರಿಸಬೇಕು.

ಇವರು ಜಲತಪಸ್ವಿ. ಈ ಅಪ್ಪ-ಮಗಳ ಜೋಡಿ, ನೀರೊಳಗೆ ಯೋಗ ಮಾಡುವ ಮೋಡಿಗೆ ಪತಂಜಲಿ ಮರ್ಹರ್ಷಿಗಳೂ ಹುಬ್ಬೇರಿಸಬೇಕು. ನೆಲದ ಮೇಲೆ ಪರದಾಡಿ ಹಾಕಬೇಕಾದ ಯೋಗಾಸನಗಳನ್ನು ನೀರೊಳಗೆ ನೀರು ಕುಡಿದಷ್ಟೇ ಸರಳವಾಗಿ ಆಸನ ಹಾಕುವುದೆಂದರೆ ಸುಮ್ನೇನಾ?
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಬಿಕೆ ಗ್ರಾಮದ ಪುಟ್ಟ ಕಿರಾಣಿ ಅಂಗಡಿಯ ಯಜಮಾನ ಉದಯಕುಮಾರ ಕುಸಾವಡಕರ. ಇವರು ನೀರೊಳಗೆ ಯೋಗ ಮಾಡೋದನ್ನು ಕಲಿತಿದ್ದು ಆಕಸ್ಮಿಕ. ಇವರ ಕಲೆಯನ್ನು ಗುರುತಿಸಿದ್ದು ಕೂಡ ಅನಿರೀಕ್ಷಿತ. ನಿತ್ಯ ದೇವರ ಪೂಜೆ ಮಾಡಬೇಕಾದ್ರೆ ಮಡಿಯಿಂದ ಕೊಡ ತುಂಬಿಕೊಂಡು ಬರುವಾಗ ಯೋಗ ಕಲೆ ರೂಢಿ ಆಯಿತಂತೆ. ಆದರೆ, ನೀರೊಳಗೆ ಯೋಗ ಮಾಡಿ ಪಕ್ಕಾ ಎನ್ನಿಸಿಕೊಂಡಿದ್ದು 20 ವರ್ಷಗಳ ನಂತರವೇ. ಸದ್ಯ ಉದಯ ಅವರ ವಯಸ್ಸು 40.
ಯಾವುದೋ ಸಂದರ್ಭದಲ್ಲಿ ಫೋಟೋಗ್ರಾಫರ್ನನ್ನು ಕರೆಸಿ ಫೋಟೋ ತೆಗಿಸ್ತಾ ಇದ್ರು. ಆತ ಇವರ ಯೋಗ ಕಂಡು, 'ಏನ್ ಸಾರ್. ನೀರೊಳಗೆ ಎಷ್ಟೊಂದು ವೆರೈಟಿ ಯೋಗ ಮಾಡ್ತೀರಲ್ಲ! ನಾನಾ ಥರದ ಆಸನ ಹಾಕ್ತಿರಲ್ಲ!' ಎಂದು ಕ್ಯಾಮೆರಾ ಕ್ಲಿಕ್ಕಿಸುತ್ತಲೇ ಕ್ಲ್ಯಾಪ್ಸ್ ಹಾಕಿ ಹುರಿದುಂಬಿಸಿದನಂತೆ. ಆಗಲೇ ಉದಯಕುಮಾರರಿಗೆ ಗೊತ್ತಾಗಿದ್ದು ತಾನೊಬ್ಬ ಯೋಗ ಪಟು ಎಂದು! ಕೂಡಲೇ ಕಿರಾಣಿ ವ್ಯಾಪಾರದ ಕಡೆಗೆ ಗಮನ ಕಡಿಮೆ ಮಾಡಿ ಯೋಗದತ್ತ ಹೆಚ್ಚಿನ ಒಲವು ತೋರಿಸಲು ಶುರುಹಚ್ಚಿಕೊಂಡರು.
ಊರಿಗೆ ಹೊಂದಿಕೊಂಡಿರುವ ಕೃಷ್ಣಾ ನದಿಯಲ್ಲಿ, ನಿತ್ಯ ನಾಲ್ಕೈದು ತಾಸು ಯೋಗ. ಈ ಕಲೆಯನ್ನು ಅವರು ತಮ್ಮೊಳಗೇ ಇಟ್ಟುಕೊಳ್ಳಲು ಇಷ್ಟಪಡಲಿಲ್ಲ. ಇತರರೂ ಇದರ ಪ್ರಯೋಜನ ಪಡೆಯಬೇಕೆಂಬ ಉದ್ದೇಶ ಅವರೊಳಗೆ ಸದ್ದಿಲ್ಲದೆ ಮೊಳಕೆಯೊಡೆಯಿತು. ಅವರ ಮಕ್ಕಳು, ಸಹೋದರರ ಮಕ್ಕಳು ಸೇರಿದಂತೆ 200ಕ್ಕೂ ಅಧಿಕ ಜನರಿಗೆ ವಿವಿಧ ಆಸನಗಳ ಪಾಠ ಕಾಲಿಸಿದ್ದಾರೆ.
ನೆಲದ ಮೇಲೆಯೇ ಯೋಗಾಸನ ಹಾಕೋದಿಕ್ಕೇ ಸಾಕ್ಸಾಕಾಗಿ ಹೋಗುತ್ತೆ. ಕ್ಲಿಷ್ಟಕರವಾದ ಆಸನಗಳನ್ನು ಹಾಕಬೇಕಾದ್ರೆ ಹೋದ ಜೀವ ಮರಳಿ ಬಂದಂತಾಗುತ್ತೆ. ಅಂಥದ್ದರಲ್ಲಿ ಮಕ್ಕಳೂ ಈ ಜಲಾಸನಕ್ಕೆ ಮನಸ್ಸು ಮಾಡಿದ್ದಾರೆಂದರೆ ಅದ್ಭುತವೇ ಸರಿ. ಉದಯಕುಮಾರ ಅವರ ಮಗಳು ಐಶ್ವರ್ಯಾ ಅಪ್ಪನಿಗೇ ಪೈಪೋಟಿ ಕೊಡುವಷ್ಟು ಸೊಗಸಾಗಿ ಆಸನ ಹಾಕಬಲ್ಲಳು. ಎಂಥ ಕ್ಲಿಷ್ಟ ಆಸನಗಳೂ ತಂದೆ- ಮಗಳಿಗೆ ತುಂಬಾ ಈಸಿ. ಶವಾಸನ, ಪದ್ಮಾಸನ, ಶೀರ್ಷಾಸನ, ಪದ್ಮ ಶವಾಸನ, ತಿರ್ಯಕ ಭುಜಂಗಾಸನ, ತೋಲಂಗಾಸನ, ಅರ್ಧ ಶಿರಸಾಸನ, ಆಕರ್ಣ ಹಲಾಸನ ಸೇರಿದಂತೆ ನೂರಾರು ಬಗೆಯ ಆಸನಗಳು ಕರಗತ.
ಇವರಿಬ್ಬರು ಕನಸು ಇಷ್ಟೇ. ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಅಲ್ಲೆಲ್ಲ ಅವಕಾಶ ಸಿಗಬೇಕು. ಜತೆಗೆ ತಮ್ಮಿಂದ ಸಹಸ್ರಾರು ಜನರು ನೀರೊಳಗಿನ ಯೋಗ ಕಲಿಯಬೇಕು. ಈ ರೀತಿಯ ಯೋಗ ನೆಲದ ಮೇಲೆ ಹಾಕುವ ಆಸನಗಳಿಗಿಂತ ಪರಿಣಾಮಕಾರಿ. ಆರೋಗ್ಯದಾಯಕ. ನೀರಲ್ಲಿ ಬರೀ ಯೋಗ ಅಷ್ಟೇ ಅಲ್ಲ ಉಲ್ಟಾ ಜಿಗಿಯುವುದು, ಈಜುತ್ತಲೇ ತುಂಬಿದ ಕೊಡವನ್ನು ಹೊತ್ತು ತರುವುದು, ಬಾಯಿಯಿಂದ ಕೊಡವನ್ನು ಕಚ್ಚಿಕೊಂಡು ತರುವುದು, ಈಜುತ್ತಲೇ ತುಂಬಿದ ಕೊಡವನ್ನು ಮೇಲೆತ್ತಿ ಖಾಲಿ ಮಾಡುವ ಸರ್ಕಸ್ಸುಗಳನ್ನೂ ಇವರು ಮಾಡುತ್ತಾರೆ. ಉದಯ ಅವರಿಗೆ ಶುಭಾಶಯ ಹೇಳುವುದಾದರೆ ಸಂಪರ್ಕಿಸಿ, ಮೊ. 94489 95051.
-ಚಿತ್ರ-ಲೇಖನ: ಮಲ್ಲಿಕಾರ್ಜುನ ದಾನನ್ನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


