ಬೈಟುಕಾಫಿ

ತೆರೆದ ಕಿಟಕಿ

Published On :

'ಬೆಳಕು ಎಲ್ಲಿಂದ ಬಂದರೂ ಸ್ವೀಕರಿಸು' ಎನ್ನುತ್ತದೆ ಉಪನಿಷತ್ತು. ಈ ಬೆಳಕು ಕೊಳೆಗೇರಿಯ ಮೂಲಕ ಹಾದುಬಂದಿದೆ, ಆದ್ದರಿಂದ ನಾನಿದನ್ನು ಸ್ವೀಕರಿಸಲು ತಯಾರಿಲ್ಲ ಎನ್ನುತ್ತಾರೆಯೆ ಯಾರಾದರೂ? ಹೆಚ್ಚೆಂದರೆ, ಗಾಳಿಗೆ ಹಾಗೆನ್ನಬಹುದು. ಅದೂ ಕೂಡ ಸರಿಯಲ್ಲ. ಗಾಳಿ, ಬೆಳಕು, ನೀರು ಇತ್ಯಾದಿಗಳು ನಾನಾ ಅವಸ್ಥೆಯಲ್ಲಿ, ನಾನಾ ರೂಪದಲ್ಲಿ, ನಾನಾ ದೇಹಗಳಲ್ಲಿ ಹಾದುಬರುತ್ತವೆ. ಅವು ಜಗತ್ತಿಗೆಲ್ಲಾ ಒಂದೇ. ಆದ್ದರಿಂದ ನಾವದನ್ನು ಸ್ವೀಕರಿಸಲೇಬೇಕು.
ಈಗ, ಬೆಳಕು ಎಂದಿದ್ದಲ್ಲಿ ಸತ್ಯ ಎಂದು ಓದಿಕೊಳ್ಳಿ. ಉಳಿದ ವಿಚಾರಗಳೆಲ್ಲ ಯಥಾವತ್. ಸತ್ಯ, ಅದು ಯಾವ ಮೂಲದಿಂದ ಬರುತ್ತದೆ ಎಂಬುದು ನಿಮಗೆ ಗೊತ್ತಿದೆಯೆ? ಗೊತ್ತಿದ್ದರೆ ಅದು ಸತ್ಯವೇ ಅಲ್ಲ. ಅದು ಸತ್ಯದ ವೇಷದಲ್ಲಿರುವ ಅನೃತ. ಅಚಾನಕ್ಕಾಗಿ, ನೀವು ಊಹಿಸಲಾರದ ಆಯಾಮಗಳನ್ನು ಕಾಣಿಸುವ ಬೆಳಕೇ ಸತ್ಯ. ಅದು ಸರಳವಾದುದು, ಸುಂದರವಾದುದು.
ಹಾಗೇ ಅದು ವ್ಯಾಖ್ಯಾನಕ್ಕೆ ನಿಲುಕಲಾರದಂಥದ್ದು ಕೂಡ. ಅನುಭವಿಸಿದಾಗಲೇ ಸತ್ಯದ ಸ್ವರೂಪ ತಿಳಿಯುವುದು. ಆದ್ದರಿಂದಲೇ ಅದನ್ನು ಕುರಿತ ಯಾವ ಚರ್ಚೆಯೂ ಅಂತಿಮವಾಗಿ ಫಲಪ್ರದವಲ್ಲ. ಹಾಗಿದ್ದರೆ ನಾವೇನು ಮಾಡಬಹುದು? ಬೀಸುವ ಗಾಳಿಗೆ, ಬರುವ ಹೊಂಬೆಳಕಿಗೆ ನಮ್ಮ ನಮ್ಮ ಕಿಟಕಿಗಳನ್ನು ತೆರದಿಡಬೇಕು. ಅದೊಂದೇ ನಾವು ಮಾಡಬಹುದಾದ ಮನುಷ್ಯ ಪ್ರಯತ್ನ. ಹೊರಗಡೆ ಎಷ್ಟೇ ಬೆಳಕಿದ್ದರೇನು, ನೀವು ಕಿಟಕಿ ಮುಚ್ಚಿ ಕುಳಿತಿದ್ದರೆ?
ಬೆಳಕು ಯಾರನ್ನೂ ನಿರಾಕರಿಸುವುದಿಲ್ಲ. ಹಾಗೆಯೇ ಸತ್ಯವೂ. ಅದು ಯಾರಿಗೂ ಒಲಿಯಲಾರೆ ಎನ್ನುವುದಿಲ್ಲ. ದಿವ್ಯಾನುಭವ ಹೊಂದಲು ನೀವು ಸಿದ್ಧರಿದ್ದರೆ, ತನ್ನನ್ನು ತಾನು ತೋರಲು ಅದೂ ಸಿದ್ಧವಿರುತ್ತದೆ. ಆದರೆ, ನೀವು ಕಿಟಕಿ ತೆರೆದಿರಬೇಕು ಅಷ್ಟೆ. ಹಂಬಲವೆಂಬ ಕಿಟಕಿ, ಪ್ರಾಮಾಣಿಕತೆ ಎಂಬ ಕಿಟಕಿ, ಸರಳತೆ ಎಂಬ ಕಿಟಕಿ, ಋಜುತ್ವ ಎಂಬ ಕಿಟಕಿ, ಸಾಧನೆ ಎಂಬ ಕಿಟಕಿ... ಹೀಗೆ ಹೇಳುತ್ತ ಹೋಗಬಹುದು.
ಪ್ರತಿಯೊಬ್ಬ ಮನುಷ್ಯನೂ ಒಂದು ದೇಗುಲವೆಂದೋ ಭವನವೆಂದೋ ಭಾವಿಸಿದರೆ, ಇಂಥ ಕಿಟಕಿಗಳು ಪ್ರತಿಯೊಂದು ಕಟ್ಟಡದಲ್ಲೂ ಇದ್ದೇ ಇರುತ್ತವೆ. ತನ್ನಲ್ಲಿ ಕಿಟಕಿಗಳೇ ಇಲ್ಲವೆಂದು ಭಾವಿಸುವವನೇ ನಿಜವಾದ ಮೂಢ. ಬುದ್ಧ, ಮಹಾವೀರ ಮೊದಲಾದವರು ಹೇಳಿದ್ದು ಇದನ್ನೇ. ಇದೆಲ್ಲ ಕ್ಲಿಷ್ಟ ಆಧ್ಯಾತ್ಮವೆಂದು ಯಾರೂ ಭಾವಿಸಕೂಡದು. ನಿತ್ಯದ ಬದುಕಿನಷ್ಟೇ ಸರಳವಾದ್ದು ಇದು.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.