ಗುಜರಿ ಕಲೆ
ಸಾರಿಗೆ ಸಂಸ್ಥೆ ಎಂದ ಮೇಲೆ ಸಾವಿರಾರು ಗುಜರಿ ವಸ್ತುಗಳ ರಾಶಿ ಬೀಳುವುದು ಸಾಮಾನ್ಯ. ನಟ್ಟು ಬೋಲ್ಟು, ಬಾಡಿ ಶೀಟ್, ಇಂಜಿನ್,...

ಸಾರಿಗೆ ಸಂಸ್ಥೆ ಎಂದ ಮೇಲೆ ಸಾವಿರಾರು ಗುಜರಿ ವಸ್ತುಗಳ ರಾಶಿ ಬೀಳುವುದು ಸಾಮಾನ್ಯ. ನಟ್ಟು ಬೋಲ್ಟು, ಬಾಡಿ ಶೀಟ್, ಇಂಜಿನ್, ಗೇರ್ಬಾಕ್ಸ್, ಬ್ರೇಕ್ಸೆಟ್, ನಾಜಲ್ಪೈಪ್, ಕ್ಲಚ್ಪ್ಲೇಟು, ಸೈಲೆನ್ಸರ್ ಪೈಪು, ಆಸನಗಳು... ಆಹಾ ಮುಗಿಯದು ಲಿಸ್ಟು.
ಗುಲ್ಬರ್ಗ ಕೇಂದ್ರವಾಗಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇಂತಹ ಸಾವಿರಾರು ಗುಜರಿ ವಸ್ತುಗಳಿಗೆ ಜೀವ ತುಂಬುವ ಕೆಲಸ ಸಾಗಿದೆ. ನಟ್ಟು ಬೋಲ್ಟ್ಗಳಂತಹ ಕಬ್ಬಿಣಗಳಿಂದ ಏನು ಮಾಡಬಹುದು ಎಂಬ ಪ್ರಶ್ನೆಗೆ ಜನರ ಮನ ಸೆಳೆಯುತ್ತ ನಿಂತ ಕಲಾಕೃತಿಗಳೇ ಉತ್ತರ. ಚಿಟ್ಟೆ, ನವಿಲು, ದೊಡ್ಡ ಡೈನೋಸರ್, ಮಳೆಹುಳ, ಕುದುರೆ... ಹೀಗೆ ಓಡಿದೆ ತರಹೇವಾರಿ ರೂಪಿತ ಕಲಾಕೃತಿಗಳ ಸಾಲು. ಇಂತಹ ವಿಶಿಷ್ಟ ಕಲಾಕೃತಿಗಳನ್ನು ಯಾವುದೇ ಮ್ಯೂಸಿಯಂಗಳಲ್ಲಿ ಇಡುತ್ತಿಲ್ಲ. ಬದಲಾಗಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಕಲೆಯನ್ನು ನೋಡುವ ಅವಕಾಶ ನಿಲ್ದಾಣದಲ್ಲಿ ಸಿಗುತ್ತಿರುವುದು ಖುಷಿ ನೀಡಿದೆ.
ಗುಡ್ಡೆ ಹಾಕಿದ ನಿರುಪಯುಕ್ತ ವಸ್ತುಗಳನ್ನು ಗುಜರಿ ವ್ಯಾಪಾರಿಗೆ ಮಾರಿದರೆ ತನ್ನ ಪಾಳಿಯೂ ಆಯಿತು, ಸ್ವಲ್ಪ ಕಾಸೂ ಸಿಕ್ಕಿತು ಎನ್ನುತ್ತಿರುವಾಗ ಇಂತಹ ಪ್ರಯೋಗ ಮೆಚ್ಚುವಂತಹದು. ಆದಾಯದ ದೃಷ್ಟಿಯಿಂದ ಗುಜರಿ ವ್ಯಾಪಾರಿ ವಸ್ತುವಾಗಿ ನಿರ್ಧರಿಸಲ್ಪಟ್ಟಿದೆ. ಆದರೆ ಸೃಜನಶೀಲತೆ ಹಾಗು ಕ್ರಿಯಾಶೀಲತೆಗೆ ಗುಜರಿ ವಸ್ತುಗಳಲ್ಲಿ ಅವಕಾಶವಿದೆ ಎಂಬುದನ್ನು ಅರಿತುಕೊಂಡವರು ಈಗಿನ ಈಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ.
ಶಿವಮೂರ್ತಿ ಡಿಪೋಗಳ ತಪಾಸಣೆಗೆ ಹೋದಾಗ ಗುಜರಿಯ ರಾಶಿ ಕಣ್ಣಿಗೆ ರಾಚಿತಂತೆ. ಇವುಗಳನ್ನು ಬಳಸಿ ಸುಂದರ ಪ್ರಾಣಿ ಪಕ್ಷಿಗಳ ಆಕೃತಿ ಮಾಡಿದರೆ ಹೇಗಿದ್ದೀತು ಎಂಬುದನ್ನು ಕಲ್ಪಿಸಿಕೊಂಡರಂತೆ. ಸೊಗಸಿದೆ ಎಂಬ ಅರಿಕೆಯಾದೊಡನೆ ಕೆಲಸಕ್ಕೆ ಚಾಲನೆ ನೀಡಿದರು. ಹರಿದು ಹೋದ ಇಂಜಿನ್ ಬಲ್ಕು ಕುದುರೆಯಾಕೃತಿಯಾಗಿ ಜೀವ ತಳೆಯಿತು. ಇಂಜಿನ್ನ ಫ್ಯಾನ್ ಹಾಗು ಚೈನ್ ಚಿಟ್ಟೆಯಾಕೃತಿಯಾದವು.
ನಟ್ಬೋಲ್ಟ್ ಸೇರಿದಂತೆ ಕಬ್ಬಿಣದ ಕಸ ಬಳಸಿ ಗಿಡದ ಟೊಂಗೆ, ಜಿಗಿಯಲು ಸಿದ್ಧವಾದಂತಿರುವ ಆಕರ್ಷಕ ನವಿಲು, ಬಾಯಿತೆರೆದು ನುಂಗಲು ಸಿದ್ಧವಾಗಿರುವಂತೆನಿಸುವ ಡೈನೋಸರ್, ಹೀಗೆ ಅನೇಕ ಜೀವಾಕೃತಿಗಳು ಮೂಡಿ ನಿಂತವು.
ಸಂಸ್ಥೆಯ ಕೌಶಲ್ಯಪೂರ್ಣ ಕಾರ್ಮಿಕರ ಕೈವಾಡವೂ ಇಂತಹ ಅದ್ಭುತ ಕಲಾಕೃತಿಗಳ ಜನನಕ್ಕೆ ಕಾರಣ. ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣ, ಶಹಾಪುರ, ಜೇವರ್ಗಿ ಹೀಗೆ ಅನೇಕ ನಗರ ಪಟ್ಟಣಗಳ ನಿಲ್ದಾಣಗಳಲ್ಲಿ ತಲೆಯೆತ್ತಿ ಪ್ರಯಾಣಿಕರನ್ನು ಪುಳಕಿತಗೊಳಿಸುತ್ತಿವೆ. ಈಕರಸಾ ಸಂಸ್ಥೆಯ ಬಸ್ ನಿಲ್ದಾಣಗಳಿಂದು ರೊಬೋಟಿಕ್ ನಿಲ್ದಾಣಗಳಂತಾಗಿವೆ. ಯಾದಗಿರಿ ವಿಭಾಗದ ಶಹಾಪುರದ ನೂತನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ರಥ ಕಣ್ಮನ ಸೆಳೆಯುವಂತಿದೆ. ಕಲಾಕೃತಿ ನಿರ್ಮಿಸಲು ಶ್ರಮಿಸಿದ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಶಿವಮೂರ್ತಿ.
ಅಂದಹಾಗೆ ಹೈದರಾಬಾದ್ ಕರ್ನಾಟಕದತ್ತ ಸುಳಿದಾಗ ಬಸ್ ನಿಲ್ದಾಣದಲ್ಲಿಟ್ಟಿರುವ ಕಲಾಕೃತಿಗಳನ್ನು ನೋಡಿ, ಹತ್ತಿರ ಹೋಗಲು ಆಗದಿದ್ದರೆ ಕಿಟಕಿಯಿಂದಲಾದರು ಒಮ್ಮೆ ಇಣುಕಿ!
ಏರ್ಲೈನ್ಸ್ ಬೇಡಿಕೆ
ಕೆಲ ದಿನ ಹಿಂದೆ ಕಾರ್ಯನಿಮಿತ್ತ ಗುಲ್ಬರ್ಗಕ್ಕೆ ಬಂದ ಇಂಡಿಯನ್ ಏರ್ಲೈನ್ಸ್ ಸಂಸ್ಥೆಯ ಅಧಿಕಾರಿಗಳು ಈ ಕಲಾಕೃತಿಗಳನ್ನು ನೋಡಿ ಚಕಿತರಾದರು. ಈಕರಸಾ ಸಂಸ್ಥೆಯ ಎಂಡಿಯನ್ನು ಸಂಪರ್ಕಿಸಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಇಂಥ ಕಲಾಕೃತಿ ನಿರ್ಮಿಸಿಕೊಡಲು ಕೋರಿದರು.
ಈ ವಸ್ತುಗಳನ್ನು ಗುಜರಿ ಅಂಗಡಿಗೆ ಹಾಕಿದ್ದರೆ ಒಂದಷ್ಟು ದುಡ್ಡು ಸಿಗುತ್ತಿತ್ತು. ಬದಲಾಗಿ ನಿರುಪಯುಕ್ತ ವಸ್ತುಗಳಿಂದಲೇ ಸಿದ್ಧಗೊಳಿಸಿರುವ ಕಲಾಕೃತಿಗಳಿಂದಾಗಿ ಪ್ರಯಾಣಿಕರು, ಸಾರ್ವಜನಿಕರು ಹಾಗು ಅಂತಾರಾಷ್ಟ್ರೀಯ ಮಟ್ಟದ ಅಧಿಕಾರಿಗಳೂ ಮುಕ್ತಕಂಠದಿಂದ ಮೆಚ್ಚುಗೆ ಸೂಚಿಸಿದ್ದಾರೆ. ಸಂಸ್ಥೆಯ ವ್ಯಾಪ್ತಿಗೆ ಬರುವ 7 ಜಿಲ್ಲೆಗಳ ಬಸ್ ನಿಲ್ದಾಣಗಳಿಗೂ ಮುಂಬರುವ ದಿನಗಳಲ್ಲಿ ವಿನೂತನ ಶೈಲಿಯ ಕಲಾಕೃತಿಗಳನ್ನು ನಿರ್ಮಿಸಿಡಲಾಗುವುದು.
- ಜಿ.ಎನ್. ಶಿವಮೂರ್ತಿ, ಈಕರಸಾಸಂ ವ್ಯವಸ್ಥಾಪಕ ನಿರ್ದೇಶಕ
- ಚಿತ್ರ ಲೇಖನ: ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


